ಲಾಕ್ಡೌನ್ ಎಫೆಕ್ಟ್: ರಸ್ತೆಯಲ್ಲಿ ಹರಿಯುತ್ತಿದ್ದ ಹಾಲನ್ನು ಹಂಚಿಕೊಳ್ಳುತ್ತಿರುವ ವ್ಯಕ್ತಿ ಮತ್ತು ಬೀದಿನಾಯಿಗಳು
ಲಕ್ನೋ, ಎ.13: ಕೊರೋನ ವೈರಸ್ ಸೋಂಕು ಹರಡುವುದನ್ನು ನಿಯಂತ್ರಿಸಲು ತರಾತುರಿಯಲ್ಲಿ ಹೇರಲಾಗಿದ್ದ ದೇಶವ್ಯಾಪಿ 21 ದಿನಗಳ ಲಾಕ್‌ಡೌನ್ ಹಲವಾರು ರೀತಿಗಳಲ್ಲಿ ಜನರನ್ನು ಸಂಕಷ್ಟಕ್ಕೆ ತಳ್ಳಿದೆ. ಇಂತಹ ಚಿತ್ರಣವೊಂದು ಸೋಮವಾರ ಬೆಳಿಗ್ಗೆ ಆಗ್ರಾದಲ್ಲಿ ಅನಾವರಣಗೊಂಡಿದೆ.
ವಿಶ್ವವಿಖ್ಯಾತ ತಾಜ್ ಮಹಲ್‌ಗೆ ಕೇವಲ ಆರು ಕಿ.ಮೀ.ದೂರದಲ್ಲಿರುವ ಆಗ್ರಾದ ರಾಮ ಬಾಘ್ ಚೌರಾಹಾ ದಲ್ಲಿ ಬೃಹತ್ ಗಾತ್ರದ ಹಾಲು ಸಾಗಾಟದ ಟ್ಯಾಂಕರ್ ಪಲ್ಟಿಯಾಗಿದ್ದು, ರಸ್ತೆಯಲ್ಲಿ ಹರಿಯುತ್ತಿದ್ದ ಹಾಲನ್ನು ಓರ್ವ ವ್ಯಕ್ತಿ ಬೀದಿನಾಯಿಗಳ ಗುಂಪಿನೊಂದಿಗೆ ಹಂಚಿಕೊಳ್ಳುತ್ತಿದ್ದ ದೃಶ್ಯ ಲಾಕ್ಡೌನ್ ನ ಸಂಕಷ್ಟಕ್ಕೆ ಸಾಕ್ಷಿಯಾಗಿತ್ತು. ತನ್ನ ಬಳಿಯಿದ್ದ ಸಣ್ಣ ಮಣ್ಣಿನ ಪಾತ್ರೆಯಲ್ಲಿ ಸಾಧ್ಯವಾದಷ್ಟು ಹಾಲನ್ನು ಬಾಚಿಕೊಳ್ಳಲು ವ್ಯಕ್ತಿಯು ಪ್ರಯತ್ನಿಸುತ್ತಿದ್ದರೆ ಸಮೀಪದಲ್ಲಿಯೇ ಅದೇ ಹಾಲಿಗಾಗಿ ಬೀದಿನಾಯಿಗಳು ಕಿತ್ತಾಡುತ್ತಿದ್ದವು.
ದೇಶಾದ್ಯಂತ ಲಕ್ಷಾಂತರ ಜನರನ್ನು ಬಡತನ ಮತ್ತು ಹಸಿವೆಯ ಕೂಪಕ್ಕೆ ತಳ್ಳಿರುವ 21 ದಿನಗಳ ಲಾಕ್‌ಡೌನ್ ಮಂಗಳವಾರ ಅಂತ್ಯಗೊಳ್ಳಲಿದೆ,ಆದರೆ ಅದು ಇನ್ನೂ ಎರಡು ವಾರಗಳ ಕಾಲ ವಿಸ್ತರಣೆಯಾಗುವುದು ಈಗಾಗಲೇ ಖಚಿತವಾಗಿದೆ.
ಯಾವುದೇ ಪೂರ್ವಸೂಚನೆಯಿಲ್ಲದೆ ದಿಢೀರನೆ ಮಾ.24ರಂದು ರಾತ್ರಿ ಎಂಟು ಗಂಟೆಗೆ ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿದ ಲಾಕ್‌ಡೌನ್‌ಗೆ ಎರಡು ತಿಂಗಳು ಮೊದಲು ಭಾರತದಲ್ಲಿ ಮೊದಲ ಕರೋನ ವೈರಸ್ ಪ್ರಕರಣ ದಾಖಲಾಗಿತ್ತು.
ಸುಮಾರು 80 ಕೋಟಿ ಜನರಿಗೆ ನೆರವಾಗಲು ಕೇಂದ್ರವು ನೇರ ನಗದು ವರ್ಗಾವಣೆ ಮತ್ತು ಆಹಾರ ಸಬ್ಸಿಡಿಗಳನ್ನು ಪ್ರಕಟಿಸಿತ್ತು. ಆದರೆ ಎನ್‌ಡಿಟಿವಿ ಕಳೆದ ಕೆಲವು ವಾರಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಹೆಚ್ಚಿನ ಜನರು ತಮಗೆ ಇಂತಹ ಯಾವುದೇ ಸೌಲಭ್ಯ ದೊರಕಿಲ್ಲ ಅಥವಾ ಕಿಂಚಿತ್ ಲಾಭಗಳು ದೊರಕಿವೆ ಎಂದು ಹೇಳಿದ್ದಾರೆ. ಈ ಸೌಲಭ್ಯಗಳನ್ನು ಪಡೆಯಲು ಜನರು ಬಿಸಿಲಲ್ಲಿ ಸರದಿ ಸಾಲುಗಳಲ್ಲಿ ಗಂಟೆಗಟ್ಟಲೆ ಕಾದು ಬಸವಳಿದಿದ್ದಾರೆ,ಹಲವರು ಪೊಲೀಸರ ಲಾಠಿ ಏಟಿನ ರುಚಿಯನ್ನೂ ಕಂಡಿದ್ದಾರೆ.
ಲಾಕ್‌ಡೌನ್ ಕೊರೋನ ವೈರಸ್ ಪ್ರಕರಣಗಳ ತ್ವರಿತ ಏರಿಕೆಯನ್ನು ನಿಯಂತ್ರಿಸುವಲ್ಲಿ ಕೊಂಚ ಯಶಸ್ಸಿನ ಸಂಕೇತಗಳನ್ನು ನೀಡಿದೆಯಾದರೂ, ಸರಕಾರವು ಸಾಕಷ್ಟು ಪೂರ್ವಯೋಜನೆ ಮತ್ತು ಸಿದ್ಧತೆಗಳಿಲ್ಲದೆ ಕಠಿಣ ಕ್ರಮಗಳನ್ನು ಜಾರಿಗೊಳಿಸುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.
Lockdown Impact:
— Kamal khan (@kamalkhan_NDTV) April 13, 2020
इंसान और जानवर साथ साथ दूध पीने लगे।
आज अगरा के रामबाग चौराहे पर एक दूध वाले की दूध की टंकी गिर गयी।फिर क्या हुआ खुद देखिए। pic.twitter.com/OWvNg8EFIe