ವಲಸೆ ಕಾರ್ಮಿಕರ ರೈಲು ಪ್ರಯಾಣ ದರವನ್ನು PM CARES ಇಂದ ಭರಿಸಬಾರದೇಕೆ ?
ಫೈಲ್ ಚಿತ್ರ
ಆತ್ಮೀಯರೇ,
ಒಂದನೇ ಲಾಕ್ಡೌನಿಗೆ ಮುಂಚೆಯೇ ಸರ್ಕಾರವು ವಲಸೆ ಕಾರ್ಮಿಕರನ್ನು ಅವರವರ ಊರು ಸೇರಲು ಅವಕಾಶ ಕಲ್ಪಿಸಿ ನಂತರ ಲಾಕ್ ಡೌನ್ ಮಾಡಬೇಕಿತ್ತು. ಆದರೆ ಹಾಗೆ ಮಾಡದೆ, ಅವರನ್ನು ಇನ್ನಿಲ್ಲದ ಸಂಕಷ್ಟ ಗಳಿಗೆ ಗುರಿ ಮಾಡಿದ ಕೇಂದ್ರ ಸರ್ಕಾರ ಈಗ ಮೂರನೇ ಲಾಕ್ ಡೌನ ಪ್ರಾರಂಭವಾದ ನಂತರ ಅವರು ಊರುಗಳಿಗೆ ಹೋಗಲು ಅವಕಾಶವಿತ್ತಿದೆ.
ಆದರೆ ಮೋದಿ ಸರ್ಕಾರದ ಈ ತುಘಲಕ್ ಆಡಳಿತಕ್ಕೆ ಬಲಿಯಾಗಿ ದೇಶಾದ್ಯಂತ ಲಕ್ಷಾಂತರ ವಲಸೆ ಕಾರ್ಮಿಕರು ಈ ಲಾಕ್ ಡೌನ್ ಅವಧಿಯ 40 ದಿನಗಳಿಂದ ನರಕ ಸದೃಶ ಯಾತನೆಗೆ, ಹಸಿವು, ಅಭದ್ರತೆ, ಅವಮಾನ ಮತ್ತು ಆತಂಕಗಳಿಗೆ ಗುರಿಯಾಗಿದ್ದಾರೆ. ಕನಿಷ್ಟ ಮುನ್ನೂರು ಜನರಾದರೂ ಬಲಿಯಾಗಿದ್ದಾರೆ.
ಮೊದಲನೇ ಲಾಕ್ಡೌನಿಗೆ ಮುಂಚೆಯೇ ಈಗ ಮಾಡುತ್ತಿರುವಂತೆ ವಲಸೆ ಕಾರ್ಮಿಕರನ್ನು ಅವರವರ ರಾಜ್ಯಗಳಿಗೆ ಕಳಿಸಿರುತ್ತಿದ್ದರೆ ಈ ಎಲ್ಲಾ ಕಷ್ಟ ನಷ್ಟ ಯಾತನೆಗಳು ತಪ್ಪುತ್ತಿರಲಿಲ್ಲವೇ?
ಹಾಗಿದ್ದಲ್ಲಿ ಮೋದಿ ಸರ್ಕಾರ ಏಕೆ ಮಾಡಲಿಲ್ಲ? ಇದನ್ನು ಮಾಧ್ಯಮಗಳೂ ಕೇಳುವುದಿಲ್ಲ. ಸರ್ಕಾರವೂ ಹೇಳುವುದಿಲ್ಲ. ಈಗಲಾದರೂ ಮೋದಿ ಸರ್ಕಾರ ತನ್ನ ಮುಂದಾಲೋಚನೆಯಿಲ್ಲದ ಸಂವೇದನಾರಹಿತವಾದ ನೀತಿಗಳಿಂದಾದ ತಪ್ಪುಗಳನ್ನು ಅರಿತು ಕೊಂಡಿದೆಯೇ? ಖಂಡಿತಾ ಇಲ್ಲ.
