ಕೇರಳ: ವಿದೇಶದಿಂದ ಹಿಂದಿರುಗಿದ್ದ ಇಬ್ಬರಲ್ಲಿ ಕೊರೋನ ವೈರಸ್
ತಿರುವನಂತಪುರ,ಮೇ 9: ಕೇರಳದಲ್ಲಿ ಶನಿವಾರ ಕೊರೋನ ವೈರಸ್ ಸೋಂಕಿನ ಎರಡು ಹೊಸ ಪ್ರಕರಣಗಳು ವರದಿಯಾಗಿವೆ. ಸೋಂಕಿತರಿಬ್ಬರೂ ಮೇ 7ರಂದು ದುಬೈ ಹಾಗೂ ಅಬುದಾಭಿಯಿಂದ ಕೇರಳಕ್ಕೆ ಆಗಮಿಸಿದವರಾಗಿದ್ದಾರೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ವಿದೇಶಗಳಲ್ಲಿ ಸಿಲುಕಿಕೊಂಡಿದ್ದ ಭಾರತೀಯರನ್ನು ಕರೆತರುವ ಕಾರ್ಯಾಚರಣೆಯ ಅಂಗವಾಗಿ ಕೇಂದ್ರ ಸರಕಾರವು ಯುಇಎನಿಂದ ಗುರುವಾರ ಏರ್‌ಲಿಫ್ಟ್ ಮಾಡಿದ್ದ ಪ್ರಯಾಣಿಕರ ತಂಡದಲ್ಲಿ ಇವರೂ ಇದ್ದರು.
ಈ ಎರಡು ಹೊಸ ಪ್ರಕರಣಗಳೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 505ಕ್ಕೇರಿದೆಯೆಂದು ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ಇಬ್ಬರು ಹೊಸ ಸೋಂಕಿತರಲ್ಲಿ ಓರ್ವ ಕೊಚ್ಚಿ ಹಾಗೂ ಇನ್ನೋರ್ವ ಕೋಝಿಕ್ಕೋಡ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಅವರು ತಿಳಿಸಿದರು.
ಪ್ರಸಕ್ತ 17 ಮಂದಿ ಕೋವಿಡ್-19 ರೋಗಿಗಳು ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಅವರು ಹೇಳಿದರು.ಇಡುಕ್ಕಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಓರ್ವ ರೋಗಿ ಇಂದು ಗುಣಮುಖರಾಗಿದ್ದಾರೆಂದು ಮುಖ್ಯಮಂತ್ರಿ ತಿಳಿಸಿದರು.
ರಾಜ್ಯದಲ್ಲಿ 23,930 ಮಂದಿ ನಿಗಾವಣೆಲ್ಲಿದ್ದು, ವಿವಿಧ ಆಸ್ಪತ್ರೆಗಳಲ್ಲಿ 334 ಮಂದಿ ಯನ್ನು ಐಸೋಲೇಶನ್‌ನಲ್ಲಿ ಇಡಲಾಗಿದೆಯೆಂದರು.
ಸೋಂಕಿಗೊಳಗಾದ 505 ಮಂದಿಯ ಪೈಕಿ 485 ಮಂದಿ ಗುಣಮುಖರಾಗಿದ್ದಾರೆಂದು ಪಿಣರಾಯ್ ತಿಳಿಸಿದರು.