varthabharthi


ನೇಸರ ನೋಡು

ತ.ರಾ.ಸು: ಜನ್ಮ ಶತಾಬ್ದಿಯ ಸ್ಮರಣೆ

ವಾರ್ತಾ ಭಾರತಿ : 25 Apr, 2020
ಜಿ.ಎನ್. ರಂಗನಾಥ ರಾವ್

ಸ್ವಾತಂತ್ರ ಸಂಗ್ರಾಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸೆರೆಮನೆವಾಸವನ್ನೂ ಅನುಭವಿಸಿದ ತರಾಸು ಬೆಂಗಳೂರು ಸೇರಿ ಪತ್ರಿಕಾ ವೃತ್ತಿಯನ್ನು ಅರಸಿಕೊಂಡು, ತಿ.ತಾ.ಶರ್ಮರ ‘ವಿಶ್ವ ಕರ್ನಾಟಕ’ ಸೇರಿದರು. ಪ್ರಜಾಮತ, ಪ್ರಜಾವಾಣಿಗಳಲ್ಲೂ ಸ್ವಲ್ಪಕಾಲ ಕೆಲಸ ಮಾಡಿದರು. ಬೆಂಗಳೂರು ಬೇಸರವೆನಿಸಿ ದುರ್ಗಕ್ಕೆ ಹಿಂದಿರುಗಿ ಪತ್ರಿಕಾ ವೃತ್ತಿ ಮುಂದುವರಿಸಿದರು. ಇದು ತರಾಸು ಅವರೊಳಗಿದ್ದ ಸೃಜನಶೀಲ ಪ್ರತಿಭೆ ದಾಂಗುಡಿ ಇಡುತ್ತಿದ್ದ ದಿನಗಳು. ಸಾಹಿತ್ಯ ರಚನೆ ಮುಂದಾಗಿ ಪತ್ರಿಕೋದ್ಯಮ ಹಿಂದೆ ಸರಿಯಿತು.


ಇ ಪ್ಪತ್ತನೆಯ ಶತಮಾನದ ಅತ್ಯಂತ ಜನಪ್ರಿಯ ಸಾಹಿತ್ಯ ಪ್ರಕಾರ ಕಾದಂಬರಿ. ಕನ್ನಡದಲ್ಲಿ ಕಾದಂಬರಿ ಪ್ರಕಾರವನ್ನು ಜನಪ್ರಿಯತೆಯ ಶೃಂಗಕ್ಕೇರಿಸಿದ ಶ್ರೇಯಸ್ಸು ಪ್ರಗತಿಶೀಲ ಚಳವಳಿಗೆ ಸಲ್ಲುತ್ತದೆ. ಸಾಮಾಜಿಕ ವಾಸ್ತವವನ್ನೇ ಬಿಂಬಿಸುವ ಮೂಲಕ ಪ್ರಗತಿಶೀಲ ಸಾಹಿತ್ಯವನ್ನು, ವಿಶೇಷವಾಗಿ ಕಾದಂಬರಿ ಪ್ರಕಾರವನ್ನು ಜನರ ಅಂತರಂಗಕ್ಕೆ ಮುಟ್ಟಿಸಿ ಹೊಸ ಅಭಿರುಚಿಯ ಅಲೆ ಹುಟ್ಟು ಹಾಕಿದ ಸಾಹಿತಿಗಳಲ್ಲಿ ಅನಕೃ ಮತ್ತು ತರಾಸು ಪ್ರಮುಖರು. ಇಬ್ಬರದೂ ಮೋಡಿ ಮಾಡುವ ಶೈಲಿ, ಜನಸಾಮಾನ್ಯರ ಸಂವೇದನೆಯನ್ನು ಕಲಕುವಂತಹ ವಿಚಾರಧಾರೆ. ಇದು ತರಾಸು ಅವರ ಜನ್ಮ ಶತಾಬ್ದಿಯ ವರ್ಷ. ಜನನ 1920 ಎಪ್ರಿಲ್ 21ರಂದು, ಬಸವ ಜಯಂತಿಯ ದಿವಸ. ತರಾಸು ಇಂದು ನಮ್ಮ ಮಧ್ಯೆ ಇದ್ದಿದ್ದರೆ, ಅವರು ಇದೇ ತಿಂಗಳ 21ರಂದು ನೂರು ವರ್ಷಕ್ಕೆ ಪದಾರ್ಪಣೆ ಮಾಡುತ್ತಿದ್ದರು.

