ಉಜ್ಜಯನಿಯಲ್ಲಿ ಕೊರೋನ ಮರಣಮೃದಂಗ: 237 ರೋಗಿಗಳ ಪೈಕಿ 45 ಮಂದಿ ಸೋಂಕಿಗೆ ಬಲಿ
ಕಳಪೆ ಚಿಕಿತ್ಸಾ ಸೌಲಭ್ಯ ಕಾರಣ: ಆರೋಪ
ಇಂದೋರ್, ಮೇ10: ಮಧ್ಯಪ್ರದೇಶ ರಾಜಧಾನಿ ಇಂದೋರ್‌ನಿಂದ 54 ಕಿ.ಮೀ. ದೂರದಲ್ಲಿರುವ ಉಜ್ಜಯಿನಿ ನಗರದಲ್ಲಿ ಕೊರೋನ ವೈರಸ್ ಮರಣ ಮೃದಂಗ ಬಾರಿಸುತ್ತಿದ್ದು, ರಾಜ್ಯ ಸರಕಾರವನ್ನು ಕಂಗೆಡಿಸಿದೆ.
ಉಜ್ಜಯಿನಿ ನಗರದಲ್ಲಿ ಸೋಂಕಿತರ ಸಾವಿನ ಸಂಖ್ಯೆಯು ರವಿವಾರ ಶೇ.19ಕ್ಕೆ ತಲುಪಿದ್ದು, ಇದು ರಾಷ್ಟ್ರೀಯ ಸರಾಸರಿ ಕೋವಿಡ್-19 ಮರಣ ಪ್ರಮಾಣಕ್ಕಿಂತ ಶೇ.3.35ರಷ್ಟು ಅಧಿಕವಾಗಿದೆ.
ಈ ನಗರದಲ್ಲಿ 237 ಮಂದಿಗೆ ಕೊರೋನ ಸೋಂಕು ತಗಲಿದ್ದು, ಅವರಲ್ಲಿ 45 ಮಂದಿ ಅಸುನೀಗಿದ್ದಾರೆ. ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳವೂ ಆಗಿರುವ ಉಜ್ಜಯಿನಿ ನಗರ 7 ಲಕ್ಷಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿದೆ.
ಕೊರೋನಾಗೆ ಬಲಿಯಾದವರರಲ್ಲಿ ಓರ್ವ ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಬಿಜೆಪಿ ಕಾರ್ಪೊರೇಟರ್ ಕೂಡಾ ಸೇರಿದ್ದಾರೆ. ನಗರದಲ್ಲಿನ ಕಳಪೆ ಆರೋಗ್ಯಪಾಲನಾ ಸೌಲಭ್ಯಗಳ ಕುರಿತು ಈಗಾಗಲೇ ಪ್ರತಿಪಕ್ಷಗಳು ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡಿವೆ. ಈ ಮಧ್ಯೆ ಶಿವರಾಜಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರಕಾರವು ಕೋವಿಡ್-19 ನಿರ್ವಹಣೆಯಲ್ಲಿ ವಿಫಲವಾಗಿರುವ ಉಜ್ಜಯಿನಿ ಜಿಲ್ಲಾಧಿಕಾರಿ ಹಾಗೂ ಪೊಲೀಸ್‌ಅಧೀಕ್ಷಕರನ್ನು ವರ್ಗಾವಣೆಗೊಳಿಸಿದೆ.
ಉಜ್ಜಯಿನಿಯ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರವಹಿಸಿಕೊಂಡಿರುವ ಆಶೀಶ್ ಸಿಂಗ್ ಅವರು ಸುದ್ದಿಗಾರರ ಜೊತೆ ಮಾತನಾಡುತ್ತಾ, ‘‘ ಆರೋಗ್ಯ ಪಾಲನಾ ಸೌಲಭ್ಯಗಳನ್ನು ಸುಧಾರಣೆಗೊಳಿಸುವ ಮೂಲಕ ನಾವು ಸಾವಿನ ಪ್ರಮಾಣದಲ್ಲಿ ಇಳಿಕೆ ಮಾಡಲು ಯತ್ನಿಸುತ್ತಿದ್ದೇವೆ. ಸೋಂಕಿತರ ಗುರುತಿಸುವಿಕೆ ಹಾಗೂ ಅವರನ್ನು ಕ್ವಾರಂಟೈನ್‌ಗೊಳಿಸುವ ಬಗ್ಗೆ ಹಲವಾರು ಕ್ರಮಗಳನ್ನು ನಾವು ಆರಂಭಿಸಿದ್ದೇವೆ. ಹದಿನೈದು ದಿನಗಳೊಳಗೆ ಸೋಂಕಿನ ಪ್ರಮಾಣವನ್ನು ಸಮತಲದಲ್ಲಿರಿಸುವ ಬಗ್ಗೆ ನಾವು ಭರವಸೆ ಹೊಂದಿದ್ದೇವೆ’’ ಎಂದವರು ಹೇಳಿದ್ದಾರೆ.
