ದೇಶದಲ್ಲಿ 50 ಸಾವಿರ ದಾಟಿದ ಕೊರೋನ ಸೋಂಕಿತರ ಸಂಖ್ಯೆ
ಹೊಸದಿಲ್ಲಿ, ಮೇ 7: ದೇಶದಲ್ಲಿ ಕೊರೋನ ವೈರಸ್ ಸೋಂಕು ಆತಂಕಕಾರಿ ಪ್ರಮಾಣದಲ್ಲಿ ಹರಡುತ್ತಿದ್ದು, ಬುಧವಾರ ಒಟ್ಟು ಸೋಂಕಿತರ ಸಂಖ್ಯೆ 50 ಸಾವಿರದ ಗಡಿ ದಾಟಿದೆ. ಅಂತೆಯೇ ಒಂದೇ ದಿನದಲ್ಲಿ 3 ಸಾವಿರಕ್ಕೂ ಅಧಿಕ ಸಂಖ್ಯೆಯ ಸೋಂಕು ಪ್ರಕರಣಗಳು ಇದೇ ಮೊದಲ ಬಾರಿಗೆ ದೇಶದಲ್ಲಿ ಪತ್ತೆಯಾಗಿದೆ. ಬುಧವಾರ ದಾಖಲಾದ ಒಟ್ಟು ಪ್ರಕರಣಗಳ ಸಂಖ್ಯೆ 3,602. ಒಟ್ಟು ಸೋಂಕಿತರ ಸಂಖ್ಯೆ 52,935ಕ್ಕೇರಿದೆ.
ಆತಂಕದ ಅಂಶವೆಂದರೆ, ಪ್ರಕರಣಗಳ ಸಂಖ್ಯೆ 30 ಸಾವಿರದಿಂದ 40 ಸಾವಿರಕ್ಕೇರಲು ಐದು ದಿನಗಳ ಅವಧಿ ಹಿಡಿದಿದ್ದರೆ, ಮುಂದಿನ 10 ಸಾವಿರ ಪ್ರಕರಣಗಳು ಕೇವಲ ಮೂರು ದಿನಗಳಲ್ಲಿ ದಾಖಲಾಗಿವೆ. ಎಪ್ರಿಲ್ 28ರಂದು ದೇಶದಲ್ಲಿ 30 ಸಾವಿರ ಹಾಗೂ ಮೇ 3ರಂದು 40 ಸಾವಿರ ಪ್ರಕರಣಗಳು ದಾಖಲಾಗಿದ್ದವು.
ಆದಾಗ್ಯೂ ಮೃತಪಟ್ಟ ಸೋಂಕಿತರ ಸಂಖ್ಯೆ ಮಂಗಳವಾರಕ್ಕಿಂತ ಕಡಿಮೆಯಾಗಿದ್ದು, ಮಂಗಳವಾರ 199 ಮಂದಿ ಮೃತಪಟ್ಟಿದ್ದರೆ, ಬುಧವಾರ 93 ಮಂದಿ ಜೀವ ಕಳೆದುಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ಒಂದೇ ದಿನ 1,233 ಪ್ರಕರಣಗಳು ದಾಖಲಾಗಿದ್ದು, ಒಟ್ಟು ಸಂಖ್ಯೆ 16,758ಕ್ಕೇರಿದೆ. ರಾಜ್ಯದಲ್ಲಿ 34 ಮಂದಿ ಮೃತಪಟ್ಟಿದ್ದು, ಒಟ್ಟು ಮೃತರ ಸಂಖ್ಯೆ 651ಕ್ಕೇರಿದೆ. ದೇಶದಲ್ಲಿ ಇದುವರೆಗೆ 1,777 ಮಂದಿ ಸೋಂಕಿತರು ಮೃತಪಟ್ಟಿದ್ದು, ಶೇಕಡ 36.6ರಷ್ಟು ಸಾವು ಮಹಾರಾಷ್ಟ್ರದಲ್ಲೇ ಸಂಭವಿಸಿದೆ.
ದಿಲ್ಲಿಯಲ್ಲಿ ಕೂಡಾ ಗರಿಷ್ಠ ಸಂಖ್ಯೆಯ ಅಂದರೆ 428 ಪ್ರಕರಣಗಳು ಬುಧವಾರ ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 5,532 ಆಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಬುಧವಾರ ಕೋವಿಡ್-19 ಸೋಂಕಿತ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 65ಕ್ಕೇರಿದೆ.
ಗುಜರಾತ್ನಲ್ಲಿ 28 ಮಂದಿ ಸಾವನ್ನಪ್ಪಿದ್ದು, ಅಹ್ಮದಾಬಾದ್ ನಗರವೊಂದರಲ್ಲೇ 25 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟು ಸಾವಿಗೀಡಾದವರ ಸಂಖ್ಯೆ 396. ರಾಜ್ಯದಲ್ಲಿ 380 ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 6,625 ಆಗಿದೆ. ಪರಿಸ್ಥಿತಿ ಕೈ ಮೀರಿ ಹೋಗುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಮೇ 15ರವರೆಗೆ ದಿನಸಿ, ತರಕಾರಿ ಮತ್ತು ಹಣ್ಣುಗಳ ಮಾರಾಟವನ್ನು ಕೂಡಾ ನಿಷೇಧಿಸಲಾಗಿದೆ. ಕೇವಲ ಹಾಲು ಮತ್ತು ಔಷಧಿ ಮಾರಾಟಕ್ಕಷ್ಟೇ ಅವಕಾಶವಿದೆ.
ಮಂಗಳವಾರ 79 ಸಾವು ಸಂಭವಿಸಿದ್ದ ಬಂಗಾಳದಲ್ಲಿ ಬುಧವಾರ ಕೇವಲ 4 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 144ಕ್ಕೇರಿದೆ. ಕರ್ನಾಟಕದಲ್ಲಿ 29, ಮಧ್ಯಪ್ರದೇಶದಲ್ಲಿ ಒಂಬತ್ತು, ರಾಜಸ್ಥಾನ ಹಾಗೂ ಉತ್ತರ ಪ್ರದೇಶದಲ್ಲಿ ತಲಾ 4, ಆಂಧ್ರಪ್ರದೇಶದಲ್ಲಿ 3, ತಮಿಳುನಾಡು ಮತ್ತು ಪಂಜಾಬ್ನಲ್ಲಿ ತಲಾ 2 ಹಾಗೂ ಹರ್ಯಾಣ, ದಿಲ್ಲಿ, ಒಡಿಶಾದಲ್ಲಿ ತಲಾ ಒಂದು ಸಾವು ಸಂಭವಿಸಿದೆ.