ಕೆಸಿಎಫ್ ವತಿಯಿಂದ ಅನಿವಾಸಿ ಕನ್ನಡಿಗರಿಗೆ ದಿನಸಿ ಕಿಟ್, ವೈದ್ಯಕೀಯ ಸೇವೆ
ದುಬೈ : ಯುಎಇ ಸೇರಿದಂತೆ ವಿಶ್ವವೇ ಕೊವಿಡ್ 19 ನಿಂದ ತತ್ತರಿಸಿ ಹೋಗಿದೆ. ರೋಗ ಹರಡುವುದನ್ನು ತಡೆಗಟ್ಟಲು ಇಲ್ಲಿನ ಸರಕಾರ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು, ಬಹುತೇಕ ಕಂಪೆನಿಗಳು ಹಾಗೂ ಇನ್ನಿತರ ಸಂಸ್ಥೆಗಳು ಕಾರ್ಯಚಟುವಟಿಕೆಗಳನ್ನು ಸ್ಥಗಿತಗೊಳಿಸಿದೆ.
ಕಾರ್ಮಿಕರು ಹಾಗೂ ಇನ್ನಿತರ ಉದ್ಯೋಗಿಗಳು ಕೆಲಸವಿಲ್ಲದೆ ತಮ್ಮ ಕೊಠಡಿಗಳಲ್ಲಿ ದಿನದೂಡುತ್ತಿದ್ದು, ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಸಂತ್ರಸ್ತರ ಪಾಲಿಗೆ ನೆರವಾಗುತ್ತಿದೆ. ಊಟ ಹಾಗೂ ಒಪ್ಪೊತ್ತಿನ ಆಹಾರಕ್ಕೆ ಪರದಾಡುತ್ತಿರುವವರಿಗೆ ಸಕಲ ಸಾಮಗ್ರಿಗಳನ್ನೊಳಗೊಂಡ ಒಂದು ತಿಂಗಳ ಮಟ್ಟಿನ ದಿನಸಿ ಕಿಟ್‍ನ್ನು ವಿತರಿಸಲಾಗುತ್ತಿದೆ. ಇದುವರೆಗೆ 1500ಕ್ಕಿಂತಲೂ ಹೆಚ್ಚಿನ ಕಿಟ್‍ಗಳನ್ನು ಈ ಸಂಬಂಧ ಹಂಚಲಾಗಿದೆ ಎಂದು ಸಂಘಟನೆಯ ಸಾಂತ್ವಾನ ವಿಭಾಗದ ರಾಷ್ಟ್ರೀಯ ಅಧ್ಯಕ್ಷ ಝೈನುದ್ದೀನ್ ಹಾಜಿ ಬೆಳ್ಳಾರೆ ಮಾಹಿತಿ ನೀಡಿದ್ದಾರೆ.
ಸಂಕಷ್ಟಕ್ಕೊಳಗಾದ ಪ್ರವಾಸಿಗರನ್ನು ಊರಿಗೆ ತಲುಪಿಸುವ ಸಂಬಂಧ ಸರಕಾರಕ್ಕೆ ಒತ್ತಡ ಹಾಕಲಾಗುತ್ತಿದ್ದು, ಆದ್ಯತೆಯ ಆಧಾರದ ಮೇಲೆ ಅನಿವಾರ್ಯವಾಗಿ ಊರಿಗೆ ತಲುಪಲೇಬೇಕಾದವರ ಮಾಹಿತಿಗಳನ್ನೂ ಕಲೆಹಾಕಿ ಸರಕಾರಕ್ಕೆ ಕಳುಹಿಸಿಕೊಡಲು ಸಿದ್ಧತೆಗಳು ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ. ಕರ್ನಾಟಕದ ಸಂತ್ರಸ್ತ ಪ್ರವಾಸಿಗರಿಗೆ ವಿಮಾನದ ಟಿಕೆಟ್‍ನ ವ್ಯವಸ್ಥೆಯನ್ನು ಮಾಡಿಕೊಡುವಂತೆ ಕೇಂದ್ರಕ್ಕೆ ಒತ್ತಡ ಹೇರುವಂತೆ ರಾಜ್ಯ ಸರಕಾರವನ್ನು ಅವರು ವಿನಂತಿಸಿಕೊಂಡಿದ್ದಾರೆ.
