ಕೋವಿಡ್-19 ನೆಗೆಟಿವ್ ಪ್ರಮಾಣಪತ್ರ ಇಲ್ಲದ ಮುಸ್ಲಿಂ ರೋಗಿಗಳಿಗೆ ಪ್ರವೇಶ ಇಲ್ಲ ಎಂದ ಆಸ್ಪತ್ರೆ: ಆರೋಪ
ಹೊಸದಿಲ್ಲಿ: ಉತ್ತರ ಪ್ರದೇಶದ ಮೀರಠ್ ನಗರದಲ್ಲಿರುವ ಕ್ಯಾನ್ಸರ್ ಆಸ್ಪತ್ರೆಯೊಂದು, ದೈನಿಕ್ ಜಾಗರಣ್ ಪತ್ರಿಕೆಯಲ್ಲಿ ಜಾಹೀರಾತು ಪ್ರಕಟಿಸಿ, ಕೋವಿಡ್-19 ಪರೀಕ್ಷೆಯಲ್ಲಿ ನೆಗೆಟಿವ್ ಫಲಿತಾಂಶ ಇರುವ ಪ್ರಮಾಣಪತ್ರವನ್ನು ಹೊಂದಿರದ ಮುಸ್ಲಿಂ ರೋಗಿಗಳನ್ನು ತಾನು ದಾಖಲಿಸಿಕೊಳ್ಳುವುದಿಲ್ಲ ಎಂದು ಹೇಳಿದೆ ಎಂದು Thewire.in ವರದಿ ಮಾಡಿದೆ.
ಕ್ಯಾನ್ಸರ್ ಚಿಕಿತ್ಸೆಗಾಗಿಯೇ ಇರುವ ಈ 50 ಬೆಡ್‍ಗಳ ವಿಶೇಷ ಆಸ್ಪತ್ರೆ, ಮೀರಠ್, ಮವಾನಾ, ಸರ್ಧಾನ ಮತ್ತು ಮುಜಾಫರ್‍ಪುರದ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದೆ.
“ಹಲವು ಮುಸ್ಲಿಂ ರೋಗಿಗಳು ಮಾಸ್ಕ್ ಧರಿಸುವುದು, ನೈರ್ಮಲ್ಯ ಕಾಪಾಡುವುದು ಮೊದಲಾದ ಮಾರ್ಗಸೂಚಿಯನ್ನು ಅನುಸರಿಸುತ್ತಿಲ್ಲ. ಜತೆಗೆ ಆಸ್ಪತ್ರೆ ಸಿಬ್ಬಂದಿಯ ಜತೆ ಅನುಚಿತವಾಗಿ ವರ್ತಿಸುತ್ತಾರೆ. ಆಸ್ಪತ್ರೆಯ ರೋಗಿಗಳು ಹಾಗೂ ಸಿಬ್ಬಂದಿಯ ಸುರಕ್ಷತೆ ದೃಷ್ಟಿಯಿಂದ ಆಸ್ಪತ್ರೆ ಆಡಳಿತ ಈ ನಿರ್ಧಾರಕ್ಕೆ ಬಂದಿದೆ” ಎಂದು ಜಾಹೀರಾತಿನಲ್ಲಿ ಹೇಳಲಾಗಿದೆ.
ವೆಲೆಂಟೀಸ್ ಕ್ಯಾನ್ಸರ್ ಆಸ್ಪತ್ರೆ ಹಿಂದಿ ದೈನಿಕದ ಶುಕ್ರವಾರದ ಆವೃತ್ತಿಯಲ್ಲಿ ಈ ಜಾಹೀರಾತು ಪ್ರಕಟಿಸಿದೆ.
ಆಸ್ಪತ್ರೆಯ ಈ ಜಾಹೀರಾತು ರಾಷ್ಟ್ರೀಯ ಮಾನವ ಹಕ್ಕು ಆಯೋಗ ಪ್ರಕಟಿಸಿರುವ ಸನ್ನದಿನ ಸಂಪೂರ್ಣ ಉಲ್ಲಂಘನೆಯಾಗಿದ್ದು, 2019ರ ಮಾರ್ಚ್ ತಿಂಗಳಲ್ಲಿ ಆರೋಗ್ಯ ಇಲಾಖೆ ನೀಡಿದ ಸನ್ನದಿನ ಅನ್ವಯ ಯವುದೇ ತಾರತಮ್ಯ ಮಾಡುವಂತಿಲ್ಲ. ಧರ್ಮ ಅಥವಾ ಅಸ್ವಸ್ಥತೆ ಆಧಾರದಲ್ಲಿ ರೋಗಿಗಳಿಗೆ ಚಿಕಿತ್ಸೆ ನಿರಾಕರಿಸುವಂತಿಲ್ಲ ಎಂದು Thewire.in ವರದಿ ತಿಳಿಸಿದೆ.