ಕೊರೋನ ವೈರಸ್ ಗೆ ತಮಿಳುನಾಡಿನಲ್ಲಿ ಮೊದಲ ಬಲಿ
ದೇಶದಲ್ಲಿ ಒಟ್ಟು 12 ಮಂದಿ ಮೃತ್ಯು
ಸಾಂದರ್ಭಿಕ ಚಿತ್ರ
ಮಧುರೈ: ಇಲ್ಲಿನ ರಾಜಾಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊರೋನ ವೈರಸ್ ಸೋಂಕಿತ 54 ವರ್ಷದ ವ್ಯಕ್ತಿ ಬುಧವಾರ ನಸುಕಿನಲ್ಲಿ ಮೃತಪಟ್ಟಿದ್ದಾರೆ. ಇದರೊಂದಿಗೆ ತಮಿಳುನಾಡಿನಲ್ಲಿ ಮೊದಲ ಕೊರೋನ ಸಾವು ಸಂಭವಿಸಿದಂತಾಗಿದೆ ಎಂದು ಆರೋಗ್ಯ ಸಚಿವ ಸಿ.ವಿಜಯ ಭಾಸ್ಕರ್ ಹೇಳಿದ್ದಾರೆ.
ಈ ವ್ಯಕ್ತಿ ದೀರ್ಘಕಾಲದ ಅಸ್ವಸ್ಥತೆಯಿಂದ ಬಳಲುತ್ತಿದ್ದರು ಹಾಗೂ ಅನಿಯಂತ್ರಿತ ಮಧುಮೇಹ ಸಮಸ್ಯೆ ಇತ್ತು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ನಮ್ಮ ತೀವ್ರ ಪ್ರಯತ್ನದ ಹೊರತಾಗಿಯೂ, ಮಧುರೈ ರಾಜಾಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೋವಿಡ್-19 ರೋಗಿ ಮೃತಪಟ್ಟಿದ್ದಾರೆ. ಈ ವ್ಯಕ್ತಿ ದೀರ್ಘಕಾಲದ ಅಸ್ವಸ್ಥತೆಯಿಂದ ಬಳಲುತ್ತಿದ್ದರು ಹಾಗೂ ಸ್ಟಿರಾಯ್ಡಿ ಅವಲಂಬಿತ ಸಿಒಪಿಡಿ (ಕ್ರೋನಿಕ್ ಅಬ್ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್), ಅನಿಯಂತ್ರಿತ ಮಧುಮೇಹ ಹಾಗೂ ಹೈಪರ್ ಟೆನ್ಷನ್ ಸಮಸ್ಯೆಯೂ ಇತ್ತು ಎಂದು ಅವರು ಟ್ವೀಟ್ ಮಾಡಿದ್ದಾರೆ.
ತಮಿಳುನಾಡಿನಲ್ಲಿ ಒಟ್ಟು ಕೋವಿಡ್-19 ಸೋಂಕಿತರ ಸಂಖ್ಯೆ 18ಕ್ಕೇರಿದ್ದು, ಮಂಗಳವಾರ ಮೂವರು ಮಹಿಳೆಯರು ಸೇರಿದಂತೆ ಹೊಸದಾಗಿ ಆರು ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ದೇಶಾದ್ಯಂತ ಕೊರೋನ ವೈರಸ್ನಿಂದ ಮೃತಪಟ್ಟವರ ಸಂಖ್ಯೆ 12ಕ್ಕೇರಿದೆ.
ಹೊಸದಿಲ್ಲಿ ವರದಿ: ಕೋವಿಡ್-19 ಸೋಂಕಿಗೆ ಮುಂಬೈನಲ್ಲಿ 65 ವರ್ಷದ ವ್ಯಕ್ತಿ ಹಾಗೂ ದೆಹಲಿಯಲ್ಲಿ ಒಬ್ಬ ವ್ಯಕ್ತಿ ಬಲಿಯಾಗಿದ್ದಾರೆ. ಈ ಮಧ್ಯೆ ಹೊಸ ಸೋಂಕು ಪ್ರಕರಣಗಳ ಸಂಖ್ಯೆ ಮಂಗಳವಾರ ಅಲ್ಪ ಪ್ರಮಾಣದಲ್ಲಿ ಇಳಿದಿದೆ. ಸೋಮವಾರ 99 ಪ್ರಕರಣಗಳು ದಾಖಲಾಗಿದ್ದರೆ, ಮಂಗಳವಾರ ಈ ಸಂಖ್ಯೆ 64ಕ್ಕೆ ಇಳಿದಿದೆ. ಒಟ್ಟು 53 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ದೇಶಾದ್ಯಂತ ಸೋಂಕಿತರ ಸಂಖ್ಯೆ 562ಕ್ಕೇರಿದಂತಾಗಿದೆ.