ಶುಭ, ಅಶುಭಕ್ಕೆ ಶೋಭೆ ತರುತ್ತಿದ್ದ ಬ್ಯಾಂಡ್‍ಸೆಟ್ ತಂಡಗಳಿಗೀಗ ಬದುಕಿನದ್ದೆ ಚಿಂತೆ
ಬೆಂಗಳೂರು, ಎ.21: ತಂತ್ರಜ್ಞಾನ ಸಾಕಷ್ಟು ಪ್ರಗತಿಯನ್ನು ಕಂಡರು ಕೂಡ ಈಗಲೂ ಮದುವೆ ಸಮಾರಂಭ, ಕೆಲವು ಸಮುದಾಯಗಳಲ್ಲಿನ ಶುಭ ಕಾರ್ಯಗಳು ಹಾಗೂ ಶುಭ ಕಾರ್ಯವಲ್ಲದ ವ್ಯಕ್ತಿಯ ಅಂತ್ಯ ಸಂಸ್ಕಾರಕ್ಕೂ ಬ್ಯಾಂಡ್‍ಸೆಟ್ ತಂಡವನ್ನು ಕರೆಸಿ ಅವರಿಂದ ಜನಪ್ರಿಯ ಕನ್ನಡ, ಹಿಂದಿ, ತಮಿಳು, ತೆಲುಗು ಚಿತ್ರಗೀತೆಗಳು ಹಾಗೂ ಶೋಕಗೀತೆಗಳನ್ನು ನುಡಿಸುವಂತೆ ಹೇಳುತ್ತಾರೆ.
ಆದರೆ, ಕೊರೋನ ವೈರಸ್ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಮುಂಜಾಗ್ರತ ಕ್ರಮವಾಗಿ ಜಾರಿ ಮಾಡಿರುವ ಲಾಕ್‍ಡೌನ್ ಹಿನ್ನೆಲೆಯಲ್ಲಿ ನಗರದ ಬ್ಯಾಂಡ್‍ಸೆಟ್ ತಂಡದವರಿಗೆ ಕೆಲಸವಿಲ್ಲದಂತಾಗಿದ್ದು, ಮನೆಯಲ್ಲಿನ ದಿನಸಿಯೂ ಖಾಲಿ ಆಗಿ ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ಉದ್ಭವವಾಗಿದೆ.
ಬ್ಯಾಂಡ್‍ಸೆಟ್ ತಂಡದವರಿಗೆ ತಿಂಗಳಲ್ಲಿ 15 ರಿಂದ 20 ಕಾರ್ಯಕ್ರಮಗಳು ಸಿಕ್ಕೆ ಸಿಗುತ್ತವೆ. ಆದರೆ, ಲಾಕ್‍ಡೌನ್ ಹಿನ್ನೆಲೆಯಲ್ಲಿ ಒಂದೇ ಕಡೆಗೆ ಐದಾರು ಜನರು ಸೇರಬಾರದೆಂಬ ನಿಯಮ ಜಾರಿಯಿಂದಾಗಿ ಯಾವುದೇ ಕಾರ್ಯಕ್ರಮಕ್ಕೆ ನಮ್ಮನ್ನು ಕರೆಯುತ್ತಿಲ್ಲ. ಇದರಿಂದ, ನಮ್ಮ ಬ್ಯಾಂಡ್‍ಸೆಟ್ ಅಂಗಡಿಗಳನ್ನು ಸದ್ಯಕ್ಕೆ ಮುಚ್ಚಲಾಗಿದೆ. ಆದರೆ, ಕೈಯಲ್ಲಿ ಒಂದು ರೂಪಾಯಿ ಕೂಡ ಇಲ್ಲವಾಗಿದ್ದರಿಂದ ಪರಿಚಯದವರ ಬಳಿ ಸಾಲಕ್ಕೆ ಬೇಡಿಕೆಯನ್ನು ಇಟ್ಟಿದ್ದೇವೆ. ಅವರೂ ಲಾಕ್‍ಡೌನ್ ಹಿನ್ನೆಲೆಯಲ್ಲಿ ಹಣ ಕೊಡಲು ಮೀನಾಮೇಷ ಎಣಿಸುತ್ತಿದ್ದಾರೆ.
