ಆತ್ಮಾವಲೋಕನಕ್ಕೆ ಅವಕಾಶ ಮಾಡಿಕೊಟ್ಟ ಕೊರೋನ: ಮಣಿಕಾಂತ್ ಕದ್ರಿ
ಕದ್ರಿ ಎಂದೊಡನೆ ಸಂಗೀತ ಪ್ರಿಯರ ಕಿವಿ ನೆಟ್ಟಗಾಗುತ್ತದೆ. ಕದ್ರಿ ಎನ್ನುವ ಮಂಗಳೂರು ಕರಾವಳಿಯ ಪ್ರದೇಶವನ್ನು ದಕ್ಷಿಣ ಭಾರತದಲ್ಲಿ ಪ್ರಖ್ಯಾತಿಗೊಳಿಸಿದ ಕೀರ್ತಿ ಖ್ಯಾತ ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್ ಅವರಿಗೆ ಸಲ್ಲುತ್ತದೆ. ಇಂದು ಅವರಿಲ್ಲ. ಆದರೆ ಅವರ ಪುತ್ರ ಮಣಿಕಾಂತ್ ಕದ್ರಿಯವರು ತುಳು, ಕನ್ನಡ ಸೇರಿದಂತೆ ದಕ್ಷಿಣ ರಾಜ್ಯದ ಭಾಷೆಗಳಾದ ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಸಿನೆಮಾ ಸಂಗೀತ ನಿರ್ದೇಶಕರಾಗಿ ಹೆಸರಾಗಿದ್ದಾರೆ. ಸಾಮಾನ್ಯವಾಗಿ ಪಂಚಭಾಷೆಗಳಲ್ಲಿ ವೃತ್ತಿ ಮಾಡಿದವರಿಗೆ ಅವಕಾಶಗಳಿಗೆ ಕೊರತೆಯಾಗುವುದಿಲ್ಲ. ಆದರೆ ದೇಶಕ್ಕೆ ದೇಶವೇ ಲಾಕ್‌ಡೌನ್ ಪರಿಸ್ಥಿತಿಯಲ್ಲಿರಬೇಕಾದರೆ ಎಲ್ಲರೂ ಸುಮ್ಮನಿರಲೇಬೇಕು! ಇಂಥ ಸಂದರ್ಭದಲ್ಲಿ ಮಣಿಕಾಂತ್ ಕದ್ರಿಯವರ ಜತೆಗೆ ‘ವಾರ್ತಾಭಾರತಿ’ ನಡೆಸಿರುವ ವಿಶೇಷ ಮಾತುಕತೆ ಇದು.
ಎಲ್ಲಿದ್ದೀರ? ಹೇಗಿದ್ದೀರ?
ನಾನು ಚೆನ್ನೈನ ಮನೆಯಲ್ಲಿದ್ದೀನಿ. ನಮ್ಮದು ಮೈಲಾಪುರ. ಸದ್ಯಕ್ಕೆ ಕೆಂಪು ವಲಯದಲ್ಲಿದೆ. ಹಾಗಾಗಿ ಮನೆಯಿಂದ ಹೊರಗೆ ಕಾಲಿಡಲು ಹೋಗಿಲ್ಲ. ಸ್ಟುಡಿಯೊ ನನ್ನದೇ ಆದರೂ ಮನೆಯಿಂದ ಸ್ವಲ್ಪ ದೂರದಲ್ಲಿದೆ. ಹಾಡು ಕಂಪೋಸಿಂಗ್ ಮನೆಯಿಂದಲೂ ಮಾಡಬಹುದು. ಆದರೆ ರೆಕಾರ್ಡಿಂಗ್ ಮಾತ್ರ ಸ್ಟುಡಿಯೊಗೆ ಹೋಗಲೇಬೇಕು. ಸದ್ಯಕ್ಕೆ ನಾನು ಯಾವುದೇ ಮ್ಯೂಸಿಕ್ ಆಫರ್ ಒಪ್ಪಿಕೊಂಡಿಲ್ಲ. ಹೊಸ ಪ್ರಾಜೆಕ್ಟ್‌ಗಳು ಶುರುವಾಗುವ ಮಾತುಕತೆ ನಡೆಯುತ್ತಿತ್ತು. ಅಷ್ಟರಲ್ಲಿ ಹೀಗಾಯಿತು. ಸ್ನೇಹಿತರ ಕೊರೋನ ಜಾಗೃತಿ ಗೀತೆಗಳೇನಾದರೂ ಇದ್ದರೆ ಅದನ್ನು ಮನೆಯಲ್ಲೇ ರೆಕಾರ್ಡಿಂಗ್ ಸ್ಟುಡಿಯೊ ಇರುವ ಗಾಯಕರಿಂದ ಹಾಡಿಸುತ್ತೇವೆ. ಹಾಗಾಗಿ ಎಲ್ಲ ಹೊತ್ತು ಮನೆಯಲ್ಲೇ ಇರುತ್ತೇನೆ.
ಮನೆಯಲ್ಲಿ ಕಾಲ ಕಳೆಯುವುದು ಕಷ್ಟವೆನಿಸಿದೆಯೇ?
