ವಿಶ್ವ ಪುಸ್ತಕ ದಿನವೂ ಜೋಯಪ್ಪನವರ ಹೊತ್ತಿಗೆಯೂ
ಎಪ್ರಿಲ್ 23ರಂದು ವಿಶ್ವ ಪುಸ್ತಕ ದಿನ. ಅಂದು ಪ್ರಪಂಚದ ನೂರಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ವಿಶ್ವ ಪುಸ್ತಕ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಸಂಸ್ಥೆಯ ಅಂಗ ಸಂಸ್ಥೆಯಾದ ‘ಯುನೆಸ್ಕೊ’ ಪ್ರಣೀತ ಈ ಕಾರ್ಯಕ್ರಮದ ಘನ ಉದ್ದೇಶ, ಮಕ್ಕಳು ಮತ್ತು ಯುವಜನತೆಯಲ್ಲಿ ಓದುವ ಅಭಿರುಚಿ ಬೆಳೆಸುವುದು ಹಾಗೂ ಅವರಿಗೆ ಪ್ರಿಯವಾದ ಪುಸ್ತಕಗಳು ದೊರಕುವಂತೆ ಮಾಡುವುದು. 1995ರ ಎಪ್ರಿಲ್ 23ರಂದು ವಿಶ್ವ ಪುಸ್ತಕ ದಿನಾಚರಣೆಯ ಉದ್ಘಾಟನೆಯಾಯಿತು. ಅಂದಿನಿಂದ ಪ್ರತಿ ವರ್ಷ ಎಪ್ರಿಲ್ 23ರಂದು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಗತಕಾಲ ಮತ್ತು ಭವಿಷ್ಯತ್ಕಾಲಗಳ ಹಾಗೂ ವಿವಿಧ ಸಂಸ್ಕೃತಿಗಳ ಜನರ ನಡುವಣ ಸಂಪರ್ಕ ಸೇತುವಾದ ಪುಸ್ತಕಗಳ ಮಹತ್ವವನ್ನು ಮಾನ್ಯ ಮಾಡುವುದು ಹಾಗೂ ಜನತೆಯಲ್ಲಿ ಆ ಬಗ್ಗೆ ಅರಿವು ಮೂಡಿಸುವುದು ಅಂದಿನ ಮುಖ್ಯ ಕಾರ್ಯಕ್ರಮವಾಗಿರುತ್ತದೆ. ಪ್ರತಿ ವರ್ಷವೂ ವಿಶ್ವ ಪುಸ್ತಕ ದಿನಾಚರಣೆಗೆ ಮುನ್ನ ವಿಶ್ವ ಪುಸ್ತಕ ರಾಜಧಾನಿಯೊಂದನ್ನು ಯುನೆಸ್ಕೊ ಆಯ್ಕೆ ಮಾಡುತ್ತದೆ. ಈ ವರ್ಷ ಮಲೇಶ್ಯದ ಕೌಲಾಲಂಪುರ ಪುಸ್ತಕ ರಾಜಧಾನಿಯ ಗೌರವಕ್ಕೆ ಪಾತ್ರವಾಗಿದೆ. ಸರ್ವ ಶಿಕ್ಷಣ ಮತ್ತು ಜ್ಞಾನ ಆಧಾರಿತ ಅಭಿವೃದ್ಧ್ದಿಯ ಕೇಂದ್ರವಾಗುಳ್ಳ ಮಲೇಶ್ಯ ಸರಕಾರದ ಯೋಜನೆಗಳಿಗೆ ಪುರಸ್ಕಾರವಾಗಿ ಕೌಲಾಲಂಪುರವನ್ನು ಪುಸ್ತಕ ರಾಜಧಾನಿ ಎಂದು ಘೋಷಿಸಲಾಗಿದೆ. ಪುಸ್ತಕೋದ್ಯಮದ ಮುಖ್ಯ ಅಂಗಗಳಾದ ಪ್ರಕಾಶಕರು, ಲೇಖಕರು ಮತ್ತು ಪುಸ್ತಕ ಮಾರಾಟಗಾರರ ಪ್ರತಿನಿಧಿಗಳನ್ನೊಳಗೊಂಡ ಸಮಿತಿಯೊಂದು ಪುಸ್ತಕ ರಾಜಧಾನಿಯನ್ನು ಆಯ್ಕೆ ಮಾಡುತ್ತದೆ. ಪುಸ್ತಕೋದ್ಯಮ ಮತ್ತು ಪ್ರಕಟನ ಪ್ರಪಂಚ ಇಂದು ಓಬೀರಾಯನ ಕಾಲದಲ್ಲೇ ಕುಂಟುತ್ತಾ ನಡೆದಿಲ್ಲ. ವಿಜ್ಞಾನ, ತಂತ್ರಜ್ಞಾನಗಳ ಪ್ರಭಾವ ಪುಸ್ತಕೋದ್ಯಮದ ಮೇಲೂ ಆಗಿದೆ. ಡಿಜಿಟಲ್ ತಂತ್ರಜ್ಞಾನದ ಕ್ರಾಂತಿಯ ಫಲವಾಗಿ ಡಿಜಿಟಲ್ ಪುಸ್ತಕ ಭಂಡಾರಗಳು ಶುರುವಾಗಿವೆ. ಇಂದು ಪುಸ್ತಕ ಪ್ರಿಯರ ತಲೆಗೆ ಭಾರವಾಗಬಹುದಾದ ‘ಅಮೂಲ್ಯ’ ಗ್ರಂಥಗಳ ಭಾರವನ್ನು ಕೈಗಳು ಹೊರಬೇಕಾಗಿಲ್ಲ. ಕಂಪ್ಯೂಟರ್ ತೆರೆಯ ಮೇಲೆ, ಫೋನ್‌ನಲ್ಲಿ ಆರಾಮವಾಗಿ ‘ವಾರ್ ಆ್ಯಂಡ್ ಪೀಸ್’ನಂತಹ ಮಹಾನ್ ಕೃತಿಗಳನ್ನು ಓದಬಹುದಾಗಿದೆ.
