ಕ್ರೌರ್ಯಕ್ಕೆ ಕೊನೆ ಇಲ್ಲವೇ?
ಊರಿಗೆ ತೆರಳಲು ಪರವಾನಿಗೆ ಇದೆ ಎಂದು ಗೊತ್ತಾಗುತ್ತಲೇ ಸುಮಾರು 50 ಕಿಲೋಮೀಟರ್‌ಗಟ್ಟಲೆ ನಡೆದು ಬೆಂಗಳೂರು ಸೇರಿದ ಕಾರ್ಮಿಕರಿಗೆ ಆಘಾತ ಕಾದಿತ್ತು. ಬಸ್ ಸ್ಟೇಷನ್‌ನಿಂದ ರೈಲ್ವೆ ನಿಲ್ದಾಣಕ್ಕೆ, ಅಲ್ಲಿಂದ ಇನ್ನೊಂದು ಕಡೆಗೆ ಎಂದು ಓಡಿಯಾಡಿಸಿ ಕಡೆಗೆ, ‘ಇನ್ನೇನು ಕೆಲಸ ಪ್ರಾರಂಭವಾಗುತ್ತದೆ, ಊಟ, ನೀರನ್ನೂ ಕೊಡುತ್ತ್ತೇವೆ, ಇಲ್ಲೇ ಇರಿ’ ಎಂದು ಮುಖ್ಯಮಂತ್ರಿಗಳ ಭಾಷಣ! ಕ್ಷಣಕಾಲ ತಮ್ಮ ಸಿಟ್ಟನ್ನು ತೋರಿಸಿ ಜಗಳಕ್ಕಿಳಿದ ಕಾರ್ಮಿಕರು, ಇವರನ್ನೇನು ಕೇಳುವುದು ಎಂದು ತಮ್ಮ ಚೀಲಗಳನ್ನೆತ್ತಿ ಹೊರಟೇ ಬಿಟ್ಟರು.
ಆಫ್ರಿಕಾದಿಂದ ನಿಗ್ರೋ ಜನರನ್ನು ಬಂಧಿಯಾಗಿಸಿ ಕಾಲಿಗೆಲ್ಲ ಸರಪಳಿ ಬಿಗಿದು ಹಡಗುಗಳಲ್ಲಿ ತುಂಬಿಕೊಂಡು ಪಶುಗಳಂತೆ ಮಾರಾಟ ಮಾಡಲು ಅಮೆರಿಕಕ್ಕೆ ಕೊಂಡೊಯ್ಯುತ್ತಿದ್ದರಂತೆ. ಖರೀದಿ ಮಾಡಿದಾತ ತನ್ನ ಗಣಿಗಳಲ್ಲಿ, ಕಬ್ಬಿನ ಗದ್ದೆಗಳಲ್ಲಿ, ಇನ್ನೂ ಬೇರೆ ಬೇರೆ ಉದ್ದಿಮೆಗಳಲ್ಲಿ ಜೀತದಾಳುಗಳಾಗಿ ಅವರನ್ನು ಮನಬಂದಂತೆ ದುಡಿಸಿಕೊಳ್ಳಬಹುದಿತ್ತು. ಅವರೂ ಮನುಷ್ಯರೇ, ಇವರೂ ಮನುಷ್ಯರೇ. ಇಬ್ಬರ ರಕ್ತವೂ ಕೆಂಬಣ್ಣವೇ. ಇಬ್ಬರೂ ಮಾತಾಡಬಲ್ಲರು. ವ್ಯತ್ಯಾಸ ಇದ್ದುದಿಷ್ಟೇ, ಅವರು ಕೆಂಬಣ್ಣದ ಚರ್ಮದವರಾಗಿದ್ದರು. ಇವರು ಕಪ್ಪುವರ್ಣೀಯರಾಗಿದ್ದರು. ಅವರು ಮುಂದುವರಿವರು. ಇವರು ಇನ್ನೂ ಆಧುನಿಕರಾಗಿರಲಿಲ್ಲ. ವಂಚನೆಯನ್ನು ಕಲಿತಿರಲಿಲ್ಲ. ಶತಮಾನಗಳ ಕಾಲ ನಡೆದ ಮಾನವ ಸಾಗಣೆೆ ಮತ್ತು ಗುಲಾಮಗಿರಿಯ ಬಗ್ಗೆ ನಾವಿಂದು ಇತಿಹಾಸದ ಪುಸ್ತಕಗಳಲ್ಲಿ ಓದುತ್ತೇವೆ.
