ಜನೌಷಧ ಕೇಂದ್ರಗಳಲ್ಲಿ ಔಷಧ ಕೊರತೆ: ಲಾಕ್ಡೌನ್ ನಡುವೆ ಬಡರೋಗಿಗಳಿಗೆ ಮತ್ತಷ್ಟು ಸಂಕಷ್ಟ
ಸಾಂದರ್ಭಿಕ ಚಿತ್ರ
ಬೆಂಗಳೂರು, ಎ.9: ಬಡರೋಗಿಗಳಿಗಾಗಿ ಶೇ.30 ರಿಂದ ಶೇ.70ರಷ್ಟು ರಿಯಾಯಿತಿ ದರದಲ್ಲಿ ಔಷಧಿ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಜಾರಿಗೆ ತಂದಿರುವ ಜನೌಷಧ ಕೇಂದ್ರಗಳಲ್ಲಿ ಔಷಧಿ ಕೊರತೆ ಎದ್ದು ಕಾಣುತ್ತಿದ್ದು, ಇದರಿಂದ, ರಾಜ್ಯದ ಬಡರೋಗಿಗಳು ತಮ್ಮಲ್ಲಿದ್ದ ಬಿಡಿಗಾಸನ್ನು ಖಾಸಗಿ ಔಷಧಿ ಕೇಂದ್ರಗಳಿಗೆ ಖರ್ಚು ಮಾಡಿ ಮುಂದಿನ ಜೀವನದ ಬಗ್ಗೆ ಚಿಂತಿತರಾಗಿ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.
ರಾಜ್ಯದ ಸರಕಾರಿ ಆಸ್ಪತ್ರೆಗಳ ಆವರಣ ಸೇರಿ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ತಾಲೂಕು ಮಟ್ಟದ ವಾರ್ಡ್ಗಳಲ್ಲಿ ಬಡರೋಗಿಗಳಿಗಾಗಿ ರಿಯಾಯಿತಿ ದರದಲ್ಲಿ ಔಷಧಿ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಜನೌಷಧ ಕೇಂದ್ರಗಳನ್ನು ತೆರೆದಿದೆ. ಆದರೆ, ಜನೌಷಧ ಕೇಂದ್ರಗಳಿಗೆ ಔಷಧಿ ತೆಗೆದುಕೊಳ್ಳಲು ಹೋದರೆ ಕೊರೋನ ವೈರಸ್ ನಿಯಂತ್ರಣಕ್ಕಾಗಿ ಕೇಂದ್ರ ಸರಕಾರ ಲಾಕ್ಡೌನ್ ಜಾರಿಗೆ ಆದೇಶಿಸಿದ್ದರಿಂದ ಔಷಧಿಗಳು ಸರಿಯಾಗಿ ಸರಬರಾಜು ಆಗುತ್ತಿಲ್ಲ. ಈಗ ಇರುವ ಔಷಧಿಗಳನ್ನು ಮಾತ್ರ ನಿಮಗೆ ನೀಡುತ್ತೇವೆ. ಉಳಿದ ಔಷಧಿಗಳನ್ನು ಲಾಕ್ಡೌನ್ ತೆರವು ಆದ ಬಳಿಕ ಸಿಗಬಹುದು. ಆವಾಗ ನೀವು ಬಂದು ತೆಗೆದುಕೊಂಡು ಹೋಗಿ ಎಂಬ ಕಾರಣ ಹೇಳಿ ಕಳುಹಿಸುತ್ತಿದ್ದಾರೆ.
ಲಾಕ್ಡೌನ್ ಮೊದಲು ಜನೌಷಧಿ ಕೇಂದ್ರಗಳಲ್ಲಿ ಹಲವು ಔಷಧಿಗಳು ಇಲ್ಲ ಎಂದು ಹೇಳುತ್ತಿದ್ದರೂ ಬಿಪಿ, ಸಕ್ಕರೆ ಕಾಯಿಲೆಯಂತಹ ತುರ್ತು ಔಷಧಿಗಳನ್ನು ನೀಡುತ್ತಿದ್ದರು. ಆದರೆ, ಲಾಕ್ಡೌನ್ ಬಳಿಕ ತುರ್ತು ಔಷಧಿಗಳೂ ಸಿಗದಂತೆ ಆಗಿದ್ದು, ಬಡವರು, ದಿನಗೂಲಿ ಕಾರ್ಮಿಕರು ತಮ್ಮಲ್ಲಿದ್ದ ಪುಡಿಗಾಸನ್ನೂ ಖಾಸಗಿ ಔಷಧಿ ಕೇಂದ್ರಗಳಿಗೆ ಸುರಿಯುತ್ತಿದ್ದಾರೆ.