21ನೇಯ ಶತಮಾನದಲ್ಲಿ ಮುದ್ರಣರಹಿತ, ಪುಸ್ತಕರಹಿತ ಸಮಾಜವನ್ನು ಕಾಣಬಹುದಾಗಿದೆ ಎಂದು ಜ್ಯೋತಿಷಿಗಳು 20ನೇಯ ಶತಮಾನದಲ್ಲೇ ಭವಿಷ್ಯ ನುಡಿದು ಬೆಚ್ಚಿ ಬೀಳಿಸಿದ್ದರು. 20ನೇಯ ಶತಮಾನದ ಮಧ್ಯಭಾಗದಲ್ಲಿ ದೂರದರ್ಶನ ಯುರೋಪ್-ಅಮೆರಿಕಗಳ ಮನೆಮನೆಗಳನ್ನು ಆಕ್ರಮಿಸಿದಾಗಲೇ ಪುಸ್ತಕಗಳ, ಪತ್ರಿಕೆಗಳ ಕಾಲ ಮುಗಿಯಿತು ಎಂದು ‘ಕಾಲಜ್ಞಾನಿ’ಗಳು ಭವಿಷ್ಯ ನುಡಿದಿದ್ದರು. ಆದರೆ ಇದೆಲ್ಲವೂ ಸುಳ್ಳಾಯಿತು. ಈ ಹೊಸ ಆವಿಷ್ಕಾರಗಳ ಎದುರು ಹಸ್ತಭೂಷಣವಾದ ಪುಸ್ತಕಗಳು ಮತ್ತು ಪತ್ರಿಕೆಗಳು ತಮ್ಮ ಆಕರ್ಷಣೆಯನ್ನು ಕಳೆದುಕೊಳ್ಳಲಿಲ್ಲ. ಇಂದಿಗೂ ಪುಸ್ತಗಳು ಮತ್ತು ಪತ್ರಿಕೆಗಳು ಘನತೆಯಿಂದ ತಲೆಎತ್ತಿಕೊಂಡು ಮೆರೆಯುತ್ತಲೇ ಇವೆ. ಜ್ಞಾನವಿಜ್ಞಾನಗಳೆಲ್ಲ ಕಂಪ್ಯೂಟರ್‌ಗಳಲ್ಲಿ, ವಾಟ್ಸ್ಸ್‌ಆ್ಯಪ್‌ಗಳಲ್ಲಿ ಅಂಗೈ ನೆಲ್ಲಿಯಂತೆ ದೊರೆಯುವಾಗ ಪುಸ್ತಕಗಳೇಕೆ ಬೇಕು. ಮುದ್ರಿತ ಪುಸ್ತಕಗಳಿಲ್ಲದೆಯೇ ಪುಸ್ತಕಗಳ ಲಾಭ ಪಡೆಯಬಹುದಲ್ಲ? ಎಂದು ಕೇಳಬಹುದು. ಆದರೆ ಅದೆಲ್ಲ ವ್ಯರ್ಥ ವಿತಂಡವಾದಗಳಷ್ಟೆ. ಪುಸ್ತಗಳಿಂದ ನಾವು ತಪ್ಪಿಸಿಕೊಳ್ಳುವಂತಿಲ್ಲ. ಮುದ್ರಿತ ಪುಸ್ತಕಗಳ ಜನಪ್ರಿಯತೆ ಕುಂದಿಲ್ಲ. ಇದಕ್ಕೆ ವಿಶ್ವದಾದ್ಯಂತ ಪ್ರಕಟಗೊಳ್ಳುತ್ತಿರುವ ಕೋಟಿ ಕೋಟಿ ಪುಸ್ತಕಗಳೇ ಸಾಕ್ಷಿ.
