ವಲಸಿಗ ಕಾರ್ಮಿಕರು, ವಿದ್ಯಾರ್ಥಿಗಳಿಗೆ ತವರು ರಾಜ್ಯಕ್ಕೆ ವಾಪಸಾಗಲು ವಿಶೇಷ ರೈಲಿನ ವ್ಯವಸ್ಥೆ
ಹೊಸದಿಲ್ಲಿ, ಮೇ 1: ಕೊರೋನವೈರಸ್ ಲಕ್ಷಣವಿರದ ವಲಸಿಗ ಕಾರ್ಮಿಕರು, ವಿದ್ಯಾರ್ಥಿಗಳು, ಯಾತ್ರಾರ್ಥಿಗಳು ಅಥವಾ ಪ್ರವಾಸಿಗರಿಗೆ ತಮ್ಮ ತವರು ರಾಜ್ಯಗಳಿಗೆ ವಾಪಸಾಗಲು ಅನುಮತಿ ನೀಡಿದ ಎರಡು ದಿನಗಳ ಬಳಿಕ ಕೇಂದ್ರ ಸರಕಾರ ಶುಕ್ರವಾರ ಲಾಕ್‌ಡೌನ್ ವೇಳೆ ವಿಶೇಷ ರೈಲು ಓಡಿಸುವುದಾಗಿ ಘೋಷಿಸಿದೆ.
ವಲಸೆ ಕಾರ್ಮಿಕರಿದ್ದ ಮೊದಲ ವಿಶೇಷ ರೈಲು ಇಂದು ಬೆಳಗ್ಗೆ 4:30ಕ್ಕೆ ತೆಲಂಗಾಣದ ಲಿಂಗಂಪಲ್ಲಿಯಿಂದ ಜಾರ್ಖಂಡ್‌ನ ಹಟಿಯಾ ಜಿಲ್ಲೆಗೆ ತೆರಳಿದ್ದು,1.200 ಕಾರ್ಮಿಕರು ಈ ರೈಲಿನಲ್ಲಿ ಪ್ರಯಾಣಿಸಿದ್ದಾರೆ.
24 ಬೋಗಿಗಳಿರುವ ರೈಲಿನ ಒಂದು ಕಂಪಾರ್ಟ್‌ಮೆಂಟ್‌ನಲ್ಲಿ ಸಾಮಾನ್ಯವಾಗಿ 72 ಜನರು ಪ್ರಯಾಣಿಸಲು ಆಸನವಿರುತ್ತದೆ. ದೈಹಿಕ ಅಂತರ ಕಾಪಾಡಿಕೊಳ್ಳುವ ಉದ್ದೇಶದಿಂದ ಕೇವಲ 54 ಜನರಿಗೆ ಅವಕಾಶ ನೀಡಲಾಗಿದೆ.
ರೈಲು ಏರುವ ಮೊದಲು ಎಲ್ಲ ಪ್ರಯಾಣಿಕರನ್ನು ಸ್ಟ್ರೀನಿಂಗ್ ನಡೆಸಲಾಗುತ್ತಿದೆ.
ತೆಲಂಗಾಣದಂತೆಯೇ ಎರಡನೇ ವಿಶೇಷ ರೈಲು ಕೇರಳದಿಂದ ನಿರ್ಗಮಿಸಲು ಸಜ್ಜಾಗಿದೆ. ಸಂಜೆ ಆರು ಗಂಟೆಗೆ ಕೇರಳದ ಎರ್ನಾಕುಲಂನಿಂದ ಒಡಿಶಾದ ಭುವನೇಶ್ವರಕ್ಕೆ ರೈಲು ತೆರಳಲಿದೆ ಎಂದು ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ ಕೇರಳದಿಂದ 1,000 ಕಾರ್ಮಿಕರು ವಿಶೇಷ ರೈಲಿನಿಂದ ತವರು ಜಿಲ್ಲೆಗೆ ತೆರಳುತ್ತಿದ್ದಾರೆ.
ವಿಶೇಷ ರೈಲುಗಳನ್ನು ಓಡಿಸುವಂತೆ ಹೆಚ್ಚಿನೆಲ್ಲಾ ರಾಜ್ಯ ಸರಕಾರಗಳು ಭಾರತೀಯ ರೈಲ್ವೆ ವಲಯದ ಕಚೇರಿಗಳನ್ನು ಕೋರಿವೆ