ಅತಿಸಾರದ ಲಕ್ಷಣಗಳ ಬಗ್ಗೆ ನಿಮಗೆ ಗೊತ್ತಿರಲಿ
ಅತಿಸಾರವು ಸೂಕ್ಷ್ಮಜೀವಾಣುಗಳಿಂದ ಉಂಟಾಗುವ ಜಠರದ ಅಥವಾ ಕರುಳಿನ ಉರಿಯೂತವಾಗಿದೆ. ಸಾಮಾನ್ಯ ಪರಿಸ್ಥಿತಿಯಲ್ಲಿ ಡಯರಿಯಾ ಅಥವಾ ಅತಿಸಾರ ಯಾವುದೇ ವಿಶೇಷ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿಲ್ಲದೆ 2ರಿಂದ 4 ದಿನಗಳಲ್ಲಿ ಗುಣವಾಗುತ್ತದೆ. ಆದರೆ ತೀವ್ರ ಅತಿಸಾರವು ಮಾರಣಾಂತಿಕವಾಗಿದೆ. ಇದಕ್ಕೆ ಮುಖ್ಯ ಕಾರಣ ನಿರ್ಜಲೀಕರಣವಾಗಿರಬಹುದು,ಏಕೆಂದರೆ ನಿರಂತರ ಬೇಧಿಯಿಂದಾಗಿ ಶರೀರದಲ್ಲಿಯ ದ್ರವಾಂಶವು ನಷ್ಟವಾಗುತ್ತಿರುತ್ತದೆ. ಪೌಷ್ಟಿಕತೆಯ ಕೊರತೆಯಿಂದ ಬಳಲುತ್ತಿರುವವರು,ಶಿಶುಗಳು,ಎಳೆಯ ಮಕ್ಕಳು,ಹಸಿವೆಯಿಂದಿರುವವರು ಮತ್ತು ದುರ್ಬಲ ನಿರೋಧಕ ಶಕ್ತಿಯನ್ನು ಹೊಂದಿರುವವರು ಇಂತಹ ಮಾರಣಾಂತಿಕ ಸೋಂಕಿಗೆ ಗುರಿಯಾಗುವ ಹೆಚ್ಚಿನ ಅಪಾಯವನ್ನು ಎದುರಿಸುತ್ತಿರುತ್ತಾರೆ. ಐದು ವರ್ಷಕ್ಕಿಂತ ಕಡಿಮೆ ಪ್ರಾಯದ ಮಕ್ಕಳಲ್ಲಿ ಸಾವಿಗೆ ಎರಡನೇ ಪ್ರಮುಖ ಕಾರಣವಾಗಿರುವ ಅತಿಸಾರದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗುತ್ತದೆ.
ಅತಿಸಾರವು ಸೌಮ್ಯದಿಂದ ಹಿಡಿದು ತೀವ್ರಸ್ವರೂಪದವರೆಗೆ ಆಗಿರಬಹುದು. ಸೌಮ್ಯ ಸ್ವರೂಪದಲ್ಲಿದ್ದಾಗ ಕೊಂಚ ನೀರಿನಂತಹ ಮಲವಿಸರ್ಜನೆಯಾಗುತ್ತದೆ ಮತ್ತು ಸ್ವಲ್ಪ ಹೊಟ್ಟೆಯ ತೊಂದರೆಯಿರುತ್ತದೆ. ತೀವ್ರ ಅತಿಸಾರದ ಸಂದರ್ಭದಲ್ಲಿ ಅತಿಯಾಗಿ ನೀರಿನಂತಹ ಮಲವಿಸರ್ಜನೆಯಾಗುತ್ತದೆ ಮತ್ತು ಹೊಟ್ಟೆಯಲ್ಲಿ ಸೆಳೆತವುಂಟಾಗುತ್ತಿರುತ್ತದೆ. ಇದು ದಿನಗಳವರೆಗೆ ಕಾಡಬಹುದು. ತೀವ್ರ ಅತಿಸಾರದಿಂದ ಬಳಲುತ್ತಿರುವವರು ಆಗಾಗ್ಗೆ ಟಾಯ್ಲೆಟ್‌ಗೆ ಧಾವಿಸಬೇಕಾಗುತ್ತದೆ.
ಪದೇ ಪದೇ ತೆಳ್ಳಗಿನ ಮತ್ತು ನೀರಿನಂತಹ ಮಲ ವಿಸರ್ಜನೆ,ಹೊಟ್ಟೆ ಸೆಳೆತ,ಅತಿಯಾದ ಹೊಟ್ಟೆನೋವು,ಪದೇ ಪದೇ ಟಾಯ್ಲೆಟ್‌ಗೆ ಹೋಗಬೇಕಾದ ಅಗತ್ಯ,ಅತಿಯಾದ ವಾಂತಿ, ವಾಕರಿಕೆ ಮತ್ತು ತಲೆನೋವು,ಹಸಿವು ಕ್ಷೀಣ,ಬಳಲಿಕೆ ಮತ್ತು ಆಯಾಸ, ಹೊಟ್ಟೆಯುಬ್ಬರ, ಕೆಲವು ಪ್ರಕರಣಗಳಲ್ಲಿ ಮಲದಲ್ಲಿ ರಕ್ತ ಹೋಗುವುದು ಇವು ಎಲ್ಲ ವಯೋಮಾನದವರಲ್ಲಿ ಅತಿಸಾರದ ಸಾಮಾನ್ಯ ಲಕ್ಷಣಗಳಾಗಿವೆ.