ಬ್ಯಾಂಡ್‍ಸೆಟ್ ಅಂಗಡಿಗಳು ಕಲಾಸಿಪಾಳ್ಯ ಹಾಗೂ ಮೈಸೂರು ರಸ್ತೆ(ರಾಯನ್ ಸರ್ಕಲ್ ಬಳಿ) ಸೇರಿ ನಗರದ ನಾನಾ ಭಾಗಗಳಲ್ಲಿ ಬ್ಯಾಂಡ್‍ಸೆಟ್ ಅಂಗಡಿಗಳಿವೆ. ಆದರೆ, ಇವರು ಇಲ್ಲಿಯವರೆಗೆ ಯಾವುದೇ ಒಂದು ಸಂಘವನ್ನು ಕಟ್ಟಿಕೊಂಡಿಲ್ಲ. ಸರಕಾರ ಕೂಡ ಇವರಿಗೆ ಇಲ್ಲಿಯವರೆಗೆ ಯಾವುದೇ ಸಹಾಯಹಸ್ತವನ್ನೂ ಚಾಚಿಲ್ಲ.
ಲಾಕ್‍ಡೌನ್ ಮೊದಲೇ ಸಾಲ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಬ್ಯಾಂಡ್‍ಸೆಟ್ ತಂಡದ ಸದಸ್ಯರು ಲಾಕ್‍ಡೌನ್ ಜಾರಿಯಾದ ಬಳಿಕ ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಾಕ್‍ಡೌನ್ ಮುಗಿಯುವತನಕವಾದರೂ ಬೇರೆ ಕೆಲಸಕ್ಕೆ ಹೋಗೋಣವೆಂದರೆ ಅದಕ್ಕೂ ಸಾಧ್ಯವಿಲ್ಲದಂತಾಗಿದೆ ಇವರ ಪರಿಸ್ಥಿತಿಗಳು.
ಸಾಮಾನ್ಯವಾಗಿ ಮದುವೆ ಕಾರ್ಯಕ್ರಮಕ್ಕೆ 15 ಜನರಿರುವ ಬ್ಯಾಂಡ್‍ಸೆಟ್ ತಂಡವೊಂದು ಹೋಗಿ ಜನಪ್ರಿಯ ಗೀತೆಗಳನ್ನು ನುಡಿಸಿ ಬಂದರೆ 8 ರಿಂದ 10 ಸಾವಿರ ರೂ.ಸಂಭಾವನೆ ಪಡೆಯುತ್ತಾರೆ. ಅದೇ ಸಾವು ಸಂಭವಿಸಿದಾಗ ನಾಲ್ವರು ಇರುವ ಬ್ಯಾಂಡ್‍ಸೆಟ್ ತಂಡ ಹೋಗಿ ಶೋಕಗೀತೆ ನುಡಿಸಿ, 5 ರಿಂದ 6 ಸಾವಿರ ರೂ.ಸಂಭಾವನೆ ಪಡೆಯುತ್ತಾರೆ ಎನ್ನುತ್ತಾರೆ ಕಲಾಸಿಪಾಳ್ಯದ ನ್ಯೂ ನೆಹರು ಬ್ಯಾಂಡ್‍ಸೆಟ್‍ನ ಮಾಲಕ ಅಶೋಕ್ ಅವರು.
