ಭಾರತವನ್ನು ಬೆತ್ತಲೆ ಮಾಡಿದ ಕೋವಿಡ್-19
ಈಗ ಭಾರತದ ದುಡಿಯುವ ವರ್ಗಗಳಿಗೆ ಬಂಡವಾಳ ವ್ಯವಸ್ಥೆಯ ವಿರಾಟ ದರ್ಶನವಾಗುತ್ತಿದೆ. ಕೇರಳ ಸರಕಾರದ ತ್ವರಿತ ಕ್ರಮಗಳನ್ನು ಗಮನಿಸಿದಾಗ ಎಲ್ಲೋ ಒಂದು ಸಣ್ಣ ಆಶಾಕಿರಣ ಕಾಣುವಂತಾದರೆ ನಮ್ಮಿಳಗಿನ ಪ್ರಜ್ಞೆ ಜಾಗೃತವಾಗಿದೆ ಎಂದೇ ಅರ್ಥ. ಬಂಡವಾಳ ವ್ಯವಸ್ಥೆ ಮತ್ತು ಈಗಿನ ನವ ಉದಾರವಾದಿ ಹಣಕಾಸು ಬಂಡವಾಳದ ಅಧಿಪತ್ಯಕ್ಕೆ ಕೊರೋನ ಸವಾಲೊಡ್ಡಿದೆ. ಈಗಾಗಲೇ ಕುಸಿಯುತ್ತಿರುವ ವಿಶ್ವ ಆರ್ಥಿಕತೆ ಇನ್ನೂ ಹದಗೆಡುವ ಸೂಚನೆಗಳು ಕಾಣುತ್ತಿದ್ದಂತೆಯೇ ಸಾಮ್ರಾಜ್ಯ ಶಾಹಿ ಶಕ್ತಿಗಳು ಎಚ್ಚೆತ್ತುಕೊಳ್ಳುತ್ತಿವೆ. ಈ ಎಚ್ಚರದ ಹಿಂದಿನ ಉದ್ದೇಶ ತರಗೆಲೆಗಳಂತೆ ಉದುರುತ್ತಿರುವ ಶ್ರಮಜೀವಿಗಳನ್ನು ರಕ್ಷಿಸುವುದಲ್ಲ, ಬದಲಾಗಿ ಕಾರ್ಪೊರೇಟ್ ಉದ್ದಿಮೆಯ ಹೆಗ್ಗಣಗಳನ್ನು ರಕ್ಷಿಸುವುದು. ಹಾಗಾಗಿಯೇ ದಿಲ್ಲಿಯಿಂದ ರಾಜಸ್ಥಾನಕ್ಕೆ, ಬಿಹಾರಕ್ಕೆ, ಉತ್ತರಪ್ರದೇಶದಿಂದ ಒಡಿಶಾಗೆ, ಮಹಾರಾಷ್ಟ್ರಕ್ಕೆ, ಮಹಾರಾಷ್ಟ್ರದಿಂದ ತಮಿಳುನಾಡಿಗೆ, ಕರ್ನಾಟಕಕ್ಕೆ ಪಾದ ಬೆಳೆಸುತ್ತಿರುವ ಲಕ್ಷಾಂತರ ವಲಸೆ ಕಾರ್ಮಿಕರು ಸರಕಾರದ ಕಣ್ಣಿಗೆ ಕಾಣುತ್ತಿಲ್ಲ. ಇವರ ಹೊಟ್ಟೆ ಪಾಡಿನ ಸಮಸ್ಯೆಗಿಂತಲೂ ಇವರಿಂದ ಹರಡಬಹುದಾದ ಕೊರೋನ ಸೋಂಕು ಆಳುವ ವರ್ಗಗಳನ್ನು ಬಾಧಿಸುತ್ತಿದೆ. ಇದ್ದಲ್ಲೇ ಸೂರು-ಕೂಳೂ ದೊರೆತಿದ್ದರೆ ಈ ಕಾರ್ಮಿಕರು 600 ಕಿಲೋಮೀಟರ್ ನಡೆಯಲು ಸಜ್ಜಾಗುತ್ತಿರಲಿಲ್ಲ ಅಲ್ಲವೇ?