ಸಾಹಿತ್ಯ ತಳುಕಿನ ರಾಮಸ್ವಾಮಿ ಸುಬ್ಬ ರಾವ್ (ತರಾಸು) ಅವರಲ್ಲಿ ವಂಶವಾಹಿಯಾಗಿ ಹರಿದು ಬಂದದ್ದು. ಹೊಸಗನ್ನಡ ಸಾಹಿತ್ಯದ ಅಶ್ವಿನಿ ದೇವತೆಯೆಂಬ ಕೀರ್ತಿಗೆ ಭಾಜನರಾದ ತಳುಕಿನ ವೆಂಕಣ್ಣಯ್ಯನವರು ತರಾಸು ದೊಡ್ಡಪ್ಪ. ತ.ಸು.ಶಾಮರಾಯರು ಚಿಕ್ಕಪ್ಪ. ತಂದೆ ರಾಮಸ್ವಾಮಿ ಸ್ವಲ್ಪಕಾಲ ರೆವಿನ್ಯೂ ಇಲಾಖೆಯಲ್ಲಿದ್ದು, ಸ್ವತಂತ್ರ ಪ್ರವೃತ್ತಿಯಿಂದಾಗಿ ಅದನ್ನು ತೊರೆದು ಚಿತ್ರದುರ್ಗದಲ್ಲಿ ವಕೀಲರಾದರು. ಮಗ ತಮ್ಮಂತೆ ವಕೀಲನಾಗಬೇಕೆಂಬುದು ರಾಮಸ್ವಾಮಿಯವರ ಆಸೆಯಾಗಿತ್ತು. ತಂದೆಯ ಆಸೆಯನ್ನು ನಿರಾಸೆಗೊಳಿಸಿ ತರಾಸು ಸಾಹಿತಿಯಾಗಿ ರೂಪುಗೊಂಡದ್ದರಲ್ಲಿ ಆಶ್ಚರ್ಯವೇನಿಲ್ಲ. ಸಾಹಿತ್ಯದ ವಾತಾವರಣದಲ್ಲೇ ಹುಟ್ಟಿ ಬೆಳೆದ ತರಾಸು ಗೆ ಸಹಜವಾಗಿಯೇ ಸಾಹಿತ್ಯದಲ್ಲಿ ಒಲವು. ತರಾಸು ಸಾಹಿತಿಯಾಗಿ ಬೆಳೆಯುವುದರಲ್ಲಿ ಪರಿಸರ ಪ್ರಭಾವದ ಪಾತ್ರ ಗಣನೀಯವಾದುದು. ಮನೆಯಲ್ಲಿನ ಸಾಹಿತ್ಯದ ಪರಿಸರ ಜೊತೆಗೆ ಚಿತ್ರದುರ್ಗದ ಐತಿಹಾಸಿಕ ಪರಿಸರ, ದುರ್ಗದ ವೀರರ ಕಥೆ, ಅದರ ದುರಂತ ಇತಿಹಾಸ ತರಾಸು ಅವರಿಗೆ ಕರತಲಾಮಲಕವಾಗಿತ್ತು.

ಬಾಲ್ಯದಲ್ಲಿ ಸುಬ್ಬುವಿಗೆ ಶಾಲೆಯೆಂಬುದು ಒಂದು ಬಂದಿಖಾನೆ. ಇತಿಹಾಸ, ಸಾಹಿತ್ಯ, ರಾಜಕೀಯದಲ್ಲಿ ಅತೀವ ಆಸಕ್ತಿ. ದುರ್ಗದ ನಾಯಕರುಗಳ ಕಥೆಯನ್ನು ರಂಜಿಸಿ ಹೇಳುವ ಕತೆಗಾರಿಕೆ. ಒಂಬತ್ತು ವರ್ಷದ ಹುಡುಗನಾಗಿದ್ದಾಗಲೇ ದುರ್ಗದಲ್ಲಿ ನಡೆದ ಹರಿಜನ ಚಳವಳಿಯಲ್ಲಿ ಭಾಗವಹಿಸಿ ಭಾಷಣ ಮಾಡಿ ಊರಿನ ಹಿರಿಯರ ಗಮನ ಸೆಳೆದಿದ್ದರು. ತರಾಸುವಿನಲ್ಲಿ ಚಿಗುರೊಡೆಯುತ್ತಿದ್ದ ಪ್ರತಿಭೆಯನ್ನು ಗಮನಿಸಿದ ದೊಡ್ಡಪ್ಪ ವೆಂಕಣ್ಣಯ್ಯನವರು ಒಮ್ಮೆ,‘ಬರೀ ಮಾತಾಡಿದರೆ ಸಾಲದು ಎಲ್ಲಿ ಒಂದು ಕಥೆ ಬರಿ ನೊಡೋಣ’ ಎಂದು ಹೇಳಿದರಂತೆ. ಬಾಲಕ ಸುಬ್ಬು ಸವಾಲನ್ನು ಸ್ವೀಕರಿಸಿದರು.‘ಮಾಧು ಚೆಂಡು’ ಎಂಬ ಕಥೆ ಪುಟಿದೆದ್ದಿತು. ದೊಡ್ಡಪ್ಪನಿಂದ 10 ರೂ. ಬಹುಮಾನವೂ ಬಂತು. ಕವಿತೆ, ನಾಟಕಗಳ ರಚನೆಯಿಂದ ಸಾಹಿತ್ಯ ಕೃಷಿ ಶುರುವಾಯಿತು. ಸ್ವಾತಂತ್ರ್ಯ ಚಳವಳಿಯಿಂದಾಗಿ ವಿದ್ಯಾಭ್ಯಾಸ ಮುರಿದು ಬಿತ್ತು.