‘ಇತಿಹಾಸ ಓದುವ ಕಷ್ಟವೇಕೆ, ಇಲ್ಲೇ ನಡೆಯುತ್ತಿದೆ, ನೋಡಿ ಎನ್ನುತ್ತಿದೆ ಇಂದಿನ ಭಾರತ. ಮಾನವನನ್ನು ಪ್ರಾಣಿಗಿಂತ ಕೀಳಾಗಿ ನಡೆಸಿಕೊಳ್ಳುವಂಥ ಜೀತ ಪದ್ಧತಿಯಿಂದ ನಮ್ಮ ಸಮಾಜ ಇನ್ನೂ ಮುಕ್ತವಾಗಿಲ್ಲ. ಅಂದು ಯುರೋಪಿಯನ್ನರು ಅಮೆರಿಕದ ಅಭಿವೃದ್ಧಿಗೆ ತಮ್ಮವರಲ್ಲದ ಆಫ್ರಿಕಾದ ನಿಗ್ರೋಗಳನ್ನು ಸಾಗಿಸಿದರೆ, ಇಂದು ನಾವು ಅಭಿವೃದ್ಧಿಯ ಹೆಸರಿನಲ್ಲಿ ನಮ್ಮದೇ ಜನರನ್ನು ನಮ್ಮದೇ ನೆಲದಲ್ಲಿ ಗುಲಾಮರಾಗಿಸಿದ್ದೇವೆ. ನಮ್ಮ, ಅವರ ನಡುವೆ ಶಿಕ್ಷಿತರು, ಅಶಿಕ್ಷಿತರೆಂಬ ಒಂದೇ ವ್ಯತ್ಯಾಸ. ಅಶಿಕ್ಷಣ ಮತ್ತು ಜಾತೀಯತೆಗಳು ತಮ್ಮದೇ ಗ್ರಾಮಗಳಲ್ಲಿ ಈ ಭೂಮಿಹೀನ ಜನಕ್ಕೆ ಬದುಕಲು ಬಿಡಲಿಲ್ಲ. ಹೊಟ್ಟೆಪಾಡಿಗಾಗಿ ಉದ್ಯೋಗ ಅರಸಿ ಹೋದವರನ್ನು ಸಂಪೂರ್ಣ ಮರೆತಿದ್ದಾಯಿತು. ಒಳ್ಳೆಯ ಊಟ, ವಸತಿ, ಗೌರವಯುತ ಜೀವನದ ಕನಸು ತೋರಿಸಿ ಗುತ್ತಿಗೆದಾರರು ರಾಜ್ಯದಿಂದ ರಾಜ್ಯಕ್ಕೆ ಅವರನ್ನು ಸಾಗಿಸಿದರು. ಗಣಿಗಾರಿಕೆಯೇನು, ಇಟ್ಟಿಗೆ ಭಟ್ಟಿಗಳೇನು, ಸೇತುವೆ, ರಸ್ತೆ ಕಾಮಗಾರಿಗಳೇನು, ಹೋಟೆಲುಗಳೇನು, ಎಲ್ಲಾ ಕಡೆ ಧುತ್ತೆಂದು ಎದ್ದು ನಿಲ್ಲುತ್ತಿರುವ ಕಟ್ಟಡ ಕಾಮಗಾರಿಯೇನು.‘ಇದೇ ಅಭಿವೃದ್ಧಿ ಇದೇ ಅಭಿವೃದ್ಧಿ.