ಭಾರತ ಅಕ್ಷರಶಃ ಬೆತ್ತಲಾಗಿದೆ. ಕೊರೋನ ವೈರಾಣು ಭಾರತದ ಬಾಹ್ಯ ಸ್ವರೂಪವನ್ನು ವಿರೂಪಗೊಳಿಸುತ್ತಿರುವುದರೊಂದಿಗೆ ದೇಶದ ಆಂತರ್ಯದೊಳಗಿನ ಕೊಳೆತ ವೈರಾಣುಗಳೆಲ್ಲವನ್ನೂ ಹೊರಗೆಳೆದು ಹಾಕುತ್ತಿದೆ. ತಾತ್ವಿಕವಾಗಿ ಹೇಳುವುದಾದರೆ ಭಾರತದಲ್ಲಿ ಕೋವಿಡ್-19ನಂತಹ ಮಾರಣಾಂತಿಕ ವೈರಾಣುಗಳು ಸಮಾಜೋ ಸಾಂಸ್ಕೃತಿಕ ರೂಪದಲ್ಲಿ ಶತಮಾನಗಳಿಂದಲೂ ಬದುಕುತ್ತಿವೆ. ತಪಾಸಣೆಯ ಉಪಕರಣಗಳು ಇಲ್ಲದೆಯೇ ಸಮಾಜದ ನರ ನಾಡಿಗಳಲ್ಲಿ ಹರಡಿರುವ ವೈರಾಣುಗಳ ಸೋಂಕು ಶತಮಾನಗಳು ಕಳೆದರೂ ತೊಳೆದು ಹೋಗಿಲ್ಲ ಎನ್ನುವುದನ್ನು ಕೋವಿಡ್-19 ನಿರೂಪಿಸಿದೆ. ‘‘ಹಾಗೇನಿಲ್ಲ ಎಲ್ಲೋ ಕೆಲವರು ಹಾಗಿದ್ದಾರೆ’’ ಎನ್ನುವ ಸಬೂಬುಗಳು ಎಷ್ಟೇ ಸಾಂತ್ವನ ನೀಡಿದರೂ, ಈ ಸಾಂತ್ವನದ ಮಾತು ಹೃದಯಾಂತರಾಳದಿಂದ ಬಂದಿದ್ದಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಏಕೆಂದರೆ ಭಾರತೀಯ ಸಮಾಜದ ಅಂತಃಸತ್ವವನ್ನು ಕೊರೆದು, ಸಾಲಿಗ್ರಾಮದಂತೆ ಪಳೆಯುಳಿಕೆಯಾಗಿ ಕಡಲಾಳದಲ್ಲಿ ಕುಳಿತಿರುವ ಜಾತಿ ಪ್ರಜ್ಞೆ ಸುನಾಮಿಗೂ ಜಗ್ಗುವುದಿಲ್ಲ. ಚಂಡಮಾರುತಕ್ಕೂ ಬಗ್ಗುವುದಿಲ್ಲ. ಕೊರೋನ ಭಾರತೀಯ ಸಮಾಜದ ಎಲ್ಲ ಅಂಗಾಂಗಳನ್ನು ಕಳಚಿ ಪ್ರದರ್ಶನಕ್ಕೆ ಇಟ್ಟು ಬಿಟ್ಟಿದೆ.