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸೆರೆಮನೆವಾಸವನ್ನೂ ಅನುಭವಿಸಿದ ತರಾಸು ಬೆಂಗಳೂರು ಸೇರಿ ಪತ್ರಿಕಾ ವೃತ್ತಿಯನ್ನು ಅರಸಿಕೊಂಡು, ತಿ.ತಾ.ಶರ್ಮರ ‘ವಿಶ್ವ ಕರ್ನಾಟಕ’ ಸೇರಿದರು. ಪ್ರಜಾಮತ, ಪ್ರಜಾವಾಣಿಗಳಲ್ಲೂ ಸ್ವಲ್ಪಕಾಲ ಕೆಲಸ ಮಾಡಿದರು. ಬೆಂಗಳೂರು ಬೇಸರವೆನಿಸಿ ದುರ್ಗಕ್ಕೆ ಹಿಂದಿರುಗಿ ಪತ್ರಿಕಾ ವೃತ್ತಿ ಮುಂದುವರಿಸಿದರು. ಇದು ತರಾಸು ಅವರೊಳಗಿದ್ದ ಸೃಜನಶೀಲ ಪ್ರತಿಭೆ ದಾಂಗುಡಿ ಇಡುತ್ತಿದ್ದ ದಿನಗಳು. ಸಾಹಿತ್ಯ ರಚನೆ ಮುಂದಾಗಿ ಪತ್ರಿಕೋದ್ಯಮ ಹಿಂದೆ ಸರಿಯಿತು. ತರಾಸು ಕಾದಂಬರಿಕಾರರಾಗಿ ರೂಪುಗೊಳ್ಳುತ್ತಿದರು. ‘ವಿಶ್ವ ಕಾರ್ನಾಟಕ’ದಲ್ಲಿದ್ದಾಗಲೇ ಅನಕೃ ಅವರ ಪರಿಚಯವಾಗಿತ್ತು. ಕರ್ನಾಟಕದಲ್ಲಿ ಪ್ರಗತಿಶೀಲ ಚಳವಳಿಯ ನೇತಾರರಾಗಿ ಪ್ರಗತಿಶೀಲ ಪಂಥವನ್ನು ಕಟ್ಟುತ್ತಿದ್ದ ಅನಕೃ ತರಾಸು ಅವರ ಮೇಲೆ ಗಾಢವಾದ ಪ್ರಭಾವವನ್ನು ಬೀರಿದರು. ಅನಕೃ ಅವರಲ್ಲಿ ಗಾಢವಾದ ಗೌರವ ಮೂಡಿತು. ಪ್ರಗತಿಶೀಲ ಪಂಥದ ದೃಷ್ಟಿ, ಆದರ್ಶಗಳು ತರಾಸುಗೆ ಮೆಚ್ಚಿಗೆಯಾದವು. ಪ್ರಗತಿಶೀಲ ಚಳವಳಿಯ ಅತಿರಥ ಮಹಾರಥರಲ್ಲಿ ಒಬ್ಬರಾದರು.

ಮೊದಲ ಕಾದಂಬರಿ ‘ಮನೆಗೆ ಬಂದ ಮಹಾಲಕ್ಷ್ಮ್ಮಿ’ ಪ್ರಕಟವಾದದ್ದು 1944ರಲ್ಲಿ. ಅವರು ಇಹಲೋಕ ತ್ಯಜಿಸಿದ್ದು 1984ರಲ್ಲಿ. ಈ ನಡುವಣ 40 ವರ್ಷಗಳ ಅವಧಿಯಲ್ಲಿ ತರಾಸು ಅವರ ಸಾಹಿತ್ಯ ಸೃಷ್ಟಿ 90ಕ್ಕೂ ಹೆಚ್ಚು ಕೃತಿಗಳು. 4 ಕಥಾ ಸಂಕಲನ, 6 ನಾಟಕಗಳು, 53 ಸಾಮಾಜಿಕ ಕಾದಂಬರಿಗಳು, 14 ಐತಿಹಾಸಿಕ ಕಾದಂಬರಿಗಳು, 2 ಪೌರಾಣಿಕ ಕಾದಂಬರಿಗಳು, ಜೀವನಚರಿತ್ರೆ, ಆತ್ಮ ಕಥೆ (ಹಿಂದಿರುಗಿ ನೋಡಿದಾಗ)-ಹೀಗಿದೆ ಅವರ ಸಾಹಿತ್ಯ ಸಂಪದ. 1946ರಲ್ಲಿ ತರಾಸು ಅವರ ಮೊದಲ ಕಥಾ ಸಂಕಲನ ‘ರೂಪಸಿ’ ಪ್ರಕಟವಾಯಿತು.‘ತೊಟ್ಟಿಲು ತೂಗಿತು’(1947), ‘ಗಿರಿ ಮಲ್ಲಿಗೆಯ ನಂದನದಲ್ಲಿ’(1955)ಇನ್ನೆರಡು ಕಥಾ ಸಂಕಲನಗಳು. ಮೂರನೆಯ ಸಂಕಲನ ಪ್ರಕಟವಾದ 10 ವರ್ಷಗಳ ನಂತರ,‘ಇದೇ ನಿಜವಾದ ಸಂಪತ್ತು’ ನಾಲ್ಕನೆಯ ಸಂಕಲನ 1965ರಲ್ಲಿ ಹೊರಬಂತು. 19 ವರ್ಷಗಳ ಅವಧಿಯಲ್ಲಿ ತರಾಸು ಇಪ್ಪತ್ತೊಂದು ಕಥೆಗಳನ್ನು ಬರೆದಿದ್ದಾರೆ.ತರಾಸು ಅವರ ಸೃಜನಶೀಲ ಪ್ರತಿಭೆಯ ಹಾಸುಬೀಸು ದೊಡ್ಡದು.

