ಇನ್ನೂ ಪತ್ತೆಯಾಗಿಲ್ಲ ನಂಜನಗೂಡಿನ ಕಂಪೆನಿ ನೌಕರನ ಕೊರೋನ ಮೂಲ: ನಿಗೂಢತೆ ಹಿಂದೆ ಪ್ರಭಾವಿ ವ್ಯಕ್ತಿಗಳು ?
► ಐಎಎಸ್ ಅಧಿಕಾರಿ ತನಿಖೆ ನಡೆಸಿದರೂ ಹೊರಬರದ ಸತ್ಯ ► ಸಾಕ್ಷಿಗಳನ್ನು ನಾಶಪಡಿಸಲಾಗಿದೆ: ಶಾಸಕ ಹರ್ಷವರ್ಧನ್ ಆರೋಪ
ಮೈಸೂರು, ಮೇ.4: ನಂಜನಗೂಡು ಕೈಗಾರಿಕಾ ಪ್ರದೇಶದಲ್ಲಿರುವ ಜ್ಯುಬಿಲಿಯಂಟ್ ಕಂಪನಿಯ ನೌಕರನೊಬ್ಬನಲ್ಲಿ ಪತ್ತೆಯಾದ ಕೊರೋನ ಸೋಂಕಿನ ಮೂಲ ಇನ್ನೂ ನಿಗೂಢವಾಗಿಯೇ ಉಳಿದಿದ್ದು, ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ‘ನಿಗೂಢತೆ’ಯ ಹಿಂದೆ ಪ್ರಭಾವಿ ವ್ಯಕ್ತಿಗಳಿದ್ದಾರೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.
ಈ ಪ್ರಕರಣ ಪತ್ತೆಯಾಗುವ ಮೊದಲು ಜಿಲ್ಲೆಯಲ್ಲಿ ಎರಡು ಕೊರೋನ ಸೋಂಕು ಪ್ರಕರಣಗಳು ದೃಢಪಟ್ಟಿದ್ದವು. ಮೂರನೆಯದಾಗಿ ಜ್ಯುಬಿಲಿಯಂಟ್ ಕಂಪನಿಯ ನೌಕರನಲ್ಲಿ ಮಾ.27ರಂದು ಸೋಂಕು ಪತ್ತೆಯಾಗಿತ್ತು. ಈ ಮೊದಲಿನ 2 ಪ್ರಕರಣಗಳಲ್ಲೂ ಸೋಂಕಿನ ಮೂಲಗಳ ಬಗ್ಗೆ ಸ್ಪಷ್ಟ ಮಾಹಿತಿ ಇದ್ದರೂ, ಜ್ಯುಬಿಲಿಯಂಟ್ ನೌಕರನಿಗೆ ಸೋಂಕು ತಗಲಿದ್ದು ಹೇಗೆ ಎನ್ನುವ ಕುರಿತು ಬಹಿರಂಗ ಪಡಿಸದಿರುವುದರಿಂದ ಇದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.
ಜ್ಯುಬಿಲಿಯಂಟ್ ನೌಕರನ ಸೋಂಕಿನ ಮೂಲವನ್ನು ಪತ್ತೆ ಹಚ್ಚುವುದಕ್ಕೆ ಜಿಲ್ಲಾಡಳಿತ ಹರಸಾಹಸಪಟ್ಟಿತಾದರೂ ಫಲ ನೀಡಿಲ್ಲ. ಮೈಸೂರು ಜಿಲ್ಲೆಯನ್ನು ರೆಡ್ಝೋನ್ಗೆ ಒಳಪಡಿಸಿ ಹಾಟ್ ಸ್ಪಾಟ್ ಜಿಲ್ಲೆಯಾಗಲು ಕಾರಣವಾದ ಜ್ಯುಬಿಲಿಯಂಟ್ ಕಂಪೆನಿಯ ಪ್ರಕರಣದ ಬಗ್ಗೆ ಒಂದೂವರೆ ತಿಂಗಳಾದರೂ ಮಾಹಿತಿ ಬಹಿರಂಗಪಡಿಸದಿರುವುದು ಆಡಳಿತದ ನಡೆಯನ್ನು ಪ್ರಶ್ನಿಸುವಂತೆ ಮಾಡಿದೆ.
