'ಕರ್ಫ್ಯೂ ಸಂದರ್ಭ ಪೊಲೀಸರು ಊಟ ನೀಡಿದ್ದರು-ಈಗ ಏನೂ ಇಲ್ಲ'
‘‘ನಾವು ಕೇಂದ್ರ ಮಾರುಕಟ್ಟೆಯ ಹೊರಗಡೆ ಹಲವಾರು ವರ್ಷಗಳಿಂದ ಬೀದಿ ಬದಿಯಲ್ಲಿ ತರಕಾರಿ ಮಾರಾಟ ಮಾಡಿ ಜೀವನ ಸಾಗಿಸುತ್ತಿರುವವರು. ಮೂಲತ: ತಮಿಳುನಾಡಿನವರಾದ ನಾವು ಎರಡು ತಿಂಗಳಿಗೊಮ್ಮೆ, ಆರು ತಿಂಗಳಿಗೊಮ್ಮೆ ನಮ್ಮ ಊರಿಗೆ ಹೋಗುತ್ತೇವೆ. ಇಲ್ಲೇ ರಸ್ತೆ ಬದಿಯಲ್ಲಿ ಊಟ, ತಿಂಡಿ ಜತೆಗೆ ವಾಸ. ಇದು ನಮ್ಮ ಬದುಕು’’ ಎನ್ನುತ್ತಾರೆ ತಮಿಳುನಾಡಿನ ಮಹಿಳೆಯರಿಬ್ಬರು.
ಇಂದು ಕೇಂದ್ರ ಮಾರುಕಟ್ಟೆಯನ್ನು ಮನಪಾ ಅಧಿಕಾರಿಗಳು ಬಂದ್ ಮಾಡಿಸುತ್ತಿದ್ದರೆ, ಈ ಇಬ್ಬರು ಮಹಿಳೆಯರು ಅಲ್ಲಿ ಸ್ವಚ್ಛಗೊಳಿಸಿ ಅಂಗಡಿಯೊಂದರ ಮೂಲೆ ಸೇರಿದ್ದರು. ತಮ್ಮನ್ನು ಎಲ್ಲಿ ಎಬ್ಬಿಸಿ ಕಳುಹಿುತ್ತಾರೋ ಎಂಬ ಭಯ ಅವರಲ್ಲಿತ್ತು.
ಅವರನ್ನು ಮಾತನಾಡಿಸಲು ಪ್ರಯತ್ನಿಸಿದರೆ, ಭಯದಿಂದಲೇ ತಮಿಳು ಮಿಶ್ರಿತ ಕನ್ನಡದಲ್ಲಿ ಮಾತನಾಡಿದ ಅವರು, ‘‘ರೈಲು ಇಲ್ಲವಲ್ಲ. ನಾವು ಮನೆಗೆ ಹೋಗುವುದಾರೂ ಹೇಗೆ’’ ಎಂದು ಪ್ರಶ್ನಿಸಿದರು.
ಊಟ, ತಿಂಡಿಗೆ ಏನು ಮಾಡುತ್ತೀರಾ ಎಂದು ಪ್ರಶ್ನಿಸಿದರೆ, ‘‘ಕರ್ಫ್ಯೂ ಸಂದರ್ಭದಲ್ಲಿ ಪೊಲೀಸರು ನಮಗೆ ಆಹಾರ ಕೊಡುತ್ತಿದ್ದರು. ಈಗ ಅದೂ ಇಲ್ಲದಂತೆ ಕಾಣುತ್ತಿದೆ. ನಮ್ಮ ಮಕ್ಕಳು, ಕುಟುಂಬದವರೆಲ್ಲಾ ತಮಿಳುನಾಡಿನಲ್ಲಿದ್ದಾರೆ. ನಾವು ಊರಿಗೆ ಹೋಗಬೇಕು. ರೈಲು ಸಂಚಾರ ಯಾವಾಗ ಆರಂಭವಾಗುತ್ತದೆ ?’’ ಎಂದು ಪ್ರಶ್ನಿಸುವಾಗ ಅವರಲ್ಲಿ ಒಂದು ರೀತಿಯ ಆತಂಕ ಸಹಜವಾಗಿಯೇ ವ್ಯಕ್ತವಾಗುತ್ತಿತ್ತು.