ದೇಶಕ್ಕೆ ಬೀಗ ಮುದ್ರೆ ಹಾಕುವಾಗಲೂ ಇವರ ನೆನಪೇ ಬರಲಿಲ್ಲ. ಇದ್ದಕ್ಕಿದ್ದಂತೆ ಉದ್ದಿಮೆಗಳು, ಗಣಿಗಳು, ರಸ್ತೆ ಕಾಮಗಾರಿ, ಎಲ್ಲವೂ ಮುಚ್ಚಿಕೊಂಡು ಹೋದಾಗ ದೇಶದ ಎಲ್ಲಾ ಕಡೆಗಳಿಂದಲೂ ಎಲ್ಲಾ ಕಡೆಗೂ ಹೋಗಿ ಸೇರಿಕೊಂಡಿದ್ದ ಕಾರ್ಮಿಕರು ಗಂಟುಮೂಟೆ ಕಟ್ಟಿಕೊಂಡು, ಮಕ್ಕಳನ್ನು ಹೆಗಲಿಗೇರಿಸಿಕೊಂಡು ಹುಬ್ಬಳ್ಳಿಯಿಂದ, ಮಂಗಳೂರಿನಿಂದ, ಬೆಂಗಳೂರಿನಿಂದ, ಚೆನ್ನೈನಿಂದ ಜಾರ್ಖಂಡ್‌ಗೆ, ಪಾಟ್ನಾಗೆ, ಅಹಮದಾಬಾದ್‌ಗೆ, ಉತ್ತರದಿಂದ ದಕ್ಷಿಣ, ದಕ್ಷಿಣದಿಂದ ಉತ್ತರದ ತುದಿಗೆ ನಡೆದೇ ಹೊರಟಾಗ ನಿಂತು ನೋಡಿತು ಶಿಕ್ಷಿತ ವರ್ಗ. ಕೊರೋನ ಹಬ್ಬಿಸಬಹುದೆಂದು ಈ ಜನ ಪ್ರವಾಹವನ್ನು ಪೊಲೀಸರ ಲಾಠಿ ತಡೆದಾಗ ಹೊರಟಿದ್ದ ದಂಡು ನಿಂತಿತು. ತಗಡಿನ ಶೆಡ್‌ಗಳಲ್ಲಿ, ಸೇತುವೆಗಳ ಅಡಿಯಲ್ಲಿ, ರಸ್ತೆಗಳ ಬದಿಯಲ್ಲಿ, ಎಲ್ಲೆಂದರಲ್ಲಿ ಕುರಿ, ದನಗಳನ್ನು ಅಡ್ಡ ನಿಲ್ಲಿಸಿದಂತೆ ಕಾರ್ಮಿಕ ಜನರನ್ನು ತಡೆಯಲಾಯಿತು. ಊಟ ಸಿಕ್ಕಿದವರಿಗೆ ಸಿಕ್ಕಿತು. ಇಲ್ಲದವರಿಗೆ ಇಲ್ಲ. ಭತ್ತೆಯನ್ನಾದರೂ ಕೊಡಿ ಅವರ ಖರ್ಚಿಗೆ ಎಂದರೆ ಅದೂ ಸಿಗಲಿಲ್ಲ. ಹೇಗೆ ಕಳೆದರೋ ಬಿರುಬಿಸಿಲಬೇಗೆಯ ದಿನಗಳನ್ನು. ಮೂಕ ಪ್ರಾಣಿಗಳನ್ನು ನಾವು ಕೇಳುತ್ತೇವೆಯೇ? ನಮಗೂ ಅವರಿಗೂ ನಡುವೆ ಸಾಮಾಜಿಕ ಅಂತರ!
ಬೀಗಮುದ್ರೆ ತೆರೆಯುತ್ತಲೇ ಈ ಜನರನ್ನು ತಮ್ಮೂರಿಗೆ ಮರಳಲು ಅನುಮತಿಯನ್ನು ನೀಡುವ ಭರವಸೆಯನ್ನು ‘ಮೇಡೇ’ ಶ್ರಮಿಕ ದಿನದಂದು ಕೊಟ್ಟ ಸರಕಾರ ಒಂದುಕ್ಷಣ ಕಾರ್ಮಿಕರಿಗೂ ಅವರ ಹಿತೈಷಿಗಳಿಗೂ ದೊಡ್ಡ ನೆಮ್ಮದಿಯನ್ನು ನೀಡಿತು. ನೀಡಿದಷ್ಟೇ ವೇಗದಲ್ಲಿ ಅದನ್ನು ಕಸಿದುಕೊಂಡಿತು ಕೂಡ!
