ಕೊರೋನ ವೈದ್ಯ ಯೋಧರು ಮತ್ತು ಡಾ.ಕೊಟ್ನಿಸ್
ಕಳೆದ ನಾಲ್ಕೈದು ವಾರಗಳಿಂದ ಮನೆ, ಕುಟುಂಬ, ವೈಯಕ್ತಿಕ ಬದುಕು ಇವು ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೆ ಕೋವಿಡ್- 19 ಎಂಬ ವೈದ್ಯಕೀಯ ರಂಗದ ಶತ್ರುವಿನ ವಿರುದ್ಧ ಆಸ್ಪತ್ರೆಯೆಂಬ ಯುದ್ಧ ಭೂಮಿಯಲ್ಲಿ ಹೋರಾಡುತ್ತಿರುವ ವೈದ್ಯರು, ಶುಶ್ರೂಷಕಿಯರು ಹಾಗೂ ಎಲ್ಲ ಸಿಬ್ಬಂದಿ ಸೇವೆ ಊಹೆಗೂ ನಿಲುಕದ್ದು. ಯಾವುದೇ ಸಂದರ್ಭದಲ್ಲಿ ಸ್ವಲ್ಪವೇ ಎಚ್ಚರ ತಪ್ಪಿದರೂ ತಾವೇ ಸೋಂಕಿಗೆ ತುತ್ತಾಗುವ ಅಪಾಯವಿದ್ದರೂ ತಮ್ಮನ್ನು ರಕ್ಷಿಸಿಕೊಳ್ಳುತ್ತಾ ತಮ್ಮೆದುರಿನ ರೋಗಿಗಳನ್ನು ಆರೈಕೆ ಮಾಡಲು ಅವರು ಶ್ರಮಿಸುತ್ತಿರುವ ಪರಿ ನಿಜಕ್ಕೂ ಅದ್ಭುತ ವಾದುದು.
ಯಾವುದೇ ಸಂದರ್ಭದಲ್ಲಿಯೂ ಯಾವುದೇ ಸಮಯದಲ್ಲಿಯೂ ನಾವು ರೋಗಿಗಳೊಂದಿಗೆ ಇರುತ್ತೇವೆ ಎಂಬ ಪ್ರತಿಜ್ಞೆಯಂತೆ ವೈದ್ಯರು ತಮ್ಮ ಸೇವೆಯಲ್ಲಿ ತೊಡಗಿದ್ದಾರೆ.
ಇವರ ಸೇವೆಯನ್ನು ಚಪ್ಪಾಳೆ, ಶ್ಲಾಘನೆ, ಹೊಗಳಿಕೆ, ಅಭಿನಂದನೆ ಅಥವಾ ಯಾವ ಪ್ರಶಸ್ತಿಗಳ ಮೂಲಕ ಗುರುತಿಸಿದರೂ ಕಡಿಮೆಯೇ. ಅವರಿಂದ ಚಿಕಿತ್ಸೆಗೊಳಗಾದ ರೋಗಿಗಳು ಗುಣಮುಖರಾಗಿ ಮರಳಿ ಮನೆಗೆ ತೆರಳಿದರೆ ಅದುವೇ ಆ ವೈದ್ಯರು ಮತ್ತು ಆರೈಕೆ ಮಾಡಿದ ಸಿಬ್ಬಂದಿಗೆ ಸಲ್ಲುವ ನಿಜವಾದ ಗೌರವ. ಆದಾಗ್ಯೂ ಇಂದಿನ ಈ ಕೊರೋನ ಯುದ್ಧದ ಸಂದರ್ಭದಲ್ಲಿ ವೈದ್ಯರ ಸೇವೆಯನ್ನು ಗಮನಿಸುವಾಗ ಡಾ.ದ್ವಾರಕಾನಾಥ್ ಶಾಂತಾರಾಮ್ ಕೊಟ್ನಿಸ್ ಎಂಬ ಭಾರತೀಯ ಅದರಲ್ಲೂ ಕನ್ನಡಿಗ ವೈದ್ಯರೊಬ್ಬರನ್ನು ನೆನಪಿಸಿಕೊಳ್ಳುವ ಮೂಲಕ ಇಂದಿನ ವೈದ್ಯರ ಸೇವೆಯನ್ನು ಗುರುತಿಸಬೇಕಾಗಿದೆ.
