ಕೊರೋನ ವಿರುದ್ಧದ ಹೋರಾಟಕ್ಕೆ ಕೇಂದ್ರದಿಂದ ಯಾವುದೇ ಸಹಾಯ ದೊರಕಿಲ್ಲ: ಪುದುಚೇರಿ ಸಿಎಂ
“ಜಿಎಸ್‍ಟಿಯ 600 ಕೋಟಿ ರೂ. ಕೂಡ ನೀಡಿಲ್ಲ”
ಪುದುಚ್ಚೇರಿ: ಕೊರೋನವೈರಸ್ ವಿರುದ್ಧದ ಹೋರಾಟಕ್ಕೆ ಕೇಂದ್ರ ಸರಕಾರದಿಂದ ಪುದುಚೇರಿ ಯಾವುದೇ ಸಹಾಯ ದೊರಕಿಲ್ಲ ಎಂದು ಮುಖ್ಯಮಂತ್ರಿ ವಿ. ನಾರಾಯಣಸಾಮಿ ಹೇಳಿದ್ದಾರೆ.
“ಭಾರತ ಸರಕಾರ ನಮಗೆ ಯಾವ ಸಹಾಯವನ್ನೂ ಮಾಡಿಲ್ಲ. ಇಂತಹ ಸನ್ನಿವೇಶದಲ್ಲಿ ರಾಜ್ಯ ಹೇಗೆ ಬದುಕುಳಿಯಬಹುದು ? ನಾವೇನು ವೈರಿಗಳಲ್ಲ, ಬದಲು ಜತೆಯಾಗಿ ಕೆಲಸ ಮಾಡಬೇಕಿದೆ'' ಎಂದು ಮುಖ್ಯಮಂತ್ರಿ ಗುರುವಾರ ಟ್ವೀಟ್ ಮಾಡಿದ್ದಾರೆ.
"ನಾವು ಪ್ರತಿಯೊಂದು ಕುಟುಂಬಕ್ಕೆ ರೂ 2,000 ನೀಡಿದ್ದೇವೆ, ಪ್ರತಿ ರೈತನಿಗೆ ರೂ 5,000, ನಿರ್ಮಾಣ ಕಾರ್ಮಿಕರಿಗೆ ರೂ 2,000 ಹಾಗೂ ಪ್ರತಿ ಮಹಿಳಾ ಸ್ವಸಹಾಯ ಗುಂಪಿಗೆ ರೂ 10,000 ನೀಡಿದ್ದೇವೆ. ಆದರೆ ಭಾರತ ಸರಕಾರ ಜಿಎಸ್‍ಟಿಯ ರೂ 600 ಕೋಟಿ ಹಾಗೂ ವಿತ್ತ ಆಯೋಗದಿಂದ ರಾಜ್ಯಕ್ಕೆ ಬರಬೇಕಾದ ರೂ 2,200 ಕೋಟಿ ಒದಗಿಸಿಲ್ಲ'' ಎಂದೂ ನಾರಾಯಣಸಾಮಿ ಬರೆದಿದ್ದಾರೆ.
ತಾವು, ತಮ್ಮ ಸಚಿವ ಸಹೋದ್ಯೋಗಿಗಳು ಹಾಗೂ ಸ್ಪೀಕರ್ ಗುರುವಾರ ಕೊರೋನ ವೈರಸ್ ಪರೀಕ್ಷೆಗೊಳಗಾಗಿದ್ದಾಗಿ ಅವರು ಹೇಳಿದ್ದಾರೆ.
Govt of India has not given any assistance to us. How will the State survive in times of crisis? We are not the enemies but have to act and work together.#Covid_19india #Corona
— V.Narayanasamy (@VNarayanasami) April 23, 2020