ಬದುಕಿನಲ್ಲಿ ಪುಸ್ತಕಗಳ ಪ್ರವೇಶ ವಿಸ್ಮಯಕಾರಿಯಾದುದು. ಕೆಲವು ಪುಸ್ತಕಗಳನ್ನು ನಾವು ಬಯಸಿ ಬಯಸಿ ಖರೀದಿಸುತ್ತೇವೆ. ಕೊಂಡ ದಿನವೇ ಅದರ ಮೇಲೆ ಹೆಸರು ಬರೆದು ನಮ್ಮ ಸ್ವಾಮ್ಯವನ್ನು ಸ್ಥಾಪಿಸುತ್ತೇವೆ. ಇನ್ನು ಕೆಲವು ಪುಸ್ತಕಗಳು ತಾವಾಗಿ ನಮ್ಮನ್ನು ಅರಸಿ ಬರುತ್ತವೆ-ಗೌರವ ಪ್ರತಿಯಾಗಿ, ಅಭಿಮಾನಪೂರ್ವಕ. ಗೆಳೆಯರು, ಗುರುತಿದ್ದವರು, ಗುರುತಿಲ್ಲದವರು ಹೀಗೆ ಲೇಖಕರು ತಮ್ಮ ಹೊಸ ಕೃತಿಗಳನ್ನು ಕಳುಹಿಸುತ್ತಲೇ ಇರುತ್ತಾರೆ. ಓದಿದ ನಂತರ ಇವುಗಳಿಗೆ ಸ್ಥಳ ಕಲ್ಪಿಸಲು ನಾನು ಒದ್ದಾಡುತ್ತಲೇ ಇರುತ್ತೇನೆ, ಕಪಾಟುಗಳೆಲ್ಲ ತುಂಬಿ ಕೆಲವು ಪುಸ್ತಕಗಳು ನೆಲದ ಮೇಲೆ ನೆಲೆ ಕಂಡುಕೊಳ್ಳುವುದು ಅನಿವಾರ್ಯವಾಗುತ್ತದೆ. ಕಳೆದ ವರ್ಷ ಹೀಗೆಯೇ ಬುಕ್ ಪೋಸ್ಟ್ಟ್‌ನಲ್ಲಿ ಒಂದು ಪುಸ್ತಕ ಬಂತು. ಬುಕ್ ಪೋಸ್ಟ್ ಹೊದಿಕೆ ತೆರೆದು ನೋಡಿದೆ. ಶುರುವಿನ ಪುಟದಲ್ಲಿ ಕಳುಹಿಸಿದವರ ಅಂಕಿತವಾಗಲಿ, ವಿಳಾಸವಾಗಲಿ ಇರಲಿಲ್ಲ. ಸಾಮಾನ್ಯವಾಗಿ ಗೌರವ ಪ್ರತಿ ಕಳುಹಿಸುವವರು, ವಿಶ್ವಾಸದಿಂದ, ಆದರಪೂರ್ವಕ, ಪ್ರೀತಿಯಿಂದ ಹೀಗೇನಾದರೂ ಒಕ್ಕಣೆ ಬರೆದು ಅಂಕಿತ ಹಾಕಿರುತ್ತಾರೆ. ಕೆಲವರು ತಮ್ಮ ಅಮೂಲ್ಯ ಅಭಿಪ್ರಾಯ ತಿಳಿಯುವ ಕಾತರದಿಂದ ಎಂಬಂತಹ ಒಕ್ಕಣೆಯನ್ನೂ ಸೇರಿಸಿರುತ್ತಾರೆ. ಆದರೆ ಈ ಪುಸ್ತಕದಲ್ಲಿ ಇದ್ಯಾವುದೂ ಇರಲಿಲ್ಲ. ಈ ಪುಸ್ತಕ: ಕಾಟಿಬೆಟ್ಟದ ಕತೆಗಳು. ಲೇ: ಬಿ.ಆರ್.ಜೋಯಪ್ಪ. ಬುಕ್‌ಪೋಸ್ಟ್ ಹೊದಿಕೆಯನ್ನು ನೋಡಿದೆ. ಅದರಲ್ಲಿ ‘ಇಂದ’ ಎಂದು ಮೈಸೂರಿನ ಪುಸ್ತಕ ಮಾರಾಟ ಮಳಿಗೆಯೊಂದರ ವಿಳಾಸವಿತ್ತು.
