ಭಾರತದಲ್ಲಿ ಒಂದೇ ದಿನ 1755 ಮಂದಿಗೆ ಕೊರೋನ ವೈರಸ್ ದೃಢ !
ಹೊಸದಿಲ್ಲಿ: ದೇಶಾದ್ಯಂತ ಲಾಕ್ಡೌನ್ ಜಾರಿಯಲ್ಲಿರುವ ಮಧ್ಯೆಯೇ ಒಂದೇ ದಿನದಲ್ಲಿ 1755 ಕೊರೋನ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿದೆ. ದೇಶದಲ್ಲಿ ಈ ವೈರಾಣು ಕಾಣಿಸಿಕೊಂಡ ಬಳಿಕ ಗರಿಷ್ಠ ಸಂಖ್ಯೆಯ ಪ್ರಕರಣಗಳು ಗುರುವಾರ ದಾಖಲಾಗಿವೆ. ಮಹಾರಾಷ್ಟ್ರದಲ್ಲಿ ಸಾಂಕ್ರಾಮಿಕ ಆತಂಕಕಾರಿ ಪ್ರಮಾಣದಲ್ಲಿ ಹರಡುತ್ತಿದ್ದು, 778 ಮಂದಿಗೆ ಒಂದೇ ದಿನ ಸೋಂಕು ತಗುಲಿದೆ.
ರಾಜ್ಯಗಳಿಂದ ಕ್ರೋಢೀಕರಿಸಿದ ಅಂಕಿ ಅಂಶಗಳ ಪ್ರಕಾರ, ಒಟ್ಟು ಸೋಂಕಿತರ ಸಂಖ್ಯೆ 21,358 ರಿಂದ 23,113ಕ್ಕೇರಿದೆ. ಹಿಂದಿನ ದಿನಕ್ಕೆ ಹೋಲಿಸಿದರೆ ಪ್ರಕರಣಗಳ ಸಂಖ್ಯೆ ಒಂದೇ ದಿನದಲ್ಲಿ ಶೇಕಡ 8.2ರಷ್ಟು ಹೆಚ್ಚಳವಾಗಿದೆ. ಮುಂಬೈ ಮಹಾನಗರದಲ್ಲಿ ಒಂದೇ ದಿನ 552 ಪ್ರಕರಣಗಳು ಪತ್ತೆಯಾಗಿವೆ. ದೇಶದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 686ಕ್ಕೇರಿದೆ.
ಗುಜರಾತ್ ಹಾಗೂ ಮಧ್ಯಪ್ರದೇಶದಲ್ಲೂ ಹೆಚ್ಚಿನ ಪ್ರಕರಣಗಳು ಬೆಳಕಿಗೆ ಬಂದಿದ್ದು, ಕ್ರಮವಾಗಿ 217 ಹಾಗೂ 184 ಪ್ರಕರಣಗಳು ದಾಖಲಾಗಿವೆ. ಕೆಲ ದಿನಗಳಿಂದ ಕಡಿಮೆ ಪ್ರಕರಣಗಳು ವರದಿಯಾದ ದೆಹಲಿಯಲ್ಲೂ ಸಂಖ್ಯೆ ಏರಿದ್ದು, ಗುರುವಾರ 128 ಹೊಸ ಪ್ರಕರಣಗಳು ದೃಢಪಟ್ಟಿವೆ.
ಮಹಾರಾಷ್ಟ್ರದಲ್ಲಿ 14, ಗುಜರಾತ್ನಲ್ಲಿ 9, ಮಧ್ಯಪ್ರದೇಶದಲ್ಲಿ 5 ಹಾಗೂ ಉತ್ತರ ಪ್ರದೇಶದಲ್ಲಿ 4 ಮಂದಿ ಸೇರಿ ಗುರುವಾರ ಒಟ್ಟು 43 ಕೋವಿಡ್-19 ಸೋಂಕಿತರು ಮೃತಪಟ್ಟಿದ್ದಾರೆ. ಲಾಕ್ಡೌನ್ ಜಾರಿಗೆ ಬಂದ ಒಂದು ತಿಂಗಳ ಬಳಿಕ ಮಹಾರಾಷ್ಟ್ರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 6427 ಆಗಿದ್ದು, 283 ಮಂದಿ ಮೃತಪಟ್ಟಿದ್ದಾರೆ. ಮುಂಬೈನಲ್ಲಿ ಒಟ್ಟು 4206 ಪ್ರಕರಣಗಳು ದೃಢಪಟ್ಟಿವೆ.
ಆಂಧ್ರಪ್ರದೇಶ ಹಾಗೂ ಬಿಹಾರದಲ್ಲೂ ಗಣನೀಯ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿದ್ದು, ಕ್ರಮವಾಗಿ 80 ಹಾಗೂ 27 ಪ್ರಕರಣಗಳು ವರದಿಯಾಗಿವೆ. ರಾಜಸ್ಥಾನದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 28ಕ್ಕೇರಿದೆ. ಗುರುವಾರ 76 ಹೊಸ ಪ್ರಕರಣಗಳು ವರದಿಯಾಗುವ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1964ಕ್ಕೇರಿದೆ. ತೆಲಂಗಾಣದಲ್ಲೂ ಸೋಂಕಿತರ ಸಂಖ್ಯೆ 1000ದ ಗಡಿ ದಾಟಿದ್ದು, ರಾಜ್ಯದಲ್ಲಿ ಮೃತಪಟ್ಟವರ ಸಂಖ್ಯೆ 25ಕ್ಕೇರಿದೆ.