ಎಚ್ಚರ....ಲಾಕ್ಡೌನ್ ನಡುವೆ ಸಕ್ರಿಯವಾಗಿದೆ ಮಕ್ಕಳು, ಬಡವರ ಹೆಸರಲ್ಲಿ ಹಣ ವಸೂಲಿ ಜಾಲ !
ವಿದ್ಯಾಭ್ಯಾಸದ ಹೆಸರಲ್ಲೂ ಚಂದಾ
ಸಾಂದರ್ಭಿಕ ಚಿತ್ರ
ಬೆಂಗಳೂರು, ಎ.22: ಲಾಕ್ಡೌನ್ ಸಂದರ್ಭವನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ದುಷ್ಕರ್ಮಿಗಳು, ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಜಾಹೀರಾತು ಪ್ರಕಟಿಸಿ ಚಂದಾ ರೂಪದಲ್ಲಿ ಹಣ ವಸೂಲಿ ಮಾಡುವ ಜಾಲವೊಂದು ತಲೆ ಎತ್ತಿದ್ದು, ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ಪೊಲೀಸರು ಹಾಗೂ ಮಕ್ಕಳ ಕಲ್ಯಾಣ ಸಮಿತಿ ಹೇಳಿದೆ.
ಅನಾಥ ಮಕ್ಕಳಿಗೆ ಆಹಾರ, ದಿನಸಿ ಸಮಸ್ಯೆ ಇದೆ ಹಾಗೂ ಬಡವರಿಗೆ ಸಹಾಯ ಮಾಡುವ ನೆಪದಲ್ಲಿ ಹಣ ಸಂಗ್ರಹಿಸುವ ಜಾಲ ರಾಜ್ಯಾದ್ಯಂತ ಸಕ್ರಿಯವಾಗಿದ್ದು, ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿವೆ. ಫೇಸ್ಬುಕ್, ಟ್ವಿಟ್ಟರ್, ವಾಟ್ಸ್ ಆ್ಯಪ್ನಲ್ಲಿ ಜಾಹೀರಾತು ನೀಡುತ್ತಿದ್ದಾರೆ.
ಅಷ್ಟೇ ಅಲ್ಲದೆ, ಅನಾಥ ಮಕ್ಕಳು ಹಸಿವಿನಿಂದ ಬಳಲುತ್ತಿದ್ದಾರೆ. ಅವರ ಸಹಾಯಕ್ಕೆ ಮುಂದಾಗಬೇಕೆಂದು ವೈಯಕ್ತಿಕ ಬ್ಯಾಂಕ್ ಖಾತೆ ಸಂಖ್ಯೆ ಪೋಸ್ಟ್ ಮಾಡಿ ಹಣ ವಸೂಲಿ ಮಾಡುತ್ತಿದ್ದಾರೆ. ಇಂಥವರ ಬಗ್ಗೆ ಎಚ್ಚರಿಕೆ ವಹಿಸಬೇಕು. ಜೊತೆಗೆ ದೂರು ಸಹ ನೀಡಬೇಕು ಎನ್ನುತ್ತಾರೆ ಹಿರಿಯ ಪೊಲೀಸ್ ಅಧಿಕಾರಿಗಳು.
ವಿದ್ಯಾಭ್ಯಾಸಕ್ಕೂ ಚಂದಾ: ಸಹಾಯ ಮಾಡುವವರು ಒಬ್ಬರಿಗೆ ಕನಿಷ್ಟ 1 ಸಾವಿರ ರೂ. ಸಂದಾಯ ಮಾಡುವಂತೆ ವಿನಂತಿಸುತ್ತಾರೆ. ಈಗಾಗಲೇ ಹಲವರು ವೈಯಕ್ತಿಕ ಖಾತೆಗಳಿಗೆ ಹಣ ಪಡೆದಿರುವುದು ಬಯಲಿಗೆ ಬಂದಿದೆ. ಬಹುಪಾಲು ಮಕ್ಕಳ ಅನುಸರಣ ಸಂಸ್ಥೆಗಳು ಸೋಷಿಯಲ್ ಮೀಡಿಯಾ, ಟೆಲಿಫೋನ್ ಕರೆಗಳ ಮುಖಾಂತರ ತಮ್ಮಲ್ಲಿರುವ ಅನಾಥ ಮಕ್ಕಳಿಗೆ ದಿನಸಿಗಳು ಇಲ್ಲ. ವಿದ್ಯಾಭ್ಯಾಸಕ್ಕೆ ಒಂದು ವರ್ಷಕ್ಕಿಷ್ಟು ಎಂತಲೂ ಚಂದಾ ಎತ್ತುತ್ತಿರುವ ವಿಷಯವೂ ಸಹ ಮಕ್ಕಳ ಕಲ್ಯಾಣ ಸಮಿತಿಯ ಗಮನಕ್ಕೆ ಬಂದಿದೆ.
