ಆಲೆಮನೆಯ ಬೆಲ್ಲದ ಘಮ
ಸಕ್ಕರೆ ಕಾಯಿಲೆ ಬರುವವರೆಗೂ ನಾವು ಸಕ್ಕರೆಗೆ ಹೆದರುವುದಿಲ್ಲ. ಎಷ್ಟು ಬೇಕು ಅಷ್ಟು ಸಾವಕಾಶ ಮುಕ್ಕುತ್ತೇವೆ, ಸಿಹಿ ತಿಂಡಿಗಳು, ಅಡುಗೆಗಳು, ಐಸ್‌ಕ್ರೀಂಗಳು,ಸಿಹಿ ಪಾನೀಯಗಳು, ಬೇಕರಿ ತಿನಿಸುಗಳು ಹೀಗೆ ಸಾವಿರಾರು ವಿವಿಧ ಸಿಹಿ ಪದಾರ್ಥಗಳು ಅನವಶ್ಯಕವಾಗಿ ದಿನನಿತ್ಯದ ನಮ್ಮ ಆಹಾರದ ಭಾಗವಾಗಿಬಿಟ್ಟಿವೆ. ಅವುಗಳಲ್ಲಿ ಮೊದಲ ಸ್ಥಾನ ಕಾಫಿ ಮತ್ತು ಟೀ! ಈಗಾಗಲೇ ಹಲವಾರು ಸಂಶೋಧನಾ ವರದಿಗಳು ಸಕ್ಕರೆಯು ದೇಹ ಮತ್ತು ಪ್ರಕೃತಿಗೆ ಎಷ್ಟು ಅಪಾಯಕಾರಿ ಎಂದು ಹೇಳಿದ್ದರೂ, ಪ್ರಯೋಗಗಳ ಮೂಲಕ ಸಾಬೀತು ಮಾಡಿದ್ದರೂ ಸರಕಾರಗಳು ಈ ನಿಟ್ಟಿನಲ್ಲಿ ಯಾವುದೇ ಸ್ಪಷ್ಟ ಕ್ರಮ ಜರುಗಿಸಲಿಲ್ಲ ಅಥವಾ ನೀತಿ ಪ್ರಕಟಿಸಲಿಲ್ಲ. ಸಕ್ಕರೆ ಕಾರ್ಖಾನೆಗಳು ಹೆಚ್ಚಿದಷ್ಟು ಹಳ್ಳಿಯ ಸಿಹಿಯ ಅಗತ್ಯಗಳನ್ನು ಪೂರೈಸುತ್ತಿದ್ದ ಬೆಲ್ಲದ ಆಲೆಮನೆಗಳು ಸರಣಿಯಾಗಿ ಮುಚ್ಚಿಕೊಂಡವು. ಸಕ್ಕರೆ ಕಾರ್ಖಾನೆಗಳಿಗೆ ಸಾವಿರಾರು ಕೋಟಿ ರೂ. ಆರ್ಥಿಕ ಪ್ಯಾಕೇಜುಗಳನ್ನೂ ಪ್ರಕಟಿಸಿ ಅವುಗಳ ಪುನಶ್ಚೇತನಕ್ಕೆ ಸರಕಾರ ಪ್ರಯತ್ನಪಟ್ಟಷ್ಟು ಬೆಲ್ಲದ ಆಲೆಮನೆಗಳ ಬಗ್ಗೆ ಅಂತಹ ಗಮನ ನೀಡದೇಹೋಯಿತು. ಬಹುಶಃ ಆಲೆಮನೆಗಳು ದೊಡ್ಡ ಕಾರ್ಪೊರೇಟ್ ಅಥವಾ ರಾಜಕಾರಣಿಗಳಿಗೆ ಸೇರದೆ ಇರುವುದೇ ಕಾರಣವಿರಬಹುದು. ಆಲೆಮನೆ ಜನಸಾಮಾನ್ಯರ ಸಣ್ಣ ಉದ್ದಿಮೆ.
