ಮುಂಬೈ: ಧಾರಾವಿಯಲ್ಲಿ ಕೊರೊನ ಸೋಂಕಿನ ಎರಡನೇ ಪ್ರಕರಣ ದಾಖಲು
ಮುಂಬೈ, ಎ. 2: ಏಶ್ಯಾದ ಅತೀ ದೊಡ್ಡ ಕೊಳೆಗೇರಿ ಪ್ರದೇಶವಾಗಿರುವ ಮುಂಬೈಯ ಧಾರಾವಿಯಲ್ಲಿ 24 ಗಂಟೆಯೊಳಗೇ ಕೊರೊನ ವೈರಸ್ ಸೋಂಕಿನ ಎರಡನೇ ಪ್ರಕರಣ ದೃಢಪಟ್ಟಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಕೊಳೆಗೇರಿ ಪುನರ್ವಸತಿ ಪ್ರಾಧಿಕಾರ(ಎಸ್‌ಆರ್‌ಎ) ನಿರ್ಮಿಸಿರುವ ಕಟ್ಟಡದಲ್ಲಿ ವಾಸಿಸುತ್ತಿದ್ದ 56 ವರ್ಷದ ವ್ಯಕ್ತಿಗೆ ಕೊರೊನ ಸೋಂಕು ತಗುಲಿರುವುದು ದೃಢಪಟ್ಟಿದೆ. ಈತ ಇತ್ತೀಚೆಗೆ ಎಲ್ಲಿಗೂ ಪ್ರಯಾಣಿಸಿಲ್ಲ ಎಂಬುದು ವಿಚಾರಣೆಯಿಂದ ತಿಳಿದುಬಂದಿದ್ದು ಈತನ ಮನೆಯನ್ನು ಸೀಲ್ ಮಾಡಲಾಗಿದ್ದು ಮನೆಯಲ್ಲಿದ್ದ 7 ಮಂದಿಯನ್ನು ಮನೆಯಲ್ಲೇ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.
ಕೊಳೆಗೇರಿ ಪುನರ್ವಸತಿ ಪ್ರಾಧಿಕಾರ ನಿರ್ಮಿಸಿದ ವಸತಿ ಸಮುಚ್ಛಯದಲ್ಲಿ 300 ಫ್ಲಾಟ್‌ಗಳಿದ್ದು ಇವೆಲ್ಲವಕ್ಕೂ ಅಧಿಕಾರಿಗಳು ಬೀಗಮುದ್ರೆ ಜಡಿದಿದ್ದಾರೆ. ಧಾರಾವಿಯಲ್ಲಿ 5 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಕೊಳೆಗೇರಿಯಲ್ಲಿ ಒಂದು ಮಿಲಿಯಗಿಂತಲೂ ಹೆಚ್ಚಿನ ಜನರು ವಾಸಿಸುತ್ತಿದ್ದು ಮುಂಬೈಯ ಬೀದಿಬದಿಯ ಚರಂಡಿಗಳಿಂದ ಹರಿದುಬರುವ ಕೊಳಚೆ ಇಲ್ಲಿ ಸಂಗ್ರಹವಾಗುತ್ತಿದೆ. ಇಲ್ಲಿರುವ ಇಕ್ಕಟ್ಟಾದ ಮನೆಗಳಲ್ಲಿ ಹಲವು ಸದಸ್ಯರಿರುವ ಕುಟುಂಬ ವಾಸಿಸುತ್ತಿದ್ದು ಈ ಪ್ರದೇಶದಲ್ಲಿ ಸಾಮಾಜಿಕ ಅಂತರ ಮತ್ತಿತರ ನಿಯಮಗಳ ಅನುಷ್ಟಾನ ಅತ್ಯಂತ ಕಠಿಣ ಸವಾಲಾಗಿದೆ. ಇಂತಹ ಪ್ರದೇಶದಲ್ಲಿ ಕೊರೊನ ವೈರಸ್‌ನಂತಹ ಸೋಂಕು ಅತ್ಯಂತ ಸುಲಭವಾಗಿ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಅವಕಾಶವಿರುವುದರಿಂದ ಧಾರಾವಿ ಕೊಳೆಗೇರಿಯಲ್ಲಿ ಇನ್ನಷ್ಟು ಕಠಿಣ ಕ್ರಮಗಳನ್ನು ಅನುಷ್ಟಾನಗೊಳಿಸುವ ಅಗತ್ಯವಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ದೇಶದಲ್ಲಿ ಅತೀ ಹೆಚ್ಚು ಕೊರೊನ ವೈರಸ್ ಸೋಂಕು ಪ್ರಕರಣ ದೃಢಪಟ್ಟಿರುವ ನಗರಗಳಲ್ಲಿ ಮುಂಬೈ ಪ್ರಮುಖವಾಗಿದ್ದು ಇಲ್ಲಿ 181 ಪ್ರಕರಣ ದೃಢಪಟ್ಟಿದ್ದು 9 ಮಂದಿ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದಲ್ಲಿ 335 ಪ್ರಕರಣ ದೃಢಪಟ್ಟಿದ್ದು 16 ಮಂದಿ ಸಾವನ್ನಪ್ಪಿದ್ದಾರೆ.