ಉಜ್ಜಯಿನಿಯಲ್ಲಿ ಯಾವುದೇ ಸರಕಾರಿ ಆಸ್ಪತ್ರೆಯಿಲ್ಲದೆ ಇರುವುದರಿಂದ ಆರ್.ಡಿ.ಗಾರ್ಡಿ ಖಾಸಗಿ ಆಸ್ಪತ್ರೆಯನ್ನು ಕೋವಿಡ್ -19 ರೋಗಿಗಳ ಚಿಕಿತ್ಸೆಗೆಂದು ಮೀಸಲಿಡಲಾಗಿದೆ. ಆದರೆ ಈ ಆಸ್ಪತ್ರೆಯಲ್ಲಿರುವ ಕಳಪೆ ವೈದ್ಯಕೀಯ ವ್ಯವಸ್ಥೆಯ ಬಗ್ಗೆ ಮೃತ ಬಿಜೆಪಿ ಕಾರ್ಪೊರೇಟರ್ ಸೋಂಕಿಗೆ ತುತ್ತಾಗುವ ಕೆಲವೇ ದಿನಗಳ ಮೊದಲು ವಿಡಿಯೋ ಚಿತ್ರೀಕರಿಸಿ, ಜಾಲತಾಣಗಳಲ್ಲಿ ಪ್ರಸಾರ ಮಾಡಿದ್ದರು.
ಇಂದೋರ್‌ನಲ್ಲಿರುವ 100 ಆಸ್ಪತ್ರೆಗಳ ಸರಕಾರಿ ಆಸ್ಪತ್ರೆಯಲ್ಲಿಯೂ ಉಜ್ಜಯಿನಿಯ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಆರ್.ಡಿ. ಗಾರ್ಡಿ ಆಸ್ಪತ್ರೆಯಲ್ಲಿ ಮೃತಪಟ್ಟವರಲ್ಲಿ ಶೇ.70ರಷ್ಟು ಮಂದಿ, ಚಿಕಿತ್ಸೆಗೆ ದಾಖಲಾದ 72 ತಾಸುಗಳೊಳಗೆ ಕೊನೆಯುಸಿರೆಳೆದಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸುಜನ್‌ಸಿಂಗ್ ರಾವತ್ ತಿಳಿಸಿದ್ದಾರೆ.
ಉಜ್ಜಯಿನಿಯ ಆಸ್ಪತ್ರೆಯಲ್ಲಿ ಕೋವಿಡ್-19 ರೋಗಿಗಳ ಸಾವಿನ ಸಂಖ್ಯೆಯಲ್ಲಿ ಭಾರೀ ಏರಿಕೆಯಾದ ಹಿನ್ನೆಲೆಯಲ್ಲಿ ರಾವತ್ ಅವರನ್ನು ಮ.ಪ್ರ.ಸರಕಾರ ಆಸ್ಪತ್ರೆಯ ನೋಡಲ್ ಅಧಿಕಾರಿಯಾಗಿ ನೇಮಿಸಿದೆ.
ಮೃತ ಕೋವಿಡ್-19 ರೋಗಿಗಳಲ್ಲಿ ಹೆಚ್ಚಿನವರು ಹೃದಯ ಹಾಗೂ ಶ್ವಾಸಕೋಶದಂತಹ ಸಮಸ್ಯೆಗಳಿಂದ ಬಳಲುತ್ತಿದ್ದರೆಂದು ರಾವತ್ ತಿಳಿಸಿದ್ದಾರೆ.