ಮಂಡ್ಯದ ಆಲೆಮನೆಗಳು:
ಆಲೆಮನೆ ಎಂದಾಕ್ಷಣ ನೆನಪಾಗೋದು ಕಾಲುವೆಯಂತೆ ಹರಿಯುವ ಕಬ್ಬಿನ ಹಾಲು ಮತ್ತು ಘಮಗುಡುವ ಬೆಲ್ಲದ ಪಾಕ. ಚಿಕ್ಕ ಮಕ್ಕಳಿಗೆ ಕಬ್ಬಿನ ತೊಂಡೆಯಲ್ಲಿ ಅದ್ದಿ ತೆಗೆದುಕೊಟ್ಟ ಬಿಸಿ ಬಿಸಿ ಬೆಲ್ಲವನ್ನು ಐಸ್ ಕ್ಯಾಂಡಿಯ ಹಾಗೆ ನೆಕ್ಕುತ್ತ ಚಿಣ್ಣರು ಆಲೆಮನೆ ಸುತ್ತಲೇ ಸುಳಿದಾಡುತ್ತಾರೆ. ದೊಡ್ಡ ಕಬ್ಬಿಣದ ಕೊಪ್ಪರಿಗೆಗಳು, ಉದ್ದನೆಯ ಮರದ ಅಚ್ಚುಗಳು, ಕಬ್ಬಿಣ ಸಿಪ್ಪೆಯ ಮೆದೆಗಳು, ಹಬೆ ಹಬೆಯಾಗಿ ಏಳುತ್ತಾ ಗಟ್ಟಿ ಪಾಕವಾಗುವ ಬೆಲ್ಲ 80-90 ರ ದಶಕದ ಮಕ್ಕಳಿಗೆ ಇವೆಲ್ಲಾ ಕಂಡ ಖುಷಿ ಇದ್ದೇ ಇರುತ್ತೆ. ಈ ಆಲೆಮನೆಗಳು ಬಯಲು ಸೀಮೆಯಲ್ಲಿ ಶತಮಾನಗಳ ಹಿಂದೆಯೇ ಶುರುವಾದ ಗುಡಿಕೈಗಾರಿಕೆಗಳು. ಈ ಜಿಲ್ಲೆಯಲ್ಲಿ ಕನಿಷ್ಠ ಹಳ್ಳಿಗೊಂದಾದರೂ ಆಲೆಮನೆ ಇತ್ತು, ಕೆಲವೆಡೆ ಹತ್ತು ಕೂಡ. ರಾಜ್ಯದಲ್ಲೇ ಮೊದಲ ಸರಕಾರಿ ಸಕ್ಕರೆ ಕಾರ್ಖಾನೆಯನ್ನು ಮಂಡ್ಯದಲ್ಲಿ ಸ್ಥಾಪಿಸಿದ್ದರೂ ಇಲ್ಲಿ ಬಳಸುತ್ತಿದ್ದುದು ಮಾತ್ರ ಬೆಲ್ಲವನ್ನೇ. ಬೆಲ್ಲದ ಕಾಫಿ, ಟೀ ಬಹಳ ಜನಕ್ಕೆ ಮೆಚ್ಚುಗೆಯ ಪಾನೀಯ ಆಗಿದ್ದವು. ಇವತ್ತಿಗೂ ಹಳೆಯ ತಲೆಮಾರಿನವರು ಸಕ್ಕರೆ ಹಾಕಿದ ಕಾಫಿ, ಟೀ ಕುಡಿಯುವುದಿಲ್ಲ. ಬೆಲ್ಲವೇ ಆಗಬೇಕು. ಬೆಲ್ಲದ ಅಡುಗೆಗಳು ಇರುವಷ್ಟು ಸಕ್ಕರೆಯ ಅಡುಗೆಗಳು ಚಾಲ್ತಿಯಲ್ಲಿ ಇಲ್ಲ. ಈಚೆಗೆ ಸಿದ್ಧ ಆಹಾರ ಪದಾರ್ಥಗಳು ಸಿಗಲು ಶುರುವಾದ ಮೇಲೆ ಸಕ್ಕರೆ ಬಳಸುವುದು ಮಿತಿಮೀರುತ್ತಿರುವುದು ನಿಜವಾದರೂ ಬೆಲ್ಲದ ಅನ್ನ, ಬೆಲ್ಲದ ಪಾಯಸ. ಸಿಹಿ ಪೊಂಗಲ್ , ಕಜ್ಜ್ಜಾಯ, ಹೋಳಿಗೆ, ಅಕ್ಕಿ ತಂಬಿಟ್ಟು ಸೇರಿದಂತೆ ಹಲವಾರು ಅಡುಗೆಗಳು ಈಗಲೂ ಪ್ರಸಿದ್ಧವಾಗಿವೆ. ಬೆಲ್ಲದ ಬಳಕೆ ಪೂರ್ಣವಾಗಿ ಏನು ನಿಂತಿಲ್ಲ. ಆದರೆ ಮೊದಲಿನಷ್ಟು ಇಲ್ಲ. ಭತ್ತ ಮತ್ತು ಕಬ್ಬು ಇಲ್ಲಿನ ಮುಖ್ಯ ನೀರಾವರಿ ಬೆಳೆಗಳು. ಕಬ್ಬು ಹೇಳಿಕೇಳಿ ವಾಣಿಜ್ಯ ಬೆಳೆ.
ಹೆಚ್ಚು ಹೆಚ್ಚು ಬೆಳೆದ ಕಬ್ಬನ್ನು ಸಕ್ಕರೆ ಕಾರ್ಖಾನೆಗಳಿಗೆ ಸಾಗಿಸುವ ರೈತರೇ ಜಾಸ್ತಿ ಸಿಗುತ್ತಾರೆ. ಒಟ್ಟು ಬಾಬತ್ತು ಕೈಗೆ ಸಿಗುತ್ತದೆ ಎಂಬ ನಂಬಿಕೆ. ಆದರೆ ಸಕ್ಕರೆ ಕಾರ್ಖಾನೆಗಳು ಇದುವರೆಗೆ ರೈತರಿಗೆ ಸರಿಯಾಗಿ ಮುಂಗಡ ಪಾವತಿ ಮತ್ತು ಪೂರ್ಣ ಹಣ ಪಾವತಿ ಮಾಡಿದ್ದು ಅಪರೂಪ. ರೈತರು ಒಳ್ಳೆಯ ಬೆಲೆಗೆ ಮತ್ತು ಹಣ ಪಾವತಿಗೆ ಹೋರಾಟಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಈಗಲೂ ಈ ಸಮಸ್ಯೆಗಳು ಬಗೆಹರಿದಿಲ್ಲ. ಬಂದ ಕಬ್ಬಿನ ಇಳುವರಿಯಲ್ಲಿ ಅಲ್ಪ ಭಾಗ ಮಾತ್ರ ಆಲೆಮನೆಗಳ ಕಡೆಗೆ ಸರಬರಾಜು ಆಗುತ್ತದೆ. ಹಾಗೆ ನೋಡಿದರೆ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿ ಹೇಳುವುದಾದರೆ ಸಕ್ಕರೆ ಕಂಪೆನಿಗಳಿಗಿಂತ ಆಲೆಮನೆಗಳೇ ಉತ್ತಮವಾಗಿವೆ. ಕಬ್ಬು ಪೂರೈಸಿದ ರೈತನಿಗೆ ಸಾಧ್ಯವಾದಷ್ಟು ಒಳ್ಳೆಯ ಬೆಲೆಯನ್ನು ಕೊಟ್ಟು ಕೊಂಡುಕೊಳ್ಳುತ್ತವೆ ಮತ್ತು ಗ್ರಾಹಕರಿಗೆ ಒಳ್ಳೆಯ ದರಕ್ಕೆ ಮಾರುತ್ತವೆ. ಆದರೆ ಬೇಡಿಕೆ ಕುಸಿದಿದೆ, ಆಲೆಮನೆಯ ಕೆಲಸಕ್ಕೆ ಜನ ಸಿಗುವುದಿಲ್ಲ ಮತ್ತು ಹೈಜಿನ್, ಗುಣಮಟ್ಟದ ಪ್ಯಾಕಿಂಗ್ ಮತ್ತು ರವಾನೆ ಇತ್ಯಾದಿಗಳಂತಹ ಡಿಜಿಟಲ್ ಕಾಲದಲ್ಲೂ ಆಲೆಮನೆಯವರಿಗೆ ಸಿಗುತ್ತಿಲ್ಲ.