ಜೀವನದರ್ಶನ, ಅನುಭವಗಳ ವ್ಯಾಪ್ತಿಯೂ. ಸಣ್ಣ ಕಥೆ ಅವರ ಮುಖ್ಯ ಮಾಧ್ಯಮವಾಗಲಿಲ್ಲ. ಸ್ವತ: ತರಾಸು ಅವರಿಗೂ ಇದರ ಅರಿವಿತ್ತು. ಮೂರನೆಯ ಸಂಕಲನದ ಮುನ್ನುಡಿಯಲ್ಲಿ ಅವರು ಹೀಗೆ ಹೇಳಿದ್ದಾರೆ: ಕಾದಂಬರಿಯನ್ನು ಬರೆಯುವುದಕ್ಕಿಂತಲೂ ಸಣ್ಣ ಕಥೆಯನ್ನು ಬರೆಯುವುದು ಕಠಿಣವಾದ ಕಲಾ ಮಾರ್ಗ ಎಂಬ ಸತ್ಯ ನನಗೆ ಗೋಚರಿಸಿದೆ. ಇದು ನಿಜವಿರಬಹುದಾದರೂ ಸಣ್ಣಕಥೆ ಪ್ರಕಾರದಲ್ಲಿ ಅವರಿಗೆ ಕೌಶಲ ಇರಲಿಲ್ಲ ಎಂದಲ್ಲ. ‘0-0=0’,‘ಇನ್ನೊಂದು ಮುಖ’,‘ಒಂದು ತುಂಡು ಸುದಿ’್ದಯಂತಹ ಚೆಂದದ ಕತೆಗಳನ್ನು ಅವರು ಬರೆದಿದ್ದಾರೆ. 0-0=0 ಕತೆಯಲ್ಲಿ ಕತೆಯ ಹಂದರವಿಲ್ಲ, ವಾಚಾಳಿತನವಿಲ್ಲ. ಈಶಾವಾಸ್ಯ ಉಪನಿಷತ್ತಿನ ಪೂರ್ಣಸ್ಯ ಪೂರ್ಣಮಾದಾಯ ಪೂರ್ಣ ಮೇವಾಶಿಷ್ಯತೇ ಎನ್ನುವ ಶಾಂತಿ ಮಂತ್ರದ ಅಣಕ ಈ ಕತೆ. ಸ್ವಾತಂತ್ರಾ ನಂತರ ದೇಶ ಹಿಡಿದ ಭ್ರಷ್ಟಾಚಾರದ ದಾರಿಯಿಂದ ನಿರಾಸೆಯುಂಟಾದ ಕಹಿಯಲ್ಲಿ ಈ ಕಥೆ ಬರೆದುದಾಗಿ ತರಾಸು ಹೇಳಿದ್ದಾರೆ. ವಿಮರ್ಶಕರು 0-0=0 ಕಥೆಯನ್ನು ಕನ್ನಡದಲ್ಲಿ ನವ್ಯ ಕಥೆಯ ಆಗಮನ ಸಾರುವ ಕಥೆ ಎಂದು ಗುರುತಿಸಿರುವುದು ಸಣ್ಣ ಕಥೆಗೆ ತರಾಸು ಅವರ ಕೊಡುಗೆಯ ಮಹತ್ವವನ್ನು ಸೂಚಿಸುತ್ತದೆ. ನವ್ಯರ ಮತ್ತೊಂದು ಪ್ರಮುಖ ಸಾಧನವಾದ ಪ್ರಜ್ಞಾಪ್ರವಾಹ ತಂತ್ರವನ್ನು ಕನ್ನಡ ಕಾದಂಬರಿಯಲ್ಲಿ(ಬಿಡುಗಡೆಯ ಬೇಡಿ) ಮೊದಲು ಬಳಸಿದವರೂ ತರಾಸು ಅವರೇ.