ವಲಸೆ ಕಾರ್ಮಿಕರನ್ನು ಅವರವರ ರಾಜ್ಯಗಳಿಗೆ ಕಳಿಸುವುದಕ್ಕೆ ಸರ್ಕಾರ ವಿಧಿಸಿರುವ ಪ್ರಕ್ರಿಯಾ ಸಂಹಿತೆಗಳು ಅದನ್ನು ರುಜುವಾತು ಪಡಿಸುತ್ತವೆ. ಮೊದಲಿಗೆ, ಸರ್ಕಾರ ಹೊರ ರಾಜ್ಯದವರಿಗೆ ರೈಲು ವ್ಯವಸ್ಥೆ ಮಾಡಲೇ ಸಿದ್ಧವಿರಲಿಲ್ಲ. ಅನಿವಾರ್ಯತೆಯಿಂದಾಗಿ ಒಪ್ಪಿಕೊಂದ ನಂತರ ಅದಕ್ಕೆ ಬೇಕಾದ ಸ್ಟಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್(SOP)ಯನ್ನು ಮೇ-1 ರಂದು ಬಿಡುಗಡೆ ಮಾಡಿತು (1).
ಅದರ ಪ್ರಕಾರ ಆಯಾ ರಾಜ್ಯಗಳು ಎಲ್ಲಿಂದ-ಎಲ್ಲಿಗೆ- ಎಷ್ಟು ಜನರು ಹೋಗಬೇಕಿದೆ ಎಂಬ ಪಟ್ಟಿಯನ್ನು ತಯಾರಿಸಿ ರೈಲು ಇಲಾಖೆಗೆ ಕಳಿಸಬೇಕು.ಅದನ್ನು ಆಧರಿಸಿ ರೈಲು ಇಲಾಖೆಯು ಟ್ರೈನುಗಳನ್ನು ಓಡಿಸುತ್ತದೆ. ಒಂದು ಟ್ರೈನಿನಲ್ಲಿ 1200 ಜನರಿಗೆ ಮಾತ್ರ ಪ್ರವೇಶ. ಅಷ್ಟು ಜನರ ಟಿಕೆಟುಗಳನ್ನು ರೈಲು ಇಲಾಖೆ ಮುದ್ರಿಸಿ ರಾಜ್ಯ ಸರ್ಕಾರಕ್ಕೆ ಕೊಡುತ್ತದೆ. ರಾಜ್ಯ ಸರ್ಕಾರಗಳು ಪ್ರಯಾಣಿಕರಿಂದ ಟಿಕೆಟಿನ ಹಣವನ್ನು ಸಂಗ್ರಹಿಸಿ ಇಲಾಖೆಗೆ ಕೊಡಬೇಕು. ಪ್ರತಿ ಪ್ರಯಾಣಿಕನಿಗೆ ಸ್ಲೀಪರ್ ದರ್ಜೆ ಪ್ರಯಾಣದ ದರದ ಜೊತೆಗೆ ಸೂಪರ್ ಫಾಸ್ಟ್ ಸರ್ ಚಾರ್ಜ್ 30ರೂ ಹಾಗೂ ನಿಲ್ದಾಣದಲ್ಲಿ ಕೊಡುವ ಊಟ ಮತ್ತು ನೀರಿನ ವೆಚ್ಚ 20 ರೂ. ಗಳನ್ನು ಸಹ ಇಲಾಖೆ ಸಂಗ್ರಹಿಸುತ್ತಿದೆ!
ಸಾಮಾನ್ಯವಾಗಿ ಭಾರತದ ಮಹಾನಗರಗಳಿಗೆ ವಲಸೆ ಬರುವವರು ಉತ್ತರ ಭಾರತದ ಬಡ ರಾಜ್ಯಗಳಾದ ಪ. ಬಂಗಾಳ, ಬಿಹಾರ , ಉತ್ತರ ಪ್ರದೇಶ, ಒರಿಸ್ಸಾ ಮತ್ತು ಜಾರ್ಖಂಡ್ ರಾಜ್ಯದವರೇ ಆಗಿರುತ್ತಾರೆ. ಹೀಗಾಗಿ ಬೆಂಗಳೂರಿನಿಂದ ಈ ರಾಜ್ಯಗಳ ಅತಿ ದೂರದ ಊರುಗಳಿಗೆ ಅಂದಾಜು 900 ರೂ. ಚಾರ್ಜು ಇರುತ್ತದೆ. ಹಾಗೂ ಇತರ ವೆಚ್ಚಗಳೆಲ್ಲವೂ ಸೇರಿ 1000 ರೂ. ಆಗುತ್ತದೆ. ಒಂದು ಟ್ರೈನಿನಲ್ಲಿ ಹೋಗುವ 1200 ಕಾರ್ಮಿಕರಿಗೆ ತಲಾ 1000 ದಂತೆ 12 ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ರೈಲ್ವೆ ಇಲಾಖೆಯ ಪ್ರಕಾರ ಈವರೆಗೆ ರಾಜ್ಯಗಳು ಸಲ್ಲಿಸಿರುವ ಬೇಡಿಕೆಗಳ ಪ್ರಕಾರ 500 ಟ್ರೈನುಗಳು ಬೇಕಾಗಬಹುದು.