ಈ ದೇಶ ಯಾರಿಗಾಗಿದೆ? ಯಾರನ್ನು ಪ್ರತಿನಿಧಿಸುತ್ತದೆ? ಈ ಪ್ರಶ್ನೆಗಳು ಎದುರಾದಾಗ ಕೊರೋನ ಭೀತಿಯಿಂದ ಕಂಗಾಲಾಗಿರುವ ಲಕ್ಷಾಂತರ ಶ್ರಮಜೀವಿಗಳು ಕಣ್ಣೆದುರು ನಿಲ್ಲುತ್ತಾರೆ. 21 ದಿನಗಳ ‘ಲಾಕ್‌ಡೌನ್’ ಅಥವಾ ಗೃಹ ದಿಗ್ಬಂಧನದಿಂದ ಕಂಗಾಲಾಗಿರುವ ಸೂರಿಲ್ಲದ ಜೀವಗಳು, ಸೂರು ಇದ್ದರೂ ಇಲ್ಲದಂತೆ ಬದುಕುವ ಜೀವಗಳ ಪರದಾಟವನ್ನು ನೋಡುತ್ತಿದ್ದೇವೆ. ಕೊರೋನ ವೈರಾಣುವಿನ ವಿರುದ್ಧ ಹೋರಾಟದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೈಗೊಂಡಿರುವ ಕ್ರಮಗಳು ಸ್ವಾಗತಾರ್ಹವೇ. ಜನಸಾಮಾನ್ಯರ ಜೀವನಕ್ಕೆ ತೊಂದರೆಯಾಗದಂತೆ ಕೋಟ್ಯಂತರ ರೂ.ಗಳ ಯೋಜನೆಯನ್ನು ಸಿದ್ಧಪಡಿಸಿವೆ. ಈ ಯೋಜನೆಗಳ ಹಿಂದೆ ಜನಪರ ಕಾಳಜಿ ಇದೆ, ಕಳಕಳಿ ಇದೆ, ಜನಸಮುದಾಯಗಳ ಆರೋಗ್ಯ ಕಾಪಾಡುವ ಇಚ್ಚಾಶಕ್ತಿ ಇದೆ. ಆದರೆ ಸಮಾಜದ ಒಳಪದರಗಳನ್ನು ಮುಟ್ಟಿ ನೋಡುವ ಸಂವೇದನೆ ಕಾಣುತ್ತಿಲ್ಲ. ಹಾಗಾಗಿ ಸರಕಾರದ ಯೋಜನೆಗಳು ಆರ್ಥಿಕ ನೆಲೆಯಲ್ಲಿ ಜಾರಿಗೊಳ್ಳುತ್ತಿವೆ, ಸಾಮಾಜಿಕ ನೆಲೆಯಲ್ಲಿ ಗೋಚರಿಸುತ್ತಲೇ ಇಲ್ಲ. ಪ್ರಧಾನಿ ನರೇಂದ್ರ ಮೋದಿಯವರ ಟಿವಿ ಭಾಷಣಗಳು, ಮನ್ ಕೀ ಬಾತ್ ಸಂವಾದ ಎಷ್ಟೇ ಸಾಂತ್ವನ ನೀಡಿದರೂ ಈ ಸಂವಹನ ಮಾರ್ಗದಲ್ಲಿ ಕೋಟ್ಯಂತರ ಜೀವಿಗಳು ಚಲಿಸುವುದೇ ಇಲ್ಲ ಎನ್ನುವುದನ್ನು ನಾವು ಮರೆತು ಬಿಡುತ್ತೇವೆ. ಈ ಜೀವಿಗಳು ಕಿವುಡರಲ್ಲ ಆದರೆ ಬೆನ್ನಿಗಂಟಿದ ಉದರ ಹೊತ್ತವರಿಗೆ ಕಿವಿ ಇದ್ದರೂ ಇಲ್ಲದಂತಾಗುತ್ತದೆ. ಮಧ್ಯಮ ವರ್ಗ ಮತ್ತು ಶ್ರೀಮಂತ ವರ್ಗಗಳ ಹೃದಯ ಬಡಿತಕ್ಕೆ ಸ್ಪಂದಿಸುವ ಬಂಡವಾಳ ವ್ಯವಸ್ಥೆ, ಬಡತನದ ಬೇಗೆಯಿಂದ ಬಳಲುವ ಶ್ರಮಜೀವಿಗಳ ನಾಡಿಮಿಡಿತವನ್ನು ಗ್ರಹಿಸುವುದಿರಲಿ, ನಾಡಿಯನ್ನು ಮುಟ್ಟಲೂ ಸಾಧ್ಯವಿಲ್ಲ ಎನ್ನುವುದನ್ನು ಕೋವಿಡ್-19 ಸಾಬೀತುಪಡಿಸಿದೆ.