ಅದು ತನ್ನದಲ್ಲ, ರಾಜ್ಯಗಳ ಜವಾಬ್ದಾರಿ. ರಾಜ್ಯದಿಂದ ರಾಜ್ಯಕ್ಕೆ ಹೋಗಲು ಬಸ್ಸನ್ನೇ ಮಾಡಿ ಎಂದು ಎಲ್ಲಾ ಜವಾಬ್ದಾರಿಯನ್ನೂ ಮತ್ತೊಮ್ಮೆ ಕೇಂದ್ರ ಸರಕಾರ ರಾಜ್ಯ ಸರಕಾರದ ಮೇಲೆ ಹೇರಿದಾಗ ಈ ಜನರಿಂದ ಪ್ರಯಾಣದ ವೆಚ್ಚವನ್ನು ಸುಲಿಯಲು ಹೊರಟಿತು ನಮ್ಮ ರಾಜ್ಯ ಸರಕಾರ. ‘55 ಸೀಟುಗಳಿರುವ ಒಂದು ಬಸ್ಸಿನಲ್ಲಿ 30 ಜನರನ್ನು ಮಾತ್ರ ಹಾಕಬೇಕಾಗುತ್ತದೆ. ಅವರನ್ನು ಕಳಿಸಿ ಖಾಲಿ ವಾಪಸ್‌ಬರಬೇಕಾಗುತ್ತದೆ ಅದಕ್ಕಾಗಿ... ಎಂದು ನೆವಗಳನ್ನು ಮುಂದೊಡ್ಡಿ 3 ಪಟ್ಟು ಚಾರ್ಜು ಮಾಡುವ ನಮ್ಮ ಕೆಎಸ್ಸಾರ್ಟಿಸಿಯ ವ್ಯವಹಾರ ಬುದ್ಧಿಗೆ ಏನೇನು ಕೊಟ್ಟರೂ ಸಾಲದು!! ‘ಸರಕಾರ ಇವರಿಗೆ ಆಹಾರ ಕೊಡುತ್ತಿದೆ ಮತ್ತೆ ಭತ್ತೆ ಯಾಕೆ? ಹಣವನ್ನೇನು ಕೊಡುವ ಅವಶ್ಯಕತೆ ಇಲ್ಲ! ಎಂದು ಕೆಲವೇ ದಿನಗಳ ಹಿಂದೆ ತೀರ್ಪಿತ್ತಿತ್ತು ನಮ್ಮ ಸರ್ವೋಚ್ಚ ನ್ಯಾಯಾಲಯ. ಸರಿಯಾಗಿ ಆಹಾರವೂ ಸಿಗದೆ ಕೈಯಲ್ಲಿರುವ ಪುಡಿಗಾಸನ್ನೂ ಖರ್ಚು ಮಾಡಿ ಕುಳಿತಿರಬಹುದಾದ ನಮ್ಮ ಕೂಲಿಕಾರರಿಂದ ಮೂರುಪಟ್ಟು ಪ್ರಯಾಣ ವೆಚ್ಚವನ್ನು ಕೇಳಹೊರಟಿರುವ ಕಲ್ಯಾಣ ರಾಜ್ಯ ಸರಕಾರಕ್ಕೆ ಎಲ್ಲಾ ಕಡೆಗಳಿಂದಲೂ ಛೀಮಾರಿ ಬಂದಾಗ, ಕಾಂಗ್ರೆಸ್ ಪಕ್ಷ ತಾನು ಅವರ ವೆಚ್ಚ ಭರಿಸುತ್ತೇನೆಂದು ಹೇಳಿದಾಗ ಎಚ್ಚರಗೊಂಡ ಸರಕಾರ ಪ್ರಯಾಣವನ್ನು ಉಚಿತಗೊಳಿಸಿತು. ಆದರೆ ಸಾಕಷ್ಟು ಜನರು ಬಸ್ ಏರಿ, ಟಿಕೆಟ್ ಕೊಂಡು ಊರು ತಲುಪಿಯೂ ಆಗಿತ್ತಾಗಲೇ .ಕಾಂಗ್ರೆಸ್ ಮತ್ತು ಬಿಜೆಪಿಗೆ ರಾಜಕೀಯ ಕೆಸರೆರಚಾಟಕ್ಕೆ ಬಳಕೆಯಾಯಿತಷ್ಟೇ ಈ ನಡೆ.