(2) ಆದರೆ ಇಲಾಖೆಯು ಈಗಾಗಲೇ ತಲಾ 18-23 ಕೋಚುಗಳ 1200ರೇಕುಗಳನ್ನು ಸಿದ್ಧಮಾಡಿಟ್ಟುಕೊಂಡಿದೆ.
ಅಂದರೆ ಒಂದು ಟ್ರೈನಿಗೆ 1200 ಜನರಂತೆ ಒಂದು ಟ್ರನಿಗೆ ತಲಾ 12 ಲಕ್ಷ ರೂ ವೆಚ್ಚದಂತೆ 500 ಟ್ರೈನುಗಳಲ್ಲಿ 6 ಲಕ್ಷ ವಲಸೆ ಕಾರ್ಮಿಕರನ್ನು ಊರುಗಳಿಗೆ ತಲುಪಿಸಲು ತಗಲುವ ವೆಚ್ಚ ಕೇವಲ 60 ಕೋಟಿ ರೂ.ಗಳು ಮಾತ್ರ.
ಭಾರತೀಯ ರೈಲ್ವೆ ಬಳಿ ಅಥವಾ ಭಾರತ ಸರ್ಕಾರದ ಬಳಿ ಇಷ್ಟು ಹಣವಿಲ್ಲವೇ ? ಅಥವಾ ವಲಸೆ ಕಾರ್ಮಿಕರನ್ನು ಮೋದಿ ಸರ್ಕಾರ ಈ ದೇಶದ ನಾಗರಿಕರೆಂದು ಪರಿಗಣಿಸುವುದಿಲ್ಲವೇ ?
ಕೆಳಗಿನ ಮೂರ್ನಾಲ್ಕು ಉದಾಹರಣೆಗಳನ್ನೂ ಹಾಗೂ ಕಾರಣಗಳನ್ನು ಗಮನಿಸಿ:
1. ಕೋವಿಡ್ ದಾಳಿಯಾದ ಮೇಲೆ ಈ ವಿಪತ್ತಿನಿಂದ ಭಾರತದ ನಾಗರಿಕರನ್ನು ರಕ್ಷಿಸಿ ಪುನರ್ವಸತಿ ಮಾಡಲೆಂದೇ ಮಾರ್ಚ್ 28ರಂದು ಪ್ರಧಾನಿ ಮೋದಿಯವರು PM CARES ಎಂಬ ಹೊಸ ನಿಧಿಯನ್ನು ಸ್ಥಾಪಿಸಿದ್ದಾರೆ
(3). ಇದರ ಪೂರ್ಣ ಅರ್ಥ Prime Ministers Citizen Care and Relief in Emergency Situations ಅಂತ. ಅಂದರೆ ತುರ್ತು ಹಾಗೂ ಆಪತ್ತಿನ ಸಂದರ್ಭಗಳಲ್ಲಿ ನಾಗರಿಕರ ರಕ್ಷಣೆಗಾಗಿ ಮತ್ತು ಪುನರ್ವಸತಿಗಾಗಿ ಸ್ಥಾಪಿಸಲಾಗಿರುವ ನಿಧಿ.
ಪತ್ರಿಕೆಗಳ ವರದಿಗಳ ಪ್ರಕಾರ ಈ ನಿಧಿ ಸ್ಥಾಪಿತವಾದ ಒಂದೇ ವಾರದಲ್ಲಿ 6500 ಕೋಟಿ ರೂ ನಿಧಿ ಸಂಗ್ರಹವಾಗಿದೆ. ಇದಕ್ಕೆ ಆದಾಯ ಕರ ವಿನಾಯಿತಿಯೂ ಇರುವುದರಿಂದ ಕಾರ್ಪೊರೇಟ್ ಧಣಿಗಳು ತಮ್ಮ ಸಿಎಸ್ಆರ್ ವೆಚ್ಚದ ಹಣವನ್ನೆಲ್ಲಾ ಇದಕ್ಕೇ ಸುರಿದು ಸರ್ಕಾರ ಕೃಪಾಕಟಾಕ್ಷದಲ್ಲಿರುವ ಪ್ರಯತ್ನ ಮಾಡುತ್ತಿದ್ದಾರೆ.