ಆಯೋಗಕ್ಕೆ ದೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವಿಭಾಗ, ಮಕ್ಕಳ ಕಲ್ಯಾಣ ಸಮಿತಿ ಹಾಗೂ ಜಿಲ್ಲಾ ಮಕ್ಕಳ ಸಂರಕ್ಷಣಾ ಅಧಿಕಾರಿಗಳ ಗಮನಕ್ಕೆ ಬಾರದೆ ಯಾವುದೇ ಸಂಸ್ಥೆಯು ಅನಾಥ ಮಕ್ಕಳ ರಕ್ಷಣೆ ಮತ್ತು ಪೋಷಣೆ ಮಾಡುವುದು ಕಾನೂನು ರೀತಿ ಅಪರಾಧ. ಯಾರಾದರೂ ಮಕ್ಕಳ ಹೆಸರಿನಲ್ಲಿ ಹಣ ಕೇಳಿದರೆ ಕೂಡಲೇ ಸಮಿತಿ ಅಥವಾ ಮಕ್ಕಳ ಹಕ್ಕುಗಳ ಆಯೋಗಕ್ಕೆ ದೂರು ನೀಡಬಹುದು. ಹೆಚ್ಚಿನ ವಿವರಗಳಿಗೆ ಸಹಾಯವಾಣಿ ಸಂಖ್ಯೆ- 1098 ಅಥವಾ ದೂ. 080-26560273 ಸಂಪರ್ಕಿಸಬಹುದು.
ಸುಳ್ಳು ವದಂತಿ: ಎಚ್ಚರಿಕೆ
ಕೊರೋನ ಸೋಂಕು ಹಿನ್ನೆಲೆ ಲಾಕ್ಡೌನ್ ಆಗಿದೆ. ಆದರೆ, ಅನಾಥ ಮಕ್ಕಳು ಹಸಿವಿನಿಂದ ಬಳಲುತ್ತಿದ್ದಾರೆ ದಯವಿಟ್ಟು ಸಹಾಯಕ್ಕೆ ಮುಂದಾಗಿ ಎಂದು ಸುರಕ್ಷಾ ಟ್ರಸ್ಟ್ ಎಂಬುವವರು ದೇಣಿಗೆ ಕೇಳಿದ್ದಾರೆ. ಈ ರೀತಿಯ ಕೋರಿಕೆ ನಿಮ್ಮ ಗಮನಕ್ಕೆ ಬಂದರೆ ಕೂಡಲೇ ಸರಕಾರದ ಗಮನಕ್ಕೆ ತನ್ನಿ ಇಲ್ಲವೇ ಮಕ್ಕಳ ಸಹಾಯವಾಣಿ ಸಂಖ್ಯೆ 1098ಗೆ ಕರೆ ಮಾಡಿ ಮಕ್ಕಳ ಕಲ್ಯಾಣ ಸಮಿತಿಗೆ ತಿಳಿಸುವಂತೆ ಹೇಳಿ ಅಥವಾ ವೈಯಕ್ತಿಕವಾಗಿ ಸಂದೇಶ ಕಳಿಸಬಹುದೆಂದು ಸ್ವತಃ ಮಕ್ಕಳ ಕಲ್ಯಾಣ ಸಮಿತಿಯ ಬೆಂಗಳೂರು ವಿಭಾಗದ ಅಧ್ಯಕ್ಷೆ ಅಂಜಲಿ ರಾಮಣ್ಣ ತಮ್ಮ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
ನೋಂದಣಿ ಹೊಂದಿದ, ನೋಂದಣಿ ಇಲ್ಲದಿರುವ ಸಂಘ ಸಂಸ್ಥೆಗಳು ಅನಾಥ ಮಕ್ಕಳ ಹೆಸರಿನಲ್ಲಿ ಈ ರೀತಿ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ ಅವರ ವಿರುದ್ಧ ಕ್ರಮ ಜರುಗಿಸಲಾಗಿದೆ. ನಿಮ್ಮ ಗಮನಕ್ಕೂ ಬಂದರೆ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ತಿಳಿಸಿ ಕ್ರಮ ಜರುಗಿಸಲಾಗುವುದು.
-ಅಂಜಲಿ ರಾಮಣ್ಣ, ಅಧ್ಯಕ್ಷೆ, ಮಕ್ಕಳ ಕಲ್ಯಾಣ ಸಮಿತಿ (ಬೆಂಗಳೂರು ವಿಭಾಗ)