ಖಂಡಿತವಾಗಿ ಇಲ್ಲ. ಮೊದಲೆಲ್ಲ ನನಗೆ ಮನೆಯವರಿಗೆ ಸಮಯ ಕೊಡುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ನಾನು ತುಂಬ ಪ್ರಯಾಣಿಸುತ್ತಿರುತ್ತೇನೆ. ತಂದೆಯ ಅನಾರೋಗ್ಯ ಮತ್ತು ನಿಧನದ ಬಳಿಕ ಮಂಗಳೂರಿನ ಕಡೆಗಿನ ಓಡಾಟ ಹೆಚ್ಚೇ ಇತ್ತು. ಬೆಂಗಳೂರಿಗೆ ಕೂಡ ವೃತ್ತಿಗೆ ಸಂಬಂಧಿಸಿದಂತೆ ಬರುತ್ತಿದ್ದೆ. ಡ್ರೈವಿಂಗ್ ಫ್ಯಾಷನ್ ಕೂಡ ಆಗಿದ್ದ ಕಾರಣ, ಹೆಚ್ಚಾಗಿ ನಾನೇ ಕಾರ್ ಡ್ರೈವ್ ಮಾಡುತ್ತಾ ಸುತ್ತಾಡುವುದನ್ನು ಎಂಜಾಯ್ ಮಾಡುತ್ತಿದ್ದೆ. ಆದರೆ ಈಗ ಅನಿವಾರ್ಯವಾಗಿ ಮನೆಯಲ್ಲೇ ಇದ್ದೇನೆ. ಆ ಕಾರಣದಿಂದಾಗಿ ಎಲ್ಲ ಸಮಯ ಪತ್ನಿ ಮಕ್ಕಳೊಂದಿಗೆ ಕಳೆಯಲು ಸಾಧ್ಯವಾಗುತ್ತಿದೆ. ನನಗೆ ಇಬ್ಬರು ಮಕ್ಕಳು. ಮಗ ಅವ್ಯಕ್ತ್‌ನಿಗೆ ಹತ್ತು ವರ್ಷ; ಮಗಳು ಅನಿಕಾಗೆ ಆರು ವರ್ಷ. ಇಬ್ಬರು ಮಕ್ಕಳು, ಕಚೇರಿ, ಮನೆ ಕೆಲಸ ಎಂದು ನನ್ನ ಪತ್ನಿ ಅದಿತಿ ಎಷ್ಟು ಕಷ್ಟಪಡಬೇಕಾಗಿತ್ತು ಎನ್ನುವುದು ಈಗ ನನಗೆ ಚೆನ್ನಾಗಿ ಅರ್ಥವಾಗುತ್ತಿದೆ. ಎಲ್ಲರಿಗೂ ಇದು ಒಳ್ಳೆಯ ಸಮಯ.
ಆದರೆ ಅಪರೂಪಕ್ಕೆ ಮನೆಯೊಳಗೆ ಜತೆಗಿರುವ ದಂಪತಿಯರೆಲ್ಲ ಜಗಳ ಮಾಡುತ್ತಿರುವ ಸುದ್ದಿಯೇ ಹೆಚ್ಚಾಗಿದೆಯಲ್ಲ?
ಅದೇ ಸಂದರ್ಭದಲ್ಲಿ ಗರ್ಭಿಣಿಯಾದವರ ಸಂಖ್ಯೆ ಹೆಚ್ಚಿರುವುದನ್ನು ಕೂಡ ನೆನಪಿಸಿಕೊಳ್ಳಿ(ನಗು). ನನ್ನ ಪ್ರಕಾರ ಪ್ರೇಮ ಜಗಳ ಎಲ್ಲವೂ ಕೂಡ ಅವರವರ ವ್ಯಕ್ತಿಗತವಾದವು. ಅದು ಅವರವರ ಆಲೋಚನೆಗಳಿಗೆ ಸಂಬಂಧ ಪಟ್ಟಿರುವಂಥದ್ದು. ಜಗತ್ತಿನಲ್ಲಿ ಯಾರು ಕೂಡ ಪರ್ಫೆಕ್ಟ್ ಆಗಿರಲು ಸಾಧ್ಯವಿಲ್ಲ. ನಮ್ಮ ಮೂಗಿನ ನೇರಕ್ಕೆ ಇನ್ನೊಂದು ಜೀವ ಇರಬೇಕು ಎಂದು ನಿರೀಕ್ಷೆ ಮಾಡುವುದು ತಪ್ಪು. ಅರ್ಥಮಾಡಿಕೊಳ್ಳುವುದೇ ಪ್ರಮುಖ. ಮಾನವಜನ್ಮ ನೀರಿನ ಮೇಲಿನ ಗುಳ್ಳೆಯಂತೆ ಎನ್ನುವುದನ್ನು ನೆನಪಿಸಿಕೊಂಡು, ಆತ್ಮಾವಲೋಕನ ಮಾಡಿಕೊಳ್ಳಲು ಉತ್ತಮ ಅವಕಾಶ ಇದು. ನಮಗಂತೂ ಜಗಳ ನಡೆದಿಲ್ಲ. ಮೊದಲೇ ನಾವು ಪ್ರೇಮಿಸಿ ಮದುವೆಯಾದವರು. ಅಂದೇ ಆಕೆಯನ್ನು ಅರ್ಥಮಾಡಿಕೊಂಡಿದ್ದೆ. ಆದರೆ ನಿರಂತರವಾಗಿ ಕಾರ್ಯನಿರತನಾಗಿದ್ದ ಕಾರಣದಿಂದಾಗಿ ಭಾವನೆಗಳನ್ನು ಹಂಚಲು ಬಿಡುವಿಲ್ಲದಂತಹ ಪರಿಸ್ಥಿತಿ ಇತ್ತು. ನನಗೆ ಸುಮ್ಮನಿದ್ದರೂ ಇಷ್ಟು ಚೆನ್ನಾಗಿ ದಿನಕಳೆಯಬಹುದು ಎನ್ನುವುದರ ಅನುಭವ ಈಗ ಪಡೆಯುವಂತಾಗಿದೆ.