ಟಾಟಾ ಇದಕ್ಕೆ ಈಗಾಗಲೇ 1500 ಕೋಟಿ ಕೊಟ್ಟಿದ್ದರೆ, ಅಜಿಂ ಪ್ರೇಂಜಿ 1000 ಕೋಟಿ ಕೊಟ್ಟಿದ್ದಾರೆ. ಹೀ॒ಗೆ ಈವರೆಗೆ ಏನಿಲ್ಲವೆಂದರೂ 35000 ಕೋಟಿ ರೂ ಸಂಗ್ರಹವಾಗಿರಬಹುದೆಂದು ಅಂದಾಜಿದೆ.
(4).ಈಗ ಎಲ್ಲಾ ವಲಸೆ ಕಾರ್ಮಿಕರ ಒಟ್ಟಾರೆ ರೈಲು ಪ್ರಯಾಣ ದರದ ಮೊತ್ತ ಕೇವಲ 60 ಕೋಟಿ. ಅಂದರೆ ಈಗಾಗಲೇ ನಾಗರಿಕರ ರಕ್ಷಣೆ ಮತ್ತು ಪುನರ್ವಸತಿಗೆಂದು ಸ್ಥಾಪಿತವಾಗಿರುವ PM CARES ನಲ್ಲಿ ಸಂಗ್ರಹವಾಗಿರುವ ಮೊತ್ತದ ಕೇವಲ ಶೇ. 0.17ರಷ್ಟು ಮಾತ್ರ.. ಅಷ್ಟು ಸಣ್ಣ ಪ್ರಮಾಣದ ಮೊತ್ತವನ್ನು ಕೂಡ ಮೋದಿ ಸರ್ಕಾರ ವಲಸೆ ಕಾರ್ಮಿಕರಿಗೆ ವ್ಯಯಿಸಲು ಸಿದ್ಧವಿಲ್ಲ ಎಂದಾಯಿತಲ್ಲವೇ ? ಅಂದರೆ ಮೋದಿ ಸರ್ಕಾರದ ಪ್ರಕಾರ ವಲಸೆ ಕಾರ್ಮಿಕರು ಈ ದೇಶದ ನಾಗರಿಕರಲ್ಲವೇ ?
2. ಭಾರತದ ರೈಲ್ವೆ ಇಲಾಖೆ 2018-19ರಲ್ಲಿ 3000 ಕೋಟಿ ರೂ. ಆದಾಯ ಮಾಡಿದೆ. ಪ್ರಯಾಣಿಕರ ಶುಲ್ಕವನ್ನು ಹೊರತುಪಡಿಸಿಯೇ ಹೋದ ವರ್ಷ 400 ಕೋಟಿ ಲಾಭ ಮಾಡಿದೆ. (5). ಅಷ್ಟು ಮಾತ್ರವಲ್ಲ. PM CARES ನಿಧಿಗೆ ಭಾರತೀಯ ರೈಲ್ವೇಸ್ 161ಕೋಟಿ ರೂ ದೇಣಿಗೆಯನ್ನೂ ನೀಡಿದೆ. (6). ಅಂದರೆ ಭಾರತೀಯ ರೈಲ್ವೇಸ್ ಬಳಿಯೂ ವಲಸೆ ಕಾರ್ಮಿಕರ ವೆಚ್ಚವನ್ನು ಭರಿಸಿದರೂ ಕಡಿಮೆಯಾಗದಷ್ಟು ಸಂಪನ್ಮೂಲವಿದೆ. ಹಾಗಿದ್ದರೂ ಏಕೆ ಮೂಳೆ ಚಕ್ಕಳವಾಗಿರುವ ಕಾರ್ಮಿಕರಿಂದಲೇ ಪ್ರಯಾಣ ದರವನ್ನು ಸುಲಿಯಹೊರಟಿದೆ.