ಒಂದೆರಡು ದಿನಗಳ ಅತಿಸಾರದ ಬಳಿಕ ಜನರು ಜಡತೆಗೊಳಗಾಗುತ್ತಾರೆ,ಆದರೆ ಪೀಡಿತ ವ್ಯಕ್ತಿಯು ಈ ಅವಧಿಯಲ್ಲಿ ಯಥೇಚ್ಛ ನೀರು ಸೇವಿಸುತ್ತಿರಬೇಕು. ನಷ್ಟಗೊಂಡಿರುವ ಶರೀರದಲ್ಲಿಯ ಖನಿಜಗಳು ಮತ್ತು ಲವಣಗಳನ್ನು ಮರಳಿ ಪಡೆಯಲು ವಿಫುಲ ದ್ರವ ಸೇವನೆಯನ್ನು ಬಿಟ್ಟರೆ ಬೇರೆ ಮಾರ್ಗವಿಲ್ಲ. ಶಿಶುಗಳು ಅತಿಸಾರದಿಂದ ಬಾಧಿತವಾಗಿದ್ದರೆ ತಾಯಂದಿರು ಎಂದಿನಂತೆ ಅವುಗಳಿಗೆ ಎದೆಹಾಲು ಉಣಿಸುವುದನ್ನು ಮುಂದುವರಿಸಬೇಕು. ವಯಸ್ಕರಲ್ಲಿ ಅತಿಸಾರವು ಒಂದು ವಾರಕ್ಕೂ ಹೆಚ್ಚಿನ ಅವಧಿಗೆ ಮುಂದುವರಿದರೆ ಅದು ಕಳವಳಕ್ಕೆ ಕಾರಣವಾಗುತ್ತದೆ ಮತ್ತು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ.
ಅತಿಸಾರ ಮತ್ತು ವಾಂತಿ ಶರೀರದಲ್ಲಿ ನಿರ್ಜಲೀಕರಣಕ್ಕೆ ಕಾರಣವಾಗುತ್ತವೆ. ನಿರ್ಜಲೀಕರಣದಿಂದಾಗಿ ಶರೀರದಲ್ಲಿಯ ವಿದ್ಯುದ್ವಿಚ್ಛೇದ್ಯಗಳು ಮತ್ತು ನೀರಿನ ನಷ್ಟವು ಶರೀರದಲ್ಲಿ ನೀರಿನ ಮಟ್ಟವನ್ನು ತಗ್ಗಿಸುವುದು ಮಾತ್ರವಲ್ಲ,ವಿದುದ್ವಿಚ್ಛೇದ್ಯಗಳ ಸಮತೋಲನ,ಸ್ನಾಯುಗಳ ಚಟುವಟಿಕೆ ಮತ್ತು ಇತರ ಮಹತ್ವದ ಕಾರ್ಯಗಳ ಮೇಲೆ ಪ್ರತಿಕೂಲ ಪರಿಣಾಮಗಳನ್ನುಂಟು ಮಾಡುತ್ತದೆ. ಮಕ್ಕಳು,ಹಿರಿಯ ಪ್ರಾಯದವರು ಮತ್ತು ದುರ್ಬಲ ನಿರೋಧಕ ಶಕ್ತಿಯನ್ನು ಹೊಂದಿದವರು ಅತಿಸಾರಕ್ಕೆ ಸಕಾಲಿಕ ಚಿಕಿತ್ಸೆ ಪಡೆಯದಿದ್ದರೆ ನಿರ್ಜಲೀಕರಣವು ಗಂಭೀರ ಸಮಸ್ಯೆಯಾಗಬಹುದು. ನಿರ್ಜಲೀಕರಣವು ಶರೀರದ ಅಂಗಾಂಗಗಳಿಗೆ ಹಾನಿ,ಆಘಾತ ಅಥವಾ ಕೋಮಾದಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಲ್ಲದು.
ಅತಿಯಾದ ಬಾಯಾರಿಕೆ,ಎಂದಿಗಿಂತ ಕಡಿಮೆ ಮೂತ್ರವಿಸರ್ಜನೆ,ಗಾಢ ವರ್ಣದ ಮೂತ್ರ,ಬಾಯಿ ಒಣಗುವಿಕೆ,ಬಳಲಿಕೆ,ತಲೆ ಸುತ್ತುವಿಕೆ ಅಥವಾ ತಲೆ ಹಗುರವಾದಂತೆ ಅನಿಸುವುದು ಇವು ವಯಸ್ಕರಲ್ಲಿ ನಿರ್ಜಲೀಕರಣದ ಲಕ್ಷಣಗಳಾಗಿವೆ.
