varthabharthi


ಭಿನ್ನ ರುಚಿ

ಬುಡಕಟ್ಟು ಜನರ ರಕ್ತ ರುಚಿ

ವಾರ್ತಾ ಭಾರತಿ : 30 Mar, 2020
ರಾಜೇಂದ್ರ ಪ್ರಸಾದ್

ಮಾಂಸದಲ್ಲಿ ಅಡುಗೆ ಮಾಡುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಸರಿ ಆದರೆ ರಕ್ತದಲ್ಲಿ ಮಾಡುವುದು ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ. ಇದನ್ನು ದ್ರವ ಮಾಂಸ (liquid meat) ಅಂತಲೂ ಕರೆಯುತ್ತಾರೆ. ಕೆಲವರು ಅಯ್ಯೋ ರಕ್ತಾನೂ ತಿಂತಾರ ಅಂತ ಅತಿರೇಕದ ಅಭಿವ್ಯಕ್ತಿ ಪ್ರದರ್ಶಿಸಬಹುದು, ಅದೊಂದು ಜಾತೀಯ ಸಿನಿಕತನವಷ್ಟೇ. ಆಹಾರ ಮತ್ತು ಆಯ್ಕೆ ಅವರವರ ಸಾಂಸ್ಕೃತಿಕ ಚಹರೆಗಳು. ಅದನ್ನು ಮತ್ತೊಂದರ ಜೊತೆ ಹೋಲಿಸಿ, ತುಲನೆ ಮಾಡಲು ಬರುವುದಿಲ್ಲ. ಪ್ರತಿಯೊಂದು ಚಹರೆಗೂ ಅದರದ್ದೇ ಮಹತ್ವ ಇದೆ. ರಕ್ತದ ಅಡುಗೆ ಬಹುಶಃ ಬುಡಕಟ್ಟು ಜೀವನ ಪದ್ಧತಿಗಳ ಕಾಲದಿಂದ ಮುಂದುವರಿದುಕೊಂಡು ಬಂದಿರಬಹುದು. ಮಾನವ ವಿಕಾಸದ ಹಾದಿಗಳಲ್ಲಿ ಅವನ ಆಹಾರದ ಕ್ರಮಗಳ ಕುರಿತು ಗಮನಿಸಿದರೆ ಬೇಟೆ, ಮಾಂಸದ ಬಳಕೆ, ಪ್ರಾಣಿ ಸಾಕಣೆ, ಉಣ್ಣೆ ಹಾಲು ತುಪ್ಪ- ಮಾಂಸ ಮತ್ತು ಮಾರಾಟ ಇತ್ಯಾದಿ ಹಂತ ಹಂತವಾದ ಬೆಳವಣಿಗೆಗಳನ್ನೂ ಗುರುತಿಸಬಹುದು. ಹಾಗೆಯೇ ಸೂಕ್ಷ್ಮವಾಗಿ ನೋಡುತ್ತಾ ಹೋದರೆ ಪ್ರಾಣಿಯ ರಕ್ತ, ಮಾಂಸ, ತೊಗಲು, ಉಗುರು ಹಾಗೂ ಮೂಳೆಗಳು ಕೂಡ ಪ್ರಯೋಜನಕಾರಿ ಬಳಸಲ್ಪಟ್ಟಿವೆ. ಮುಂದೆ ಹೊಸ ಹೊಸ ಅವಿಷ್ಕಾರಗಳು ನಡೆದು ಇವುಗಳ ಬಳಕೆ ಬೇರೆ ಬೇರೆ ಕ್ಷೇತ್ರಗಳಿಗೆ ವಿಸ್ತರಿಸಲ್ಪಟ್ಟಿದೆ.