ಡಾ.ಕೊಟ್ನಿಸ್ ಎಂಬ ಮಹಾನ್ ವೈದ್ಯ
1910 ರ ಅಕ್ಟೋಬರ್ 10 ರಂದು ಮುಂಬೈ ಪ್ರಾಂತದ ಕನ್ನಡ ಮಾತನಾಡುವ ಪ್ರದೇಶವಾದ ಸೋಲಾಪುರದಲ್ಲಿ ದ್ವಾರಕಾನಾಥ್ ಶಾಂತರಾಮ್ ಕೊಟ್ನಿಸ್ ಅವರ ಜನನವಾಯಿತು. ಮೆಟ್ರಿಕ್ಯುಲೇಷನ್ ಪಾಸಾದ ಬಳಿಕ ವೈದ್ಯರಾಗಬೇಕೆಂಬ ಅತೀವ ಆಸಕ್ತಿಯನ್ನು ಕೊಟ್ನಿಸ್ ಅವರು ಹೊಂದಿದ್ದರು. ಅವರ ಸಾಮಾನ್ಯ ಬಡ ಕುಟುಂಬಕ್ಕೆ ವೈದ್ಯಕೀಯ ಶಿಕ್ಷಣ ಕೊಡಿಸುವ ಆರ್ಥಿಕ ಸಾಮರ್ಥ್ಯವಿರಲಿಲ್ಲ. ಆದರೆ ಕೊಟ್ನಿಸ್ ಅವರ ಅದಮ್ಯ ಉತ್ಸಾಹ ಕಡಿಮೆಯಾಗಲಿಲ್ಲ. ಅವರು ಸ್ವತಃ ಕಠಿಣ ಪರಿಶ್ರಮಪಟ್ಟು ಜೊತೆಗೆ ಬೇರೆಯವರಿಂದ ನೆರವನ್ನು ಪಡೆದು ವೈದ್ಯಕೀಯ ಶಿಕ್ಷಣಕ್ಕೆ ಸೇರಿಯೇ ಬಿಟ್ಟರು. ವೈದ್ಯನಾಗಿ ಅನುಪಮ ಸೇವೆ ಸಲ್ಲಿಸಬೇಕೆಂಬ ತುಡಿತವಿದ್ದ ಕೊಟ್ನಿಸ್ ಅವರು ಮುಂಬೈನ ಜಿ .ಎಸ್. ಮೆಡಿಕಲ್ ಕಾಲೇಜಿನಿಂದ ವೈದ್ಯಕೀಯ ಶಿಕ್ಷಣ ಪಡೆದರು.
