ಸ್ಯಾನಿಟೈಸರ್ ಖರೀದಿಯಲ್ಲೂ ಕೋಟಿ ಕೋಟಿ ಅಕ್ರಮ ?
ಖರೀದಿಗೆ 97 ರೂ. ಬದಲು 250 ರೂ. ಪಾವತಿ !
ಸಾಂದರ್ಭಿಕ ಚಿತ್ರ
ಬೆಂಗಳೂರು, ಎ.26: ಇತ್ತೀಚಿಗೆ ಆರೋಗ್ಯ ಇಲಾಖೆ ಅಧೀನದ ಕರ್ನಾಟಕ ಸ್ಟೇಟ್ ಡ್ರಗ್ಸ್ ಲಾಜಿಸ್ಟಿಕ್ ಅಂಡ್ ವೇರ್ ಹೌಸಿಂಗ್ ಸೊಸೈಟಿ (ಕೆಡಿಎಲ್ಡಬ್ಲ್ಯುಎಸ್) ದೋಷಪೂರಿತ ವೈಯಕ್ತಿಕ ರಕ್ಷಣ ಸಾಧನಗಳು (ಪಿಪಿಇ ಕಿಟ್) ಖರೀದಿಸಿದ್ದ ಬೆನ್ನಲ್ಲೇ ಇದೀಗ ಸ್ಯಾನಿಟೈಸರ್ ಖರೀದಿಯಲ್ಲೂ ಭಾರೀ ಅಕ್ರಮ ನಡೆದಿದೆ ಎನ್ನಲಾಗಿದ್ದು, ಕೊರೋನ ಸೋಂಕಿನ ಹೆಸರಿನಲ್ಲಿ ಕಮಿಷನ್ ದಂಧೆ ತಲೆ ಎತ್ತಿದೆ ಎನ್ನುವ ಮಾತುಗಳು ಕೇಳಿಬಂದಿದೆ.
ಸಂಸ್ಥೆಯ ಕೆಲ ಅಧಿಕಾರಿಗಳು ದೊಡ್ಡ ಮಟ್ಟದಲ್ಲಿ ಕಮಿಷನ್ ಪಡೆದು ನಿಯಮ ಬಾಹಿರವಾಗಿ 500 ಎಂಎಲ್ ಸ್ಯಾನಿಟೈಸರ್ ಬಾಟಲಿಗೆ 97.44 ರೂ. ಬೆಲೆ ಬದಲು 250 ರೂ.ನಂತೆ ಐದು ಕಂಪೆನಿಗಳಿಗೆ 19 ಕೋಟಿ ರೂ. ಮೊತ್ತದ ಹ್ಯಾಂಡ್ ಸ್ಯಾನಿಟೈಸರ್ ಸರಬರಾಜು ಮಾಡಲು, ಖರೀದಿ ಆದೇಶ ನೀಡಿರುವ ಬಗ್ಗೆ ಗಂಭೀರ ಆರೋಪ ಬೆಳಕಿಗೆ ಬಂದಿದೆ.
