ಕೊರೋನ ಹಾವಳಿಯ ಮಧ್ಯೆ ಇತರ ರೋಗಿಗಳು ಕಂಗಾಲು
► ಸರಕಾರಿ-ಖಾಸಗಿ ಆಸ್ಪತ್ರೆಗಳ ಮಧ್ಯೆ ಸಮನ್ವಯದ ಕೊರತೆ ► ರೋಗಿಗಳನ್ನು ಉಪಚರಿಸುವವರಿಗೆ ಕಾಡುತ್ತಿದೆ ಭೀತಿ
ಸಾಂದರ್ಭಿಕ ಚಿತ್ರ
ಮಂಗಳೂರು, ಎ.26: ಕೊರೋನ ತಡೆಗಟ್ಟುವ ಸಲುವಾಗಿ ಸರಕಾರದ ನಿರ್ದೇಶನದಂತೆ ದ.ಕ. ಜಿಲ್ಲಾಡಳಿತವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿರುವ ನಡುವೆಯೇ ಇತರ ಕಾಯಿಲೆ ಪೀಡಿತರು ಮತ್ತು ಅಪಘಾತಗಳ ಗಾಯಾಳುಗಳು ತೀವ್ರ ತೊಂದರೆ ಎದುರಿಸುತ್ತಿದ್ದಾರೆ ಎಂಬ ದೂರು ಕೇಳಿ ಬಂದಿದೆ.
ಈ ಬಗ್ಗೆ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ ಸ್ಪಷ್ಟ ನಿಲುವು ತೆಗೆದುಕೊಳ್ಳದಿದ್ದರೆ ಇತರ ಅರೋಗ್ಯ ಸಮಸ್ಯೆಗಳಿಂದ ಬರುವವರಿಗೆ ಸಮಸ್ಯೆ ಹೆಚ್ಚಾಗಲಿದೆ ಮತ್ತು ಇದು ಹೊಸ ಕೊರೋನ ಸೋಂಕಿತರ ಸೃಷ್ಟಿಗೂ ಕಾರಣವಾಗಬಹುದು ಎಂಬ ದೂರುಗಳಿವೆ.
ಜ್ವರ, ನೆಗಡಿ, ಕೆಮ್ಮು, ಉಸಿರಾಟದ ತೊಂದರೆ ಕಂಡು ಬಂದ ತಕ್ಷಣ ಸರಕಾರಿ ವೈದ್ಯಾಧಿಕಾರಿ ಅಥವಾ ಆರೋಗ್ಯ ಕೇಂದ್ರ ಅಥವಾ ಆಸ್ಪತ್ರೆಗಳಿಗೆ ತಕ್ಷಣ ಮಾಹಿತಿ ನೀಡಬೇಕು ಎಂದು ಜಿಲ್ಲಾಡಳಿತ ಸೂಚನೆ ನೀಡಿದ ಬಳಿಕ ಸಾಮಾನ್ಯ ರೋಗಿಗಳು ಕೂಡ ಅನೇಕ ಸಮಸ್ಯೆ ಗಳನ್ನು ಎದುರಿಸಬೇಕಾಗಿದೆ ಎಂಬುದು ಜನರ ದೂರು. ಯಾವುದಾದರೋ ಅರೋಗ್ಯ ಸಮಸ್ಯೆಯಿಂದ ತಮ್ಮ ಬಳಿ ಜನ ಬಂದರೆ ಸರಕಾರದ ಗಮನ ಸೆಳೆಯದಿದ್ದರೆ ಪ್ರಕರಣವನ್ನು ನಿರ್ಲಕ್ಷಿಸಿದ ಆರೋಪ ತಮ್ಮ ಮೇಲೆ ಬೀಳಬಹುದು ಎಂಬ ಆತಂಕದಿಂದ ಖಾಸಗಿ ವೈದ್ಯರು, ಖಾಸಗಿ ಆಸ್ಪತ್ರೆಯ ಆಡಳಿತ ಅವರನ್ನು ಕೊರೋನ ಪರೀಕ್ಷೆಗೊಳಪಡಿಸಲು ಸರಕಾರಿ ಆರೋಗ್ಯ ಕೇಂದ್ರ ಅಥವಾ ವೆನ್ಲಾಕ್ಗೆ ರೋಗಿಗಳನ್ನು ಕಳುಹಿಸಿ ಕೊಡುತ್ತಿರುವ ವಿದ್ಯಮಾನ ಹೆಚ್ಚುತ್ತಿವೆ.