ಪೂರ್ವ-ಪಶ್ಚಿಮ ದೇಶಗಳಲ್ಲಿ ಕುರಿ, ಕೋಳಿ, ಬಾತುಕೋಳಿ, ಹೆಬ್ಬಾತು, ಹಂದಿ ಮತ್ತು ದನದ ರಕ್ತವನ್ನು ಹಲವು ಅಡುಗೆಗಳಿಗೆ ಬಳಸುವುದು ರೂಢಿಯಲ್ಲಿದೆ. ಸಾಸೆಜ್, ಪಾನ್ ಕೇಕ್, ಸೂಪು ಸಾಸ್‌ಗಳಲ್ಲಿ, ದಪ್ಪನಾದ ಬಾರ್‌ಗಳಲ್ಲಿ ಹಾಗೂ ಕೆಲವು ಬುಡಕಟ್ಟಿನ ಮತ್ತು ಧಾರ್ಮಿಕ ಆಚರಣೆಗಳಲ್ಲಿ ಹಸಿ ರಕ್ತವನ್ನೇ ನೇರವಾಗಿ ಕುಡಿಯುವ ಕ್ರಮಗಳು ಕೂಡ ಇವೆ.

ಅಡುಗೆಯಲ್ಲಿ ರಕ್ತ

ಹಳೇ ಮೈಸೂರು ಭಾಗದಲ್ಲಿ ಕುರಿ ಮತ್ತು ಕೋಳಿಯ ರಕ್ತವನ್ನು ಅಡುಗೆಯಲ್ಲಿ ಶತಮಾನಗಳಿಂದ ಬಳಸಲಾಗುತ್ತಿದೆ. ಊರಿನಲ್ಲೇ ಕುರಿ ಅಥವಾ ಕೋಳಿಯನ್ನು ಕುಯ್ದಿಗ ಅದರ ಬಿಸಿರಕ್ತವನ್ನು ಸಂಗ್ರಹಿಸಿ ಅಡುಗೆಗೆ ಬಳಸಲಾಗುತ್ತದೆ. ಆದರೆ ದೇವರ ಹೆಸರಿನಲ್ಲಿ ನಡೆಯುವ ಬಲಿ ಅಥವಾ ಪೂಜೆ ಸಂದರ್ಭಗಳಲ್ಲಿ ಕೊಯ್ಯುವ ಪ್ರಾಣಿಯ ರಕ್ತವನ್ನು ಬಳಸುವಂತಿಲ್ಲ. ಅದು ಜನರ ನಂಬಿಕೆ. ಪ್ರಾಣಿಯ ಕತ್ತು ಕುಯ್ಯುವ ಮೊದಲು ಒಂದು ಪಾತ್ರೆಯಲ್ಲಿ ಉಪ್ಪು, ಚೂರು ಹುಣಸೆ ಹಾಕಿ ರಕ್ತವನ್ನು ಬಸಿದುಕೊಂಡು ಎತ್ತಿಟ್ಟು ಹೆಪ್ಪುಗಟ್ಟಿದ ರಕ್ತವನ್ನು ಪ್ರತ್ಯೇಕವಾಗಿ ಹುರಿಯಲು ಅಥವಾ ಗೊಜ್ಜುಗಳಿಗೆ ಹಾಕಲು ಬಳಸುತ್ತಾರೆ. ಇದನ್ನು ‘ಕೆಂಪು’ ಎಂದು ಕರೆಯುತ್ತಾರೆ. ಈ ರಕ್ತದಲ್ಲಿ ಅಧಿಕವಾದ ಪ್ರೋಟಿನ್ ಮತ್ತು ನೀರಿನಂಶ ಇರುತ್ತದೆ. ಬಿಸಿ ರಕ್ತವನ್ನು ಬಸಿದುಕೊಂಡ ಸ್ವಲ್ಪ ಹೊತ್ತಿನಲ್ಲೇ ಅಡುಗೆಗೆ ಬಳಸಿ ಬಿಡಬೇಕು ಇಲ್ಲವಾದರೆ ಅದು ಕೆಡುತ್ತದೆ. ಅದಕ್ಕೆಂದೇ ಉಪ್ಪು ಮತ್ತು ಹುಣಸೆ ಮಿಶ್ರಣವನ್ನು ಮೊದಲೇ ಮಾಡಿರಬೇಕು. ಅಡುಗೆಗೆ ದ್ರವ ರೂಪದ ರಕ್ತವನ್ನು ಬಳಸಲು ಸಾಧ್ಯವಿಲ್ಲ. ಅದಕ್ಕಾಗಿ ಎರಡು ತರದಲ್ಲಿ ಬಳಸುತ್ತಾರೆ ಒಂದು ಪುಡಿಯಾಗಿ ಮತ್ತೊಂದು ಸಣ್ಣ ಸಣ್ಣ ಚೂರುಗಳಾಗಿ.

