ಲಾಕ್‌ಡೌನ್ ಹಿನ್ನೆಲೆ: ರಮಝಾನ್ ಸಡಗರದ ಖರ್ಜೂರ ಸದ್ಯಕ್ಕಿಲ್ಲ!
ಬೆಂಗಳೂರು: ಇಂದಿನಿಂದ ರಾಜ್ಯಾದ್ಯಂತ ಪವಿತ್ರ ರಮಝಾನ್ ಮಾಸದ ಉಪವಾಸ ಆರಂಭವಾಗಿದೆ. ಹಾಗೆಯೇ, ರಮಝಾನ್ ಮಾಸದ ಸಡಗರಕ್ಕೆ ಪ್ರಮುಖವಾಗಿ ಜೊತೆಗೂಡುವ ಖರ್ಜೂರಕ್ಕೆ ಮಾತ್ರ ಭಾರೀ ಬೇಡಿಕೆ ಇದೆ. ಆದರೆ, ಹೊರ ದೇಶಗಳಿಂದ ಆಮದು ಮಾಡಿಕೊಳ್ಳದ ಕಾರಣ, ರಾಜ್ಯದೆಲ್ಲೆಡೆ ಖರ್ಜೂರ ದೊರೆಯುವುದು ಅನುಮಾನ.
ವಿಶ್ವದೆಲ್ಲೆಡೆ ಕೋವಿಡ್-19 ಸಮಸ್ಯೆ ಪರಿಣಾಮ ಭಾರತ ಸೇರಿದಂತೆ ಪ್ರಮುಖ ದೇಶಗಳಲ್ಲಿ ಲಾಕ್‌ಡೌನ್ ಚಾಲ್ತಿಯಲ್ಲಿರುವ ಹಿನ್ನೆಲೆ ಖರ್ಜೂರ ಆಮದು ಮಾಡಿಕೊಳ್ಳುವ ವಾತಾವರಣ ಇಲ್ಲ. ಹೀಗಾಗಿ, ಈ ಬಾರಿ ಕರ್ನಾಟಕಕ್ಕೂ ಅಗತ್ಯಕ್ಕೆ ತಕ್ಕಂತೆ ಹೊರದೇಶಗಳಿಂದ ಖರ್ಜೂರ ಸಾಗಾಟ ಆಗಿಲ್ಲ. ಇದು ರಮಝಾನ್ ಮಾಸದಲ್ಲಿ ಖರ್ಜೂರ ವ್ಯಾಪಾರ ಮಾಡುವವರಲ್ಲೂ ಆತಂಕ ಮನೆ ಮಾಡಿದೆ. ಪ್ರತಿ ವರ್ಷವೂ ಕರ್ನಾಟಕಕ್ಕೆ ಇರಾನ್, ಸೌದಿ ಅರೇಬಿಯ, ಜೋರ್ಡಾನ್ ಸೇರಿದಂತೆ ಬರೋಬ್ಬರಿ 10 ರಾಷ್ಟ್ರಗಳಿಂದ ಸಾವಿರಾರು ಟನ್‌ಗಳಷ್ಟು ಖರ್ಜೂರ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಿಗೆ ತಲುಪುತ್ತಿತ್ತು. ಆದರೆ, ಕೊರೋನದಿಂದಾಗಿ ಲಾಕ್‌ಡೌನ್ ಜಾರಿಯಾಗಿರುವ ಹಿನ್ನೆಲೆ ಹೊರದೇಶಗಳಿಂದ ಖರ್ಜೂರ ಬಂದಿಲ್ಲ. ಹೀಗಾಗಿ, ಈ ರಮಝಾನ್‌ನಲ್ಲಿ ಖರ್ಜೂರ ದೊರೆಯುವುದು ಕನಸಿನ ಮಾತು ಎನ್ನುತ್ತಾರೆ ವ್ಯಾಪಾರಿಗಳು.
