ಲಾಕ್‌ಡೌನ್‌ನಿಂದ ಪರಿಸರಕ್ಕೆ ಲಾಭ: ವಾಯು ಮಾಲಿನ್ಯ ಪ್ರಮಾಣದಲ್ಲಿ ಭಾರೀ ಇಳಿಕೆ
ಉಡುಪಿಯಲ್ಲಿ ಶುದ್ಧ ವಾತಾವರಣ
ಉಡುಪಿ, ಎ.18: ಕೊರೋನ ಸೋಂಕು ನಿಯಂತ್ರಣಕ್ಕಾಗಿ ವಿಧಿಸಲಾಗಿರುವ ಲಾಕ್‌ಡೌನ್‌ನಿಂದಾಗಿ ಶೇ.90ರಷ್ಟು ವಾಹನಗಳು ರಸ್ತೆಗೆ ಇಳಿಯದ ಪರಿಣಾಮ ವಾತಾವರಣದಲ್ಲಿ ಧೂಳಿನ ಕಣ, ಇಂಗಾಲದ ಮೊನಾಕ್ಸೈಡ್ ಹಾಗೂ ಗಂಧಕದ ಡೈ ಆಕ್ಸೈಡ್ ಸಾಕಷ್ಟು ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಇದರಿಂದ ವಾಯು ಮಾಲಿನ್ಯ ಕಡಿಮೆಯಾಗಿ ಉಡುಪಿ ಜಿಲ್ಲೆಯ ಪರಿಸರ ಪರಿಶುದ್ಧವಾಗುತ್ತಿದೆ. ಕೈಗಾರಿಕೀಕರಣ, ರಸ್ತೆಯ ಧೂಳು, ರಸ್ತೆ ನಿರ್ಮಾಣ ಹಾಗೂ ಕಟ್ಟಡ ಕಾಮಗಾರಿ, ವಾಹನಗಳಿಂದ ಹೊರಹೊಮ್ಮುವ ಹೊಗೆಯಲ್ಲಿರುವ ಇಂಗಾಲದ ಮೊನಾಕ್ಸೈಡ್ ಹಾಗೂ ಗಂಧಕದ ಡೈ ಆಕ್ಸೈಡ್‌ಗಳು ವಾಯು ಮಾಲಿನ್ಯಕ್ಕೆ ಕಾರಣವಾಗುತ್ತಿರುವ ಪ್ರಮುಖ ಅಂಶಗಳಾಗಿವೆ. ಈ ಮಾಲಿನ್ಯಕಾರಕ ಅಂಶಗಳು ನಿಗದಿತ ಮಟ್ಟಕ್ಕಿಂತ ಹೆಚ್ಚಾಗುವುದರಿಂದ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಶೇ.90ರಷ್ಟು ವಾಯುಮಾಲಿನ್ಯಕ್ಕೆ ವಾಹನಗಳು ಉಗುಳುವ ಹೊಗೆಯೇ ಕಾರಣ ವಾಗಿವೆ.
ಉಡುಪಿ ಜಿಲ್ಲೆಯಲ್ಲಿ ಒಟ್ಟು 4,52,665 ವಿವಿಧ ವಾಹನಗಳು ಆರ್‌ಟಿಒ ಕಚೇರಿಯಲ್ಲಿ ನೋಂದಣಿಯಾಗಿವೆ. ಉಡುಪಿ ನಗರವೊಂದರಲ್ಲೇ ಲಕ್ಷಕ್ಕೂ ಅಧಿಕ ಸಂಖ್ಯೆಯ ವಾಹನಗಳು ಪ್ರತಿದಿನ ಓಡಾಟ ನಡೆಸುತ್ತವೆ. ಕಳೆದ 25 ದಿನಗಳಿಂದ ಲಾಕ್‌ಡೌನ್‌ನಿಂದ ವಾಹನಗಳು ರಸ್ತೆಗೆ ಇಳಿಯದೆ, ಕೈಗಾರಿಕೆಗಳು ಕಾರ್ಯಾಚರಿಸದೆ ಹಾಗೂ ಯಾವುದೇ ಕಾಮಗಾರಿಗಳು ನಡೆಯದಿರುವುದರಿಂದ ವಾತಾವರಣದಲ್ಲಿ ಮಾಲಿನ್ಯಕಾರಕ ಅಂಶಗಳು ಕಡಿಮೆಯಾಗಿ ಪರಿಸರಕ್ಕೆ ತಕ್ಕಮಟ್ಟಿನ ಅನು ಕೂಲಗಳಾಗಿವೆ. ಸುರಕ್ಷಿತ ಮಟ್ಟದಲ್ಲಿ ವಾತಾವರಣ