ಲಾಕಿ
ಇದು ಜನಪ್ರಿಯ ರಕ್ತದ ತಿನಿಸು. ಲಾಕಿ ಎಂದರೆ ಕಡುಗೆಂಪು ಬಣ್ಣ ಎಂದರ್ಥ. ಹೆಪ್ಪುಗಟ್ಟಿದ ರಕ್ತವನ್ನು ಸ್ವಲ್ಪ ಹೊತ್ತು ಹಬೆಯಲ್ಲಿರಿಸಿ ಗಟ್ಟಿಯಾಗಿ ಕೇಕ್ ಸ್ವರೂಪಕ್ಕೆ ಬಂದ ಮೇಲೆ ಕೈಯಲ್ಲಿ ಹಿಸುಕಿ ಸಣ್ಣಗೆ ಪುಡಿಮಾಡಿ ಅದಕ್ಕೆ ಕರಿಮೆಣಸಿನ ಪುಡಿ, ಉಪ್ಪು ಹಾಕಿ ಸ್ವಲ್ಪ ಹೊತ್ತು ನೆನೆಸಿ ನಂತರ ಬಾಣಲೆಯಲ್ಲಿ ಎಣ್ಣೆ ಮತ್ತು ಚೂರು ತುರಿದ ತೆಂಗಿನ ಕಾಯಿ ಹಾಕಿ ಚೆನ್ನಾಗಿ ಹುರಿದು ಸಿದ್ಧ್ದಪಡಿಸಲಾಗುತ್ತದೆ. ತೆಂಗಿನ ತುರಿ ಮತ್ತು ರಕ್ತದ ಪುಡಿ ಒಂದು ಹದಕ್ಕೆ ಬೆಂದ ನಂತರ ಅದನ್ನು ಬಡಿಸಿಕೊಂಡು ತಿನ್ನಬಹುದು. ಇದೊಂದು ಪ್ರತ್ಯೇಕ ಖಾದ್ಯ. ರೊಟ್ಟಿಗೆ ಹೊಂದಬಹುದಷ್ಟೇ.