ಮಡಂತ್ಯಾರಿನ ಮಹಿಳೆಯೊಬ್ಬರಿಗೆ ಕಿಡ್ನಿಯ ಸಮಸ್ಯೆ ಇತ್ತು. ಸಣ್ಣ ಮಟ್ಟಿನ ಉಸಿರಾಟದ ತೊಂದರೆಯೂ ಇತ್ತು. ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರನ್ನು ಸರಕಾರದ ನಿಯಮದ ಪ್ರಕಾರ ತಕ್ಷಣ ವೆನ್ಲಾಕ್ಗೆ ದಾಖಲಿಸಲಾಯಿತು. ಹಾಗೇ ಎರಡು ದಿನದ ಬಳಿಕ ಅವರ ಗಂಟಲಿನ ದ್ರವದ ಮಾದರಿಯ ವರದಿ ನೆಗೆಟಿವ್ ಬಂತು. ಆದರೆ, ಈ ಎರಡೂ ದಿನವು ಅವರನ್ನು ಉಪಚರಿಸಲು ಬಂದವರು ಕೂಡ ವೆನ್ಲಾಕ್ನಲ್ಲಿ ಕಾಲ ಕಳೆಯಬೇಕಾಯಿತು.
ಸುಳ್ಯದ 5 ತಿಂಗಳ ಮಗುವೊಂದು ಕಳೆದ ರಾತ್ರಿ ಬಿದ್ದು ಗಾಯಗೊಂಡಿತ್ತು. ಆ ಮಗುವನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆ ಮಗುವಿಗೆ ಸ್ವಲ್ಪಜ್ವರವಿತ್ತು. ತಕ್ಷಣ ಖಾಸಗಿ ಆಸ್ಪತ್ರೆಯ ವೈದ್ಯರು ನೇರ ವೆನ್ಲಾಕ್ಗೆ ಮಗುವನ್ನು ದಾಖಲಿಸಿ ಕೊರೋನ ಪರೀಕ್ಷೆ ನಡೆಸಲು ಸೂಚಿಸಿದರು. ಉಪಾಯವಿಲ್ಲದೆ ಮನೆ ಮಂದಿ ಇದೀಗ ಮಗುವನ್ನು ವೆನ್ಲಾಕ್ಗೆ ದಾಖಲಿಸಿದ್ದಾರೆ.
ಇಂತಹ ನಾಲ್ಕೈದು ಪ್ರಕರಣಗಳು ದಿನನಿತ್ಯ ನಡೆಯುತ್ತಲೇ ಇರುತ್ತದೆ. ಆದರೆ ಕೋವಿಡ್ಆಸ್ಪತ್ರೆಯಾಗಿರುವ ವೆನ್ಲಾಕ್ ಅಂದ ತಕ್ಷಣ ಹೆಚ್ಚಿನ ಜನರಲ್ಲಿ ಇದೀಗ ಆತಂಕ ಶುರುವಾಗಿದೆ. ಹಾಗಾಗಿ ಹೆಚ್ಚಿ ನವರು ಅದರಲ್ಲೂ ಎಪಿಎಲ್ ಪಡಿತರ ಚೀಟಿದಾರರು ಮತ್ತು ಆರ್ಥಿಕವಾಗಿ ಅನುಕೂಲ ಸ್ಥರು ವೆನ್ಲಾಕಿಗೆ ತೆರಳಲು ಹಿಂಜರಿಯುತ್ತಾರೆ. ಒಲ್ಲದ ಮನಸ್ಸಿನಲ್ಲೇ ವೆನ್ಲಾಕ್ಗೆ ತೆರಳಿ ಕೊರೋನ ಪರೀಕ್ಷೆಗೊಳಪಡುತ್ತಾರೆ.
ಪರೀಕ್ಷೆಯ ವರದಿಯು ಪಾಸಿಟಿವ್ ಬಂದರೆ ವೆನ್ಲಾಕ್ ನಲ್ಲೇ ಚಿಕಿತ್ಸೆ ನೀಡಲಾಗುತ್ತದೆ. ಇನ್ನು ನೆಗೆಟಿವ್ಬಂದರೆ ಅವರನ್ನು ಮತ್ತೆ ಖಾಸಗಿ ಆಸ್ಪತ್ರೆಯವರು ದಾಖಲಿಸಿಕೊಳ್ಳಲು ಹಿಂಜರಿಯುತ್ತಾರೆ ಎಂಬ ಆರೋಪವಿದೆ. ಪಡೀಲ್ನ ಖಾಸಗಿ ಆಸ್ಪತ್ರೆಯನ್ನು ಸೀಲ್ಡೌನ್ ಮಾಡಿದ ಬಳಿಕವಂತೂ ನಗರದ ಬಹುತೇಕ ಖಾಸಗಿ ಆಸ್ಪತ್ರೆಯವರು ಸೀಲ್ಡೌನ್ ಭಯದಿಂದ ವೆನ್ಲಾಕ್ನಿಂದ ನೆಗೆಟಿವ್ ವರದಿ ಪಡೆದು ಬಂದ ಯಾವುದೇ ರೋಗಿಗಳನ್ನು ತೆಗೆದುಕೊಳ್ಳಲು ಮೀನಮೇಷ ಮಾಡುತ್ತಾರೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ರೋಗಿಯೊಬ್ಬರು ‘ವಾರ್ತಾಭಾರತಿ’ ಜೊತೆ ದೂರಿದ್ದಾರೆ.