ಬಾಯಿ ಮತ್ತು ನಾಲಿಗೆ ಒಣಗುವುದು,ಅಳುವಾಗ ಕಣ್ಣೀರು ಬರದಿರುವುದು,ಮೂತ್ರ ವಿಸರ್ಜನೆ ಕಡಿಮೆಯಾಗುವುದು,ಮೂರು ಗಂಟೆ ಅಥವಾ ಹೆಚ್ಚಿನ ಅವಧಿಗೆ ತೊಡಿಸಿದ ಡೈಪರ್ ಹಸಿಯಾಗದಿರುವುದು,ಕುಗ್ಗಿದ ಕಣ್ಣುಗಳು ಮತ್ತು ಕೆನ್ನೆಗಳು ಇತ್ಯಾದಿಗಳು ಶಿಶುಗಳು ಮತ್ತು ಎಳೆಯ ಮಕ್ಕಳಲ್ಲಿ ನಿರ್ಜಲೀಕರಣದ ಲಕ್ಷಣಗಳಾಗಿವೆ.
ಅತಿಸಾರದಲ್ಲಿ ಮೂರು ವಿಧಗಳಿವೆ
ಎಕ್ಯೂಟ್ ವಾಟರಿ ಡಯರಿಯಾ: ಇದು ಹಲವಾರು ಗಂಟೆಗಳು ಅಥವಾ ದಿನಗಳ ಕಾಲ ಇರಬಹುದು. ಕಾಲರಾ ಸೋಂಕಿನಿಂದಲೂ ಇದು ಉಂಟಾಗುತ್ತದೆ.
ಎಕ್ಯೂಟ್ ಬ್ಲಡಿ ಡಯರಿಯಾ: ಇದು ಮಲದಂತಹ ನೀರನ್ನು ಒಳಗೊಂಡಿರುತ್ತದೆ, ಆದರೆ ಮಲದೊಂದಿಗೆ ರಕ್ತವೂ ಬರುತ್ತದೆ. ಇದನ್ನು ಬೇಧಿ ಎಂದೂ ಕರೆಯಲಾಗುತ್ತದೆ.
ಪರ್ಸಿಸ್ಟಂಟ್ ಡಯರಿಯಾ: ಇದು 14 ದಿನಗಳು ಅಥವಾ ಅದಕ್ಕೂ ಹೆಚ್ಚಿನ ಅವಧಿಗೆ ಇರುತ್ತದೆ.
ಅತಿಸಾರಕ್ಕೆ ಕಾರಣಗಳು
ಜಠರಗರುಳು ನಾಳದಲ್ಲಿ ಸೋಂಕುಗಳು ಅತಿಸಾರಕ್ಕೆ ಪ್ರಮುಖ ಕಾರಣಗಳಾಗಿವೆ. ಕಲುಷಿತ ನೀರು ಅಥವಾ ಆಹಾರದ ಸೇವನೆ,ಆ್ಯಂಟಿಬಯಾಟಿಕ್‌ಗಳು ಅಥವಾ ಸ್ಟಮಕ್ ಕ್ಲೀನ್ಸರ್‌ಗಳಂತಹ ಔಷಧಿಗಳ ಸೇವನೆ,ಅರೆಬೆಂದಿರುವ ಅಥವಾ ಹಸಿ ಮಾಂಸ ಸೇವನೆ, ಸಿಸ್ಟಿಕ್ ಫೈಬ್ರಾಸಿಸ್ ಅಥವಾ ಕಿಣ್ವಗಳ ಕೊರತೆಯಂತಹ ಜನ್ಮದತ್ತ ದೋಷ,ಹೊಟ್ಟೆ ಅಥವಾ ಪಿತ್ತಕೋಶದ ಶಸ್ತ್ರಚಿಕಿತ್ಸೆ,ಇರಿಟೇಬಲ್ ಬೊವೆಲ್ ಸಿಂಡ್ರೋಮ್‌ನಂತಹ ಹೊಟ್ಟೆಯ ಸಮಸ್ಯೆಗಳು ಇತ್ಯಾದಿಗಳು ಅತಿಸಾರವನ್ನುಂಟು ಮಾಡುತ್ತವೆ.
ಮಕ್ಕಳಲ್ಲಿ ರೋಟಾವೈರಸ್ ಅತಿಸಾರವನ್ನುಂಟು ಮಾಡಬಲ್ಲದು. ಅತಿಯಾದ ಧಗೆಯ ಅಥವಾ ಆರ್ದ್ರ ವಾತಾವರಣವೂ ಅತಿಸಾರಕ್ಕೆ ಕಾರಣವಾಗಬಲ್ಲದು. ಶಿಶುಗಳಲ್ಲ ಹಲ್ಲು ಮೂಡುವ ಸಂದರ್ಭದಲ್ಲಿ ಅತಿಸಾರ ಉಂಟಾಗುತ್ತದೆ.