ಕೊರೋನ ವೈರಾಣು ಸೋಂಕಿನಿಂದ ಪಾರಾಗಲು ಜನರು ಸೋಂಕಿತರ ಸ್ಪರ್ಶದಿಂದ ದೂರ ಇರಬೇಕು. ಇದು ಬಹುಪಾಲು ಸೋಂಕುಗಳಿಗೆ ಸಲ್ಲುವ ನಿಯಮ. ಸಾಧಾರಣ ಜ್ವರ ಬಂದಾಗಲೂ ಮಕ್ಕಳನ್ನು, ವೃದ್ಧರನ್ನು ಅವರಿಂದ ದೂರ ಇರಿಸುವುದು ಸಹಜ. ಆದರೆ ಕೊರೋನ ಬಹಳ ಶೀಘ್ರಗತಿಯಲ್ಲಿ ಹರಡುವುದರಿಂದ ಇನ್ನೂ ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗುತ್ತದೆ. ಈ ವೈರಾಣು ಪ್ರತಿ ಹಂತದಲ್ಲೂ ಇಮ್ಮಡಿಯಾಗುತ್ತಾ ವ್ಯಾಪಿಸುವುದರಿಂದ ಬಹುಬೇಗನೆ ಸರ್ವವ್ಯಾಪಿಯಾಗಿ ಬಿಡುತ್ತದೆ. ಹಾಗಾಗಿಯೇ ಇದನ್ನು ಸಾಂಕ್ರಾಮಿಕ ಎಂದು ಪರಿಗಣಿಸದೇ ಸರ್ವವ್ಯಾಪಿ ರೋಗ ಎಂದು ಕರೆಯಲಾಗಿದೆ. ವೈದ್ಯಕೀಯ ಲೋಕದ ಎಚ್ಚರಿಕೆಯ ಸಂದೇಶಕ್ಕೆ ಮಾನ್ಯತೆ ನೀಡಿ ಸರಕಾರಗಳು ಗೃಹ ದಿಗ್ಬಂಧನವನ್ನು ಘೋಷಿಸಿವೆ. ಮನೆಯಿಂದ ಹೊರಬರುವವರು ಕನಿಷ್ಠ ಮೂರು ಅಡಿ ಅಂತರವನ್ನು ಕಾಪಾಡಿಕೊಳ್ಳುವಂತೆಯೂ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಇದು ತಾತ್ಕಾಲಿಕ ಆದೇಶವಾದರೂ, ಅಂತರ ಕಾಪಾಡಿಕೊಳ್ಳುವ ಆಂತರಿಕ ಬೇಗುದಿಯನ್ನು ತಡೆಹಿಡಿಯಲಾರದೆ ತೋಳಲಾಡುತ್ತಿದ್ದ ಒಂದು ವರ್ಗ ಹಿರಿಹಿರಿ ಹಿಗ್ಗುತ್ತಿದೆ.
ಈ ಅಂತರ ಕಾಪಾಡಿಕೊಳ್ಳುವ ನಿಯಮವನ್ನು ‘‘ದೈಹಿಕ ಅಂತರ’’ ಎಂದು ಭಾವಿಸಬೇಕಿತ್ತು. ಆದರೆ ಆಂಗ್ಲ ಭಾಷೆಯಲ್ಲಿ ಮೂಲ ಆದೇಶ ಇದ್ದುದರಿಂದ ಅದು ‘‘ಸಾಮಾಜಿಕ ಅಂತರ’’ ಆಗಿ ಹೋಯಿತು. ಇದೇನೂ ಬಳಸಬಾರದ ಪದ ಅಲ್ಲ. ಕೋವಿಡ್-19 ಎದುರಿಸುತ್ತಿರುವ ಬಹುಪಾಲು ರಾಷ್ಟ್ರಗಳಲ್ಲಿ ಇದನ್ನು ಪರಸ್ಪರ ದೂರ ಇರುವ ನಿಯಮ ಎಂದೇ ಭಾವಿಸಲಾಗುತ್ತಿದೆ. ಆದರೆ ಭಾರತದಲ್ಲಿ ‘‘ಸಾಮಾಜಿಕ ಅಂತರ’’ ಎನ್ನುವ ಎರಡು ಪದಗಳು ಸಮಾಜೋ ಸಾಂಸ್ಕೃತಿಕ ಸಂಚಲನ ಮೂಡಿಸಿಬಿಟ್ಟವು. ಒಮ್ಮಿಂದೊಮ್ಮೆಲೇ ಭೂಗತವಾಗಿದ್ದ ಜಾತಿ ಪ್ರಜ್ಞೆಯನ್ನು, ಶ್ರೇಷ್ಠತೆಯ ಅಹಮ್ಮಿಕೆಯನ್ನು ಬಡಿದೆಬ್ಬಿಸಿ ಬಿಟ್ಟಿತು. ಕೊರೋನ ಕುರಿತು ಜಾಗೃತಿ ಮೂಡಿದೆಯೋ ಇಲ್ಲವೋ, ಸಾಮಾಜಿಕ ಅಂತರದ ಚೌಕಟ್ಟಿನಲ್ಲಿ ನಮ್ಮ ಸಮಾಜದ ಅಂತರಾಳದಲ್ಲಿ ಅಡಗಿದ್ದ ಸಮಾಜೋ ಸಾಂಸ್ಕೃತಿಕ ಪ್ರಜ್ಞೆ ಧಿಗ್ಗನೆ ಎದ್ದು ಕುಳಿತು ಬಿಟ್ಟಿತು. ಆಧುನಿಕ ಜಗತ್ತಿನ ನಿತ್ಯ ಬದುಕಿನ ಅನಿವಾರ್ಯತೆಯಿಂದ ಹುದುಗಿ ಹೋಗಿದ್ದ ‘‘ಅಂತರ ಕಾಪಾಡಿಕೊಳ್ಳುವ ’’ ಮನಸುಗಳಿಗೆ ಕೊರೋನ ವೈರಾಣುವಾಗಿ ಕಾಣಲಿಲ್ಲ, ಇಂಧನವಾಗಿ ಕಂಡು ಬಂತು ಹೌದಲ್ಲವೇ, ‘‘ನಾವು ಎಷ್ಟು ಶತಮಾನಗಳ ಕಾಲ ಅಂತರ ಕಾಪಾಡಿಕೊಂಡೇ ಬಂದಿದ್ದೇವೆ, ಈಗ ಇವರೇನು ಹೇಳುವುದು’’ ಎನ್ನುವ ದಾಷ್ಟ್ರ ಸಾಮಾಜಿಕ ತಾಣಗಳಲ್ಲಿ ಹರಿದಾಡಿತು.
‘‘ನೋಡಿದ್ರಾ ನಾವು ಏಕೆ ಮಡಿ, ಆಚಾರ ಮಾಡ್ತೀವಿ ಅಂತ ಗೊತ್ತಾಯ್ತಾ? ನಮ್ಮ ಹಿರೀಕರೇನೂ ದಡ್ಡರಲ್ಲ ಶತಮಾನಗಳ ಹಿಂದೆಯೇ ಇದಕ್ಕೆ ಪರಿಹಾರ ನೀಡಿದ್ದರು. ಕೈ ಕುಲುಕುವ ಪಾಶ್ಚಾತ್ಯ ಸಂಸ್ಕೃತಿ, ಕೈಜೋಡಿಸಿ ನಮಸ್ಕರಿಸುವ ನಮ್ಮ ಸಂಸ್ಕೃತಿಯನ್ನು ಇಂದು ಇಡೀ ವಿಶ್ವವೇ ಅಪ್ಪಿಕೊಂಡಿದೆ’’ ಈ ರೀತಿಯ ಮಾತುಗಳು, ಅಭಿಪ್ರಾಯಗಳು ಭಾರತೀಯ ಸಮಾಜದ ಆಂತರ್ಯದಲ್ಲಿ ಅಡಗಿದ್ದ ಜಾತಿ ವೈರಾಣುವನ್ನು ಒಮ್ಮೆಲೆ ಹೊರ ಹಾಕಿ ಬಿಟ್ಟಿವೆೆ. ಕೈಜೋಡಿಸಿ ನಮಸ್ಕಾರ ಮಾಡುವ ಪ್ರಾಚೀನ ಪದ್ಧತಿಯ ಉದಾತ್ತತೆ ಏನೇ ಇದ್ದರೂ, ಅನ್ಯರನ್ನು ಕಣ್ಣೆತ್ತಿಯೂ ನೋಡದಂತಹ ಒಂದು ಸಮಾಜದಲ್ಲಿ ಅಂತ್ಯಜರಿಂದ ಅಂತರ ಕಾಪಾಡಿಕೊಳ್ಳಲು ಇದು ಸಾಂಸ್ಕೃತಿಕ ಅಸ್ತ್ರವಾಗಿದ್ದುದು ಚಾರಿತ್ರಿಕ ಸತ್ಯ ಅಲ್ಲವೇ? ಈ ಚಾರಿತ್ರಿಕ ಸತ್ಯವನ್ನು ಪ್ರಕಾಂಡ ಕೋವಿಡ್‌ರು ಮುಚ್ಚಿಟ್ಟರೂ ಕೋವಿಡ್-19 ಬಯಲು ಮಾಡಿದೆ. ಸಾರ್ವತ್ರಿಕವಾಗಿ ಇದು ಸಮಸ್ತ ವೈದಿಕರಿಗೂ ಅನ್ವಯಿಸುವುದಿಲ್ಲವಾದರೂ, ಬ್ರಾಹ್ಮಣ್ಯ ಮತ್ತು ವೈದಿಕ ಸಂಸ್ಕೃತಿಯ ಛಾಯೆ ನಮ್ಮ ಸಮಾಜದಿಂದ ಇನ್ನೂ ದೂರವಾಗಿಲ್ಲ ಎನ್ನುವುದನ್ನು