3. ADR ಎಂಬ ಸಂಸ್ಥೆಯು ಭಾರತೀಯ ಚುನಾವಣಾ ಅಯೋಗದಿಂದ ಸಂಗ್ರಹಿಸಿರುವ ಮಾಹಿತಿ ಮತ್ತು ವಿಶ್ಲೇಷಣೆಯ ಪ್ರಕಾರ ಭಾರತದ ರಾಜಕೀಯ ಪಕ್ಷಗಳಲ್ಲಿ ಆಡಳಿತರೂಢ BJP ಪಕ್ಷಕ್ಕೆ 2018ರ ಸಾಲಿನಲ್ಲಿ 2410 ಕೋಟಿ ರೂಗಳಿಗೂ ಹೆಚ್ಚಿನ ನಿಧಿ ಸಂಗ್ರಹವಾಗಿತ್ತು. ಅದರ ನಂತರದ ಅತಿ ದೂರದ ಸ್ಥಾನದಲ್ಲಿದ್ದ ಕಾಂಗ್ರೆಸ್ ಗೆ ಕೇವಲ 900 ಕೋಟಿ ರೂ.ಗಳ ನಿಧಿ ಸಂಗ್ರಹವಾಗಿತ್ತು. (7) ಅಂದರೆ ಬಿಜೆಪಿ ಪಕ್ಷವು ತನ್ನ ವಾರ್ಷಿಕ ಸಂಗ್ರಹದ ಶೇ. 3ರಷ್ಟು ಹಣವನ್ನು ಈ ಸಂಕಷ್ಟಕರ ಸಂದರ್ಭದಲ್ಲಿ ರೈಲ್ವೇಸ್ ಗೆ ನೀಡಿದರೂ ಆರು ಲಕ್ಷ ವಲಸಿಗರು ನೆಮ್ಮದಿಯಿಂದ ಊರು ತಲುಪಬಹುದು ಎಂದಾಯಿತಲ್ಲವೇ ?. ಆದರೆ ರಾಜಕೀಯ ಕಾರಣಗಳಿಗೋ ಮತ್ತ್ಯಾವದಕ್ಕೋ ಕಾಂಗ್ರೆಸ್ ಪಕ್ಷ ರೈಲ್ವೇಸ್ ಗೆ ವಲಸಿಗರ ಪ್ರಯಾಣ ದರ ಕೊಡಲು ಮುಂದೆ ಬಂದಿದಿಯೇ ವಿನಾ ಬಿಜೆಪಿ ಒಂದು ಪಕ್ಷವಾಗಿ ಈವರೆಗೆ ಇದರ ಬಗ್ಗೆ ಒಂದೇ ಒಂದು ಹೇಳಿಕೆಯನ್ನೂ ನೀಡಿಲ್ಲ.
ಅಂತಿಮವಾಗಿ ಮೋದಿ ಸರ್ಕಾರದ ಬಾಲ್ಕನಿ ದೃಷ್ಟಿಕೋನವನ್ನು ಸಾಬೀತು ಪಡಿಸುವ ಈ ಸಂಗತಿಯನ್ನು ಗಮನಿಸಿ...
ಭಾರತ ಸರ್ಕಾರವು ಜಗತ್ತಿನ ವಿವಿಧ ದೇಶಗಳಲ್ಲಿ ಕೋವಿಡ್ ಹರಡಲು ಪ್ರಾರಂಭವಾದ 2020ರ ಜನವರಿಯಿಂದ ಮಾರ್ಚ್ ವರೆಗೆ ವಿಶೇಷವಾಗಿ ಚೀನಾ, ಜಪಾನ್ ಮತ್ತು ಇಟಲಿಗಳಲ್ಲಿ ಸಿಕ್ಕಿಹಾಕಿಕೊಂಡಿದ್ದ ಭಾರತೀಯರನ್ನು ವಿಮಾನದಲ್ಲಿ ಕರೆದುಕೊಂಡು ಬರಲು ಕೋಟ್ಯಾಂತರ ರೂಪಾಯಿಗಳನ್ನು ವೆಚ್ಚ ಮಾಡಿದೆ.
