ಜೂನ್‍ವರೆಗೂ ಲಾಕ್ ಡೌನ್ ಸುದ್ದಿ: ಬೆಂಗಳೂರು ಬಿಡಲು ಮತ್ತಷ್ಟು ಕಾರ್ಮಿಕರು ಸಜ್ಜು....!
ಬೆಂಗಳೂರು, ಮಾ.29: ಕೊರೋನ ವೈರಸ್ ನಿಯಂತ್ರಣ ಸಂಬಂಧ ಜೂನ್ ತಿಂಗಳವರೆಗೂ ಲಾಕ್ ಡೌನ್ ಚಾಲ್ತಿಯಲ್ಲಿರುತ್ತದೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರದಾಡುತ್ತಿರುವ ಪರಿಣಾಮ ಸಾಗರೋಪಾದಿಯಲ್ಲಿ ಕಾರ್ಮಿಕರು ಬೆಂಗಳೂರು ಬಿಡಲು ಸಜ್ಜಾಗಿದ್ದಾರೆ.
ಉದ್ಯೋಗ ಅರಸಿ ರಾಜಧಾನಿ ಬೆಂಗಳೂರಿಗೆ ವಲಸೆ ಬಂದಿದ್ದ ಅಪಾರ ಸಂಖ್ಯೆಯ ಕಾರ್ಮಿಕರ ಪೈಕಿ ಕೆಲ ಮಂದಿ ಈಗಾಗಲೇ ಕಾಲ್ನಡಿಗೆಯಲ್ಲೇ ತವರಿನ ಕಡೆಗೆ ಮುಖ ಮಾಡಿದ್ದಾರೆ. ಇನ್ನು, ನಗರದಲ್ಲಿಯೇ ಉಳಿದಿರುವ ಕಾರ್ಮಿಕರಲ್ಲಿ ಜೂನ್‍ವರೆಗೂ ಲಾಕ್ ಡೌನ್ ಮುಂದುವರೆಯುವ ಆತಂಕ ಎದುರಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಕೇಂದ್ರ ಸರಕಾರದ ಆದೇಶ ಎನ್ನಲಾದ ಪತ್ರಗಳು ವೈರಲ್ ಆಗಿವೆ.
ಏನಿದು ಪತ್ರ ?: ಸರಕಾರದ ಲಾಂಛನ ಇರುವ ಈ ಪತ್ರದಲ್ಲಿ ಕೋವಿಡ್-19 ಹಿನ್ನೆಲೆ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದ್ದು, ಇದು ಜೂನ್.30 ರವರೆಗೂ ಚಾಲ್ತಿಯಲ್ಲಿರುತ್ತದೆ ಎಂದು ಉಲ್ಲೇಖಿಸಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರದಾಡುತ್ತಿದೆ.
ನಿಲ್ಲದ ಕಾಲ್ನಡಿಗೆ: ಕೊರೋನ ಭಯದಿಂದ ಬೆಂಗಳೂರಿನಿಂದ ಹಲವು ಹಳ್ಳಿಗಳಿಗೆ ಮತ್ತು ಉತ್ತರ ಕರ್ನಾಟಕ ಭಾಗದ ಕಡೆ ಕೂಲಿಕಾರರು ವಲಸೆ ಹೋಗುತ್ತಿದ್ದ ದೃಶ್ಯಗಳು ರವಿವಾರವೂ ಸಾಮಾನ್ಯವಾಗಿತ್ತು. ಸೈಕಲ್, ಬೈಕ್ ಹಾಗೂ ಖಾಸಗಿ ವಾಹನಗಳಲ್ಲಿಯೇ ನಗರದ ಹೊರವಲಯದ ಮುಖ್ಯ ರಸ್ತೆಗಳಿಗೆ ಗಡಿಬಿಡಿಯಲ್ಲಿ ತೆರಳುತ್ತಿದ್ದರು.
ಆಹಾರ ಸಿಗದ ಭಯ: ನಗರದಲ್ಲಿಯೇ ಉಳಿದರೆ, ಸೂಕ್ತ ಸಮಯಕ್ಕೆ ಆಹಾರ ದೊರೆಯುವುದಿಲ್ಲ. ಇನ್ನು, ಇಲ್ಲಿ ರೋಗ ಹೆಚ್ಚಾಗಿ ಹರಡುತ್ತಿದೆ. ಇದರಿಂದ ನಾವು ಉಳಿಯಲು ಊರಿಗೆ ತೆರಳಬೇಕು. ಅಲ್ಲಿ ಆಹಾರಕ್ಕೆ ತೊಂದರೆ ಇಲ್ಲ. ಹೇಗಾದರೂ ಬದುಕಬಹುದು. ಜತೆಗೆ, ಇಲ್ಲಿಗೆ ಕರೆ ತಂದ ಮಾಲಕರು, ಸೂಕ್ತ ಸೌಲಭ್ಯ, ಭದ್ರತೆ ಮತ್ತು ಭರವಸೆ ನೀಡಿಲ್ಲ ಎನ್ನುವುದು ಕಾರ್ಮಿಕರ ಆರೋಪ.
ಕಟ್ಟಡ ಕಾರ್ಮಿಕರು, ಗುತ್ತಿಗೆ ಕಾರ್ಮಿಕರು, ದಿನಕೂಲಿಕಾರರು ಸೇರಿದಂತೆ 7 ಲಕ್ಷಕ್ಕೂ ಅಧಿಕ ಕಾರ್ಮಿಕರು ನಗರದೆಲ್ಲೆಡೆ ನೆಲೆಸಿದ್ದಾರೆ. ಇಲ್ಲೇ ಕಾಲ ಕಳೆದರೆ, ಬಾಡಿಗೆ, ಆಹಾರ ಸೇರಿದಂತೆ ಹತ್ತಾರು ಸಮಸ್ಯೆಗಳನ್ನು ಎದುರಿಸಬೇಕು. ನಿರ್ಬಂಧ ಕೆಲದಿನಗಳೆಂದು ಹೇಳಲಾಗಿದೆ. ಆದರೆ, ಇದು ದೀರ್ಘಕಾಲಕ್ಕೆ ಮುಂದುವರೆದರೆ, ನಗರದಲ್ಲಿ ನಮಗೆ ನೆಲೆ ಇಲ್ಲ ಎನ್ನುವುದು ಕಾರ್ಮಿಕರ ಅಳಲು.
ಕೈಯಲ್ಲಿ ದುಡ್ಡಿಲ್ಲ. ತಿನ್ನಲು ತುತ್ತು ಅನ್ನ ಎಲ್ಲಿಯೂ ಸಿಗುತ್ತಿಲ್ಲ. ದಾರಿಯಲ್ಲಿ ಸಿಗುವ ಊರಲ್ಲಿ ಯಾರನ್ನಾದರೂ ಸಹಾಯ ಕೇಳಬೇಕೆಂದರೆ ಯಾರೂ ಸಿಗುತ್ತಿಲ್ಲ. ಉಪವಾಸ ಸಾಯುವ ಬದಲು ನಡೆದುಕೊಂಡು ಊರು ಸೇರಬೇಕೆಂದು ಹೊರಟಿದ್ದೇವೆ ಎಂದು ಬಿಜಾಪುರ ಮೂಲದ ಕಟ್ಟಡ ಕಾರ್ಮಿಕರು ಅಳಲು ತೋಡಿಕೊಂಡರು.