ಉಸ್ತುವಾರಿ ಸಚಿವರ ದಿಢೀರ್ ಬದಲಾವಣೆ
ಜ್ಯುಬಿಲಿಯಂಟ್ ಕಂಪನಿ ನೌಕರನಿಗೆ ಹೇಗೆ ಕೊರೋನ ಸೋಂಕು ಹರಡಿತು ಎಂದು ಬಹಿರಂಗಪಡಿಸಬೇಕು ಎಂದು ಸ್ಥಳೀಯ ಶಾಸಕ ಹರ್ಷವರ್ಧನ್ ಒತ್ತಾಯ ಮಾಡಿದ್ದು, ಜ್ಯುಬಿಲಿಯಂಟ್ ಪರ ಕೆಲವು ರಾಜಕಾರಣಿಗಳು ನಿಂತಿದ್ದಾರೆ ಎಂದು ಎ. 7ರಂದು ಆರೋಪವನ್ನು ಮಾಡಿದ್ದರು. ಇದರ ಬೆನ್ನಲ್ಲೇ ಸರಕಾರ ಮೈಸೂರು ಜಿಲ್ಲಾ ಉಸ್ತುವಾರಿಯಾಗಿದ್ದ ಸಚಿವ ವಿ. ಸೋಮಣ್ಣ ಅವರನ್ನು ಎ.9ರಂದು ರಾತ್ರೋರಾತ್ರಿ ಬದಲಾವಣೆ ಮಾಡಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೆಗಲಿಗೆ ಜಿಲ್ಲೆಯ ಉಸ್ತುವಾರಿ ವಹಿಸಿದರು.
ಐಎಎಸ್ ಅಧಿಕಾರಿ ತನಿಖೆ ನಡೆಸಿದರೂ ಹೊರಬರದ ಸತ್ಯ
ಜ್ಯುಬಿಲಿಯೆಂಟ್ ಪ್ರಕರಣದಲ್ಲಿ ತನಿಖೆಗಾಗಿ ಮುಖ್ಯಮಂತ್ರಿ ಹಿರಿಯ ಐಎಎಸ್ ಅಧಿಕಾರಿ ಹರ್ಷಗುಪ್ತರನ್ನು ನೇಮಿಸಿದ್ದರು. ಆದರೆ ಕೆಲವು ತಾಂತ್ರಿಕ ಸಮಸ್ಯೆಗಳಿದ್ದು, ಅದು ಬಗೆಹರಿಯದೆ ಸಾಧ್ಯವಿಲ್ಲ ಎಂದು ಹರ್ಷಗುಪ್ತ ಆರಂಭದಲ್ಲಿ ಪ್ರತಿಕ್ರಿಯಿಸಿದ್ದರು. ಇತ್ತೀಚೆಗಷ್ಟೇ ಅವರು ಸರಕಾರಕ್ಕೆ ಈ ಬಗ್ಗೆ ವರದಿ ಸಲ್ಲಿಸಿದ್ದಾರೆ. ಆದರೆ ಅದು ಅಪೂರ್ಣ ಎಂದು ಖಾಸಗಿ ಚಾನೆಲೊಂದು ವರದಿ ಮಾಡಿತ್ತು.
ತನ್ನಲ್ಲಿರುವ ಮಾಹಿತಿ ಹಾಗೂ ತಜ್ಞರ ಮಾಹಿತಿ ಆಧರಿಸಿ ವರದಿ ನೀಡಲಾಗಿದೆ. ಒಂದು ವಾರದಲ್ಲಿ ವರದಿ ನೀಡುವಂತೆ ತನಗೆ ಹೇಳಿದ್ದು, ಇದರ ಅನುಸಾರ ವರದಿ ನೀಡಲಾಗಿದೆ. ಕೆಲವು ಮಾಹಿತಿಗಳು ಸಿಕ್ಕಿಲ್ಲ. ಮತ್ತೊಮ್ಮೆ ತನಿಖೆ ಮಾಡುವ ಅಗತ್ಯವಿಲ್ಲ. ತನ್ನ ವಿವೇಚನಾಧಾರಿತ ಅಂಶಗಳನ್ನೊಂಡ ವರದಿ ನೀಡಲಾಗಿದೆ ಎಂದು ಹರ್ಷ ಗುಪ್ತ ಪ್ರತಿಕ್ರಿಯಿಸಿದ್ದಾಗಿ ಖಾಸಗಿ ಚಾನೆಲ್ ವರದಿ ಮಾಡಿತ್ತು.