ಗೊಜ್ಜು
 ಇದು ಸಾಮಾನ್ಯವಾದ ಬೋಟಿಗೊಜ್ಜು ಅಥವಾ ಮಾಂಸದ ಗೊಜ್ಜು. ಇದರಲ್ಲಿ ಪ್ರಾಣಿಯ ಜಠರ, ಕರಳು, ಬೋಟಿ (ಅನ್ನನಾಳ) ಯಕೃತ್ತು, ಶ್ವಾಸಕೋಶಗಳನ್ನು ಸಣ್ಣಗೆ ಕತ್ತರಿಸಿ ಅವುಗಳ ಜೊತೆಗೆ ವಿವಿಧ ರೀತಿಯ ತರಕಾರಿ, ಕಾಳುಗಳನ್ನು ಸೇರಿಸಿ ಮಸಾಲೆಯೊಂದಿಗೆ ಚೆನ್ನಾಗಿ ಬೇಯಿಸಿ ಮಾಡುತ್ತಾರೆ. ಇಂತಹ ಗೊಜ್ಜಿನ ಜೊತೆಗೆ ರಕ್ತದ ಚೂರು (cube)ಗಳನ್ನು ಮಿಶ್ರಣ ಮಾಡುತ್ತಾರೆ. ಇದು ತಮಿಳುನಾಡಿನ ಕೊಂಗು ಮತ್ತು ಹಳೆ ಮೈಸೂರು ಪ್ರಾಂತಗಳಲ್ಲಿ ಜನಪ್ರಿಯವಾದ ಮಾಂಸದಡುಗೆ. ಇದು ರಾಗಿಮುದ್ದೆ, ಅನ್ನ, ರೊಟ್ಟಿ, ಚಪಾತಿ ಎಲ್ಲದರ ಜೊತೆಗೂ ರುಚಿಯಾಗಿ ಹೊಂದಿಕೆಯಾಗುತ್ತದೆ. ನನಗೆ ತಿಳಿದಂತೆ ನಮ್ಮಲ್ಲಿ ರಕ್ತವು ಬಳಕೆಯಾಗುವ ಎರಡೇ ಅಡುಗೆ ಇವು. ಅದರಲ್ಲಿ ಕುರಿ ಮತ್ತು ಮೇಕೆಯ ರಕ್ತ ಮಾತ್ರ. ಈಗ ಹೆಚ್ಚು ಫಾರಂ (ಬಾಯ್ಲರ್) ಕೋಳಿಗಳೇ ಎಲ್ಲ ಕಡೆ ಸಿಗುವುದರಿಂದ ಅವುಗಳ ರಕ್ತವನ್ನು ಅಡುಗೆಗೆ ಯಾರೂ ಬಳಸುವುದಿಲ್ಲ. ಆದರೆ ನಾಟಿ ಕೋಳಿಗಳನ್ನು ಹಳ್ಳಿಗಳಲ್ಲಿ ಕೊಯ್ದಿಗ ಈಗಲೂ ಅದನ್ನು ಸಾಂಬಾರಿಗೆ ಹಾಕುತ್ತಾರೆ, ಗಟ್ಟಿಯಾದ ಒಂದೆರಡು ಸಣ್ಣ ತುಂಡು ಅದರಲ್ಲಿ ಬೇಯುತ್ತದೆ.

ಪೂರ್ವ ದೇಶಗಳಲ್ಲಿ
ಚೀನಾದ ಸಿಚುವಾನ್ ಅಡುಗೆಯಲ್ಲಿ ಹಂದಿ ಮತ್ತು ಬಾತುಕೋಳಿಗಳ ರಕ್ತದಿಂದ ಮಾಡಲಾದ ‘ರಕ್ತದ ಟೋಫು’’ಗಳನ್ನು ಆಯತಾಕಾರವಾಗಿ ಕತ್ತರಿಸಿ ಬೇಯಿಸಿ ತರಕಾರಿ, ನೂಡಲ್ಸ್‌ಗಳ ಜೊತೆಗಿನ ಸೂಪ್‌ನಲ್ಲಿ ಬೆರಸಿ ಕೊಡಲಾಗುತ್ತದೆ. ಹಂದಿಯ ರಕ್ತದಲ್ಲಿ ಮಿಟಮಿನ್, ಪ್ರೋಟಿನ್, ಐರನ್, ಕ್ಯಾಲ್ಸಿಯಂ ಸೇರಿದಂತೆ ಹಲವಾರು ಪೌಷ್ಟಿಕಾಂಶಗಳಿವೆ. ಇದು ಬಹಳ ಆರೋಗ್ಯಕಾರಕ ಸೂಪು ಎಂಬುದು ಅವರ ನಂಬಿಕೆ. ಹಾಗೆಯೇ ತೈವಾನ್‌ನಲ್ಲಿ ಅಂಟು ಅಕ್ಕಿಯ ಅನ್ನದ (sticky rice) ಜೊತೆಗೆ ಹಂದಿ ರಕ್ತವನ್ನು ಹುರಿದು ತಿನ್ನುವುದು ನಮ್ಮಲ್ಲಿನ ಮೊಟ್ಟೆ ಹುರಿದನ್ನದಷ್ಟೇ ಜನಪ್ರಿಯವಾಗಿದೆ. ಕೊರಿಯದಲ್ಲಿ ಸಿಯೆಂಜಿ (seonji) ರಕ್ತದಲ್ಲಿ ಮಾಡುವ ಅಡುಗೆ. ದನದ ಕಾಲಿನ ಮೂಳೆಯನ್ನು ಬೇಯಿಸಿ ತೆಗೆದ ರಸಕ್ಕೆ ದನದ ರಕ್ತ ಮತ್ತು ಒಣಗಿಸಿದ ಮೂಲಂಗಿ ಎಲೆಗಳನ್ನು ಸೇರಿಸಿ ಕುದಿಸಿ ಸಿಯೆಂಜಿ ಮಾಡುತ್ತಾರೆ. ಹಾಗೆಯೇ ದನದ ಹಾಗೂ ಹಂದಿಯ ರಕ್ತದ ಸಾಸೇಜ್‌ಗಳನ್ನು ಇಡ್ಲಿ ತರಹದ ಅಡುಗೆಗೆ, ಜನಪ್ರಿಯವಾದ ಕಿಮ್-ಚಿಗೆ ಸೇರಿಸಿ ಹುರಿದು ತಿನ್ನಲು, ಬೇಯಿಸಿ ಸೂಪ್ ಮಾಡಲು ಬಳಸುತ್ತಾರೆ. ಫಿಲಿಪ್ಪೀನ್ಸ್ ನಲ್ಲಂತೂ ‘ದಿನುಗು ಆನ್ ‘(dinuguan) ಬಹಳ ಜನಪ್ರಿಯ ಅಡುಗೆ. ಇದು ಥೇಟ್ ನಮ್ಮ ಹಳೆ ಮೈಸೂರಿನ ಬೋಟಿಗೊಜ್ಜಿನ ಹಾಗೆ. ಆದರೆ ಇಲ್ಲಿ ಬಳಸುವುದು ಹಂದಿಯ ರಕ್ತ ಮತ್ತು ಯಕೃತ್ತು, ಜಠರ ಇತ್ಯಾದಿ. ನಮ್ಮ ತರಹದ ಮಸಾಲೆ ಹಾಕಿ ಹುರಿದು ಬೇಯಿಸಿ ತಯಾರಿಸುತ್ತಾರೆ. ಇಡ್ಲಿ ಮತ್ತು ಅನ್ನದ ಜೊತೆಗೆ ಹೆಚ್ಚು ಬಳಸುತ್ತಾರೆ. ಹಾಗೆಯೇ ವಿಯೆಟ್ನಾಂನಲ್ಲಿ ಬನ್ ಬೋಯಿ (ban bo hue) ಅನ್ನುವ ಸೂಪು, ನೇಪಾಳದಲ್ಲಿ ಗ್ಯುಮಾ ಎನ್ನುವ ಸಾಸೇಜ್ , ಇಂಡೊನೇಶ್ಯದಲ್ಲಿ ಕೆಲವು ಬುಡಕಟ್ಟುಗಳ ಅಡುಗೆಯಲ್ಲಿ ರಕ್ತವನ್ನು ಬಳಸುತ್ತಾರೆ.