ಕಾದಂಬರಿ ತರಾಸು ಅವರ ಆಡುಂಬೊಲ. ಅವರ ಕಾದಂಬರಿಗಳನ್ನು ಸಾಮಾಜಿಕ, ಐತಿಹಾಸಿಕ, ಪೌರಾಣಿಕ ಎಂದು ಮೂರು ವರ್ಗಗಳಾಗಿ ವಿಂಗಡಿಸಬಹುದು. ಬಹುತೇಕ ಸಾಮಾಜಿಕ ಕಾದಂಬರಿಗಳು ಪ್ರಗತಿಶೀಲತೆಯ ಉತ್ಸಾಹದ, ಹಸಿಹಸಿ ಸಾಮಾಜಿಕ ವಾಸ್ತವದ ಕಾದಂಬರಿಗಳು. ಕುರ್ತ ಕೋಟಿಯವರು ಹೇಳಿರುವಂತೆ, ಮೊದ ಮೊದಲು ತರಾಸು ಅನಕೃ ಅವರ ದಾರಿಯಲ್ಲೇ ಮುಂದುವರಿದರು. ಈ ಮಾತಿಗೆ ನಿದರ್ಶನವಾಗಿ,‘ಕೇದಿಗೆ ವನ’,‘ಜೀತದ ಜೀವ’. ‘ಪುರುಷಾವತಾರ’, ‘ಬೆಂಕಿಯ ಬಲೆ’,‘ಮಸಣದ ಹೂವು’‘ಬಿಡುಗಡೆಯ ಬೇಡಿ’,‘ರಕ್ತ ತರ್ಪಣ’,‘ಮುಂಜಾವಿನಿಂದ ಮುಂಜಾವು’-ಕಾದಂಬರಿಗಳನ್ನು ಗಮನಿಸಬಹುದು. ವೇಶ್ಯಾ ಸಮಸ್ಯೆಯನ್ನು ಚಿತ್ರಿಸುವ ‘ಮಸಣದ ಹೂವು’,ಸ್ತ್ರೀ ಸ್ವಾತಂತ್ರ ಕುರಿತು ಚರ್ಚಿಸುವ ‘ಬಿಡುಗಡೆಯ ಬೇಡಿ’, ಪತ್ರಿಕೋದ್ಯಮದ ಬವಣೆಯನ್ನು ನಿರೂಪಿಸುವ ‘ಮುಂಜಾವಿನಿಂದ ಮುಂಜಾವು’ ಮೊದಲಾದ ಕಾದಂಬರಿಗಳಲ್ಲಿ ಶೋಷಣೆ, ಸಾಮಾಜಿಕ ಅಸಮಾನತೆಗಳ ವಿರುದ್ಧ ರೊಚ್ಚು, ಆಕ್ರೋಶ, ಆವೇಶಗಳು ಸ್ವಲ್ಪಅತಿಯಾಯಿತೇನೋ ಎನ್ನಿಸುತ್ತದೆ.‘ಚಂದವಳ್ಳಿಯ ತೋಟ’,‘ಚಂದನದ ಗೊಂಬೆ’,‘ಚಕ್ರತೀರ್ಥ’,‘ನಾಗರ ಹಾವು’, ‘ಎರಡು ಹೆಣ್ಣು ಒಂದು ಗಂಡು’,‘ಸರ್ಪಮತ್ಸರ’ ಇವೂ ಸಾಮಾಜಿಕ ಕಾದಂಬರಿಗಳೇ. ಮಾನವೀಯ ಸಂಬಂಧಗಳೇ ಮುಖ್ಯವಾಗುವ ಈ ಕಾದಂಬರಿಗಳಲ್ಲಿ ತರಾಸು, ಅನಕೃಗಿಂತ ತುಸು ಭಿನ್ನರಾಗಿಯೇ ಕಾಣುತ್ತಾರೆ. ಈ ಕಾದಂಬರಿಗಳಲ್ಲಿನ ಮಾಗಿದ ಜೀವನ ದೃಷ್ಟಿ ಮತ್ತು ಕಲಾ ಸಂಯಮ ಕಾದಂಬರಿಕಾರರಾಗಿ ಅವರ ಬೆಳವಣಿಗೆಯನ್ನು ಬಿಂಬಿಸುತ್ತದೆ.

ಐತಿಹಾಸಿಕ ಕಾದಂಬರಿಗಳು ತರಾಸು ಅವರ ಸೃಜನಶೀಲ ಪ್ರತಿಭಾ ಸಾಧನೆಯ ಇನ್ನೊಂದು ಮುಖ.ಇದು ಅವರ ಕಾದಂಬರಿ ರಚನೆಯ ಎರಡನೆಯ ಘಟ್ಟ. ಚಿತ್ರದುರ್ಗದೊಂದಿಗೆ ಅತ್ಯಂತ ಆತ್ಮೀಯವಾದ ಸಂಬಂಧವನ್ನು ಹೊಂದಿದ್ದ ತರಾಸು ದುರ್ಗದ ಇತಿಹಾಸದಲ್ಲಿ ಗಾಢವಾದ ಆಸಕ್ತಿ, ಅನುರಕ್ತಿಗಳನ್ನು ಬೆಳೆಸಿಕೊಂಡಿದ್ದರಲ್ಲಿ ಆಶ್ಚರ್ಯವೇನಿಲ್ಲ. ತರಾಸು ಐತಿಹಾಸಿಕ ಕಾದಂಬರಿಗಳನ್ನು ಒಂದು ವಿಶಿಷ್ಟ ಮಾಧ್ಯಮವನ್ನಾಗಿ ಮಾಡಿಕೊಳ್ಳಲು ಹುಟ್ಟೂರಿನ ಅಭಿಮಾನ ಮತ್ತು ಅಲ್ಲಿನ ಐತಿಹಾಸಿಕ ಪ್ರಭಾವ ಮುಖ್ಯ ಕಾರಣ.