ಈ ಕೇಂದ್ರಗಳು ಖಾಸಗಿ ವ್ಯಕ್ತಿ ಹಾಗೂ ಸಂಸ್ಥೆಗಳು ಸರಕಾರದಿಂದ ಗುತ್ತಿಗೆ ಪಡೆದು ನಡೆಸುತ್ತಿವೆ. ಸರಕಾರದಿಂದ ಔಷಧಿ ಕೇಂದ್ರ ತೆರೆಯಲು ಉಚಿತ ಸ್ಥಳ, ಔಷಧಿ ಖರೀದಿಗೆ ಸಬ್ಸಿಡಿ ಮತ್ತು ಕಂಪ್ಯೂಟರ್, ಇತರೆ ಉಪಕರಣಗಳಿಗೆಂದು ಎರಡು ಲಕ್ಷ ರೂ.ವರೆಗೆ ಆರ್ಥಿಕ ನೆರವು ನೀಡುತ್ತದೆ. ನಿಯಮದ ಪ್ರಕಾರ ಈ ಜನೌಷಧ ಮಳಿಗೆಗಳು ದಿನದ 24 ಗಂಟೆಯೂ ಸೇವೆ ಒದಗಿಸುವ ಜತೆಗೆ ನಿಗದಿಪಡಿಸಿರುವ ರಿಯಾಯಿತಿ ದರದಲ್ಲಿ ಜನರಿಗೆ ಔಷಧಿ ನೀಡಬೇಕು. ಆದರೆ, ಈ ನಿಯಮಗಳು ಪಾಲನೆಯಾಗುತ್ತಿಲ್ಲ. ಅಲ್ಲದೆ, ಲಾಕ್ಡೌನ್ ಆದ ಬಳಿಕ ಬಡರೋಗಿಗಳಿಗೆ ಸಿಗಬೇಕಾದ ಔಷಧಿಗಳು ಸಿಗುತ್ತಿಲ್ಲ.
ರಾಜ್ಯದಲ್ಲಿ ತೆರೆಯಲಾಗಿರುವ ಜನೌಷಧ ಕೇಂದ್ರಗಳಿಗೆ ಸಾವಿರಾರು ಸಂಖ್ಯೆಯಲ್ಲಿ ಬಡ ರೋಗಿಗಳು ಭೇಟಿ ನೀಡಿ ಔಷಧಿಗಳನ್ನು ಖರೀದಿಸುತ್ತಾರೆ. ಆದರೆ, ಲಾಕ್ಡೌನ್ನಿಂದಾಗಿ ಜನೌಷಧ ಕೇಂದ್ರಗಳಲ್ಲಿ ಔಷಧಿಗಳು ಸರಬರಾಜು ಆಗದೆ ಬಡರೋಗಿಗಳು ಪರದಾಡುವಂತಾಗಿದೆ.
ಔಷಧ ಕೇಂದ್ರ ತೆರೆದಿರುವ ಸಮಯ ಹಾಗೂ ಲಭ್ಯವಿರುವ ಔಷಧಗಳ ಕುರಿತು ವಿಚಾರಣೆ ನಡೆಸಲು ಗುತ್ತಿಗೆ ಪಡೆದವರ ಹೆಸರು, ದೂರವಾಣಿ ಅಥವಾ ಸಹಾಯವಾಣಿ ಸಂಖ್ಯೆ ಸಿಗುವುದಿಲ್ಲ. ದೂರು ನೀಡಲು, ಕೇಂದ್ರ ಯಾರ ವ್ಯಾಪ್ತಿಗೆ ಬರುತ್ತದೆ ಎಂಬುದೂ ತಿಳಿದಿಲ್ಲ ಎನ್ನುತ್ತಾರೆ ರೋಗಿಗಳ ಸಂಬಂಧಿಕರು. ಕೇಂದ್ರ ಹಾಗೂ ರಾಜ್ಯ ಸರಕಾರದ ನೆರವಿನೊಂದಿಗೆ ರಾಜ್ಯದಲ್ಲಿ ಸಾವಿರಾರು ಜನೌಷಧ ಮಳಿಗೆಗಳಿದ್ದರೂ ದುಬಾರಿ ಬೆಲೆ ಮಾತ್ರೆಗಳು ಸಿಗುವುದು ಕಷ್ಟಕರವಾಗಿದೆ.