ಪಶ್ಚಿಮ ದೇಶಗಳಲ್ಲಿ
ಫಿನ್‌ಲ್ಯಾಂಡ್‌ನಲ್ಲಿ ಹಂದಿಯ ರಕ್ತವನ್ನು ಹಾಲು, ಹಿಟ್ಟು, ಮೊಲಾಸಸ್‌ಗಳ ಬೆರೆಸಿ ಪಾನ್ ಕೇಕ್‌ಗಳನ್ನೂ ತಯಾರಿಸುತ್ತಾರೆ. ಹಾಗೆಯೇ ವಿವಿಧ ರೀತಿಯ ಸಾಸೇಜ್‌ಗಳನ್ನೂ ಸಹ ಮಾಡುತ್ತಾರೆ. ಉತ್ತರ ಜರ್ಮನಿಯಲ್ಲಿ ಹಂದಿಯ ರಕ್ತವನ್ನು ವಿನಿಗರ್‌ನ ಜೊತೆ ಸಕ್ಕರೆ, ಸಾಂಬಾರ ಪದಾರ್ಥಗಳೊಂದಿಗೆ ಬೆರೆಸಿ ಜಾಗಗಳಲ್ಲಿ ಸಂಗ್ರಹಿಸಿಟ್ಟುಕೊಂಡು ಬಳಸುತ್ತಾರೆ. ಹಂಗೇರಿ, ಗ್ರೀಸ್, ಇಟಲಿ, ರೊಮೇನಿಯ, ಸ್ಪೇನ್, ಫ್ರಾನ್ಸ್, ಇಂಗ್ಲೆಂಡ್, ಅಮೆರಿಕ, ಬ್ರೆಜಿಲ್, ಕೊಲಂಬಿಯ, ಈಕ್ವೆಡಾರ್ ಮೊದಲಾದ ದೇಶಗಳಲ್ಲಿ ಹಂದಿ ಮತ್ತು ದನದ ರಕ್ತವನ್ನು ಸಾಸೆಜ್, ಸೂಪ್ ಮತ್ತು ಪಾನ್ ಕೇಕ್‌ಗಳನ್ನು ಮಾಡಲು ಬಳಸುತ್ತಾರೆ. ಇವುಗಳಲ್ಲಿ ಕೆಲವಂತೂ ತುಂಬಾ ಹಳೆಯದಾದ ಅಡುಗೆಯ ಕ್ರಮಗಳಾಗಿವೆ.

ಧರ್ಮ ನಿಷೇಧಿತ ರಕ್ತ
ವಿವಿಧ ದೇಶಗಳ ವೈವಿಧ್ಯಮಯ ಅಡುಗೆಗಳಲ್ಲಿ ರಕ್ತದ ಬಳಕೆ ಇಷ್ಟೆಲ್ಲಾ ಇದ್ದಾಗ್ಯೂ ಕೆಲವು ಧಾರ್ಮಿಕ ಪದ್ಧತಿಗಳು ಅಂದರೆ ಅಬ್ರಾಹ್ಮಿಕ್ ಮತಗಳು ಶುದ್ಧ ಮತ್ತು ಸ್ವಚ್ಛತೆಯ ಕಾರಣಗಳಿಂದ ರಕ್ತದ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುತ್ತವೆ. ರಕ್ತವಷ್ಟೇ ಅಲ್ಲ ಅದನ್ನು ಬಳಸಿ ಮಾಡಿದ ಅನ್ಯ ಪದಾರ್ಥಗಳನ್ನು ಕೂಡ ಇಸ್ಲಾಮ್ ಸಂಸ್ಕೃತಿಯಲ್ಲಿ ನಿಷೇಧಿಸಲಾಗಿದೆ. ಇದನು ಸ್ವತಃ ಕುರ್‌ಆನ್‌ನಲ್ಲಿಯೇ ಉಲ್ಲೇಖಿಸಲಾಗಿದೆ. ಹಾಗೆಯೇ ಯಹೂದಿಗಳು ಕೂಡ ರಕ್ತವನ್ನು ಬಳಸುವಂತಿಲ್ಲ. ಹೊಸ ಒಡಂಬಡಿಕೆ (್ಞಛಿಡಿ ಠಿಛಿಠಿಞಛ್ಞಿಠಿ )ಯಲ್ಲೂ ಆಹಾರದಲ್ಲಿ ರಕ್ತ ಬಳಸುವುದನ್ನು ನಿಷೇಧಿಸಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)