ಯುಎಇ ಪ್ರವಾಸಿಗಳಲ್ಲಿ ಶೇ.80ಕ್ಕಿಂತಲೂ ಹೆಚ್ಚು ಮಂದಿ ಬ್ಯಾಚುಲರ್ ಆಗಿ ಒಂದೇ ರೂಮಿನಲ್ಲಿ ವಾಸಿಸುತ್ತಿರುವುದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿದ್ದು, ಅವರನ್ನು ಬೇರೆ ಬೇರೆ ಸುರಕ್ಷಿತ ಕೊಠಡಿಗಳಿಗೆ ಸ್ಥಳಾಂತರಿಸಿ ಸಾಮಾಜಿಕ ಅಂತರ ಕಾಪಾಡುವ ಪ್ರಕ್ರಿಯೆಯಲ್ಲಿಯೂ ಕೆಸಿಎಫ್ ಹಲವು ರೀತಿಯಲ್ಲಿ ಇಲ್ಲಿನ ಸರಕಾರ ಹಾಗೂ ಮತ್ತಿತರ ಸಂಘಸಂಸ್ಥೆಗಳೊಂದಿಗೆ ಕೈಜೋಡಿಸಿ ಕೆಲಸ ನಿರ್ವಹಿಸುತ್ತಿದೆ. ವಿಸಿಟಿಂಗ್ ವೀಸಾಗಳಲ್ಲಿ ಊರಿನಿಂದ ಕೆಲಸ ಅರಸಿಕೊಂಡು ಬಂದಂತಹ ಜನರಿಗೆ ಸಹಾಯಹಸ್ತ ಚಾಚುವ ಮೂಲಕ ಕೆಸಿಎಫ್ ಸಂಜೀವಿನಿಯಂತಾಗಿದ್ದು, ನೊಂದವರ ಪ್ರಶಂಸೆಗೆ ಪಾತ್ರವಾಗಿದೆ. ಔಷಧಿ, ಮಾಸ್ಕ್ ಹಾಗೂ ಇನ್ನಿತರ ಪರಿಕರಗಳನ್ನೂ ಅರ್ಹರಿಗೆ ತಲುಪಿಸಿಕೊಡುವ ಕಾರ್ಯದಲ್ಲಿಯೂ ಸಂಘಟನೆ ಮುಂಚೂಣಿಯಲ್ಲಿದೆ ಎಂದು ಹೇಳಿದ್ದಾರೆ.
ಅಬುಧಾಬಿ, ದುಬೈ, ಶಾರ್ಜಾ, ಅಜ್ಮಾನ್, ರಾಸ್ ಅಲ್ ಖೈಮಾ, ಉಮ್ಮುಲ್ ಖುವೈನ್ ಹಾಗೂ ಫುಜೈರಾ ಸೇರಿದಂತೆ ಯುಎಇಯ ಎಲ್ಲಾ ಭಾಗಗಳಿಗೂ ಸಂಘಟನೆಯ ಸಾಂತ್ವಾನ ಪ್ರಕ್ರಿಯೆ ವ್ಯಾಪಿಸಿದ್ದು, ತಳಮಟ್ಟದ ಸ್ವಯಂಸೇವಕರ ಮೂಲಕ ಅರ್ಹರಿಗೆ ಕಿಟ್‍ನ್ನು ಒದಗಿಸಿಕೊಡು ವಂತಹ ಕಾರ್ಯ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿರುವುದು ನೊಂದ ಪ್ರವಾಸಿಗರಿಗೆ ಸಮಾಧಾನ ತರಿಸಿದೆ ಎಂದರು.
''ಮಾನವೀಯ ಚಟುವಟಿಕೆಗಳಲ್ಲಿ ಕೆಸಿಎಫ್ ಅತ್ಯಂತ ಸಕ್ರಿಯವಾಗಿದೆ ಎಂಬ ಮಾಹಿತಿ ನನ್ನ ಕೆಲವೊಂದು ಸ್ನೇಹಿತರಿಂದ ಹಾಗೂ ಸುದ್ದಿಮಾಧ್ಯಮ ಗಳ ಮೂಲಕ ತಿಳಿಯಿತು. ಇಂತಹ ಕಾರ್ಯಚಟುವಟಿಕೆಯಲ್ಲಿ ನಿಮ್ಮೊಂದಿಗೆ ಸಹಭಾಗಿಯಾಗಲು ನನಗೆ ಹೆಮ್ಮೆಯಿದೆ. ಅಗತ್ಯ ಬಿದ್ದಲ್ಲಿ ಹೆಚ್ಚಿನ ನೆರವಿಗೆ ನಾನು ಸದಾ ಸಿದ್ಧ''
- ಅನ್ನಾಪೌಲ್, ಬ್ರೆಝಿಲ್ ಸಂಜಾತೆ ಯುಎಇ ಉದ್ಯಮಿ