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಉಡುಪಿ ಪ್ರಾದೇಶಿಕ ಕಚೇರಿಯ ಅಧೀನದಲ್ಲಿ ಉಡುಪಿ ನಗರದ ಬೋರ್ಡ್ ಹೈಸ್ಕೂಲ್ ಆವರಣದಲ್ಲಿ ಕಾರ್ಯಾಚರಿಸುತ್ತಿರುವ ನಿರಂತರ ಪರಿವೇಷ್ಟಕ ವಾಯು ಗುಣಮಟ್ಟ ಮಾಪನ ಕೇಂದ್ರದಲ್ಲಿ ಮುಖ್ಯವಾಗಿ ಗಾಳಿಯಲ್ಲಿರುವ ಧೂಳಿನ ಕಣಗಳು, ಕಾರ್ಬನ್ ಮೋನಾಕ್ಸೈಡ್ ಹಾಗೂ ಸಲ್ಫರ್ ಡೈ ಆಕ್ಸೈಡ್‌ಗಳನ್ನು ಮಾಪನ ಮಾಡಲಾಗುತ್ತದೆ. ಕೇಂದ್ರದಲ್ಲಿರುವ ಪರ್ಟಿಕ್ಯುಲೆಟ್ ಮಾನಿಟರ್(ಪಿಎಂ)-2.5 ಯಂತ್ರವು ಗಾಳಿಯಲ್ಲಿರುವ ಅತೀ ಸಣ್ಣ ಅಂದರೆ 2.5ಮೈಕ್ರೋ ಗ್ರಾಂ(ಎಂಜಿ) ಗಾತ್ರದ ಹಾಗೂ ಪಿಎಂ-10 ಯಂತ್ರವು 10ಎಂಜಿ ಗಾತ್ರದ ಧೂಳಿನ ಕಣಗಳನ್ನು ಮಾಪನ ಮಾಡುತ್ತವೆ. 2.5ಎಂಜಿ ಗಾತ್ರದ ಕಣಗಳು ಗಾಳಿಯಲ್ಲಿ 15-25 ಎಂಜಿ ಇದ್ದರೆ ಸುರಕ್ಷಿತ, 30-60ಎಂಜಿ ಇದ್ದರೆ ಸರಾಸರಿ ಮತ್ತು 60ಎಂಜಿಗಿಂತ ಮೇಲ್ಪಟ್ಟರೆ ಮಲಿನಯುಕ್ತ ಗಾಳಿ ಮತ್ತು 10 ಎಂಜಿ ಗಾತ್ರದ ಕಣಗಳು 15-25ಎಂಜಿ ಇದ್ದರೆ ಸುರಕ್ಷಿತ, 30-60ಎಂಜಿ ಇದ್ದರೆ ಸರಾಸರಿ, 60-100 ಎಂಜಿ ಇದ್ದರೆ ಅಲರ್ಟ್ ಹಾಗೂ 100 ಎಂಜಿಗಿಂತ ಹೆಚ್ಚಿದ್ದರೆ ಮಲಿನಯುಕ್ತ ಗಾಳಿ ಎಂಬುದಾಗಿ ಪರಿಗಣಿಸಲಾಗುತ್ತದೆ. ಪ್ರಸಕ್ತ ಉಡುಪಿ ನಗರದಲ್ಲಿ 2.5ಎಂಜಿ ಕಣಗಳು 2.00 ಎಂಜಿಯಷ್ಟಿದ್ದರೆ, 10 ಎಂಜಿ ಕಣಗಳು 10-15 ಎಂಜಿಯಷ್ಟಿದೆ. ಲಾಕ್‌ಡೌನ್‌ಗಿಂತ ಮೊದಲು ಮಾ.5ರಂದು 2.5 ಎಂಜಿ ಧೂಳಿನ ಕಣಗಳು 56 ಎಂಜಿಯಷ್ಟು ಇರುವುದು ವರದಿಯಾಗಿತ್ತು. 10 ಎಂಜಿ ಕಣಗಳು ಮಾ.1ರಂದು 77.18ರಷ್ಟು ಪ್ರಮಾಣದಲ್ಲಿ ಇದ್ದವು. 2.5. ಕಣಗಳು ಹಲವು ಬಾರಿ 60ಎಂಜಿಗಿಂತ ಮೇಲಿದ್ದವು. ಆದರೆ 10 ಎಂಜಿ ಕಣಗಳು ಈವರೆಗೆ 100ನ್ನು ಮೀರಿಲ್ಲ ಎಂದು ಕೇಂದ್ರದ ವರದಿ ತಿಳಿಸುತ್ತದೆ. ಹೀಗೆ 60ಎಂಜಿಗಿಂತ ಹೆಚ್ಚಿದ್ದ ಸಣ್ಣ ಧೂಳಿನ ಕಣಗಳ ಪ್ರಮಾಣ ಈಗ ಕೇವಲ 2 ಎಂಜಿಗೆ ಇಳಿದಿರುವುದು ನಗರದ ವಾತಾವರಣ ಸುರಕ್ಷಿತ ಎಂಬುದನ್ನು ಬಿಂಬಿಸುತ್ತದೆ.
