ಗ್ರೂಪ್ ವೀಡಿಯೊ ಕಾಲ್: ಈ ವಿಶೇಷ ಬದಲಾವಣೆಗೆ ಮುಂದಾಗಿದೆ ವಾಟ್ಸ್‌ಆ್ಯಪ್
ಹೊಸದಿಲ್ಲಿ, ಎ.21: ಕೋರೋನ ವೈರಸ್‌ನಿಂದಾಗಿ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ವೀಡಿಯೊ ಮೀಟಿಂಗ್ ಆ್ಯಪ್‌ಗಳ ವ್ಯಾಪಕ ಬಳಕೆಯಿಂದ ಉತ್ತೇಜಿತಗೊಂಡಿರುವ ವಾಟ್ಸ್ ಆ್ಯಪ್ ಶೀಘ್ರವೇ ತನ್ನ ಆ್ಯಂಡ್ರಾಯ್ಡ್ ಮತ್ತು ಐಒಎಸ್ ಬೀಟಾ ಬಳಕೆದಾರರಿಗಾಗಿ ಗ್ರೂಪ್ ಆಡಿಯೊ ಮತ್ತು ವೀಡಿಯೊಗಳಲ್ಲಿ ಪಾಲ್ಗೊಳ್ಳುವವರ ಸಂಖ್ಯೆಯನ್ನು ಈಗಿನ ನಾಲ್ಕರಿಂದ ಎಂಟಕ್ಕೆ ಹೆಚ್ಚಿಸಲಿದೆ.
ವಾಟ್ಸ್‌ಆ್ಯಪ್ ಜಗತ್ತಿನಾದ್ಯಂತ 200 ಕೋಟಿ ಬಳಕೆದಾರರನ್ನು ಹೊಂದಿದ್ದು,ಈ ಪೈಕಿ 40 ಕೋಟಿಗೂ ಅಧಿಕ ಜನರು ಭಾರತದಲ್ಲಿಯೇ ಇದ್ದಾರೆ.
“ವಾಟ್ಸ್‌ಆ್ಯಪ್ ತನ್ನ ಐಒಎಸ್ ಮತ್ತು ಆ್ಯಂಡ್ರಾಯ್ಡ್ ಬೀಟಾ ಬಳಕೆದಾರರಿಗಾಗಿ ಹೊಸ ಫೀಚರ್‌ವೊಂದನ್ನು ಶೀಘ್ರವೇ ಬಿಡುಗಡೆಗೊಳಿಸುತ್ತಿದ್ದು,ಗ್ರೂಪ್ ಕಾಲ್‌ಗಳಲ್ಲಿ ಭಾಗವಹಿಸುವವರಿಗೆ ಮಿತಿಯನ್ನು ಈಗಿನ ನಾಲ್ಕರಿಂದ ಎಂಟಕ್ಕೆ ಹೆಚ್ಚಿಸಲಿದೆ” ಎಂದು ವಾಟ್ಸ್‌ಆ್ಯಪ್‌ನ ಅಪ್‌ಡೇಟ್‌ಗಳ ಮೇಲೆ ನಿಗಾ ಇರಿಸುವ ಜಾಲತಾಣ ಡಬ್ಲ್ಯುಎಬೀಟಾಇನ್ಫೋ ಟ್ವೀಟಿಸಿದೆ.
ಈ ಸೌಲಭ್ಯವನ್ನು ಬಳಸಿಕೊಳ್ಳಲು ಬಳಕೆದಾರರು ಟೆಸ್ ಫ್ಲೈಟ್‌ನಿಂದ 2.20.50.25 ಐಒಎಸ್ ಬೀಟಾ ಅಪ್‌ಡೇಟ್‌ನ್ನು ಮತ್ತು ಗೂಗಲ್ ಪ್ಲೇ ಸ್ಟೋರ್‌ನಿಂದ 2.20.133 ಬೀಟಾ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಬೇಕಾಗುತ್ತದೆ. ಗ್ರೂಪ್ ಕಾಲ್‌ಗಳಲ್ಲಿ ಪಾಲ್ಗೊಳ್ಳುವ ಇತರರೂ ಇವೇ ಆವೃತ್ತಿಗಳನ್ನು ತಮ್ಮ ಸಾಧನಗಳಲ್ಲಿ ಹೊಂದಿರಬೇಕಾಗುತ್ತದೆ,ಇಲ್ಲದಿದ್ದರೆ ಅವರನ್ನು ಗ್ರೂಪ್ ಕಾಲ್‌ಗಳಲ್ಲಿ ಸೇರಿಸಲು ಸಾಧ್ಯವಾಗುವುದಿಲ್ಲ.
ಕಾಲ್‌ವೊಂದರಲ್ಲಿ ಆ್ಯಪಲ್‌ನ ಫೇಸ್‌ಟೈಮ್ ವೀಡಿಯೊ ಕಾಲಿಂಗ್ ಟೂಲ್ 32 ಜನರ ಪಾಲ್ಗೊಳ್ಳುವಿಕೆಗೆ ಮತ್ತು ಫೇಸ್‌ಬುಕ್ ಮೆಸೆಂಜರ್ 50 ಜನರವರೆಗೆ ಅವಕಾಶ ಕಲ್ಪಿಸುತ್ತಿವೆ.