ಏನಿದು ಆರೋಪ?: 2019ನೇ ಸಾಲಿನ ಅ.19ರಂದು ಎರಡು ವರ್ಷ ಕಾಲಾವಧಿಗೆ ಹ್ಯಾಂಡ್ ಸ್ಯಾನಿಟೈಸರ್ ಖರೀದಿ ಸಂಬಂಧ ಕೆಡಿಎಲ್ಡಬ್ಲ್ಯುಎಸ್ ಟೆಂಡರ್ ಆಹ್ವಾನಿಸಿತ್ತು. ಅದರಂತೆ ನ.18ರಂದು ಟೆಂಡರ್ ಸಂಬಂಧ ದಾಖಲೆ ಸಲ್ಲಿಸಲಾಗಿತ್ತು. ಟೆಂಡರ್ ನಲ್ಲಿ ಭಾಗವಹಿಸಿದ್ದ ಕಂಪೆನಿಯೊಂದು 97.44 ರೂ. ದರ ನಮೂದಿಸಿ ಎಲ್-1 ಸ್ಥಿತಿ ಪಡೆದಿತ್ತು. ಅದೇ ರೀತಿ, ಮತ್ತೊಂದು ಕಂಪೆನಿ 99 ರೂ. ದರ ನಮೂದಿಸಿದ್ದರಿಂದ ಎಲ್-2 ಸ್ಥಿತಿ ಹೊಂದಿತ್ತು. ಎಲ್-1 ಸ್ಥಿತಿ ಹೊಂದಿದ್ದ ಕಂಪೆನಿ ಮಾ.20ರಂದು ದರ ಕರಾರು ಪತ್ರ ಸಲ್ಲಿಸಿ 15 ತಿಂಗಳ ಅವಧಿಗೆ ಸ್ಯಾನಿಟೈಸರ್ ಪೂರೈಸಲು ಗುತ್ತಿಗೆ ಒಪ್ಪಂದ ಮಾಡಿಕೊಂಡಿತ್ತು ಎನ್ನಲಾಗಿದೆ.
ಈ ಅವಧಿಯಲ್ಲಿ ಟೆಂಡರ್ ನಿಯಮಾನುಸಾರ ಬೇಡಿಕೆ ಅನುಗುಣವಾಗಿ ಕೆಡಿಎಲ್ಡಬ್ಲ್ಯುಎಸ್ ಎಷ್ಟು ಪ್ರಮಾಣದಲ್ಲಿ ಖರೀದಿ ಆದೇಶ ನೀಡಿದ್ದರೂ, ಆ ಕಂಪೆನಿ ಗುತ್ತಿಗೆ ಅನ್ವಯ ಹ್ಯಾಂಡ್ ಸ್ಯಾನಿಟೈಸರ್ ಸರಬರಾಜು ಮಾಡಬೇಕಿತ್ತು. ಆದರೆ, ಸಂಸ್ಥೆಯ ಕೆಲ ಅಧಿಕಾರಿಗಳು ಕೋಟಿಗಟ್ಟಲೆ ಕಮಿಷನ್ ಹಣ ಪಡೆದು ಪ್ರತಿ ಬಾಟಲ್ಗೆ 250 ರೂ.ನಂತೆ ಎಲ್-1 ಕಂಪೆನಿ ಸೇರಿ 5 ಕಂಪೆನಿಗಳಿಗೆ 19 ಕೋಟಿ ರೂ.ಮೊತ್ತದಲ್ಲಿ ಸ್ಯಾನಿಟೈಸರ್ ಪೂರೈಸಲು ಖರೀದಿ ಆದೇಶ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮೂರರಷ್ಟು ಬೆಲೆ?: ಕಾಳದಂಧೆಕೋರರನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರಕಾರ 500 ಎಂಎಲ್ ಸ್ಯಾನಿಟೈಸರ್ ಬಾಟಲಿಗೆ 250 ರೂ.ದರ ನಿಗದಿಗೊಳಿಸಿದೆ. ಮುಕ್ತ ಮಾರುಕಟ್ಟೆಯಲ್ಲಿ ಒಂದೆರಡು ಬಾಟಲಿಗಳಿಗೆ ಅಷ್ಟೇ ಮೊತ್ತಕ್ಕೆ ಖರೀದಿಸಬೇಕಾಗುತ್ತದೆ. ಆದರೆ, ಹೋಲ್ಸೆಲ್ನಲ್ಲಿ ಲಕ್ಷಾಂತರ ರೂ ಬಾಟಲಿಗಳನ್ನು ಖರೀದಿ ಮಾಡುವ ಸಂದರ್ಭದಲ್ಲಿ ಕಡಿಮೆ ಮೊತ್ತಕ್ಕೆ ನಿಗದಿಗೊಳಿಸಲಾಗುತ್ತದೆ.