ಇಂಗಾಲದ ಮೊನಾಕ್ಸೈಡ್ ಪ್ರಮಾಣ ಇಳಿಕೆ
ವಾಹನದ ಹೊಗೆಯಿಂದ ಬರುವ ಇಂಗಾಲದ ಮೊನಾಕ್ಸೈಡ್ ಪ್ರಮಾಣ 2 ಎಂಜಿಎಂ ಮಿತಿಗಿಂತ ಮೀರಿದರೆ ಪರಿಸರ ಮಲಿನವಾಗಿರುತ್ತದೆ. ಪ್ರಸಕ್ತ ಉಡುಪಿ ನಗರದಲ್ಲಿ ಇಂಗಾಲದ ಮೊನಾಕ್ಸೈಡ್ 0.548 ಎಜಿಎಂ ನಷ್ಟಿದ್ದರೆ, ಅದು ಲಾಕ್‌ಡೌನ್‌ಗೆ ಮೊದಲು ವಾಹನ ದಟ್ಟನೆ ಹೆಚ್ಚಿ ದ್ದಾಗ 2 ಎಂಜಿಎಂ ಮಿತಿಯನ್ನು ಮೀರಿದ್ದು ವರದಿಯಾಗಿದ್ದವು.
ಗಾಳಿಯಲ್ಲಿ ಗಂಧಕದ ಡೈ ಆಕ್ಸೈಡ್‌ನ ಪ್ರಮಾಣ 12 ಯುಜಿಎಂ ಮಿತಿಗಿಂತ ಮೀರಿದರೆ ಅಪಾಯಕಾರಿ. ಆದರೆ ಉಡುಪಿ ನಗರದಲ್ಲಿ ಈವರೆಗೆ ಈ ಪ್ರಮಾಣ ಮೀರಿಲ್ಲ. ಸದ್ಯ ಇದರ ಪ್ರಮಾಣ 8.412 ಯುಜಿಎಂನಷ್ಟಿದೆ ಎಂದು ಕೇಂದ್ರದ ವರದಿ ತಿಳಿಸುತ್ತದೆ. ಹೀಗೆ ಇವು ಎರಡು ಕೂಡ ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗುವ ಮೂಲಕ ಗಾಳಿಯು ಶುದ್ಧವಾಗುತ್ತಿರುವುದು ಕಂಡು ಬರುತ್ತದೆ.
ಶೇ.90ರಷ್ಟು ವಾಯು ಮಾಲಿನ್ಯವು ವಾಹನಗಳಿಂದಲೇ ಉಂಟಾಗುತ್ತದೆ. ವಾಹನಗಳ ಓಡಾಟದಿಂದ ರಸ್ತೆಯಲ್ಲಿದ್ದ ಮತ್ತು ಹೊಗೆಯಲ್ಲಿರುವ ಧೂಳಿನ ಕಣಗಳು ವಾತಾವರಣವನ್ನು ಸೇರಿಕೊಳ್ಳುತ್ತದೆ. ಈ ಗಾಳಿಯನ್ನು ಮನುಷ್ಯ ಸೇವಿಸಿದರೆ ಅಸ್ತಮಾ, ಶ್ವಾಸಕೋಸಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ. ಈ ಹಿಂದೆ ನಿಗದಿತ ಮಟ್ಟಕ್ಕಿಂತ ಮೀರಿದ್ದ ಧೂಳಿನ ಕಣಗಳ ಸಾಂಧ್ರತೆ ಹಾಗೂ ಇಂಗಾಲದ ಮೊನಾಕ್ಸೈಡ್ ಪ್ರಮಾಣ ಈಗ ವಾಹನಗಳ ಓಡಾಟ ಇಲ್ಲದೆ ಸಾಕಷ್ಟು ಇಳಿಕೆ ಕಂಡಿದೆ.
-ವಿಜಯ ಹೆಗ್ಡೆ,
ಪರಿಸರ ಅಧಿಕಾರಿ, ಉಡುಪಿ ಜಿಲ್ಲೆ.
ಧೂಳು, ವಾಹನಗಳ ಹೊಗೆಗಳಿಂದ ಮುಖ್ಯವಾಗಿ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳು ಬರುತ್ತವೆ. ಈಗ ವಾಹನಗಳ ಓಡಾಟ ಕಡಿಮೆಯಾಗಿರುವುದರಿಂದ ಗಾಳಿಯಲ್ಲಿ ಮಾಲಿನ್ಯಕಾರಕ ಅಂಶಗಳು ಇಳಿಕೆಯಾಗಿದೆ. ಈ ವಾತಾವರಣವು ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಅನುಕೂಲವಾಗುತ್ತದೆ. ಈಗ ಅಲರ್ಜಿ, ಶೀತಗಳಂತಹ ಕಾಯಿಲೆ ಕಡಿಮೆಯಾಗಿರುವುದರಿಂದ ಜಿಲ್ಲಾಸ್ಪತ್ರೆಯ ಹೊರರೋಗಿಗಳ ವಿಭಾಗಗಳಿಗೆ ಬರುವ ರೋಗಿಗಳ ಸಂಖ್ಯೆ ಕೂಡ ಕಡಿಮೆಯಾಗಿದೆ.
-ಡಾ.ಮಧುಸೂದನ್ ನಾಯಕ್,
ಸರ್ಜನ್, ಜಿಲ್ಲಾಸ್ಪತ್ರೆ, ಉಡುಪಿ