ಹಾಗಾಗಿ ಉಪಾಯವಿಲ್ಲದೆ ಕೆಲವರು ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸುವುದು ಅನಿವಾರ್ಯವಾಗಿದೆ. ಹೀಗೆ ದಾಖಲಿಸುವಾಗ ವೈದ್ಯರು, ದಾದಿಯರು ಬಳಸುವ ಪಿಪಿಇ ಕಿಟ್ಗಳ ದುಬಾರಿ ಮೊತ್ತವನ್ನೂ ನಮ್ಮಿಂದಲೇ ವಸೂಲಿ ಮಾಡಲಾಗುತ್ತದೆ ಎಂದು ರೋಗಿಗಳ ಕುಟುಂಬಸ್ಥರು ದೂರಿಕೊಂಡಿದ್ದಾರೆ.
ಮೂರ್ನಾಲ್ಕು ಪಿಪಿಇ ಕಿಟ್ಗಳು ಮತ್ತು ಆ್ಯಂಬುಲೆನ್ಸ್ ವೆಚ್ಚ ಎಂದೆಲ್ಲಾ ಸೇರಿ ಅಚಾನಕ್ ಆಗಿ ವೆನ್ಲಾಕ್ನಿಂದ ಇತರ ಖಾಸಗಿ ಆಸ್ಪತ್ರೆಗೆ ರೋಗಿಗಳನ್ನು ಶಿಫ್ಟ್ ಮಾಡಲು ಕನಿಷ್ಠ 20 ಸಾವಿರ ರೂ. ಖರ್ಚು ಬೀಳುತ್ತಿದೆ. ಲಾಕ್ಡೌನ್ನಿಂದ ತತ್ತರಿಸಿರುವ ನಮಗೆ ಇದೆಲ್ಲಾ ದೊಡ್ಡ ಹೊರೆಯಾಗಿದೆ ಎಂದು ರೋಗಿಗಳ ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.
ಸರಕಾರಿ, ಖಾಸಗಿ ಆಸ್ಪತ್ರೆಗಳ ಮಧ್ಯೆ ಸಮನ್ವಯದ ಕೊರತೆಯಿಂದ ಹೀಗಾಗುತ್ತಿವೆ. ಖಾಸಗಿ ಆಸ್ಪತ್ರೆಗೆ ದಾಖಲಾಗಲು ಬಂದ ರೋಗಿಗಳು ಬೇರೆ ಬೇರೆ ಕಾರಣಕ್ಕೆ ಕೆಮ್ಮಿದರೆ, ಜ್ವರದ ಲಕ್ಷಣ ಕಂಡು ಬಂದರೆ ಅವರನ್ನು ನಿಯಮ ಪ್ರಕಾರ ತಕ್ಷಣ ವೆನ್ಲಾಕ್ಗೆ ಕಳುಹಿಸಿಕೊಡಲಾಗುತ್ತದೆ. ಅವರೊಂದಿಗೆ ಅವರನ್ನು ಉಪಚರಿಸಲು ಬಂದವರು ಕೂಡ ವೆನ್ಲಾಕ್ಗೆ ಹೋಗುವುದು ಅನಿವಾರ್ಯವಾಗಿದೆ. ರೋಗಿಯ ಗಂಟಲಿನ ದ್ರವದ ಮಾದರಿಯ ವರದಿ ಬರಲು ಕನಿಷ್ಠ ಒಂದೆರಡು ದಿನ ಬೇಕಾಗುತ್ತದೆ. ಆ ವರೆಗೆ ರೋಗಿಗಳನ್ನು ಉಪಚರಿಸಲು ಬಂದವರು ಹೊರಗಡೆ ಕಾಯಬೇಕಾಗುತ್ತದೆ. ಅಲ್ಲಿ ನೆಪಮಾತ್ರಕ್ಕೆ ‘ಸುರಕ್ಷಿತ ಅಂತರ’ವಿದೆ. ಸರಿಯಾಗಿ ನಿದ್ದೆ ಮಾಡಲು ವ್ಯವಸ್ಥೆ ಇಲ್ಲ. ಊಟ ತಿಂಡಿಯ ವ್ಯವಸ್ಥೆಯೂ ಇಲ್ಲ. ಇದರಿಂದ ಮಾನಸಿಕ ಹಿಂಸೆಯೂ ಆಗುತ್ತಿದೆ. ಇದರಿಂದ ರೋಗಿಗಳನ್ನು ಉಪಚರಿಸಲು ಹೋದವರಿಗೂ ಕೊರೋನ ವೈರಸ್ ರೋಗದ ಭೀತಿ ಕಾಡುತ್ತಿದೆ ಎಂದು ಹಲವು ಮಂದಿ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.
ಜಿಲ್ಲಾಡಳಿತವು ಸಂದಿಗ್ಧ ಸ್ಥಿತಿಯಲ್ಲಿ ಇಂತಹ ಕಠಿಣ ನಿರ್ಧಾರ ಮತ್ತು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯ. ಆದರೆ ರೋಗಿಗಳ ಮಾನಸಿಕ ಸ್ಥಿತಿಯನ್ನು ಕೂಡ ಅರ್ಥ ಮಾಡಿಕೊಳ್ಳುವ ಅಗತ್ಯವಿದೆ. ಎಲ್ಲಾ ರೋಗಿಗಳನ್ನೂ ‘ಕೊರೋನ’ಕ್ಕೆ ತಳಕು ಹಾಕುವುದರಿಂದ ಕಿಡ್ನಿ, ಹೃದ್ರೋಗಿಗಳು, ಸಕ್ಕರೆ ಕಾಯಿಲೆ, ರಕ್ತದೊತ್ತಡ ಕಾಯಿಲೆ ಪೀಡಿತರು ಅದರಲ್ಲೂ ವೃದ್ಧರು, ಮಕ್ಕಳು, ಮಹಿಳೆಯರು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುವ, ಅಲೆದಾಡಿದರೂ ಸೂಕ್ತ ಆಸ್ಪತ್ರೆಗೆ ದಾಖಲಾಗಲು ಹರಸಾಹಸ ಪಡುವಂತಾಗಿದೆ. ಈ ಬಗ್ಗೆ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಹೊಟ್ಟೆ ನೋವಾಗಲಿ, ಗಂಟಲು ನೋವಾಗಲಿ, ಜ್ವರವಾಗಲಿ.... ಮೊದಲು ಅದಕ್ಕೆ ಔಷಧ ನೀಡಬೇಕು. ಆದರೆ ಹೆಚ್ಚಿನ ಆಸ್ಪತ್ರೆಯವರು ತಕ್ಷಣಕ್ಕೆ ಆ ಬಗ್ಗೆ ಗಮನ ಹರಿಸದೆ ಕೊರೋನ ಪರೀಕ್ಷೆಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಇದರಿಂದ ರೋಗಿಯು ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಅಲೆದಾಡುವಂತಾಗಿದೆ. ರೋಗಿ ಮಾತ್ರವಲ್ಲ, ಅವರನ್ನು ಉಪಚರಿಸಲು ಬಂದವರೂ ಕೂಡ ಅಲೆದಾಡುವಂತಾಗಿದೆ.
ರೋಗಿಗಳನ್ನು ಉಪಚರಿಸುವವರು ಉಳಿದುಕೊಳ್ಳಲು ಮತ್ತು ಆಹಾರಕ್ಕಾಗಿ ವೆನ್ಲಾಕ್ ಆಸ್ಪತ್ರೆಯ ಪಕ್ಕದಲ್ಲೇ ಯಾವುದಾದರೊಂದು ಹೊಟೇಲ್, ಲಾಡ್ಜ್ ವ್ಯವಸ್ಥೆಯನ್ನ್ನು ಜಿಲ್ಲಾಡಳಿತವೇ ಮಾಡಿಕೊಡುವ ಅಗತ್ಯವಿದೆ. ಸುರಕ್ಷಿತ ಅಂತರವಿಲ್ಲದೆ ವೆನ್ಲಾಕ್ನಲ್ಲೇ ಉಳಿದರೆ ಮತ್ತಷ್ಟು ಕೊರೋನ ಪ್ರಕರಣವನ್ನು ಸ್ವತಃ ಜಿಲ್ಲಾಡಳಿತವೇ ಆಹ್ವಾನಿಸಿದಂತಾಗುತ್ತದೆ. ಇಂತಹ ವ್ಯವಸ್ಥಿತ ಕ್ರಮ ಕೈಗೊಳ್ಳದಿದ್ದರೆ ಮತ್ತು ಮುನ್ನೆಚ್ಚರಿಕೆ ವಹಿಸದಿದ್ದರೆ ಕೊರೋನ ವೈರಸ್ ರೋಗ ತಡೆಗಟ್ಟಲು ಅಸಾಧ್ಯ.
- ಅಬ್ದುಲ್ ಖಾದರ್, ಸಾಮಾಜಿಕ ಕಾರ್ಯಕರ್ತ ಮಂಗಳೂರು