ಸೌದಿ ರಫ್ತು ಮಾಡಿಲ್ಲ: ಇರಾನ್ ದೇಶದಿಂದಲೇ ಹೆಚ್ಚಾಗಿ ಖರ್ಜೂರವನ್ನು ರಾಜ್ಯಕ್ಕೆ ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ, ಎರಡು ತಿಂಗಳ ಹಿಂದೆಯೇ ಅಲ್ಲಿ ಕೊರೋನ ಸೋಂಕು ಕಾಣಿಸಿಕೊಂಡ ಕಾರಣ, ಎಲ್ಲ ರೀತಿಯ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಲಾಗಿದೆ. ಇನ್ನು, ಸೌದಿ ಅರೇಬಿಯದಿಂದ ಈ ಬಾರಿ ಅವರು ರಫ್ತು ಮಾಡಲು ಮುಂದಾಗಿಲ್ಲ. ಖರ್ಜೂರ ಬೇಡಿಕೆ ಹೆಚ್ಚಾಗಲು ಇದು ಒಂದು ಕಾರಣ ಇರಬಹುದು ಎನ್ನುತ್ತಾರೆ ಬೆಂಗಳೂರಿನ ರಸೆಲ್ ಮಾರುಕಟ್ಟೆಯ ಖರ್ಜೂರ ವ್ಯಾಪಾರಿ ಮುಹಮ್ಮದ್ ಇದ್ರಿಸ್ ಚೌಧರಿ. ಎಷ್ಟು ಅಂಗಡಿಗಳಿವೆ: ರಾಜಧಾನಿ ಬೆಂಗಳೂರಿನಲ್ಲಿಯೇ ಬರೋಬ್ಬರಿ 1,569 ಖರ್ಜೂರ ಅಂಗಡಿಗಳಿವೆ. ರಮಝಾನ್ ಮಾಸವೊಂದರಲ್ಲಿಯೇ 3,200ಕ್ಕೂ ಅಧಿಕ ಅಂಗಡಿಗಳನ್ನು ಪ್ರತಿ ವರ್ಷದಲ್ಲೂ ಆರಂಭಿಸಿ, ಕೋಟ್ಯಂತರ ರೂ. ವ್ಯಾಪಾರ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಕೊರೋನದಿಂದಾಗಿ ಖರ್ಜೂರ ವ್ಯಾಪಾರಿಗಳು ಹೊಡೆತ ತಿಂದಿದ್ದೇವೆ ಎಂದು ಆರ್‌ಟಿ ನಗರದ ಖರ್ಜೂರ ವ್ಯಾಪಾರಿ ಹುಸೇನ್ ಬೇಸರ ವ್ಯಕ್ತಪಡಿಸಿದರು.
ರಸೆಲ್ ಮಾರುಕಟ್ಟೆ ಬಂದ್!
ಬೆಂಗಳೂರಿನ ಐತಿಹಾಸಿನ ರಸೆಲ್ ಮಾರುಕಟ್ಟೆಯಲ್ಲಿ 475 ಮಳಿಗೆಗಳಿದ್ದು, ರಮಝಾನ್ ಮಾಸದಲ್ಲಿ ಖರ್ಜೂರ ವ್ಯಾಪಾರ ಮಾಡಲಾಗುತ್ತಿತ್ತು. ಅಷ್ಟೇ ಅಲ್ಲದೆ, ಈ ಒಂದೇ ಮಾರುಕಟ್ಟೆಯಲ್ಲಿ 2 ಸಾವಿರಕ್ಕೂ ಅಧಿಕ ದಿನಗೂಲಿ ಕಾರ್ಮಿಕರು ದುಡಿಯುತ್ತಿದ್ದಾರೆ. ಆದರೆ, ಕೊರೋನ ಲಾಕ್‌ಡೌನ್‌ದಿಂದಾಗಿ ಮಾರುಕಟ್ಟೆ ಬಂದ್ ಮಾಡಿರುವ ಹಿನ್ನೆಲೆ ಅವರ ಬದುಕು ಅತಂತ್ರವಾಗಿದೆ.
1927ರಿಂದಲೂ ನಿರಂತರವಾಗಿ ಈ ವ್ಯಾಪಾರದಲ್ಲಿ ತೊಡಗಿದ್ದೇವೆ. ವರ್ಷದ 365 ದಿನವೂ ಮಾರಾಟ ಇರುತ್ತದೆ. ಆದರೆ ರಮಝಾನ್ ಸಂದರ್ಭದಲ್ಲಿ ಹೆಚ್ಚು ಬಗೆಯ ಖರ್ಜೂರವನ್ನು ತರಿಸಿ ಗ್ರಾಹಕರಿಗೆ ಪೂರೈಸುತ್ತಿದ್ದೆವು. ಆದರೆ, ಈ ಬಾರಿ ಇಂತಹ ವಾತಾವರಣ ಇಲ್ಲ. ಇನ್ನು, ಮಳಿಗೆಯಲ್ಲಿದ್ದ 7 ಲಕ್ಷ ರೂ.ವೌಲ್ಯದ ಖರ್ಜೂರ ಮಾರಾಟ ಮಾಡಲಾಗದೆ, ನಷ್ಟವಾಗಿದೆ.
-ಮುಹಮ್ಮದ್ ಇದ್ರಿಸ್ ಚೌಧರಿ
ಸಗಟು ಮಾರಾಟಗಾರರು, ರಸೆಲ್ ಮಾರ್ಕೆಟ್
ರಮಝಾನ್ ಮಾಸದ ಅಂತ್ಯದೊಳಗೆ ಖರ್ಜೂರ ಆಮದು ಮಾಡಿಕೊಳ್ಳಬಹುದು ಎನ್ನುವ ವಿಶ್ವಾಸ ಇದೆ. ಹೀಗಾಗಿ, ಮಾರಾಟ ಮಾಡಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು.
-ರಹೀಂ ಖಾನ್, ಖರ್ಜೂರ ವ್ಯಾಪಾರಿ