ವಾಮಾಚಾರ ಶಂಕೆ: ಮೂವರು ಮಹಿಳೆಯರಿಗೆ ಥಳಿಸಿ, ಅರೆಬೆತ್ತಲೆ ಮೆರವಣಿಗೆ ಮಾಡಿದ ಕಿಡಿಗೇಡಿಗಳು
ಪಾಟ್ನಾ: ವಾಮಾಚಾರ ಶಂಕೆಯಿಂದ ಮೂವರು ಮಹಿಳೆಯರನ್ನು ಅಮಾನುಷವಾಗಿ ಥಳಿಸಿ, ತಲೆ ಬೋಳಿಸಿ ಅರೆಬೆತ್ತಲೆ ಮೆರವಣಿಗೆ ಮಾಡಿಸಿದ ಘಟನೆ ಬಿಹಾರದ ಮುಜಾಫರ್ಪುರ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಹಟೂರಾ ಠಾಣೆ ವ್ಯಾಪ್ತಿಯ ದಕ್ರಮಾ ಗ್ರಾಮದಲ್ಲಿ ನಡೆದ ಈ ಘಟನೆ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಮಂಗಳವಾರ ವೈರಲ್ ಆಗಿದೆ.
ಕೆಲ ಧಾರ್ಮಿಕ ವಿಧಿಗಳನ್ನು ಈ ಮಹಿಳೆಯರು ನಡೆಸುತ್ತಿದ್ದಾಗ ಇವರು ವಾಮಾಚಾರ ಮಾಡುತ್ತಿದ್ದಾರೆ ಎಂಬ ಶಂಕೆಯಿಂದ ಸ್ಥಳೀಯರ ಗುಂಪು ಇವರನ್ನು ಹಿಡಿದು ಥಳಿಸಿತು ಎನ್ನಲಾಗಿದೆ. ಬಳಿಕ ಈ ಗುಂಪು ಇವರ ತಲೆ ಬೋಳಿಸಿ ಅರೆಬೆತ್ತಲೆ ಮೆರವಣಿಗೆ ನಡೆಸಿತು. ಬಳಿಕ ಮೂತ್ರ ಕುಡಿಸಲಾಯಿತು ಎಂದು ಆಪಾದಿಸಲಾಗಿದೆ.
ಈ ಘಟನೆಯನ್ನು ಎಡಿಜಿ (ಎಚ್ಕ್ಯೂ) ಜಿತೇಂದ್ರ ಕುಮಾರ್ ದೃಢಪಡಿಸಿದ್ದು, ಪ್ರಕರಣದ ರೂವಾರಿ ಶ್ಯಾಮ್ ಸಹಾನಿ, ತಲೆ ಬೋಳಿಸಿದ ಕ್ಷೌರಿಕ ಸೇರಿದಂತೆ ಒಂಬತ್ತು ಮಂದಿಯನ್ನು ಬಂಧಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. 100 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅವರ ಬಂಧನಕ್ಕೆ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ವಿವರಿಸಿದ್ದಾರೆ.