ಕೊಲ್ಕತ್ತಾ: ಸಮಸ್ಯೆಗಳ ಸುಳಿಯಲ್ಲಿ ಬೀಡಿ ಉದ್ಯಮ
ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಬೀಡಿ ಉದ್ಯಮಕ್ಕೆ ಲಾಕ್ಡೌನ್ನಿಂದ ವಿನಾಯಿತಿ ಘೋಷಿಸಿದ್ದರೂ, ಸಾಗಾಣಿಕೆ ವ್ಯವಸ್ಥೆ ಇಲ್ಲದೇ ರಾಜ್ಯದ ಆರ್ಥಿಕತೆಯ ಜೀವಾಳವಾಗಿರುವ ಬೀಡಿ ಉದ್ಯಮ ಸಮಸ್ಯೆಗಳ ಸುಳಿಯಿಂದ ಹೊರಬರಲು ಸಾಧ್ಯವಾಗಿಲ್ಲ.
ರಾಜ್ಯದಲ್ಲಿ ಬೀಡಿ ಉದ್ಯಮದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ತೊಡಗಿಸಿಕೊಂಡಿರುವ ಸುಮಾರು 15 ಲಕ್ಷ ಮಂದಿ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಪೂರೈಸುತ್ತಿರುವ ಆಹಾರವನ್ನೇ ಅವಲಂಬಿಸಬೇಕಾದ ಸ್ಥಿತಿ ಉದ್ಭವಿಸಿದೆ.
ಮುರ್ಶಿದಾಬಾದ್ ಜಿಲ್ಲೆ ಬಹುತೇಕ ಬೀಡಿ ಉದ್ಯಮವನ್ನೇ ಅಲಂಬಿಸಿದ್ದು, ಬೀಡಿ ಕಾರ್ಮಿಕರಿಗೆ 1000 ಬೀಡಿ ಕಟ್ಟಿದ್ದಕ್ಕೆ 152 ರೂ. ನೀಡಲಾಗುತ್ತದೆ. ಫ್ಯಾಕ್ಟರಿ ಮಾಲಕರು ಎಲೆ ಹಾಗೂ ತಂಬಾಕನ್ನು ಮುನ್ಷಿಗಳ ಮೂಲಕ ವಿತರಿಸುತ್ತಾರೆ. ಮುನ್ಷಿಗಳು ಬೀಡಿಯನ್ನು ಸಂಗ್ರಹಿಸಿ ಮಾರುಕಟ್ಟೆಗಳಿಗೆ ಪೂರೈಸುತ್ತಾರೆ. ಜಂಗೀಪುರ ಉಪವಿಭಾಗವೊಂದರಲ್ಲೇ 100ಕ್ಕೂ ಹೆಚ್ಚು ಇಂಥ ಫ್ಯಾಕ್ಟರಿಗಳಿವೆ. ಬೀಡಿ ಉದ್ಯಮಕ್ಕೆ ವಿನಾಯಿತಿ ನೀಡಿರುವ ಮುಖ್ಯಮಂತ್ರಿ ಘೋಷಣೆಯಿಂದ ಸಾವಿರಾರು ಬೀಡಿಕಾರ್ಮಿಕರ ಬಾಳಲ್ಲಿ ಆಶಾಕಿರಣ ಮೂಡಿತ್ತು. ಆದರೆ ಬುಧವಾರ ಮುನ್ಷಿಗಳು ಬಾರರೇ ನಿರಾಶೆ ಅನುಭವಿಸುವಂತಾಯಿತು ಎಂದು ಚಚೋಂಡಾ ಗ್ರಾಮದ ಬೀಡಿ ಕಾರ್ಮಿಕ ಅನ್ವರ್ ಹುಸೈನ್ ಹೇಳಿದರು.
ರಾಜ್ಯದಲ್ಲಿ ಸುಮಾರು 22 ಲಕ್ಷ ಮಂದಿ ಬೀಡಿ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದು, ಶೇಕಡ 95ರಷ್ಟು ಉತ್ಪಾದನೆ ಇತರ ರಾಜ್ಯಗಳಿಗೆ ಸಾಗಾಣಿಕೆಯಾಗುತ್ತದೆ. ಆದರೆ ಸಾಗಾಣಿಕೆಗೆ ರೈಲು ಅಥವಾ ಅಂತರರಾಜ್ಯ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಸಿಎಂ ಘೋಷಣೆಯಿಂದ ಯಾರಿಗೂ ಸಹಾಯವಾಗುವುದಿಲ್ಲ ಎಂದು ಪಶ್ಚಿಮ ಬಂಗಾಳ ಬೀಡಿ ಮತ್ತು ತಂಬಾಕು ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಅಬ್ದುಲ್ ಹಸ್ನತ್ ಖಾನ್ ಹೇಳುತ್ತಾರೆ.
ದೊಡ್ಡ ಫ್ಯಾಕ್ಟರಿಗಳಲ್ಲಿ ತಲಾ 250 ಕಾರ್ಮಿಕರಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಉತ್ಪಾದನೆ ಆರಂಭಿಸುವ ಸ್ಥಿತಿಯಲ್ಲಿಲ್ಲ ಎಂದು ವಿವರಿಸುತ್ತಾರೆ. ಬಹುತೇಕ ಫ್ಯಾಕ್ಟರಿಗಳಲ್ಲಿ ತಂಬಾಕು ಮತ್ತು ಎಲೆ ದಾಸ್ತಾನು ಇದ್ದರೂ, ಬೀಡಿ ಒಣಗಿಸಲು ಕಲ್ಲಿದ್ದಲು ಕೊರತೆ ಇದೆ. ಪ್ಯಾಕೇಜಿಂಗ್ ಲೇಬಲ್ ಹಾಗೂ ನೂಲಿನ ಕೊರತೆಯೂ ಇದೆ ಎಂದು ಫ್ಯಾಕ್ಟರಿಯೊಂದರ ಮಾಲಕ ನಿಪುಣಜಿತ್ ಬಿಸ್ವಾಸ್ ಹೇಳುತ್ತಾರೆ.
ಇತರ ರಾಜ್ಯಗಳಿಗೆ ಬೀಡಿ ರವಾನೆಯಾಗದೇ ಬೀಡಿ ಉದ್ಯಮ ಪುನರಾರಂಭ ಕಷ್ಟ ಎಂದು ಟಿಎಂಸಿ ಸಂಸದ ಹಾಗೂ ಬೀಡಿ ಉದ್ಯಮಿ ಖಲೀಲ್ ಉಲ್ ರಹ್ಮಾನ್ ಹೇಳುತ್ತಾರೆ.