ಅದು 1937 ರ ಇಸವಿ. ಚೀನಾ ಮತ್ತು ಜಪಾನ್ ನಡುವೆ ಯುದ್ಧ ಆರಂಭವಾಗಿತ್ತು. ಬೃಹತ್ ವಿಸ್ತಾರದ ಚೀನಾ ಪುಟ್ಟ ಜಪಾನ್ ವಿರುದ್ಧ ಹೋರಾಟದಲ್ಲಿ ಕಂಗಾಲಾಗಿತ್ತು. ಜಪಾನ್ ಆಗಲೇ ಆಕ್ರಮಣಕಾರಿಯಾಗಿ ಚೀನಾದ ಮೇಲೆ ಮುಗಿಬಿದ್ದಿತ್ತು.ಚೀನಾದ ಸೈನಿಕರು ಅಪಾರ ಪ್ರಮಾಣದಲ್ಲಿ ಗಾಯಗೊಂಡಿದ್ದರು. ಚೀನಾದಲ್ಲಿ ವೈದ್ಯರು ಮತ್ತು ವೈದ್ಯಕೀಯ ಸೌಲಭ್ಯಗಳ ಕೊರತೆಯಿತ್ತು.ಆಗ ಚೀನಾ ಭಾರತದ ನೆರವನ್ನು ಯಾಚಿಸಿತು. ಭಾರತದಿಂದ ವೈದ್ಯರ ಸೇವೆಯನ್ನು ಬಯಸಿದ ಚೀನಾಕ್ಕೆ ನಮ್ಮ ದೇಶದಿಂದ ಐದು ಮಂದಿ ವೈದ್ಯರ ತಂಡವನ್ನು ಕಳುಹಿಸಿಕೊಡಲಾಯಿತು. ಆ ತಂಡದಲ್ಲಿ ಡಾ.ಕೊಟ್ನಿಸ್ ಕೂಡಾ ಒಬ್ಬರಾಗಿದ್ದರು.ಆದರೆ ಕೆಲವು ಸಮಯದ ಸೇವೆಯ ಬಳಿಕ ಡಾ.ಕೊಟ್ನಿಸ್ ಅವರನ್ನು ಹೊರತುಪಡಿಸಿ ಉಳಿದ ನಾಲ್ಕು ಮಂದಿ ವೈದ್ಯರು ಭಾರತಕ್ಕೆ ಮರಳಿದರು. ಕೊಟ್ನಿಸ್ ಚೀನಾದಲ್ಲಿ ಒಂದು ವಾಹನದ ಮೂಲಕ ಸಂಚಾರಿ ಕ್ಲಿನಿಕ್ ಆರಂಭಿಸಿ ದಣಿವರಿಯದೆ ಗಾಯಾಳುಗಳ ಸೇವೆಯಲ್ಲಿ ತೊಡಗಿದರು. ಅವರು ತನ್ನ ಸೇವೆಯಲ್ಲಿ ಎಷ್ಟು ಮಗ್ನರಾಗಿದ್ದರು ಎಂದರೆ ಮರಳಿ ಸ್ವದೇಶಕ್ಕೆ ಬರುವುದನ್ನೇ ಮರೆತರು. ಅನೇಕ ಬಾರಿ ಅವರು ಗಾಯಾಳು ಸೈನಿಕರನ್ನು ಸ್ವತಃ ತಮ್ಮ ಭುಜದ ಮೇಲೆ ಸಾಗಿಸಿ ಚಿಕಿತ್ಸೆ ನೀಡಿದರು. ತುಂಬು ಯುವಕನಾಗಿದ್ದು ವೈದ್ಯಕೀಯ ಪದವಿ ಪಡೆದು ,ಪ್ರತಿಜ್ಞೆ ಸ್ವೀಕರಿಸಿ ತಲೆ ತುಂಬಾ ಸೇವಾದರ್ಶಗಳನ್ನು ಹೊಂದಿದ್ದ ಕೊಟ್ನಿಸ್ ಅವರಿಗೆ ನೇರ ಕರೆ ಬಂದದ್ದೇ ಚೀನಾದ ಯುದ್ಧ ಭೂಮಿಯಿಂದ. ಅವರು ಎಷ್ಟು ಸೇವಾತಲ್ಲೀನರಾಗಿದ್ದರು ಎಂದರೆ ತಮ್ಮ ಆರೋಗ್ಯ, ವಿಶ್ರಾಂತಿ ಎಲ್ಲವನ್ನೂ ಲೆಕ್ಕಿಸದೆ ಸೇವೆ ಸಲ್ಲಿಸಿದರು. ಒಂದು ಬಾರಿ ನಿರಂತರ 72 ಗಂಟೆಗಳ ಕಾಲ ನಿದ್ರೆ ,ವಿಶ್ರಾಂತಿಯಿಲ್ಲದೆ ಸಲ್ಲಿಸಿದ ಸೇವೆಯ ಪರಿಣಾಮವಾಗಿ ಅವರು ತೀವ್ರವಾಗಿ ಬಳಲಿದರು.