ರಾಜ್ಯದಲ್ಲಿ ಸಾಕಷ್ಟು ಮಂದಿ ಸಗಟು ವಿತರಕರು ಇದ್ದಾರೆ. ಆದರೆ, ಸಂಸ್ಥೆಯ ಕೆಲ ಅಧಿಕಾರಿಗಳು ಕೆಟಿಪಿಪಿ ಕಾಯ್ದೆ 200ರ 4(ಜಿ) ಮತ್ತು 4(ಎ)ರಡಿಯಲ್ಲಿ ಕಡಿಮೆ ದರದಲ್ಲಿ ಸ್ಯಾನಿಟೈಸರ್ ಪೂರೈಸಲು ಅನುಮೋದನೆ ನೀಡಬೇಕಿತ್ತು. ಅದನ್ನು ಬಿಟ್ಟು ಕಮಿಷನ್ ಆಸೆಗಾಗಿ ಅಧಿಕಾರಿಗಳು ಏಕಾಏಕಿ ಮೂರುಪಟ್ಟು ಹೆಚ್ಚು ದರ ನಮೂದಿಸಿ ಕಂಪೆನಿಗಳಿಂದ ಖರೀದಿ ಮಾಡಿದ್ದಾರೆ.
ನಿಯಮ ಅನುಸರಿಸುತ್ತಿಲ್ಲ: ಕೇರಳ, ಮಹಾರಾಷ್ಟ್ರ ಇನ್ನಿತರೆ ರಾಜ್ಯಗಳ ಆರೋಗ್ಯ ಇಲಾಖೆಯಲ್ಲಿ ದರಪಟ್ಟಿ ಮೂಲಕ ಔಷಧಿ ಖರೀದಿಸಿದ್ದರೂ ಹಾಗೂ ಇ-ಮೇಲ್ ಮೂಲಕ ದರಪಟ್ಟಿ ಪಡೆದರೂ ನಿಗದಿತ ದಿನಾಂಕದಂದೆ ದರಪಟ್ಟಿ ತೆರೆಯುವಂತೆ ವೆಬ್ಸೈಟ್ ಅಥವಾ ಇ-ಪೋರ್ಟಲ್ನಲ್ಲಿ ಪಾಸ್ವರ್ಡ್ ಹಾಕಿರಲಾಗುತ್ತದೆ. ಆದರೆ, ನೆರೆ ರಾಜ್ಯಗಳ ಮಾದರಿಯನ್ನು ಏಕೆ ನಮ್ಮ ರಾಜ್ಯದಲ್ಲಿ ಅನುಸರಿಸುತ್ತಿಲ್ಲ? ಒಂದು ವೇಳೆ ಆ ಮಾದರಿಯನ್ನು ಅನುಸರಿಸಿದರೆ ಕೆಲ ಭ್ರಷ್ಟ ಅಧಿಕಾರಿಗಳು ಸಿಕ್ಕಿ ಬೀಳುತ್ತಾರೆ ಎಂಬ ಭಯದಿಂದ ಈ ನಿಯಮವನ್ನು ಕೈಬಿಡಲಾಗಿದೆ ಎನ್ನುವ ಆರೋಪವು ಇದೆ.
ಹಣ ವಸೂಲಿ ಮಾಡಿ
ಟೆಂಡರ್ ನಲ್ಲಿ ನಮೂದಿಸಿದ ಮೊತ್ತಕ್ಕೆ ಖರೀದಿ ಆದೇಶ ನೀಡದೆ ಮೂರು ಪಟ್ಟು ಹೆಚ್ಚಿನ ಮೊತ್ತ ನಮೂದಿಸಿ ಖರೀದಿ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಸರಕಾರಕ್ಕೆ ಬರೋಬ್ಬರಿ 11.89 ಕೋಟಿ ರೂ. ನಷ್ಟವಾಗಿದೆ. ಈ ಮೊತ್ತವನ್ನು ಸಂಬಂಧಿಸಿದ ಅಧಿಕಾರಿಗಳಿಂದ ವಸೂಲಿ ಹಾಗೂ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂಬ ಸಲಹೆ ಕೇಳಿಬಂದಿದೆ.