ಆಕರ್ಷಣೀಯವಾದ ಮುಖಪುಟದಲ್ಲಿ ಕೆಳಗಡೆ ಲೇಖಕರ ಹೆಸರು ಮುದ್ರಣದಲ್ಲಿ ರಾರಾಜಿಸುತ್ತಿತ್ತು. ಲೇಖಕರು ನನಗೆ ಗುರುತುಪರಿಚಯದವರಂತೆ ಕಾಣಲಿಲ್ಲ.‘ಪ್ರಜಾವಾಣಿ’ಯಲ್ಲಿ ಎಂದಾದರೂ ಭೇಟಿಯಾಗಿರಬಹುದೇ ಎಂದು ತಲೆಕೆರೆದುಕೊಂಡೆ. ನೆನಪಾಗಲಿಲ್ಲ. ಪುಸ್ತಕವನ್ನು ಕೈಯಲ್ಲಿ ಹಿಡಿದು ಇಷ್ಟೆಲ್ಲ ಭಾನಗಡಿ ನಡೆಸಿದರೂ ಆಗ ನನ್ನ ಮನಸ್ಥಿತಿ ಪುಸ್ತಕ ಓದುವಷ್ಟು ನಿರಾಳವಾಗಿರಲಿಲ್ಲ. ಶ್ರೀಮತಿಯ ಅನಾರೋಗ್ಯದಿಂದಾಗಿ ವ್ಯಾಕುಲಚಿತ್ತನಾಗಿದ್ದೆ. ‘ಇರಲಿ, ಇದು ಮಳೆಗಾಲದ ಓದಿಗಾದೀತು’ ಎಂದು ಪುಸ್ತಕವನ್ನು ಅಲಾಯಿದ ತೆಗೆದಿಟ್ಟೆ. ಮೊನ್ನೆ, ಕೋವಿಡ್-19ರ ಗೃಹಬಂಧನದ ಖಿನ್ನತೆಯಲ್ಲಿ ಅಲಾಯಿದ ತೆಗೆದಿರಿಸಿದ ಪುಸ್ತಕಗಳ ಮಧ್ಯೆ ತಡಕಾಡಿದಾಗ ಆಚಾನಕ್ಕಾಗಿ ‘ಕಾಟಿಬೆಟ್ಟದ ಕತೆಗಳು’ ನನ್ನ ಕೈಗೆ ತಾಕಿತು. ಒಂದೇ ಬೈಠಕ್‌ನಲ್ಲಿ ಆಸಕ್ತಿಯಿಂದ ಓದಿಸಿಕೊಂಡು ನನ್ನ ಮನಸ್ಸನ್ನು ಆವರಿಸಿದ ಈ ಪುಸ್ತಕ ವಿಶ್ವ ಪುಸ್ತಕ ದಿನದ ಕೊಡುಗೆಯಂತೆ ತೋರಿತು. ವಿಶ್ವ ಪುಸ್ತಕ ದಿನದ ಓದಿಗಾಗಿ ಈ ಪುಸ್ತಕವನ್ನು ‘ವಾರ್ತಾಭಾರತಿ’ಯ ಓದುಗರ ಮುಂದೆ ಮಂಡಿಸುತ್ತಿದ್ದೇನೆ. ಒಂದು ಮೇರು ಕೃತಿ ಎಂದಲ್ಲ, ಒಂದು ಕೃತಿ, ಬದುಕಿನ ಬಗೆಗಿನ ಲೇಖಕರ ಪ್ರಾಮಾಣಿಕ ಕಾಳಜಿಯಿಂದಾಗಿ ಎಷ್ಟು ತಾಜಾ ಆಗಿರಲು ಸಾಧ್ಯ ಎಂಬ ಕಾರಣಕ್ಕಾಗಿ.
ಜೋಯಪ್ಪನವರ ‘ಕಾಟಿಬೆಟ್ಟದ ಕತೆಗಳು’ ಕಾಲ್ಪನಿಕ ಕಥಾಸಾಹಿತ್ಯದ ಮಾದರಿಯದಲ್ಲ. ಮಾನವ ನಾಗರಿಕತೆಯ ಒಂದು ಸ್ತರದ ಬದುಕಿನ ಚಿತ್ರವನ್ನು ಕಣ್ಮನಗಳಿಗೆ ತಾಕುವಂತೆ ಕಟ್ಟಿಕೊಡುವ ಇಲ್ಲಿನ ‘ಕತೆಗಳು’ ಮಾನವಿಕ ಎನ್ನಬಹುದಾದ ಬರಹಗಳು. ಹಾಗೆಂದ ಮಾತ್ರಕ್ಕೆ ಇಲ್ಲಿ ‘ಕತೆ’ ಇಲ್ಲ ಎಂದಲ್ಲ. ಅವ್ವ ಹೇಳುವ ಕತೆಗಳು, ದೇವರ ಕತೆಗಳು, ದೆವ್ವದ ಕತೆಗಳು ಇವೆಲ್ಲ ಇಲ್ಲಿದ್ದು, ನಮ್ಮ ಕುತೂಹಲದ ಗರಿಗೆದರಿಸುತ್ತವೆ. ಜೊತೆಗೆ, ಬದುಕಿನ ಸಾತತ್ಯತೆಗೆ ಕೊಂಡಿಯಾಗುತ್ತಲೇ ಮಾನವ ಬದುಕಿನ ಬೆಳವಣಿಗೆಯ ಏಳುಬೀಳಿನ ಚಿತ್ರಗಳನ್ನು ದಾಖಲಿಸುತ್ತವೆ. ಇದು ರೈತ ಕುಟುಂಬವೊಂದನ್ನು ಕೇಂದ್ರವಾಗುಳ್ಳ ಮಾನವಿಕ ಕಥನ. ಇದರಲ್ಲಿ ಮೂವತ್ತೊಂದು ಅಧ್ಯಾಯಗಳಿವೆ. ಪ್ರತ್ಯೇಕ ಶೀರ್ಷಿಕೆಯುಳ್ಳ ಒಂದೊಂದೂ ಕಾಡಿನ ಅಂಚಿನ ಬದುಕನ್ನು ಕಟ್ಟಿಕೊಡುವ ಪ್ರಕ್ರಿಯೆಯಲ್ಲಿ ಘಟಿಸಿದ ಪ್ರಸಂಗಗಳಾಗಿವೆ. ಬಿಡಿಯಾಗಿ ಈ ಅಧ್ಯಾಯಗಳಿಗೆ ಅವುಗಳದೇ ಆದ ಅಸ್ಮಿತೆ, ಅಸ್ತಿತ್ವಗಳು ಇರುವಂತೆಯೇ ಪರಸ್ಪರ ಹೆಣೆದುಕೊಂಡು ರೈತ ಕುಟುಂಬವೊಂದರ ಸಮಗ್ರ ಚಿತ್ರವನ್ನು ಕಟ್ಟುಕೊಡುವ ಲಯದ ಬೆಳವಣಿಗೆಯೂ ಇಲ್ಲಿದೆ. ಕುಟುಂಬದ ಎಲ್ಲರನ್ನೂ ಸಮಭಾಗಿಗಳಾಗಿ ಬಿಂಬಿಸುವ ಇಲ್ಲಿನ ಬರವಣಿಗೆಯಲ್ಲಿ ರೈತನ ಮಗನೇ ಕಥಾ ನಾಯಕ. ರೈತನೊಬ್ಬನ ಸಾಹಸಮಯ ಬದುಕು ತನ್ನ ಹಲವು ಬಣ್ಣ-ರೇಖೆಗಳಲ್ಲಿ ನಮ್ಮ ಮುಂದೆ ಪ್ರತ್ಯಕ್ಷವಾಗುವುದು ಮಗನ ಕುತೂಹಲದ ಕಣ್ಣುಗಳ ಮೂಲಕವೇ. ಬಾಲ್ಯದಿಂದ ಹಿಡಿದು ದೊಡ್ಡವನಾಗಿ ಬೆಳೆಯುತ್ತಾ ಹೋದಂತೆ ಈ ಮಗನ ಕುತೂಹಲಿ ಕಂಗಳು ದಾಖಲಿಸುವ ಬದುಕಿನ ವಿವರಗಳು, ಅವನ ಪಜ್ಞೆಗೆ ತಾಕುವ ಗಹನ ಸಂಗತಿಗಳು ಮತ್ತು ಅವಲೋಕನಗಳಿಂದಾಗಿ ಇಲ್ಲಿನ ಬರವಣಿಗೆಗೆ ಮಾನವ ಶಾಸ್ತ್ರೀಯ ಅಧ್ಯಯನದ ಪುಟ್ಟ ಆಯಾಮವೂ ಕಂಡೂ ಕಾಣದಂತೆ ಪ್ರಾಪ್ತವಾಗಿದೆ. ‘ಕಾಟಿಬೆಟ್ಟದ ಕತೆ’ಗಳಿಗೆ ಒಂದು ಭೌಗೋಳಿಕ ಎಲ್ಲೆ ಇದೆ.
ಕಾಟಿಬೆಟ್ಟ ಎಂಬುದು ದಕ್ಷಿಣ ಕೊಡಗಿನ ಒಂದು ದಟ್ಟ ಕಾಡು. ತನ್ನದೇ ಆದ ಕೃಷಿಕ ಬದುಕನ್ನು ಕಟ್ಟಿಕೊಳ್ಳುವ ಕನಸಿನಿಂದ ಊರೂರು ಅಲೆದ ರೈತನೊಬ್ಬ ಕೊನೆಗೆ ಈ ಕಾಡಿನಲ್ಲಿ ನೆಲೆ ಕಂಡುಕೊಳ್ಳುತ್ತಾನೆ. ರಾಮಪ್ಪ ಎಂಬ ರೈತ ಕಾಟಿಬೆಟ್ಟದ ಕಾಡಿನ ಸೆರಗಿನಲ್ಲಿ ಒಂದಿಷ್ಟು ಭೂಮಿಯನ್ನು ಕಡಿದು ಕೃಷಿಯೋಗ್ಯವಾಗಿಸಿ ಬದುಕನ್ನು ಕಟ್ಟಿಕೊಳ್ಳಲು ನಡೆಸುವ ಹೋರಾಟ ನಮಗೆ ಹರಿದಾಸರಾವ್ ಅವರ ‘ಬಾಳಿನಗಿಡ’(1949)ಕಾದಂಬರಿಯ ಗೋವಿಂದ ರಾಯನ ಬೇಸಾಯದ ಬದುಕಿನ ಹೋರಾಟವನ್ನು ನೆನಪಿಗೆ ತರುತ್ತದೆ.