ಆಯಾ ಆಸ್ಪತ್ರೆಗಳ ಆವರಣ ಹಾಗೂ ವಾರ್ಡ್ಗಳಲ್ಲಿ ಪ್ರಾರಂಭಿಸಿರುವ ಜನೌಷಧ ಕೇಂದ್ರಗಳ ಸಂಪೂರ್ಣ ಮೇಲ್ವಿಚಾರಣೆ ಹೊಣೆ ಆಡಳಿತ ವೈದ್ಯಾಧಿಕಾರಿಗಳದ್ದಾಗಿದೆ ಎಂದು ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ. ಜೊತೆಗೆ ವಾರಕ್ಕೊಮ್ಮೆ ಕೇಂದ್ರಗಳು ನಿಯಮ ಪಾಲಿಸುತ್ತಿವೆಯೇ ಎಂಬ ಕುರಿತು ತಪಾಸಣೆ ನಡೆಸಿ ಆಯುಕ್ತರು ಕಚೇರಿಗೆ ವರದಿ ನೀಡಲು ಆದೇಶಿಸಿದೆ. ಈ ನಿಯಮ ಬಹುತೇಕ ಆಸ್ಪತ್ರೆಗಳಲ್ಲಿ ಪಾಲನೆ ಆಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
‘ಖಾಸಗಿ ಮೆಡಿಕಲ್ ಸ್ಟೋರ್ ನಲ್ಲಿ ಈ ಔಷಧ ತೆಗೆದುಕೊಳ್ಳಲು ನಮಗೆ ದುಬಾರಿಯಾಗುತ್ತದೆ. ನಿಮಲ್ಲಿಯೇ ಈ ಔಷಧ ಇದ್ದರೆ ಕೊಡಿ ಎಂದು ಮನವಿ ಮಾಡಿಕೊಂಡರೆ, ಲಾಕ್ಡೌನ್ ಇರುವ ಹಿನ್ನೆಲೆಯಲ್ಲಿ ಔಷಧಿಗಳು ಸರಿಯಾಗಿ ಸರಬರಾಜು ಆಗುತ್ತಿಲ್ಲ. ಲಾಕ್ಡೌನ್ ತೆರವು ಆದ ಬಳಿಕ ಔಷಧಿಗಳು ಬರುತ್ತವೆ ಎನ್ನುತ್ತಾರೆ.’
-ಪ್ರಭು ಪಾಟೀಲ್, ರೋಗಿಯ ಸಂಬಂಧಿ
‘ಲಾಕ್ಡೌನ್ ಇರುವ ಹಿನ್ನೆಲೆಯಲ್ಲಿ ಜನೌಷಧಿ ಕೇಂದ್ರಗಳು ಬೆಳಗ್ಗೆ 10ರಿಂದ ಮಧ್ಯಾಹ್ನ 1.30ರವರೆಗೆ ಮಾತ್ರ ತೆರೆದಿರುತ್ತವೆ. ಜನೌಷಧಿ ಕೇಂದ್ರಗಳನ್ನು ಗುತ್ತಿಗೆ ಪಡೆದವರು ಹೇಳಿದ ಸಮಯಕ್ಕೆ ಹೋದರೂ, ತೆರೆದಿರುವುದಿಲ್ಲ. ಕಾದು ಕುಳಿತು ಕೇಳಿದರೆ ಲಾಕ್ಡೌನ್ ನೆಪ ಹೇಳುತ್ತಾರೆ. ಒಂದೊಂದು ದಿನ ಜನೌಷಧಿ ಕೇಂದ್ರಗಳು ದಿನಪೂರ್ತಿ ತೆರೆದಿರುವುದಿಲ್ಲ.’
-ಗೋಪಾಲ, ರೋಗಿಯ ಸಂಬಂಧಿ