''ನನಗೆ ಅತ್ಯಗತ್ಯವಾಗಿ ಬೇಕಾದಂತಹ ಔಷಧಿ ಪರಿಕರಗಳನ್ನು ಈ ಸಂಕಷ್ಟದ ಸಮಯದಲ್ಲಿ ನನ್ನ ಕೊಠಡಿಯ ಬಾಗಿಲಿಗೆ ಬೆಳ್ಳಂಬೆಳಗ್ಗೆ ತಲುಪಿಸಿಕೊಟ್ಟ ಕಾರ್ಯಕರ್ತರ ಸೇವೆಗೆ ಹೇಗೆ ಆಭಾರಿಯಾಗಬೇಕು ಎಂದು ನನಗೆ ತಿಳಿಯುತ್ತಿಲ್ಲ. ಹಣಪಾವತಿಸಿದರೂ ಕ್ಲಪ್ತ ಸಮಯದಲ್ಲಿ ನಮ್ಮ ಕೈಗೆ ಬಂದು ತಲುಪದಂತಹ ಈ ಔಷಧಿಗಳನ್ನು ಕೇಳಿದ ಮರುಕ್ಷಣದಲ್ಲಿಯೇ ನನಗೆ ತಲುಪಿಸಿದ ಸಂಘಟನೆಯ ಕಾರ್ಯವೈಖರಿ ಅವರ್ಣನೀಯ''
- ಉಮ್ಮರ್ ಕಾಪು, ಸಂತ್ರಸ್ತ
''ಇದುವರೆಗೆ 1500ಕ್ಕಿಂತಲೂ ಹೆಚ್ಚಿನ ಕಿಟ್‍ಗಳನ್ನು ವಿತರಿಸಲಾಗಿದೆ. ಕೆಲವೊಂದು ಪ್ರದೇಶಗಳಲ್ಲಿ ಮಹಿಳೆಯರು ಮಾತ್ರ ವಾಸಿಸುತ್ತಿದ್ದು, ಲಾಕ್‍ಡೌನ್ ಕಾರಣ ಮನೆಯಿಂದ ಹೊರಬರಲು ಅವರಿಗೆ ಸಾಧ್ಯವಾಗುತ್ತಿಲ್ಲ. ಅಂತವರನ್ನು ಪ್ರತ್ಯೇಕವಾಗಿ ಪರಿಗಣಿಸಿ ಪೊಲೀಸರ ಅನುಮತಿಯ ಮೇರೆಗೆ ಅವರಿಗೆ ಕಿಟ್‍ಗಳನ್ನು ತಲುಪಿಸಿದ್ದೇವೆ. ವಿಸಿಟಿಂಗ್‍ನಲ್ಲಿ ಬಂದವರಿಗೆ ವಿಶೇಷ ಕಾಳಜಿಯನ್ನು ನೀಡಲಾಗುತ್ತಿದ್ದು, ಕಿಟ್‍ನ ಜೊತೆ ಅವರು ವಾಸಿಸುವ ಕಟ್ಟಡಗಳ ಮಾಲಕರಲ್ಲಿ ಬಾಡಿಗೆ ಹಾಗೂ ವಿದ್ಯುತ್ ಬಿಲ್‍ನ್ನು ಮನ್ನಾ ಮಾಡುವಂತೆ ಕೋರಲಾಗಿದೆ. ಒಂದು ಕೊಠಡಿಯಲ್ಲಿ 10 ಮಂದಿಯಿದ್ದರೆ ಪ್ರತಿಯೊಬ್ಬರಿಗೂ ನಾವು ಕಿಟ್ ಕೊಡುತ್ತಿದ್ದೇವೆ. ಇಲ್ಲಿನ ವಿವಿಧ ಮಾಧ್ಯಮಗಳ ಮೂಲಕ ನಮ್ಮ ಕಾರ್ಯವೈಖರಿಯನ್ನು ತಿಳಿದು ನಮ್ಮನ್ನು ಸಂಪರ್ಕಿಸಿದ ತಮಿಳುನಾಡು, ಕೇರಳ ಸೇರಿದಂತೆ ದೇಶದ ವಿವಿಧ ಭಾಗದ ಕಾರ್ಮಿಕರಿಗೆ ಲೇಬರ್ ಕ್ಯಾಂಪ್‍ಗೆ ತೆರಳಿ ಕಿಟ್‍ಗಳನ್ನು ವಿತರಿಸಿದ್ದೇವೆ''
- ಝೈನುದ್ದೀನ್ ಹಾಜಿ ಬೆಳ್ಳಾರೆ, ಅಧ್ಯಕ್ಷರು ಕೆಸಿಎಫ್ ಯುಎಇ ಸಾಂತ್ವಾನ ಸಮಿತಿ ಅಧ್ಯಕ್ಷ
''ಕೆಲಸವಿಲ್ಲದೆ ಸುಮಾರು ಒಂದು ತಿಂಗಳಾಗುತ್ತಾ ಬಂದಿದೆ. ಊಟ ಹಾಗೂ ದೈನಂದಿನ ಖರ್ಚಿಗೆ ಏನು ಮಾಡಬೇಕು ಎಂದು ದಿಕ್ಕುತೋಚದ ಇಂತಹ ಸಂದರ್ಭದಲ್ಲಿ ನಮಗೆ ಅರಿಯದೆಯೇ ನಮ್ಮ ಕೊಠಡಿಗೆ ನಮ್ಮನ್ನು ಅನ್ವೇಷಿಸಿ ಬಂದು ದಿನಸಿ ಕಿಟ್‍ಗಳನ್ನು ಕೊಟ್ಟ ಕೆಸಿಎಫ್‍ನ್ನು ನಾನು ಅಭಿನಂದಿಸುತ್ತೇನೆ''
- ರಮೇಶ್ ಮಂಗಳೂರು, ಸಂತ್ರಸ್ತ