ಸ್ಟುಡಿಯೊದಲ್ಲಿ ಕೆಲಸಗಳು ಯಾವಾಗ ಶುರುವಾದೀತು?
ಆಗಲೇ ಹೇಳಿದಂತೆ ರೆಕಾರ್ಡಿಂಗ್ ಆಫರ್ಸ್ ಬಂದರೂ ನಾನು ಒಪ್ಪಿಕೊಳ್ಳುತ್ತಿಲ್ಲ. ಯಾಕೆಂದರೆ ಪ್ರಕರಣಗಳು ದಿನ ನಿತ್ಯ ಹೆಚ್ಚಾಗುತ್ತಲೇ ಇವೆ. ಹಾಗಾಗಿ ನಾನು ಕೂಡ ರಿಸ್ಕ್ ತೆಗೆದುಕೊಳ್ಳುತ್ತಿಲ್ಲ. ಅಲ್ಲದೆ ಸ್ಟುಡಿಯೊ ತಂತ್ರಜ್ಞರು ಕೇರಳದವರು ಇದ್ದಾರೆ. ಅವರನ್ನು ಕರೆಸಬೇಕಾದರೆ ಬಾರ್ಡರ್ ಓಪನ್ ಆಗಬೇಕು. ಬಂದವರನ್ನು ಥರ್ಮಲ್ ಸ್ಕ್ಯಾನಿಂಗ್ ಗೆ ಒಳಪಡಿಸಬೇಕು. ಜತೆಗೆ 33 ಪರ್ಸೆಂಟ್ ಕೆಲಸಗಾರರನ್ನು ಮಾತ್ರ ಬಳಸಬಹುದಾಗಿದೆ. ಅಲ್ಲದೆ ಹಿಂದಿನ ದಿನಗಳಿಗೆ ಹೋಲಿಸಿದರೆ ಬರುತ್ತಿರುವ ಆಫರ್‌ಗಳು ತುಂಬ ಕಡಿಮೆ ಪ್ರಮಾಣದಲ್ಲಿವೆ. ಲಾಕ್‌ಡೌನ್ ಮುಗಿದ ಬಳಿಕ ಆಫರ್ ಹೆಚ್ಚುತ್ತದೆ ಎಂದು ನಿರೀಕ್ಷಿಸೋಣ. ಆದರೆ ಹೆಚ್ಚಾಗಲು, ಹಿಂದಿನಷ್ಟು ಲಾಭದಾಯಕವಾಗಲು ವರ್ಷವಾದರೂ ತೆಗೆದುಕೊಳ್ಳುವುದು ಖಚಿತ. ಇನ್ನು ನನ್ನ ಪತ್ನಿಯ ವಿಚಾರಕ್ಕೆ ಬಂದರೆ ಆಕೆ ಮ್ಯೂಸಿಕ್ ಮತ್ತು ಡಾನ್ಸ್ ಸ್ಕೂಲ್ ಕೂಡ ನಡೆಸುತ್ತಿದ್ದಳು. ಅದನ್ನಂತೂ ಸದ್ಯದಲ್ಲಿ ಆರಂಭಿಸುವುದು ಸಾಧ್ಯವಿಲ್ಲ. ಅದೇ ರೀತಿ ಸಂಗೀತಜ್ಞರಿಗೆ ಪ್ರ್ಯಾಕ್ಟೀಸ್ ನೀಡುತ್ತಿದ್ದೆವು. ಆದರೆ ಅದಕ್ಕೆ ಸಂಗೀತಗಾರರು ಬರಬೇಕಾದರೆ ಪಬ್ಲಿಕ್ ಶೋಸ್ ಆರಂಭವಾಗಬೇಕು. ಒಟ್ಟಿನಲ್ಲಿ ಆಗಸ್ಟ್ ತನಕ ಏನನ್ನೂ ನಿರೀಕ್ಷೆ ಮಾಡಲು ಕೂಡ ಸಾಧ್ಯವಿಲ್ಲ.