ಬಸ್‌ನಲ್ಲಿ ತಮ್ಮ ತಮ್ಮ ಊರುಗಳಿಗೆ ಕಾರ್ಮಿಕರನ್ನು ಕಳಿಸುವುದರ ವಿಚಾರವಾಯಿತು ಇದು. ಇನ್ನು ಬೇರೆ ರಾಜ್ಯಗಳಿಂದ ಬಂದ ಕಾರ್ಮಿಕರಿಗೆ ನೋಂದಣಿ ಮಾಡಿ, ಪಾಸ್ ಕೊಟ್ಟು ರೈಲು ಹತ್ತಿಸಬೇಕೆನ್ನುವಷ್ಟರಲ್ಲಿ ಇನ್ನೊಂದು ಧೂರ್ತ ವಿಚಾರ ಈ ಆಳುವ ವರ್ಗಕ್ಕೆ. ಗುತ್ತಿಗೆದಾರ, ರಾಜಕಾರಣಿ ಮತ್ತು ಅಧಿಕಾರಿಗಳ ಸರ್ವಭಕ್ಷಕ ತ್ರಿಕೋನಕ್ಕೆ. ಇನ್ನೇನು ಬೀಗ ಮುದ್ರೆ ತೆಗೆದು ಮತ್ತೆ ಉದ್ದಿಮೆಗಳು ಕಾರ್ಯಾರಂಭ ಮಾಡಬೇಕಾದ ಸಮಯದಲ್ಲಿ ಈ ಜನರನ್ನು ಹೋಗಗೊಡುವುದೇ? ಮುಖ್ಯವಾಗಿ ಅಭಿವೃದ್ಧಿ ಎಂದು ಯಾವುದನ್ನು ಈ ಅಧಿಕಾರಸ್ಥರು ತೋರಿಸುತ್ತಿದ್ದಾರೋ ಆ ರಿಯಲ್‌ಎಸ್ಟೇಟ್ ಉದ್ದಿಮೆ ಆರಂಭವಾಗಬೇಕು. ಈ ಸಮಯದಲ್ಲಿ ಈ ಕಡಿಮೆ ಬೆಲೆಯ ಕಾರ್ಮಿಕರೆಲ್ಲ ಊರತ್ತ ಹೋಗಿಬಿಟ್ಟರೆ, ಅಯ್ಯೋ, ನಮಗೆ ಚೀಪ್ ಲೇಬರ್ ಎಲ್ಲಿಂದ? ಅಧಿಕಾರಸ್ಥರು ಮತ್ತು ಉದ್ದಿಮೆಗಳು ಈ ಕಾರ್ಮಿಕರನ್ನು ಮನೆಗೆ ಕಳಿಸುವುದೋ ಬೇಡವೋ ಎಂದು ವಿಶೇಷ ಸಭೆ ನಡೆಸಿ ಚರ್ಚಿಸಿದರು. ಕಾರ್ಮಿಕರ ಪ್ರತಿನಿಧಿಗಳು, ಕಾರ್ಮಿಕರ ಸಂಘಟನೆಗಳು, ಮುಖಂಡರಿಗೇನೂ ಆಹ್ವಾನವಿಲ್ಲದ ಸಭೆ ಅದು. ಇವರನ್ನೀಗ ಕಳಿಸುವುದು ಬೇಡ, ಕಳಿಸಿದರೆ ರಾಜ್ಯದ ಆರ್ಥಿಕತೆಗೆ ದೊಡ್ಡ ಪೆಟ್ಟು ಎಂದು ನಿರ್ಧಾರ. ಹಾಗೆಂದು ನೈಋತ್ಯ ರೈಲ್ವೆಯ ಜನರಲ್ ಮ್ಯಾನೇಜರರಿಗೆ ಪತ್ರವೂ ಹೋಗಿಬಿಟ್ಟಿತು. ನಮಗೇನೂ ರೈಲ್ವೆ ಸೇವೆ ಬೇಕಿಲ್ಲ ಎಂದು.