‘ಕಂಬನಿಯ ಕುಯಿಲು’,‘ರಕ್ತ ರಾತ್ರಿ’,‘ತಿರುಗು ಬಾಣ’,‘ಮೃತ್ಯು ಸಿಂಹಾಸನ’,‘ದುರ್ಗಾಸ್ತಮಾನ’-ಇವು ದುರ್ಗದ ಉಜ್ವಲ ಇತಿಹಾಸವನ್ನು ಪುನರ್‌ಸೃಷ್ಟಿಸುವ ಕಾದಂಬರಿಗಳು. ಈ ಕೃತಿಶ್ರೇಣಿಯ ಶಿಖರ, ಚಿತ್ರದುರ್ಗದ ಇತಿಹಾಸದ ಪರಾಕಾಷ್ಠೆ ಎನ್ನಬಹುದಾದ ‘ದುರ್ಗಾಸ್ತಮಾನ’ ಕಾದಂಬರಿಯಲ್ಲಿ ತರಾಸು ತೋರಿಸಿರುವ ಕಥನ ಕೌಶಲ ಅದ್ವಿತೀಯವಾದುದು.ಚರಿತ್ರೆ ಕತೆಯಾಗುವ, ಬದುಕು ಹಾಳಾಗುವ, ವಿನಾಶ ಬದುಕಾಗುವ ಅಪಮೌಲ್ಯೀಕರಣವನ್ನು ಚಿತ್ರಿಸುವ ಈ ಕಾದಂಬರಿಯ ಹೆಸರೇ ಧ್ವನಿಪೂರ್ಣವಾದುದು. ಮದಕರಿನಾಯಕನ ದುರಂತದಲ್ಲಿ ಒಂದು ನಾಡಿನ ದುರಂತ ಮಾತ್ರ ಧ್ವನಿಸುವುದಿಲ್ಲ. ಜನರ ದುರಂತ, ಬದುಕಿನ ಪತನ, ಸ್ವಾರ್ಥಗಳ ಸಂಘರ್ಷ. ಇವೆಲ್ಲದರ ಪರಿಣಾಮವಾಗಿ ಮೌಲ್ಯಗಳೇ ಅಸ್ತಂಗತವಾಗುತ್ತವೆ. ಚಿತ್ರದುರ್ಗದ ಕೋಟೆಯ ಮತ್ತು ಮದಕರಿನಾಯಕನ ಕತೆಯನ್ನು ಹೇಳುವುದರ ಮೂಲಕ ತರಾಸು ಮನುಷ್ಯನ ಬದುಕಿನ ಪತನದ ಮಾರ್ಗವನ್ನೇ ಚಿತ್ರಿಸಿರುವಂತಿದೆ. ಇವಲ್ಲದೆ ‘ನೃಪತುಂಗ’, ‘ವಿಜಯೋತ್ಸವ’, ‘ಶಿಲ್ಪಶ್ರೀ’, ‘ಸಿಡಿಲಮೊಗ್ಗು’, ‘ಕೀರ್ತಿನಾರಾಯಣ ಮೊದಲಾದ ಐತಿಹಾಸಿಕ ಕಾದಂಬರಿಗಳನ್ನೂ ತರಾಸು ಬರೆದಿದ್ದಾರೆ.
    
ಬದುಕಿನ ಅಂತಃಸತ್ತ್ವದ ಶೋಧ ಮತ್ತು ಭಾಷೆಯ ಬಳಕೆ ತರಾಸು ಅವರ ಸೃಜನಶೀಲ ಪ್ರತಿಭೆಯ ಎರಡು ಮುಖ್ಯ ಹತಾರಗಳು. ಈ ಶೋಧದಲ್ಲಿ ಅವರಿಗೆ ಮುಖ್ಯವಾಗಿ ಎದುರಾಗುವುದು,ಸಮಾಜದ ದಾರುಣಮಯ ಬದುಕು, ಐತಿಹಾಸಿಕ ಕಾದಂಬರಿಗಳಲ್ಲಿ ಕಾಣಬರುವ ರಾಜಸತ್ತೆಯ ರಾಗಭೋಗ, ಸುಖದುಃಖ, ದುಷ್ಟತೆಗಳಿಂದ ಸಂಪನ್ನವಾದ ಬದುಕು; ಮತ್ತು ಈ ಬದುಕಿನ ಉತ್ಕಟ ಸನ್ನಿವೇಶ-ಸಂದರ್ಭಗಳು, ಸಂಘರ್ಷಗಳು, ಪ್ರಕ್ಷುಬ್ಧ ಪಾತ್ರಗಳು. ಇದರ ಅಭಿವ್ಯಕ್ತಿಯಲ್ಲಿ ತರಾಸು ಭಾಷೆಯನ್ನು ಬಳಸುವ ಪರಿ ಮಾನವ ಸಂಸ್ಕೃತಿ ಮತ್ತು ನಾಗರಿಕತೆಗಳ ಮುಖಗಳನ್ನು ಅನಾವರಣಗೊಳಿಸುವ ರೀತಿಯದು.