ನಿರೂಪಿಸುತ್ತದೆ. ಸಾಮಾಜಿಕ ಅಂತರ ಎಂಬ ಎರಡು ಪದಗಳು ಭಾರತೀಯ ಸಮಾಜದ ಹೃದಯವನ್ನು ಬಗೆದು ತೋರಿಸಿರುವುದು ನಮ್ಮ ಸಂಸ್ಕೃತಿಯೊಳಗಿನ ಕೊಳಕನ್ನೂ ಹೊರಗೆ ಹಾಕಿದೆ. ಬಹುಶಃ ನಾವು ದೈಹಿಕ ಅಂತರ ಎಂಬ ಪದವನ್ನು ಬಳಸಿದ್ದರೆ ಇದು ಒಳಗೇ ಹುಗಿದಿರುತ್ತಿತ್ತೇನೋ? ಒಳ್ಳೆಯದೇ ಆಯಿತು, ಸತ್ಯ ತಿಳಿಯಿತು. ಇಲ್ಲವಾದಲ್ಲಿ ನಾವು ಸುಧಾರಿಸಿದ್ದೇವೆ ಎಂಬ ಭ್ರಮೆಯಲ್ಲೇ ಇನ್ನೂ ಶತಮಾನಗಳ ಕಾಲ ಬದುಕುತ್ತಿದ್ದೆವು.
ಕೊರೋನ ಸಂದರ್ಭದಲ್ಲಿ ಕಂಡು ಬಂದಿರುವ ಮತ್ತೊಂದು ಅಂಶವೆಂದರೆ, ಸಮಾಜದಲ್ಲಿ ಅಡಗಿರುವ ಕೋಮುವಾದಿ ಸೂಕ್ಷ್ಮಗಳು. ಕರ್ನಾಟಕದ ಪ್ರಸಿದ್ಧ ಪತ್ರಿಕೆಯೊಂದು ಕೊರೋನದಿಂದ ಸತ್ತ ಮೂವರಲ್ಲಿ ದುರ್ಭಾಗ್ಯ ಜೀವವೊಂದನ್ನು ಕಾಣಲಿಲ್ಲ. ಬದಲಾಗಿ ಮತೀಯ ಅಸ್ಮಿತೆಯನ್ನು ಕಂಡು ಬಿಟ್ಟಿತ್ತು. ಅಷ್ಟೇ ಅಲ್ಲ ಸೋಂಕಿತರ ನಡುವೆಯೂ ಒಂದು ನಿರ್ದಿಷ್ಟ ಮತ ಧಾರ್ಮಿಕ ಸಮುದಾಯವನ್ನು ಶೋಧಿಸಿತು. ಎಂತಹ ಹೀನಾಯ ಮನಸ್ಥಿತಿಯಲ್ಲವೇ? ಕೊಲ್ಲಿ ರಾಷ್ಟ್ರಗಳಿಂದ ಬರುತ್ತಿರುವವರಲ್ಲಿ ಹಲವರು ಕೊರೋನ ಸೋಂಕಿನೊಡನೆ ಬಂದಿರುವುದು ನಿಜ. ಆದರೆ ಕೊಲ್ಲಿ ರಾಷ್ಟ್ರಗಳಿಗೆ ಇಲ್ಲಿಂದ ಹೋದವರು ದುಡಿವ ಜೀವಗಳು. ಐಷಾರಾಮಿ ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತು, ತಿರುಗುವ ಗಾಲಿ ಕುರ್ಚಿಗಳನ್ನು ಅಲಂಕರಿಸುವವರಲ್ಲ. ಇವರ ಒಬ್ಬರ ದುಡಿಮೆ ಭಾರತದ ಹಲವು ಜೀವಗಳಿಗೆ ಆಧಾರವಾಗಿರುತ್ತದೆ. ಕೊರೋನ ಹೊತ್ತು ತಂದಿರುವುದು ಅವರ ಸ್ವ ಇಚ್ಚೆಯಿಂದಲ್ಲ. ದೌರ್ಭಾಗ್ಯದಿಂದ. ಅದರೆ ನಮ್ಮ ಸುದ್ದಿ ಮಾಧ್ಯಮಗಳಿಗೆ ಅವರಲ್ಲಿ ದುಬೈ ಕಾಣುತ್ತದೆ. ಅವರಲ್ಲೊಂದು ಮತಧರ್ಮದ ಸಂಕೇತ ಕಾಣುತ್ತದೆ. ಈ ಹೀನ ಪ್ರವೃತ್ತಿಯನ್ನು ಸಮರ್ಥಿಸುವಂತೆ ಸುದ್ದಿ ಮಾಧ್ಯಮದ ಪ್ರಥಮ ಶ್ರೇಣಿಯ ಪತ್ರಿಕೆ ತನ್ನ ಮನದಾಳದ ಹೊಲಸನ್ನು ಹೊರಹಾಕಿದೆ.