ತಮ್ಮ ತಾತನ ಕಾಲದಿಂದಲೂ ಬ್ಯಾಂಡ್‍ಸೆಟ್ ವೃತ್ತಿ ಕಸುಬಾಗಿ ಬಂದಿದೆ ಎನ್ನುವ ಅಶೋಕ್, ತಮ್ಮ ತಂಡದಲ್ಲಿರುವವರು ಯಾರೂ ಓದಿದವರಲ್ಲ ಅಥವಾ ಯಾವುದೇ ತರಬೇತಿ ಪಡೆದವರಲ್ಲ. ತಂಡದೊಂದಿಗಿದ್ದೆ ಈ ವಿದ್ಯೆ ಕಲಿಯಲಾಗುತ್ತದೆ. ಸಂಘಟನೆ ದೃಷ್ಟಿಯಿಂದ ನಾವು ತುಂಬಾ ಹಿಂದಿದ್ದೇವೆ. ಅಧಿಕೃತವಾಗಿ ಯಾವುದೇ ಸಂಘವಿಲ್ಲ. ಹೀಗಾಗಿ, ನಮ್ಮ ಸಮಸ್ಯೆಗಳ ಕಡೆ ಲಾಕ್‍ಡೌನ್ ಸಂದರ್ಭದಲ್ಲೂ ಸರಕಾರವೂ ಗಮನ ಹರಿಸುತ್ತಿಲ್ಲ ಎಂದು ನೊಂದು ನುಡಿಯುತ್ತಾರೆ.
ಲಾಕ್‍ಡೌನ್ ಜಾರಿಯಾಗುವ ಮೊದಲು ಬೆಂಗಳೂರು ನಗರವಲ್ಲದೇ ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳ ರಾಜ್ಯಕ್ಕೂ ತೆರಳಿ ಕಾರ್ಯಕ್ರಮ ನೀಡುತ್ತಿದ್ದೆವು. ಸಾಮಾನ್ಯವಾಗಿ ಬ್ಯಾಂಡ್‍ಸೆಟ್‍ನಲ್ಲಿರುವ ಪ್ರತಿ ಸದಸ್ಯನಿಗೆ ಒಂದು ಕಾರ್ಯಕ್ರಮಕ್ಕೆ 600 ರಿಂದ 700 ರೂ.ಸಂಭಾವನೆ ನೀಡಲಾಗುತ್ತಿತ್ತು. ಹಿರಿತನ ಮತ್ತು ಅನುಭವದ ಆಧಾರದ ಮೇಲೂ ಸಂಭಾವನೆ ನೀಡಲಾಗುತ್ತಿತ್ತು. ಬ್ಯಾಂಡ್‍ಸೆಟ್ ತಂಡ ಫ್ಲೂಟು, ಕ್ಲಾರಿನೆಟ್, ಬ್ಯಾಸೂನ್, ಟ್ರಪೆಂಟ್, ಸ್ಯಾಕ್ಸೋಫೋನು, ಡೋಲು, ನಾದಸ್ವರ ಇತರ ಸಂಗೀತದ ಉಪಕರಣಗಳನ್ನು ಬಳಸುತ್ತದೆ.
‘ಜೀವನಾವಶ್ಯಕ ಪದಾರ್ಥಗಳ ಬೆಲೆಗಳು ಗಗನಕ್ಕೆ ಏರುತ್ತಿರುವ ಇಂದಿನ ದಿನಗಳಲ್ಲಿ, ಬೇರೆ ವೃತ್ತಿ ತಿಳಿಯದೆ, ಅಸಂಘಟಿತ ಕಾರ್ಮಿಕರಂತೆ ಇರುವ ಬ್ಯಾಂಡ್‍ಸೆಟ್ ವಾದಕರ ಜೀವನ ಸುಧಾರಣೆಗೆ ಸರಕಾರ ಗಮನಹರಿಸುವುದು ಅನಿವಾರ್ಯ ಹಾಗೂ ಅಗತ್ಯವಾಗಿದೆ. ಕೇಂದ್ರ ಸರಕಾರ ಲಾಕ್‍ಡೌನ್ ಜಾರಿಮಾಡಿದ್ದರಿಂದ ನಾವು ಆರ್ಥಿಕ ಶಕ್ತಿಯನ್ನೆ ಕಳೆದುಕೊಂಡಿದ್ದೇವೆ.’
-ಅಶೋಕ್, ಮಾಲಕ, ನ್ಯೂ ನೆಹರು ಬ್ಯಾಂಡ್‍ಸೆಟ್