ಆದರೆ ಈ ಹೋಲಿಕೆ ಎರಡು ಪಾತ್ರಗಳಲ್ಲಿನ ಕೃಷಿಯ ಹಂಬಲಕ್ಕೆ ಮಾತ್ರ ಸೀಮಿತಗೊಳ್ಳುತ್ತದೆ. ದಟ್ಟ ಕಾಡಿನ ಅಂಚಿನಲ್ಲಿ ಕೃಷಿ ಮಾಡುತ್ತ, ಆಗಿಂದಾಗ್ಗೆ ತನ್ನ ಹೊಲಗದ್ದೆಗಳಿಗೆ, ದನದ ಕೊಟ್ಟಿಗೆಗೆ ಭೇಟಿಕೊಡುವ ಹುಲಿ, ಆನೆಗಳು ಮತ್ತಿತರ ವನ್ಯಜೀವಿಗಳೊಂದಿಗೆ ಸಾಮರಸ್ಯ ಕಾದುಕೊಂಡು ಬೇಸಾಯದಲ್ಲಿ ತೊಡಗಿಕೊಳ್ಳುವ ರಾಮಪ್ಪನ ಕೃಷಿಕ ಜೀವನದ ಪರಿ, ಕೃಷಿಯಲ್ಲಿನ ಅವನ ನಿಷ್ಠೆ, ನೇಗಿಲ ಯೋಗಿಯ ರೀತಿಯದು.ಕಟಾವಿಗೆ ಬಂದ ಬೆಳೆ ಯಾವ ಕ್ಷಣದಲ್ಲಾದರೂ ಆನೆಗಳ ದಾಳಿಗೀಡಾಗಬಹುದು, ಕರೆಯುವ ಹಸುಗಳು, ನೇಗಿಲೆಳೆಯುವ ಎತ್ತುಗಳು ಯಾವ ಕ್ಷಣದಲ್ಲಾದರೂ ಹುಲಿಗಳಿಗೆ ಆಹಾರವಾಗಬಹುದು ಎನ್ನುವ ಅಪಾಯದ ಸನ್ನಿವೇಶದಲ್ಲೂ ರಾಮಪ್ಪ ಕನಸುಮನಸ್ಸಿನಲ್ಲೂ ವನ್ಯಜೀವಗಳ ಹತ್ಯೆಯ ಯೋಚನೆ ಮಾಡುವುದಿಲ್ಲ. ಕೈ ಚಪ್ಪಾಳೆಯಿಂದಲೋ ದೊಡ್ಡ ಗಂಟಲಿನ ಕೂಗಿನಿಂದಲೂ ಬೆಳೆ ಮೇಯುವ ಅನೆಗಳನ್ನು ತರುಬುವ ಅವನ ಕಲೆ ನಮ್ಮನ್ನು ಅಚ್ಚರಿಗೊಳಿಸುತ್ತದೆ.ಆನೆಗಳೂ ರಾಮಪ್ಪನ ಹಿತಕಾಯುವ ಬಂಧುಗಳಂತೆ ಅವನ ಕೂಗಿಗೆ ಓಗೊಡುತ್ತವೆ. ಹುಲಿಗಳೂ ವರುಷ ಎರಡು ವರ್ಷಕ್ಕೊಮ್ಮೆ ಒಂದು ಹಸವನ್ನು ಹಿಡಿದರೂ ನಿರಂತರ ಕಾಟವಾಗುವುದಿಲ್ಲ. ಕಾಡಿನ ಸಮತೋಲನಕ್ಕೆ ಧಕ್ಕೆ ಬಾರದ ರೀತಿಯ ಇಲ್ಲಿನ ಮನುಷ್ಯ-ಪ್ರಾಣಿಗಳ ಬದುಕಿನ ರೀತಿ ಮನುಷ್ಯ ಮತ್ತು ಪ್ರಕೃತಿಯ ನಡುವಣ ನೈಸರ್ಗಿಕ ಸಂಬಂಧಕ್ಕೆ ಮಾದರಿಯಾಗಿ ನಮ್ಮ ಗಮನ ಸೆಳೆಯುತ್ತದೆ.
ಬುಗುರಿ ಆಡುವ ವಯಸ್ಸಿನ ಬಾಲ್ಯದ ಮುಗ್ಧ ಅನುಭವಗಳಿಂದ ಶುರುವಾಗುವ ಇಲ್ಲಿನ ಕಥನ, ಮುಗ್ಧತನ ಕಳೆದು ಪೌಗಂಡ ವಯಸ್ಸಿಗೆ ಸರಿದಂತೆ ಈ ಅನುಭವಗಳ ಆಳ, ಅಗಲ, ವಿಸ್ತಾರಗಳನ್ನು ಅಳೆದು ನೋಡುವ, ಅರ್ಥೈಸುವ ಗಹನತೆಗೆ ಚಾಚಿಕೊಳ್ಳುತ್ತದೆ. ಅಪ್ಪನ ಹೆಗಲ ಮೇಲಿನ ಸವಾರಿಯ ಮಂಜಿನ ತೆರೆ ಕರಗಿ ಕ್ರೌರ್ಯ, ಅಸಹಾಯಕತೆ, ನಂಬಿಕೆಗಳು, ಆಚರಣೆಗಳು, ಬಡತನ, ಬಲಿಬೇಡುವ ದೇವರು ಇಂತಹ ಪ್ರಸಂಗಗಳಲ್ಲಿ ರೈತಾಪಿ ಬದುಕಿನ ಹಲವು ಮುಖಗಳು ಅನಾವರಣಗೊಂಡು, ಬುಗುರಿ-ಕೊಳಲುಗಳ ಆಕರ್ಷಣೆ, ಅನುರಕ್ತಿಗಳನ್ನು ಮೀರಿದ ಬದುಕಿನ ಇತರ ಸಾಧ್ಯತೆಗಳ ಒಂದು ಜಾಗೃತಿ ಮೂಡಲಾರಂಭಿಸುತ್ತದೆ. ನಾರಾಯಣ ಶಾಸ್ತ್ರಿ ಮೇಷ್ಟ್ರು ಉಣಿಸುವ ಬುತ್ತಿಯೂಟದ ಸವಿ, ತಾಯಿಯ ಸೊಂಟ ನೋವಿಗೆ ಅಪ್ಪಮಾಡುವ ರಾಕ್ಷಸ ಚಿಕಿತ್ಸೆ, ರಾಜಾ ಹೋರಿಯ ನಿರ್ಬೀಜೀಕರಣ, ಕಾಡಿನ ಬೆಂಕಿ, ಸದಾರಮೆ ನಾಟಕ ಇತ್ಯಾದಿಗಳು ಪೌಗಂಡ ಪ್ರಜ್ಞೆಯನ್ನು ತಾಕಿ ಘಾತಿಸುವ ಪ್ರಕ್ರಿಯೆಯಲ್ಲೇ ನಗರ ನಾಗರಿಕತೆ ಸದ್ದಿಲ್ಲದೆ ನುಸುಳುತ್ತಿರುತ್ತದೆ. ಕೊಳಲ ಆಕರ್ಷಣೆ ಹಿಂದೆ ಸರಿದು, ಮುಂಗೋಳಿ ಕೂಗಿ ಬೆಳಕಿನ ಸೂಚನೆ ಸಿಕ್ಕಿ ಕನಸು ಶುರುವಾಗುತ್ತದೆ. ಕನಸು ಕಾಣಿಸುವ ಮಂಚ ಅವನನ್ನು ಕೆಳಕ್ಕೆ ಬೀಳಿಸುತ್ತದೆ. ಅಪ್ಪನ ಕಾಯಿಲೆಯೂ ವಾಸಿಯಾಗಿ ಕನಸುಕಾಣುವ ಗಮ್ಮತ್ತಿನಲ್ಲಿರುವಾಗಲೇ ಮಂಚದಿಂದ ಬೀಳುವ ಪ್ರಕರಣ ಮುಂದಿನ ಪಲ್ಲಟಗಳ ಮುಂಗಾಣ್ಕೆಯ ಮಹತ್ವ ಪಡೆದುಕೊಳ್ಳುತ್ತದೆ. ಕಾಟಿಬೆಟ್ಟದ ಸುತ್ತಲಿನ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಎಲ್ಲರನ್ನೂ ಸರಕಾರ ಒಕ್ಕಲೆಬ್ಬಿಸುವ ಸುದ್ದಿ ಸ್ಫೋಟಿಸುತ್ತದೆ. ಹಲವಾರು ವರ್ಷಗಳ ಹೋರಾಟದನಂತರ ಪ್ರಕೃತಿ ಮಡಿಲಲ್ಲಿ ನೆಲ ಕಂಡುಕೊಂಡ ಕುಟುಂಬ ಸ್ವತಂತ್ರ ಭಾರತದಲ್ಲಿ ನಿರ್ಗತಿಕವಾಗುತ್ತದೆ: ಮನೆಯಿಲ್ಲ, ಕುಡಿವ ನೀರಿಲ್ಲ, ಆಕಾಶವೇ ಚಪ್ಪರ, ನೆಲವೇ ಮಂಚ. ಸ್ವತಂತ್ರ ಭಾರತದಲ್ಲಿ ಭಾರತೀಯರು ನಿರ್ಗತಿಕರು. ಕಾಟಿಬೆಟ್ಟದ ದುರ್ಗಮ ಕಾಡು ದೂರದೂರವಾಗಿ, ಕೊಡಗಿನ ನಿಸರ್ಗದ ಗಡಿ ದಾಟಿ ರಾಮಪ್ಪನ ಕುಟುಂಬ, ಕಾಟಿಬೆಟ್ಟದ ನಮ್ಮ ಮನೆಯ ಒಂದಷ್ಟು ಬತ್ತ, ನಾಲ್ಕಾರು ಪಾತ್ರೆ, ಒಂಟಿ ಕೈ ಕುರ್ಚಿ, ಒಂದು ಲಾಟೀನು. ಒಂದು ದೀಪ, ಎರಡು ಪೆಟ್ಟಿಗೆ, ಬೆಂಚು, ಮಣೆ-ಆಯಿತು -ಕಾಟಿ ಬೆಟ್ಟದ ಆಸ್ತಿ-ಇದ್ದ ಅಷ್ಟನ್ನು ಸಣ್ಣ ಲಾರಿಗೆ ತುಂಬಿದೆವು.