ಬೆಲ್ಲ ಮತ್ತು ಖಂಡಸಾರಿ ಸಕ್ಕರೆ:
ಎತ್ತುಗಳು ಅಥವಾ ಡಿಸೇಲ್, ವಿದ್ಯುತ್ ಆಧಾರಿತ ಗಾಣದಲ್ಲಿ ಕಬ್ಬನ್ನು ಅರೆದು ಕಬ್ಬಿನ ಹಾಲನ್ನು ಸಣ್ಣ ಕಾಲುವೆ, ಪೈಪುಗಳ ಮುಖಾಂತರ ನೇರವಾಗಿ ಕುದಿಸುವ ಕೊಪ್ಪರಿಗೆಗೆ ಹೋಗುವಂತೆ ಮಾಡಿ, ಒಣಗಿಸಿದ ಕಬ್ಬಿಣ ಸಿಪ್ಪೆಯನ್ನೇ ಉರುವಲು ಮಾಡಿಕೊಂಡು ಬೆಲ್ಲ ತಯಾರಿಸುವುದು ರೂಢಿ. ಕುದಿವ ಹಾಲಿನಲ್ಲಿ ಬರುವ ಕಸ, ನೊರೆಯನ್ನು ತೆಗೆದು ಹಾಕಿ ಅದಕ್ಕೆ ಸುಣ್ಣವನ್ನು ಸೇರಿಸುತ್ತಾ ಮತ್ತಷ್ಟು ಕುದಿಸುತ್ತಾ ಹೋದ ಹಾಗೆ ಬೆಲ್ಲದ ಪಾಕ ಸಿದ್ಧವಾಗತ್ತೆ. ಅದನ್ನು ಅಲ್ಲಲ್ಲೇ ಕೊಪ್ಪರಿಗೆಗೆ ಅಂಟದ ಹಾಗೆ ತಿರುವುತ್ತಾ ನೀರಿನ ಅಂಶ ಸಂಪೂರ್ಣ ಇಂಗಿದ ಮೇಲೆ ಪಾಕವನ್ನು ಅಚ್ಚುಗಳಿಗೆ ಸುರಿದು ಆರಿಸಿ ನಂತರ ತೆಗೆದು ಪ್ಯಾಕಿಂಗ್ ಮಾಡಲಾಗುತ್ತದೆ. ಇದೊಂದು ಸುಸ್ಥಿರವಾದ ವಿಧಾನವಾಗಿತ್ತು, ಯಾವಾಗ ಸಕ್ಕರೆಯ ಮಾರುಕಟ್ಟೆ ಜಾಸ್ತಿಯಾಯಿತೋ ಜನ ಬಿಳಿ ಅಥವಾ ಹಳದಿ ಬಣ್ಣದ ಬೆಲ್ಲಕ್ಕೆ ಮಾರುಹೋದರು, ಇವಕ್ಕೆ ಹೆಚ್ಚು ಬೇಡಿಕೆ ಬರಲಾರಲಂಭಿಸಿತು. ಆಲೆಮನೆ ನಡೆಸುತ್ತಿದ್ದ ಸಣ್ಣ ರೈತರು ಬೇರೆ ದಾರಿಯಿಲ್ಲದೆ ಸೋಡಿಯಂ ಬೈ ಕಾರ್ಬೋನೆಟ್, ಸೂಪರ್ ಫಾಸ್ಪೇಟ್, ಸಲ್ಫರ್ ನಂತಹ ಕೆಮಿಕಲ್‌ಗಳನ್ನು ಬಳಸ ತೊಡಗಿದರು. ಬೆಲ್ಲಕ್ಕಿದ್ದ ಆರೋಗ್ಯಕರ ಅಂಶಗಳು ನಾಶವಾಗತೊಡಗಿದವು. ಬಿಳಿಸಕ್ಕರೆಗೆ ಪ್ರತಿಸ್ಪರ್ಧಿಯಾಗಿ ಹೋರಾಡಲು ಸಾಧ್ಯವಿಲ್ಲದೆ ಪರಂಪರಾನುಗತವಾಗಿ ಬಂದಿದ್ದ ಆಲೆಮನೆಗಳು ಈಗಲೂ ಬಸವಳಿಯುತ್ತಿವೆ. ಈ ಹೊತ್ತಿನಲ್ಲಿ ನೆನಪಾಗುವುದು ಬೆಲ್ಲದಿಂದ ರೂಪಾಂತರಗೊಂಡು ತಯಾರಾಗಿದ್ದ ‘ಕಂದು ಸಕ್ಕರೆ’ ಅಥವಾ ‘ಖಂಡಸಾರಿ ಸಕ್ಕರೆ’. ಇದು ಬೆಲ್ಲವನ್ನೇ ಹರಳು ರೂಪಗೊಳಿಸಲಾದ ಉತ್ಪನ್ನ.