ಎಂದೇಅವರ ಬರವಣಿಗೆಯಲ್ಲಿ ಉತ್ಕಟತೆ, ಬಿರುಸುಗಳದೇ ಮೇಲುಗೈ. ಉತ್ಕಟತೆ ತರಾಸು ಸಾಹಿತ್ಯದ ಅಂಗದಲ್ಲಿ ರಕ್ತದಂತೆ ಚಲಿಸುತ್ತದೆ ಎಂಬುದು ಕುರ್ತಕೋಟಿಯವರ ಮಾತು. ಈ ಉತ್ಕಟತೆ, ಅವರ ಕಥಾವಸ್ತುಗಳು ತಮ್ಮ ಒಡಲಲ್ಲೇ ಕಟ್ಟಿಕೊಂಡು ಬಂದಿರುವ ಅನಿವಾರ್ಯತೆಗಳು. ಅವರ ಪ್ರಗತಿಶೀಲ ಕಾದಂಬರಿಗಳಲ್ಲಿ ‘ಕಾಲದ ರಕ್ತದೊತ್ತಡ’ವನ್ನು ತುಸು ಹೆಚ್ಚಾಗಿಯೇ ನಾವು ಕಾಣುತ್ತೇವೆ. ಭಾಷೆ ತರಾಸು ಅವರ ಕಾದಂಬರಿಯ ಚೆಲುವೂ ಹೌದು, ಶಕ್ತಿಯೂ ಹೌದು. ಅವರದು ‘ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು’ ಎನ್ನುವಂಥ ಭಾಷೆ. ಅವರ ಭಾಷೆಯಲ್ಲಿ ರೋಷ-ಕೆಚ್ಚುಗಳಿವೆ, ಎಳೆಗರುವಿನ ಕೊರಳ ಗೆಜ್ಜೆಯ ನಾದಮಯತೆ-ಲಾಲಿತ್ಯ ಇದೆ, ಹೋರಿಗರುವಿನ ಗೆಜ್ಜೆಯ ಠೇಂಕಾರವಿದೆ, ವೀರ, ಶೃಂಗಾರ, ಕರುಣ ರಸಗಳಿವೆ. ತರಾಸು ಅವರ ಪಾತ್ರಗಳ ಬೆಳವಣಿಗೆಯೂ ರಸಾನುವರ್ತಿಯಾಗಿಯೇ ಇವೆ.ಆ ಪಾತ್ರಗಳಾದರೋ, ವ್ಯಕ್ತಿತ್ವದ ವಿಶಿಷ್ಟ ಲಯ ಮತ್ತು ಲಕ್ಷಣಗಳಿಂದ ದಷ್ಟಪುಷ್ಟವಾಗಿ ಜೀವಸತ್ವಗಳಿಂದ ಕಂಗೊಳಿಸುವ ಪಾತ್ರಗಳು.

ಆಧುನಿಕ ಕನ್ನಡ ವಿಮರ್ಶೆ ತರಾಸು ಅವರನ್ನು ಗಂಭೀರವಾಗಿಯೇ ಪರಿಗಣಿಸಿದೆ.ಕುರ್ತಕೋಟಿಯವರು‘ಯುಗಧರ್ಮ ಮತ್ತು ಸಾಹಿತ್ಯ ದರ್ಶನ’ದಲ್ಲಿ ತರಾಸು ಅವರ ಅಲ್ಲಿಯವರೆಗಿನ ಮುಖ್ಯ ಕೃತಿಗಳನ್ನು ಸವಿಸ್ತಾರವಾಗಿಯೇ ಚರ್ಚಿಸಿ ಗುಣಾತ್ಮಕ ಅಂಶಗಳನ್ನು ಎತ್ತಿತೋರಿದ್ದಾರೆ. ಉತ್ಕಟತೆ ತರಾಸು ಅವರ ಪಾತ್ರಗಳಿಗೆ ಜೀವಂತತನ ತಂದುಕೊಟ್ಟಿರುವುದನ್ನೂ, ಅವರು ಚಿತ್ರಿಸುವ ವಾಸ್ತವತೆ ಲವಲವಿಕೆಯಲ್ಲಿ ಹಿಂಸೆಯಾಗುವುದನ್ನೂ ಗುರುತಿಸಿದ್ದಾರೆ. ಅನಕೃ ಅವರಂತೆ ತರಾಸು ತಮ್ಮ ಸೃಷ್ಟಿಯಲ್ಲಿ ಹಿಂದುಮುಂದು ನೋಡದೆ ತಾದಾತ್ಮವನ್ನು ಹೊಂದಿ ಬಿಡುತ್ತಾರೆ, ಇದರಿಂದ ವೈಯಕ್ತಿಕ ಆವೇಶದ ಸಂಕುಚಿತ ಕ್ಷೇತ್ರದಲ್ಲಿ ಪಾತ್ರಗಳು ಜೀವಿಸಬೇಕಾಗುತ್ತದೆ ಎಂಬುದು ಕುರ್ತ ಕೋಟಿ ಅವರು ತರಾಸು ಕಾದಂಬರಿಗಳಲ್ಲಿ ಕಂಡಿರುವ ಪ್ರಮುಖ ದೋಷ. ತರಾಸು ಅವರ ಕತೆ, ಕಾದಂಬರಿಗಳ ಬಗ್ಗೆ ಸಾದ್ಯಂತವಾಗಿ ಚರ್ಚಿಸಿರುವ ಕನ್ನಡದ ಇನ್ನೊಬ್ಬ ಪ್ರಮುಖ ವಿಮರ್ಶಕರಾದ ಪ್ರೊ.ಎಲ್.ಎಸ್.ಶೇಷಗಿರಿರಾಯರೂ ತರಾಸು ಅವರ ಕಾದಂಬರಿಗಳಲ್ಲಿನ ರೊಚ್ಚನ್ನು ಎತ್ತಿ ಹೇಳಿದ್ದಾರೆ. ಹಾಗೆಯೇ ಕ್ರಒೆುೀಣ ತರಾಸು ಸಂಯಮ ಬೆಳೆಸಿಕೊಂಡು ಬೆಳೆದಿರುವುದನ್ನೂ ಗಮನಿಸಿದ್ದಾರೆ. ಸಾಮಾಜಿಕ ಕಾದಂಬರಿಗಳ ಬಗ್ಗೆ ಬರೆಯುತ್ತಾ ಎಲ್ಲೆಸ್ಸೆಸ್, ತರಾಸು ಅವರ ಬಹು ಜನಪ್ರಿಯ ಕೃತಿಗಳಾದ ‘ನಾಗರಹಾವು’,‘ಚಂದನದ ಗೊಂಬೆ’,‘ಚಂದವಳ್ಳಿಯ ತೋಟ’,‘ಚಕ್ರತೀರ್ಥ’ಸಾಮಾಜಿಕ ಕಾದಂಬರಿಗಳಲ್ಲ ಎನ್ನುವ ತೀರ್ಮಾನಕ್ಕೆ ಬರುತ್ತಾರೆ.