ಅಕ್ಕ ತೋರಿದ ದಾರಿಯಲ್ಲಿ ಲಾರಿ ಹೊರಟಿತು.ಕಾಡು ದಾಟಿತು. ಕಾಟಿಬೆಟ್ಟದ ದುರ್ಗಮ ಕಾಡು ದೂರ ದೂರವಾಗಿ ಲಾರಿ ಕೊಡಗಿನ ಗಡಿ ದಾಟಿತು.ಮತ್ತಿಗೋಡು, ಆನೆ ಚೌಕೂರು,ಹುಣಸೂರಿನ ಮೂಲಕ ಹಾದು ಹೋದ ನಮ್ಮ ಕುಟುಂಬ ಮೈಸೂರು ಮಹಾನಗರದಲ್ಲಿ ಲೀನವಾಯಿತು. ಇಪ್ಪತ್ತನೆಯ ಶತಮಾನ ಪೂರ್ವಾರ್ಧದಲ್ಲಿ,ಕಾಡನ್ನು ಆಶ್ರಯಿಸಿದ ರೈತ ಕುಟುಂಬಗಳಲ್ಲಿ ಸಂಭವಿಸಬಹುದಾದ ಈ ಕಥನ ಒಂದು ಸಣ್ಣ ಪಲ್ಲಟ.ಮಾನವ ನಾಗರಿಕತೆ ಇಂಥ ಎಷ್ಟೋ ಪಲ್ಲಟಗಳನ್ನು ಕಂಡಿದೆ.ಆದರೆ,ಇಂಥ ಪ್ರತಿಯೊಂದು ಪಲ್ಲಟದಲ್ಲೂ ಅನಿವಾರ್ಯವಾದ ಕಳೆದುಕೊಳ್ಳುವ ಪ್ರಕ್ರಿಯೆ ಇದೆಯಲ್ಲ, ಅದರಿಂದ ಸಾಂಸ್ಕೃತಿಕವಾಗಿ ಆಗುವ ನಷ್ಟ ಇದೆಯಲ್ಲ, ಅದು ಕರುಳಬಳ್ಳಿಯ ಸಂಬಂಧ ಕಡಿದುಕೊಂಡಷ್ಟೇ ನೋವಿನದು. ಕಾಡಿನಿಂದ, ಹಳ್ಳಿಗಳಿಂದ ನಗರಗಳಿಗೆ ವಲಸೆ ಬರುತ್ತಿರುವವರ ಪ್ರಮಾಣ ಹೆಚ್ಚಿ ಸಾಮಾಜಿಕ ಬದುಕಿನಲ್ಲಿ ದೊಡ್ಡದೊಡ್ಡ ಪಲ್ಲಟಗಳೇ ಆಗುತ್ತಿರುವ ಈ ಕಾಲಘಟ್ಟದಲ್ಲಿ ನಮ್ಮ ಸಂವೇದನೆಗಳನ್ನು ಕಲಕುವಂಥ ಕೃತಿ ‘ಕಾಟಿಬೆಟ್ಟದ ಕತೆಗಳು.’ಜೋಯಪ್ಪನವರ ಸಂಕಥನ ಸರಳವಾದರೂ ಅವರ ಭಾಷೆ ಆರ್ದ್ರವೂ ಪಾರದರ್ಶಕವೂ ಆಗಿದ್ದು,ದನಿ ಕಳೆದುಕೊಳ್ಳುತ್ತಿರುವ ಸಮುದಾಯದ ಸಂಕೇತವಾಗಿ, ರೂಪಕವಾಗಿ ಮನಮುಟ್ಟುವಷ್ಟು ಶಕ್ತಿಯುತವಾಗಿದೆ.
ಇಲ್ಲಿ ಗಮನಿಸಬೇಕಾದ ಮತ್ತೊಂದು ಮುಖ್ಯ ಸಂಗತಿ ಎಂದರೆ, ‘ಕಾಟಿಬೆಟ್ಟದ ಕತೆಗಳು’ ಬಿಡಿಬಿಡಿಯಾಗಿ ಮೊದಲು ಪ್ರಕಟಗೊಂಡದ್ದು ‘ಕೆಂಡಸಂಪಿಗೆ’ ಅಂತರ್ಜಾಲ ಪತ್ರಿಕೆಯಲ್ಲಿ ಎಂಬ ಓದಿನ ಹೊಸ ಸಾಧ್ಯತೆಯನ್ನು. ಜೋಯಪ್ಪನವರ ಈಕತೆಗಳು ಅದರಲ್ಲೇ ಕಳೆದಹೋಗದೆ ಈಗ ಇಡಿಯಾಗಿ ಪಾರಂಪರಿಕ ಪುಸ್ತಕ ರೂಪದಲ್ಲಿ ಪ್ರಕಟಗೊಳ್ಳುತ್ತಿರುವುದು ಪುಸ್ತಕಪ್ರಿಯರಿಗೆ ಖುಷಿಕೊಡುವ ವಿಚಾರ. ವಿದ್ಯುನ್ಮಾನ ಯುಗದಲ್ಲೂ ಪುಸ್ತಕ ಕೈಯಿಂದ ಕಳಚಿಕೊಳ್ಳುವುದಿಲ್ಲವೆಂಬುದು ಎಷ್ಟು ಸಮಾಧಾನದ ಮಾತು!.