ಆಸ್ಟ್ರೇಲಿಯಾ ಮೂಲದ ವ್ಯಕ್ತಿಯಿಂದ ಸೋಂಕು: ಆರೋಪ
ಆಸ್ಟ್ರೇಲಿಯಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸ್ನೇಹಿತ ಮೈಸೂರಿಗೆ ಬಂದಿದ್ದು, ಅವನ ಸಂಪರ್ಕದಿಂದ ಜ್ಯುಬಿಲಿಯಂಟ್ ನೌಕರನಿಗೆ ಸೋಂಕು ತಗಲಿದೆ ಎಂಬ ಆರೋಪಗಳು ಪ್ರಾರಂಭದಲ್ಲಿ ಕೇಳಿ ಬಂದವಾದರೂ ಅದು ಸತ್ಯ ಎಂಬುದರಲ್ಲಿ ಹುರುಳಿಲ್ಲ. ಕಂಪೆನಿಯ ನೌಕರ ಗುಣಮುಖನಾಗಿ ಮನೆಗೆ ತೆರಳಿದ್ದರೂ ಆತ ಸೋಂಕಿನ ಮೂಲ ಯಾವುದು ಎಂಬುದು ಮಾತ್ರ ಹಲವು ಪ್ರಶ್ನೆಗಳಿಗೆ ಕಾರಣ ವಾಗಿದೆ.
ಚೀನಾದಿಂದ ಬಂದ ಕಂಟೈನರ್ ನಿಂದ ಬಂತೇ ?
ಜ್ಯುಬಿಲಿಯಂಟ್ ಕಂಪನಿಗೆ ಆಮದಾಗುತ್ತಿದ್ದ ಚೀನಾದ ಕಂಟೈನರ್ ನಿಂದ ಕೊರೋನ ಸೋಂಕು ಬಂದಿದೆ ಎನ್ನುವ ಆರೋಪಗಳು ಕೇಳಿ ಬಂದಿದ್ದವು. ಜೊತೆಗೆ ಶಾಸಕ ಹರ್ಷವರ್ಧನ್ ಕೂಡ ಇದೇ ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಈ ಬಗ್ಗೆ ಪರೀಕ್ಷೆಗಳನ್ನು ನಡೆಸಲಾಗಿದ್ದು, ಈ ಆರೋಪಗಳು ಸುಳ್ಳು ಎನ್ನುವುದು ದೃಢಪಟ್ಟಿದೆ.
ಸಾಕ್ಷಿಗಳನ್ನು ನಾಶಪಡಿಸಲಾಗಿದೆ: ಶಾಸಕ ಹರ್ಷವರ್ಧನ್ ಗಂಭೀರ ಆರೋಪ
ಜ್ಯುಬಿಲಿಯಂಟ್ ಕಂಪನಿಯ ನೌಕರನಿಗೆ ಹರಡಿದ್ದ ಕೊರೋನ ಸೋಂಕಿನ ಎಲ್ಲಾ ಸಾಕ್ಷಿಗಳನ್ನು ಕಂಪನಿಯವರು ನಾಶಪಡಿಸಿದ್ದಾರೆ ಎಂದು ನಂಜನಗೂಡು ಶಾಸಕ ಹರ್ಷವರ್ಧನ್ ಗಂಭೀರ ಆರೋಪ ಮಾಡಿದ್ದಾರೆ.
ಈ ಸಂಬಂಧ ಸೋಮವಾರ “ವಾರ್ತಾ ಭಾರತಿ”ಯೊಂದಿಗೆ ಮಾತನಾಡಿದ ಅವರು, ಪಿ.52 ವ್ಯಕ್ತಿಗೆ ಮಾ.26ರಂದು ಕೊರೋನ ಸೋಂಕು ಇದೆ ಎಂದು ದೃಢಪಡುವುದಕ್ಕೂ ಮುನ್ನ ಆತನಲ್ಲಿ ಲಕ್ಷಣಗಳು ಕಾಣಿಸಿಕೊಂಡಿದ್ದವು. ಆದರೆ ಕಂಪನಿಯವರು ಅದನ್ನು ಮುಚ್ಚಿಟ್ಟಿದ್ದರು” ಎಂದು ಆರೋಪಿಸಿದರು.