ಸಕ್ಕರೆಯ ಹಾಗೆ ಸುಕ್ರೋಸ್ ಮತ್ತು ಮೊಲಸಾಸ್ (ಹಾಲಿನ ಮಡ್ಡಿ)/ ಖನಿಜಾಂಶಗಳನ್ನು ಇಲ್ಲಿ ಬೇರ್ಪಡಿಸುವುದಿಲ್ಲ. ಬೆಲ್ಲದ ಹಾಗೆ ಉಳಿಸಿಕೊಂಡು ಅದರ ಸ್ವರೂಪವನ್ನು ಮಾತ್ರ ಸಕ್ಕರೆಯ ಹಾಗೆ ಹರಳುಗೊಳಿಸಲಾಗುತ್ತದೆ. ಈ ಸಕ್ಕರೆಯದ್ದು ಕಂದುಬಣ್ಣ. ಮಂಡ್ಯದಲ್ಲಿ ಆಲೆಮನೆಗಳ ಜೊತೆಗೆ ಇಂತಹ ಹಲವಾರು ಖಂಡಸಾರಿ ಸಕ್ಕರೆ ಕಾರ್ಖಾನೆಗಳು ನಮ್ಮಲ್ಲಿ ಇದ್ದವು. ಆದರೆ ಸಕ್ಕರೆ ವ್ಯವಹಾರದ ರಾಜಕೀಯವು ಈ ಖಂಡಸಾರಿ ಸಕ್ಕರೆ ತಯಾರಿಸುವುದನ್ನೇ ಸರಕಾರದ ಮೂಲಕ ನಿಷೇಧಗೊಳಿಸಿತು. ಇದರಿಂದ ಆಧುನಿಕ ಸಕ್ಕರೆ ಕಾರ್ಖಾನೆಗಳಿಗೆ ಹೆಚ್ಚು ಬೇಡಿಕೆ, ಪೂರೈಕೆ ಮತ್ತು ಲಾಭ ಸಾಧ್ಯವಾಯಿತು. ಖಂಡಸಾರಿ ಸಕ್ಕರೆಯು ಇವತ್ತು ನಾವು ಬಳಸುತ್ತಿರುವ ಬಿಳಿ ಸಕ್ಕರೆಯಷ್ಟು ಆರೋಗ್ಯಕ್ಕೆ ಹಾನಿಕರವಲ್ಲ ಮತ್ತು ಆಲೆಮನೆ, ಖಂಡಸಾರಿ ಸಕ್ಕರೆ ಕಾರ್ಖಾನೆಗಳು ಹೆಚ್ಚಾದಷ್ಟು ಗ್ರಾಮೀಣ ಭಾಗ ಉದ್ಯೋಗಾವಕಾಶ ಮತ್ತು ಕೃಷಿ ಉತ್ಪನ್ನಗಳಿಗೆ ಸ್ಥಳೀಯ ಮಾರುಕಟ್ಟೆ ಸಿಕ್ಕಂತಾಗುವುದು. ಅಲ್ಲದೆ ಸಕ್ಕರೆ ಕಂಪೆನಿಗಳೆಂಬ ಬಿಳಿಯಾನೆಗಳನ್ನು ಸಾಕುವ ಅಗತ್ಯವೇ ಇರುವುದಿಲ್ಲ. ಆದರೆ ಸರಕಾರಗಳು ಇದಕ್ಕೆ ಕಿವಿಗೊಡಬೇಕಲ್ಲ.
ಬೆಲ್ಲದ ವಿಧಗಳು ಮತ್ತು ಮಾರುಕಟ್ಟೆ:
ಬೆಲ್ಲದಲ್ಲಿ ಆಕಾರದ ಮೇಲೆ ವಿಧಗಳನ್ನು ಹೇಳಬಹುದು ಅಷ್ಟೇ, ರುಚಿ ಮತ್ತು ಗುಣಮಟ್ಟದಲ್ಲಿ ಅಂತಹ ಬದಲಾವಣೆ ಏನು ಇರುವುದಿಲ್ಲ. ಉಂಡೆ ಬೆಲ್ಲ, ಅಚ್ಚು ಬೆಲ್ಲ, ಕುರಿಕಾಲಚ್ಚು ಬೆಲ್ಲ, ಬಕೆಟ್ ಬೆಲ್ಲ, ಪುಡಿ ಬೆಲ್ಲ ಹೀಗೆ ಅದನ್ನು ಮಾರುಕಟ್ಟೆಗೆ ಸಿದ್ಧಗೊಳಿಸಿರುವ ಆಕಾರದ ಮೇಲೆ ವಿಧಗಳನ್ನು ಹೇಳಬಹುದು ಮತ್ತು ಇವೆಲ್ಲವೂ ಈಗ ಕೆಜಿಗೆ ಇಂತಿಷ್ಟು ಎಂಬ ಏಕ ಮಾತ್ರ ದರವನ್ನು ನಿಗದಿಗೊಳಿಸಿಕೊಂಡಿವೆ. ಮೊದಲು ಹೆಚ್ಚು ಮಾರಾಟವಾಗುತ್ತಿದ್ದುದು ಅಚ್ಚು ಬೆಲ್ಲವೇ. ಅದನ್ನು ತೆಂಗಿನ ಗರಿಗಳಿಂದ ಮಾಡಿ ಬೆಲ್ಲ ಪಿಂಡಿಗಳಲ್ಲಿ ಜೋಡಿಸಿ ಕಟ್ಟಿ ಮಾರುತ್ತಿದ್ದರು. ಕಾಲ ಕಳೆದಂತೆ ಎಲ್ಲವೂ ಈಗ ಪ್ಲಾಸ್ಟಿಕ್ ಕವರುಮಯ. ಬಕೆಟ್ ಬೆಲ್ಲ ಬಿಟ್ಟು ಉಳಿದುವೆಲ್ಲಾ ಸ್ಥಳೀಯ ಮಾರುಕಟ್ಟೆಯಲ್ಲೇ ಬಿಕರಿಯಾಗುತ್ತವೆ. ಬಕೆಟ್ ಬೆಲ್ಲವನ್ನು ಕೊಲ್ಲಿ ರಾಷ್ಟ್ರಗಳು ಮತ್ತು ಮಲೇಶಿಯ ಸೇರಿದಂತೆ ಹಲವು ದೇಶಗಳಿಗೆ ರಪ್ತು ಮಾಡಲು ಮತ್ತು ಹೆಚ್ಚು ಬೆಲ್ಲಕೊಳ್ಳುವವರಿಗೆ ಸಗಟು ವ್ಯಾಪಾರಕ್ಕೆ ಬಳಸಲಾಗುತ್ತದೆ. ಮಂಡ್ಯ ನಗರದಲ್ಲೇ ಬೆಲ್ಲಕ್ಕೆ ಸೀಮಿತವಾದ ‘ಬೆಲ್ಲದ ಮಾರುಕಟ್ಟೆ’ ಕೂಡ ಇದೆ.
ನಮ್ಮ ಅಡುಗೆಗಳಲ್ಲಿ ಸಿಕ್ಕಿ ಬ್ರಹ್ಮರಾಕ್ಷಸನಾಗಿರುವ ಸಕ್ಕರೆಯನ್ನು ನಾವು ಆದಷ್ಟು ಈಗ ನಿಯಂತ್ರಣ ಮಾಡಲೇಬೇಕಿದೆ. ಇದು ಕೇವಲ ವ್ಯಕ್ತಿ ಆರೋಗ್ಯದ ಪ್ರಶ್ನೆಯಲ್ಲ ಸೃಷ್ಟಿ ಆರೋಗ್ಯದ ಪ್ರಶ್ನೆ ಕೂಡ. ಸಕ್ಕರೆ ಕಂಪೆನಿಗಳು ಅವುಗಳ ಪರಿಸರ ಮಾಲಿನ್ಯ, ಜಲಮಾಲಿನ್ಯಗಳನ್ನ್ನು ನಾವು ಇನ್ನು ಸಹಿಸಲಾಗುವುದಿಲ್ಲ. ಕೇವಲ ಪದಾರ್ಥವನ್ನಲ್ಲ, ನೆಲವನ್ನೇ ನಾವು ಈ ಕೃತಕ ರಾಸಾಯನಿಕಗಳಿಂದ ಮುಕ್ತಗೊಳಿಸಲು ಟೊಂಕಕಟ್ಟಿ ಹೋರಾಡಬೇಕಿದೆ. ಬೆಳೆ ಬೆಳೆಯುವುದು, ಸಂಸ್ಕರಿಸುವುದು, ಉತ್ಪನ್ನ ತಯಾರಿಸುವುದು ಎಲ್ಲವೂ ಸುಸ್ಥಿರವಾದ ರೀತಿಯಲ್ಲೇ ಆಗಬೇಕು ಮತ್ತು ಇಂತಹ ಉತ್ಪನ್ನಗಳು ಎಲ್ಲ ಜನರಿಗೂ ಸಾಮಾನ್ಯ ದರದಲ್ಲಿ ಲಭ್ಯವಾಗಬೇಕು. ಆ ದಿಕ್ಕಿನ ಹೋರಾಟದಲ್ಲಿ ಒಂದು ಹೆಜ್ಜೆ ‘’ಸಕ್ಕರೆ ನರಕದಿಂದ ಬೆಲ್ಲದ ನಾಕದೆಡೆಗೆ ಪ್ರಯಾಣ’’.