ಸದನದಲ್ಲಿ ವಿದೇಶಾಂಗ ರಾಜ್ಯಮಂತ್ರಿ ವಿ ಮುರಳೀಧರನ್ ಅವರು ಕೊಟ್ಟ ಉತ್ತರದ ಪ್ರಕಾರ ಚೀನಾದಲ್ಲಿ ಸಿಕ್ಕಿಹಾಕಿಕೊಂಡಿದ್ದ 600ಕ್ಕೂ ಹೆಚ್ಚು ಭಾರತೀಯರನ್ನು ಎರಡು ವಿಶೇಷ ವಿಮಾನಗಳಲ್ಲಿ ಭಾರತಕ್ಕೆ ಕರೆದುಕೊಂಡು ಬರಲು ಏರ್ ಇಂಡಿಯಾ ಸಂಸ್ಥೆಗೆ ಭಾರತ ಸರ್ಕಾರದ ವಿದೇಶಾಂಗ ಇಲಾಖೆ 6 ಕೋಟಿ ರೂ ಪಾವತಿ ಮಾಡಿದೆ. ನಂತರದ ದಿನಗಳಲ್ಲಿ ಇಟಲಿ ಮತ್ತು ಜಪಾನುಗಳಲ್ಲಿ ಸಿಕ್ಕಿಬಿದ್ದಿದ್ದ 400 ಕ್ಕೂ ಹೆಚ್ಚು ಜನರನ್ನು ಉಚಿತವಾಗಿ ವಿಮಾನದಲ್ಲಿ ಕರೆತರಲಾಗಿದೆ.
(8) ಈ ಒಂದು ಸಾವಿರ ಬಾಲ್ಕನಿ ಭಾರತೀಯರ ಉಚಿತ ವಿಮಾನ ವೆಚ್ಚ ಏನಿಲ್ಲವೆಂದರೂ 10 ಕೋಟಿ ರೂಗಳು. ಅವರನ್ನು ಕರೆ ತಂದದ್ದು ಖಂಡಿತಾ ತಪ್ಪಲ್ಲ. ಆದರೆ ಕೇವಲ ಒಂದು ಸಾವಿರ ಪ್ರಯಾಣಿಕರ ಕ್ಷೇಮಕ್ಕೆ 10 ಕೋಟಿ ವೆಚ್ಚ ಮಾಡಲು ಸಿದ್ಧವಿರುವ ಮೋದಿ ಸರ್ಕಾರ 6 ಲಕ್ಷ ವಲಸೆ ಕಾರ್ಮಿಕ ರನ್ನು ರೈಲಿನಲ್ಲಿ ಕಳಿಸಲು ಮಾತ್ರ ತನ್ನ ಬಳಿ ಇರುವ ನಿಧಿಯ ಶೇ.0.17ರಷ್ಟು ನಿಧಿಯನ್ನೂ ವೆಚ್ಚ ಮಾಡಲು ಸಿದ್ಧವಿಲ್ಲ.
ಇದರ ತಾತ್ಪರ್ಯವೇನು ? ಮೋದಿ ಸರ್ಕಾರದಲ್ಲಿ ವಲಸೆ ಕಾರ್ಮಿಕರ ಮಾನ ಪ್ರಾಣಕ್ಕಿಂತ ಬಾಲ್ಕನಿ ಭಾರತದ ಮಾನ ಪ್ರಾಣವೇ ಹೆಚ್ಚು ಬೆಲೆ ಎಂದಲ್ಲವೇ?
ದೇಶಭಕ್ತರು ಉತ್ತರಿಸಬೇಕು...
ಸರ್ಕಾರ ಈ ಕೂಡಲೇ PM CARES ನಿಧಿ ಬಳಸಿ ವಲಸೆ ಕಾರ್ಮಿಕರನ್ನು ಉಚಿತವಾಗಿ ಅವರವರ ಊರಿಗೆ ತಲುಪಿಸಬೇಕು॒... ಇಲ್ಲದಿದ್ದಲ್ಲಿ ಈ ಭಾರತದಲ್ಲಿರುವುದು ನಾಗರಿಕ ಸರ್ಕಾರವೆಂದೂ, ಅಲ್ಲಿರುವವರನ್ನು ಮನುಷ್ಯರೆಂದೂ ಹೇಳಲು ಕಷ್ಟವಾದೀತು...
ಉಲ್ಲೇಖಗಳು :
1. https://twitter.com/ANI/status/1256809775536279555/photo/2