ಅವರು ನಿತ್ರಾಣಕ್ಕೊಳಗಾದರು.ಒತ್ತಡ ,ದಣಿವು ನಿತ್ರಾಣದಿಂದ 1942 ರಲ್ಲಿ ಸೇವೆ ಸಲ್ಲಿಸುತ್ತಲೇ ಹುತಾತ್ಮರಾದರು. ವೈದ್ಯಕೀಯ ರಂಗದ ಈ ಅನರ್ಘ್ಯ ರತ್ನ ಮರೆಯಾಗಿ ಹೋಯಿತು. ಆಗ ಅವರ ವಯಸ್ಸು ಕೇವಲ 32 ವರ್ಷ. ಅವರ ದೇಹವನ್ನು ಅಲ್ಲೇ ಸಮಾಧಿ ಮಾಡಲಾಯಿತು. ಅಂದಿನ ಚೀನಾದ ಅಧ್ಯಕ್ಷರು ಚೀನಾ ಒಂದು ನೆರವಿನ ಹಸ್ತವನ್ನು ಕಳೆದುಕೊಂಡಿತು. ನಾವೊಂದು ಮಿತ್ರನನ್ನು ಕಳೆದುಕೊಂಡೆವು ಎಂದು ಕೊಟ್ನಿಸ್ ಅವರ ಅಕಾಲಿಕ ಸಾವಿಗೆ ದುಃಖಪಟ್ಟರು. ಇಂದಿಗೂ ಕೂಡಾ ಕೊಟ್ನಿಸ್ ಅವರ ತ್ಯಾಗವನ್ನು ಚೀನಾದಲ್ಲಿ ಸ್ಮರಿಸಲಾಗುತ್ತಿದೆ.
2005 ರಲ್ಲಿ ಕೊಟ್ನಿಸ್ ಅವರ ಸ್ಮಾರಕಕ್ಕೆ ಚೀನಾದ ಎಲ್ಲಾ ಭಾಗಗಳಿಂದ ಹೂಗಳನ್ನು ಕಳುಹಿಸಿ ಅರ್ಪಿಸುವ ಮೂಲಕ ನೆನಪು ಮಾಡಿಕೊಂಡಿತ್ತು. ರಾಜ್ಯದ ನಾಲ್ಕನೇ ತರಗತಿಯ ಆಂಗ್ಲಭಾಷಾ ಪಾಠಪುಸ್ತಕದಲ್ಲಿ ಎಳೆಯ ಮಕ್ಕಳಿಗೆ ಅವರ ಪಾಠವನ್ನು ಅಳವಡಿಸಲಾಗಿದೆ.
ಇಂತಹ ಮಹಾನ್ ಭಾರತೀಯ ವೈದ್ಯರ ಹೆಸರು ಭಾರತದ ಎಲ್ಲಾ ನವಪೀಳಿಗೆಗೆ ಸ್ಫೂರ್ತಿಯಾಗಲು ಮತ್ತು ಜಗತ್ತಿಗೆ ಈ ಮಹಾನ್ ವೈದ್ಯನ ಸೇವೆ ಮಾದರಿಯಾಗಲು ಇಂದಿನ ಕೊರೋನ ಪೀಡಿತರ ಚಿಕಿತ್ಸೆ ಮತ್ತು ಆರೈಕೆಯಲ್ಲಿ ಅನನ್ಯ ಸೇವೆ ಸಲ್ಲಸುತ್ತಿರುವ ವೈದ್ಯರಿಗೆ ಡಾ.ದ್ವಾರಕಾನಾಥ್ ಶಾಂತಾರಾಮ್ ಕೊಟ್ನಿಸ್ ಪ್ರಶಸ್ತಿ ನೀಡಿ ಸರಕಾರ ಗೌರವಿಸಬೇಕಾಗಿದೆ.