“ಜ್ಯುಬಿಲಿಯಂಟ್ ಕಂಪೆನಿಯ ನೌಕರನಿಗೆ ಸೋಂಕು ಹರಡಿದೆ ಎಂಬುದು ಗೊತ್ತಿದ್ದರೂ ಕಂಪನಿಯವರು ನಿರ್ಲಕ್ಷ್ಯವಹಿಸಿ ಆತನನ್ನು ಕಂಪೆನಿಗೆ ಪ್ರವೇಶಿಸಲು ಬಿಟ್ಟದ್ದು ಯಾಕೆ?, ಇಂತಹ ಸೋಂಕನ್ನು ಹಗುರವಾಗಿ ತೆಗೆದುಕೊಂಡ ಕಂಪೆನಿ ಮೇಲೆ ಕ್ರಮ ಜರಗಿಸಬೇಕು. ಸೋಂಕು ಹೇಗೆ ಬಂತು ಎಂಬುದನ್ನು ದೃಢಪಡಿಸಬೇಕು ಎಂದು ನಾನು ಮಾಧ್ಯಮದ ಮುಂದೆ ಹೇಳಿಕೆ ನೀಡಿದ ಮೇಲಷ್ಟೇ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಾಯಿತು. ಮುಂದೆ ಇಂತಹ ಅನಾಹುತ ಸಂಭವಿಸಿದರೆ ಕ್ಷೇತ್ರದ ಜನರ ಹಿತದೃಷ್ಟಿಯಿಂದ ಕಂಪೆನಿಯೇ ಜವಾಬ್ದಾರಿ ಹೊರುತ್ತೇನೆಂದು ಹೇಳಬೇಕು. ಈಗ ಕ್ಷೇತ್ರದಲ್ಲಿ ಆಗಿರುವ ನಷ್ಟವನ್ನು ಕಂಪೆನಿ ಭರಿಸಬೇಕು. ಸೋಂಕಿನ ಮೂಲವನ್ನು ಬಹಿರಂಗಪಡಿಸಬೇಕು ಅಲ್ಲಿಯವರೆಗೂ ಕಂಪೆನಿ ಪ್ರಾರಂಭಕ್ಕೆ ನನ್ನ ವಿರೋಧವಿದೆ” ಎಂದವರು ಹೇಳಿದರು.
ಜ್ಯುಬಿಲಿಯಂಟ್ ಕಂಪನಿ ನೌಕರನ ಕೊರೋನ ಸೋಂಕು ಪತ್ತೆ ವಿಚಾರಕ್ಕೆ ಸಂಬಂಧಪಟ್ಟಂತೆ ಜಿಲ್ಲಾಡಳಿತದ ಹೇಳಿಕೆಯನ್ನು ತನಿಖಾಧಿಕಾರಿ ಹರ್ಷಗುಪ್ತ ಅವರಿಗೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಆಭಿರಾಮ್ ಜಿ.ಶಂಕರ್ ತಿಳಿಸಿದರು.
ಜ್ಯುಬಿಲಿಯಂಟ್ ಕಂಪೆನಿ ನೌಕರನಿಗೆ ಕೊರೋನ ಸೋಂಕು ಹೇಗೆ ಬಂತು ಎಂದು ತನಿಖೆ ಮಾಡುವಂತೆ ಹಿರಿಯ ಐಎಎಸ್ ಅಧಿಕಾರಿ ಹರ್ಷಗುಪ್ತ ಅವರಿಗೆ ವಹಿಸಿತ್ತು. ಅವರೇ ಈ ತನಿಖೆ ಕೈಗೊಂಡಿದ್ದಾರೆ. ಹಾಗಾಗಿ ಜಿಲ್ಲಾಡಳಿತ ಈ ವಿಚಾರಕ್ಕೆ ತಲೆಹಾಕಿಲ್ಲ ಎಂದು ಹೇಳಿದರು.
ತನಿಖೆ ಸಂಬಂಧ ನನ್ನ ಮತ್ತು ಎಸ್ಪಿ ಅವರ ಹೇಳಿಕೆಗಳನ್ನು ಹರ್ಷಗುಪ್ತ ಅವರು ದಾಖಲಿಸಿಕೊಂಡಿದ್ದಾರೆ. ಸ್ಥಳೀಯ ಘಟನೆಗಳ ಸಂಬಂಧ ನಾವು ವರದಿ ನೀಡಿದ್ದೇವೆ ಎಂದು ದೂರವಾಣಿ ಮೂಲಕ "ವಾರ್ತಾಭಾರತಿಗೆ" ತಿಳಿಸಿದರು.