ಹೆಣಗಳಲ್ಲಿ ‘‘ ನಮ್ಮವರನ್ನು ’’ ಹೆಕ್ಕಿ ತೆಗೆಯುವ ಮತ್ತು ‘‘ಅನ್ಯರನ್ನು’’ ಹುಡುಕಿ ತ್ಯಜಿಸುವ ಮನೋವೃತ್ತಿಗೆ ದಶಕಗಳ ಇತಿಹಾಸವಿದೆ. ಮೂರು ದಶಕಗಳ ಹಿಂದೆಯೇ ಬಿತ್ತಿದ ಬೀಜಗಳು ಇಂತಹ ದುರಂತದಲ್ಲಿ ಕುಡಿಯೊಡೆಯುತ್ತಿರುವುದು ನಮ್ಮ ಸಮಾಜದ ಆಂತರ್ಯದಲ್ಲಿ ಅಡಗಿರುವ ಪೈಶಾಚಿಕ ಧೋರಣೆಗೆ ಸಾಕ್ಷಿಯಾಗಿದೆ. ಇಲ್ಲಿ ಇಡೀ ಸಮಾಜವನ್ನು ನ್ಯಾಯದ ಕಟಕಟೆಯಲ್ಲಿ ನಿಲ್ಲಿಸಬೇಕಿಲ್ಲ ಅಥವಾ ಯಾವುದೇ ಒಂದು ಸಮುದಾಯವನ್ನು ನೇಣಿಗೇರಿಸಬೇಕಿಲ್ಲ. ಪ್ರಜ್ಞೆ ಇದ್ದರೆ ನಮ್ಮಾಳಗೆ ಇಂದಿಗೂ ಈ ವಿಷ ಬೀಜಗಳು ಮೊಳೆಯುತ್ತಿವೆ ಎನ್ನುವ ವಾಸ್ತವವನ್ನು ಅರ್ಥಮಾಡಿಕೊಂಡರೆ ಸಾಕಲ್ಲವೇ? ಇಂದು ನಮ್ಮೆದುರು ಇರುವುದು ಮನುಕುಲದ ಅಳಿವು ಉಳಿವಿನ ಪ್ರಶ್ನೆ. ಕೊರೋನ ಯಾವುದೇ ಅಸ್ಮಿತೆಯ ವಿಷ ಬೀಜದಿಂದ ಮೊಳಕೆಯೊಡೆದ ವೈರಾಣು ಅಲ್ಲ. ಚೀನಾದಿಂದಲೇ ಹರಡಿದ್ದರೂ, ಚೀನಾ ಅಥವಾ ಚೀನಾದ ಜನತೆ ಆರೋಪಿಗಳಲ್ಲ. ಚೀನಾ ಸರಕಾರ ನೈತಿಕ ಹೊಣೆ ಹೊರಬಹುದೇ ಹೊರತು, ಈ ಸಂದರ್ಭದಲ್ಲಿ ಕಾರಣಕರ್ತ ರಾಷ್ಟ್ರ ಎನಿಸುವುದಿಲ್ಲ. ಏಕೆಂದರೆ ಎಲ್ಲ ದೇಶಗಳಲ್ಲೂ ಸರಕಾರಗಳು ಮುನ್ನೆಚ್ಚರಿಕೆ ವಹಿಸುವಲ್ಲಿ ಎಡವಿವೆ. ಅಮೆರಿಕದಂತಹ ರಾಷ್ಟ್ರವೂ.
ಎಡವಿವೆ ಎನ್ನುವುದಕ್ಕಿಂತಲೂ ಜನಾರೋಗ್ಯದ ಬಗ್ಗೆ ಬಂಡವಾಳ ವ್ಯವಸ್ಥೆಯಲ್ಲಿ ಇರುವ ನಿರ್ಲಕ್ಷ ಇದಕ್ಕೆ ಕಾರಣ ಎನ್ನಬಹುದು. ಆರೋಗ್ಯ ಕ್ಷೇತ್ರವನ್ನು ಮಾರುಕಟ್ಟೆ ವ್ಯವಸ್ಥೆಯ ನಿಯಂತ್ರಣಕ್ಕೊಪ್ಪಿಸಿ, ಜನಸಾಮಾನ್ಯರ ಆರೋಗ್ಯ ಕಾಳಜಿಯನ್ನು ಬೃಹತ್ ಕಾರ್ಪೊರೇಟ್ ಉದ್ಯಮಿಗಳಿಗೆ ಪರಭಾರೆ ಮಾಡಿರುವ ನವ ಉದಾರವಾದದ ಪೋಷಕರು ಇಂದು ಕೈ ಕೈ ಹಿಸುಕುವಂತಾಗಿದೆ. 70 ವರ್ಷಗಳ ನಂತರವೂ ಭಾರತದಲ್ಲಿ ಆರೋಗ್ಯ ಮೂಲಭೂತ ಹಕ್ಕು ಎಂದು ಪರಿಗಣಿಸಲಾಗಿಲ್ಲ. ನವ ಉದಾರವಾದ ಬೇರೂರುತ್ತಿರುವಂತೆ ಆರೋಗ್ಯ ಕ್ಷೇತ್ರ ಖಾಸಗಿ ಕಾರ್ಪೊರೇಟ್ ಕುಳಗಳ ಪಾಲಾಗುತ್ತಿದೆ. ಸಾರ್ವಜನಿಕ ಆರೋಗ್ಯ ಸೇವೆಯನ್ನು ನಿರ್ಲಕ್ಷಿಸಿರುವುದೇ ಅಲ್ಲದೆ ಜನಸಾಮಾನ್ಯರನ್ನು ಖಾಸಗಿ ಕ್ಷೇತ್ರದ ಪಿಶಾಚಿಗಳ ಕೈಗೆ ಒಪ್ಪಿಸಿರುವ ಆಳುವ ವರ್ಗಗಳು ಇಂದು ಪರದಾಡುತ್ತಿವೆ. ಹಾಗಾಗಿಯೇ ತುಂಡು ಬಟ್ಟೆಯಿಂದ ಹೊಲೆಯಬಹುದಾದ ಮಾಸ್ಕ್ ಲಭ್ಯವಾಗುತ್ತಿಲ್ಲ. ಕೈತೊಳೆಯುವ ದ್ರಾವಣ ಲಭ್ಯವಾಗುತ್ತಿಲ್ಲ. ಕೊರೋನ ಸೋಂಕು ಕಂಡು ಹಿಡಿಯುವ ತಪಾಸಣೆಯ ಕಿಟ್ ಲಭ್ಯವಾಗುತ್ತಿಲ್ಲ.
ನಾವು ಕ್ರೂರ ಜಗತ್ತಿನಲ್ಲಿ ಬದುಕುತ್ತಿದ್ದೇವೆ ಎಂದು ಬೆವರು ಸುರಿಸಿ ದುಡಿಯುವ ಪ್ರತಿಯೊಬ್ಬ ಪ್ರಜೆಗೂ ಅರ್ಥವಾಗಬೇಕಿದೆ. ಕೊರೋನ ಇದನ್ನು ಅರ್ಥಮಾಡಿಸುತ್ತಿದೆ. ಬೆತ್ತಲಾದ ದೇಶಕ್ಕೆ ಭಕ್ತಿ ಸಿಂಚನ ಬೇಕಿಲ್ಲ. ಮಾನವೀಯ ಸಂವೇದನೆಯ ಬೆಚ್ಚನೆಯ ಹೊದಿಕೆ ಬೇಕಿದೆ.