‘ಹಂಸಗೀತೆ’ ಐತಿಹಾಸಿಕ ಕದಂಬರಿಯಲ್ಲವೆನ್ನುತ್ತಾರೆ. (ಇದು ಬಹಮಟ್ಟಿಗೆ ಒಪ್ಪತಕ್ಕ ಮಾತೆ). ತರಾಸು ಕಾದಂಬರಿಗಳಲ್ಲಿ ಮೂರನೆಯ ವರ್ಗಕ್ಕೆ ಸೇರಿದವು ಎನ್ನಬಹುದಾದ ಈ ಕಾದಂಬರಿಗಳು ವ್ಯಕ್ತಿತ್ವ ಪ್ರಧಾನವಾದವು ಎಂಬುದು ದಿಟವಾದರೂ ಅವುಗಳಲ್ಲಿನ ಸಮಾಜ ಮೂಲ ಚರ್ಚಾಸ್ಪದವಾದುದು. ಎಲ್ಲೆಸ್ಸೆಸ್ ತರಾಸು ಅವರ ಕೊಡುಗೆ ಬಗ್ಗೆ ಹರಳುಗಟ್ಟುವಂಥ ಗಮನಾರ್ಹ ಮಾತುಗಳನ್ನಾಡಿದ್ದಾರೆ: ಶಿವರಾಮ ಕಾರಂತರು ದುಡಿಮೆಯನ್ನು ಮೌಲ್ಯಮಾಡಿದಂತೆ, ತರಾಸುಪೌರುಷವನ್ನು ಒಂದು ಮೌಲ್ಯವನ್ನಾಗಿ ಮಾಡಿದರು. ವಾಸ್ತವಿಕತೆ, ರೊಮ್ಯಾಂಟಿಸಿಸಂ, ಆದರ್ಶತ್ವ ಮೂರರ ಸಂಗಮ ತರಾಸುವಿನ ಶ್ರೇಷ್ಠ ಸಾಹಿತ್ಯ ಕೃತಿಗಳು. ಇವೆಲ್ಲ ಸೂತ್ರಪ್ರಾಯವಾದ ಮಾತುಗಳು.

ತರಾಸು ಅವರ ಸಾಹಿತ್ಯದ ಮರು ಓದಿಗೆ,ಹೊಸಚರ್ಚೆಗೆ ಆಸ್ಪದವೀಯುವಂಥ ಮಾತುಗಳು.ತರಾಸು ಕೃತಿಗಳ ಮರುವಿಮರ್ಶೆ, ಅವರ ಜನ್ಮಶತಾಬ್ದಿಯ ಅರ್ಥಪೂರ್ಣ ಆಚರಣೆಯಾದೀತು.
1983. ಆ ವರ್ಷ ತರಾಸುಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಖಚಿತವೆಂಬ ನಿರೀಕ್ಷೆ ಇತ್ತು.ಆದರೆ ಯಶವಂತ ಚಿತ್ತಾಲರಿಗೆ ದೊರೆಯಿತು. ಅಭಿಮಾನಿಗಳಿಗೆ ನಿರಾಶೆಯಾಗಿತ್ತು. ಆಗ ತರಾಸು ಚಿತ್ತಾಲರ ಎಲ್ಲ ಪುಸ್ತಕಗಳನ್ನೂ ಈ ಎರಡು ಮೂರು ದಿನ ಓದಿದ್ದೇನೆ. ಅವರು ನಮ್ಮ ನಡುವಿನೊಬ್ಬ ಶ್ರೇಷ್ಠ ಲೇಖಕರು ಎಂಬುದರಲ್ಲಿ ಅನುಮಾನವಿಲ್ಲ. ಅವರಿಗೆ ಬಹುಮಾನ ಬಂದದ್ದು ನನಗೇನೂ ಅಸಮಾಧಾನವಿಲ್ಲ. ನನ್ನ ಪುಸ್ತಕಕ್ಕೆ ಈ ವರ್ಷವಲ್ಲದಿದ್ದರೆ ಮುಂದಿನ ವರ್ಷ ಆ ಬಹುಮಾನ ಬರುತ್ತದೆ ಎಂದು ಅಭಿಮಾನಿಗಳನ್ನು ಸಂತೈಸಿದ್ದರು. ಮುಂದಿನ ವರ್ಷ ‘ದುರ್ಗಾಸ್ತಮಾನ’ಕ್ಕೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಬಂತು. ಆದರೆ ತರಾಸು ಇರಲಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)