ಗರಿಷ್ಠ ಕೊರೋನ ಪೀಡಿತ 20 ಜಿಲ್ಲೆಗಳಿಗೆ ಕೇಂದ್ರ ಅಧ್ಯಯನ ತಂಡ
ಹೊಸದಿಲ್ಲಿ, ಮೇ 4: ದೇಶದಲ್ಲಿ ಅತಿಹೆಚ್ಚು ಸಂಖ್ಯೆಯ ಕೊರೋನ ಪ್ರಕರಣಗಳು ವರದಿಯಾಗಿರುವ 20 ಜಿಲ್ಲೆಗಳಿಗೆ ಅಧ್ಯಯನ ತಂಡವನ್ನು ಕಳುಹಿಸಿಕೊಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈಗಾಗಲೇ ಇದಕ್ಕಾಗಿ 20 ತಂಡಗಳನ್ನು ರಚಿಸಲಾಗಿದ್ದು, ವಿವಿಧ ಜಿಲ್ಲೆಗಳಿಗೆ ನಿಯೋಜಿಸಲಾಗುತ್ತಿದೆ.
ದಿಲ್ಲಿ ಸೇರಿದಂತೆ ಒಂಬತ್ತು ರಾಜ್ಯಗಳಲ್ಲಿ ಈ 20 ಜಿಲ್ಲೆಗಳಿದ್ದು, ಕ್ಲಸ್ಟರ್ ಕಂಟೈನ್‌ಮೆಂಟ್ ಯೋಜನೆಯನ್ನು ಸೂಕ್ತವಾಗಿ ಜಾರಿಗೊಳಿಸುವುದು ಮತ್ತು ಕಣ್ಗಾವಲು ಕ್ರಮಗಳನ್ನು ಕೈಗೊಳ್ಳಲು ನೆರವಾಗುವುದು ಇದರ ಉದ್ದೇಶ.
ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ಅತ್ಯಂತ ತೀವ್ರ ಸೋಂಕುಪೀಡಿತ 20 ಜಿಲ್ಲೆಗಳೆಂದರೆ ಮಹಾರಾಷ್ಟ್ರದ ಮುಂಬೈ, ಥಾಣೆ ಮತ್ತು ಪುಣೆ, ಗುಜರಾತ್‌ನ ಅಹ್ಮದಾಬಾದ್, ಸೂರತ್ ಹಾಗೂ ವಡೋದರ, ದಿಲ್ಲಿಯ ಅಗ್ನೇಯ ಮತ್ತು ಕೇಂದ್ರ ಜಿಲ್ಲೆ, ರಾಜಸ್ಥಾನದ ಜೈಪುರ ಮತ್ತು ಜೋಧಪುರ, ಉತ್ತರ ಪ್ರದೇಶದ ಆಗ್ರಾ ಮತ್ತು ಲಕ್ನೋ, ತೆಲಂಗಾಣದ ಹೈದರಾಬಾದ್, ತಮಿಳುನಾಡಿನ ಚೆನ್ನೈ, ಪಶ್ಚಿಮ ಬಂಗಾಳದ ಕೊಲ್ಕತ್ತಾ ಮತ್ತ ಆಂಧ್ರ ಪ್ರದೇಶದ ಕರ್ನೂಲ್, ಗಂಟೂರ್ ಮತ್ತ ಕೃಷ್ಣಾ.
ಈ ತಂಡದಲ್ಲಿ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್‌ಸಿಡಿಸಿ), ಎಐಐಎಂಎಸ್, ಜೆಐಐಪಿಎಂಇಆರ್ ಮತ್ತು ರಾಷ್ಡ್ರೀಯ ನೈರ್ಮಲ್ಯ ಮತ್ತು ಸಾರ್ವಜನಿಕ ಆರೋಗ್ಯ ಸಂಸ್ಥೆಯ ತಜ್ಞರು ಇರುತ್ತಾರೆ. ಈ ತಂಡಗಳು ಆಯಾ ರಾಜ್ಯಗಳ ಆರೋಗ್ಯ ಇಲಾಖೆ ಪ್ರಧಾನ/ಮುಖ್ಯ ಕಾರ್ಯದರ್ಶಿಗಳಿಗೆ ವರದಿ ಸಲ್ಲಿಸಲಿವೆ. ಇದರಲ್ಲಿ ತಜ್ಞರ ಅಭಿಪ್ರಾಯ, ಸುಧಾರಣೆಯಾಗಬೇಕಾದ ಕ್ಷೇತ್ರದ ವಿವರ ಮತ್ತು ಶಿಫಾರಸುಗಳು ಇರುತ್ತವೆ ಎಂದು ಅಧಿಕೃತ ಪ್ರಕಟನೆ ಹೇಳಿದೆ.