ಊರಿಗೆ ತೆರಳಲು ಪರವಾನಿಗೆ ಇದೆ ಎಂದು ಗೊತ್ತಾಗುತ್ತಲೇ ಸುಮಾರು 50 ಕಿಲೋಮೀಟರ್‌ಗಟ್ಟಲೆ ನಡೆದು ಬೆಂಗಳೂರು ಸೇರಿದ ಕಾರ್ಮಿಕರಿಗೆ ಆಘಾತ ಕಾದಿತ್ತು. ಬಸ್ ಸ್ಟೇಷನ್‌ನಿಂದ ರೈಲ್ವೆ ನಿಲ್ದಾಣಕ್ಕೆ, ಅಲ್ಲಿಂದ ಇನ್ನೊಂದು ಕಡೆಗೆ ಎಂದು ಓಡಿಯಾಡಿಸಿ ಕಡೆಗೆ, ‘ಇನ್ನೇನು ಕೆಲಸ ಪ್ರಾರಂಭವಾಗುತ್ತದೆ, ಊಟ, ನೀರನ್ನೂ ಕೊಡುತ್ತ್ತೇವೆ, ಇಲ್ಲೇ ಇರಿ’ ಎಂದು ಮುಖ್ಯಮಂತ್ರಿಗಳ ಭಾಷಣ! ಕ್ಷಣಕಾಲ ತಮ್ಮ ಸಿಟ್ಟನ್ನು ತೋರಿಸಿ ಜಗಳಕ್ಕಿಳಿದ ಕಾರ್ಮಿಕರು, ಇವರನ್ನೇನು ಕೇಳುವುದು ಎಂದು ತಮ್ಮ ಚೀಲಗಳನ್ನೆತ್ತಿ ಹೊರಟೇ ಬಿಟ್ಟರು.
ಕಾರ್ಮಿಕ ಸಂಘಟನೆಗಳ ಕೇಂದ್ರ ಸಮಿತಿಯು ಹಾಕಿದ ಕೇಸಿಗೆ ಉತ್ತರವಾಗಿ ರಾಜ್ಯ ಉಚ್ಚ ನ್ಯಾಯಾಲಯವು ‘ವಲಸೆ ಕಾರ್ಮಿಕರನ್ನು ಆಯಾ ರಾಜ್ಯಕ್ಕೆ ಕಳಿಸಿಕೊಡಲು ಸರಕಾರದ ಯೋಜನೆಗಳೇನು, ಏನೂ ತೊಂದರೆಯಿಲ್ಲದಂತೆ, ವೈಯಕ್ತಿಕ ಅಂತರವನ್ನು ಕಾಯ್ದುಕೊಂಡು ಕಾರ್ಮಿಕರು ಮರಳಲು ನೋಂದಣಿಗೆ ಹೇಗೆ ಸಹಕರಿಸಿದೆ ಎಂಬುದರ ವಿವರಗಳನ್ನು ಕೋರ್ಟಿನ ಮುಂದಿಡಬೇಕು’ ಎಂದು ಆದೇಶ ಮಾಡಿದೆಯಾದರೂ, ಈ ನಾಗರಿಕ ಸಮಾಜವನ್ನು ಮತ್ತೊಮ್ಮೆ ತಿರಸ್ಕರಿಸಿ ಕಾರ್ಮಿಕರು ಕಾಲ್ನಡಿಗೆಯಲ್ಲಿ ಹೊರಟಿದ್ದಾರೆ, ಬೆಂಗಳೂರಿನಿಂದ ಉತ್ತರದ ರಾಜ್ಯಗಳಿಗೆ. ಅವರ ಮೌನದಲ್ಲೇ ಅಡಗಿವೆ ನಾಗರಿಕ ಸಮಾಜಕ್ಕೆ ಹತ್ತು ಹಲವು ಪ್ರಶ್ನೆಗಳು. ಉತ್ತರಿಸಬೇಕಿದೆ ನಾವು.