varthabharthi


Social Media

ಕೋಟ್ಯಾಂತರ ಕಿವಿಗಳಿಗೆ ತಟ್ಟಿದ ಕೊರೋನ ಜಾಗೃತಿಯ ಧ್ವನಿಯ ಒಡತಿ ಸುಳ್ಯದ ಟಿಂಟು ಮೋಳ್ !

ವಾರ್ತಾ ಭಾರತಿ : 12 May, 2020
ದುರ್ಗಾಕುಮಾರ್ ನಾಯರ್ ಕೆರೆ

ಈಗ ಯಾರಿಗೇ ಆದರೂ ಫೋನ್ ಮಾಡಿದರೆ ತಕ್ಷಣ ಕೇಳುವುದು ಕೊರೋನ ಕುರಿತ ಜಾಗೃತಿಯ ಮಾತುಗಳು. ಯಾರಿಗಾದರೂ ಫೋನ್ ಕನೆಕ್ಟ್ ಆದ ತಕ್ಷಣ ಕೇಳುತ್ತಿರುವುದು ಕೆಮ್ಮಿನ ಸದ್ದು. ಆ ಬಳಿಕ ಕೊರೋನ ಕುರಿತು ಜಾಗೃತಿ ಮೂಡಿಸುವಂತಹ ಸಂದೇಶ.

ಕೊರೋನ ಕುರಿತು ಭಯ ಬೇಡ, ಮುಂಜಾಗ್ರತೆ ಕೈಗೊಳ್ಳಿ. ಕೊರೋನ ಖಾಯಿಲೆಯನ್ನು ಹರಡದಂತೆ ಮಾಡಲು ಸಾಧ್ಯವಿದೆ. ಕೈ, ಬಾಯಿ ಸೋಪ್‌ನಿಂದ ತೊಳೆಯಿರಿ, ಪರಸ್ಪರ ಒಂದು ಮೀಟರ್ ಅಂತರ ಕಾಪಾಡಿಕೊಳ್ಳಿ. ರೋಗವನ್ನು ವಿರೋಧಿಸಿ ರೋಗಿಗಳನ್ನಲ್ಲ ಎಂಬಿತ್ಯಾದಿ ಮನವಿಗಳು.

ಭಾರತದ ಯಾವ ರಾಜ್ಯದವರಿಗೆ ಫೋನ್ ಮಾಡಿದರೂ ಇಂತಹ ಧ್ವನಿ ಸಂದೇಶ ಕೇಳಿಸುತ್ತಿತ್ತು. ಮೊದಮೊದಲು ಇಲ್ಲಿನ ಜನರಿಗೆ ಇದು ಕಿರಿಕ್ ಅನ್ನಿಸಿದ್ದೂ ಇದೆ. ಜನ ತಮಾಷೆಯ ಮಾತುಗಳನ್ನಾಡಿದ್ದೂ ಇದೆ. ಆದರೆ ದೇಶದಲ್ಲಿ, ರಾಜ್ಯದಲ್ಲಿ, ನಮ್ಮ ಜಿಲ್ಲೆಗಳಲ್ಲೂ ಕೊರೋನ ವ್ಯಾಪಿಸುತ್ತಿದ್ದಂತೆ ಜನರಿಗೆ ಈ ಧ್ವನಿಯು ಜಾಗೃತಿಯ ಸಂದೇಶಗಳಾಯಿತು. ಈಗಂತೂ ಮಕ್ಕಳಿಗೆ ತಾಯಿ ನೀಡುವ ಉಪದೇಶದಂತೆ ಅನಿಸತೊಡಗಿದೆ.

ಕೋಟ್ಯಾಂತರ ಕಿವಿಗಳನ್ನು ತಟ್ಟುತ್ತಿರುವ ಇಂತಹ ಸಂದೇಶದ ಹಿಂದಿನ ಧ್ವನಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಹೆಣ್ಣು ಮಗಳದ್ದು.

ಪ್ರತಿ ರಾಜ್ಯಗಳಲ್ಲೂ ಆಯಾ ರಾಜ್ಯ ಭಾಷೆಗಳಲ್ಲೇ ಈ ಧ್ವನಿ ಸಂದೇಶ ಬಿತ್ತರಿಸಲ್ಪಡುತ್ತದೆ. ಭಾರತದಲ್ಲಿ ಮೊಟ್ಟ ಮೊದಲ ಕೊರೋನ ಪ್ರಕರಣ ದಾಖಲಾದದ್ದು ಕೇರಳದಲ್ಲಿ. ಇಂತಹ ಕೇರಳದಲ್ಲಿ ಆ ರಾಜ್ಯ ಭಾಷೆಯಾಗಿರುವ ಮಲಯಾಳಂನಲ್ಲಿ ಧ್ವನಿ ಸಂದೇಶ ಬಿತ್ತರಿಸಲ್ಪಡುತ್ತಿದೆ. ಹೀಗೆ ಬಿತ್ತರವಾಗುತ್ತಿರುವ ಧ್ವನಿಯ ಒಡತಿ ಮಾತ್ರ ಸುಳ್ಯದ ಹೆಣ್ಣು ಮಗಳು.

ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದಲ್ಲಿ ನೆಲೆಸಿರುವ ಟಿ.ವಿ. ಜೋಸೆಫ್ ಮತ್ತು ಆಲಿಸ್ ಜೋಸೆಫ್ ದಂಪತಿಯ ಪುತ್ರಿ ಟಿಂಟು ಮೋಳ್ ಅವರ ಧ್ವನಿ ಇದು. ಕೇರಳ ಮೂಲದ ಈ ಕುಟುಂಬ 24 ವರ್ಷಗಳಿಂದ ಸುಳ್ಯ ಪರಿಸರದಲ್ಲಿ ನೆಲೆಸಿದೆ.

ಕೊಟ್ಟಾಯಂ ಜಿಲ್ಲೆಯ ಪಾಲ ಎಂಬಲ್ಲಿಯವರಾದ ಟಿ.ವಿ ಜೋಸೆಫ್ 24 ವರ್ಷಗಳ ಹಿಂದೆ ರಬ್ಬರ್ ಟ್ಯಾಪಿಂಗ್ ಕಾರ್ಮಿಕರಾಗಿ ಗುತ್ತಿಗಾರಿಗೆ ಬಂದಿದ್ದರು. ಆ ಬಳಿಕ ಕೆಲವೇ ವರ್ಷಗಳಲ್ಲಿ ಅವರ ಸಂಸಾರವೂ ಇಲ್ಲಿಗೆ ಬಂದು ನೆಲೆಯಾಯಿತು. ಕೆಲವು ವರ್ಷ ಗುತ್ತಿಗಾರಿನಲ್ಲಿದ್ದ ಬಳಿಕ ಒಂದಷ್ಟು ವರ್ಷ ಬಿ.ಸಿ.ರೋಡ್‌ನಲ್ಲಿದ್ದರು. ಬಳಿಕ ಮರ್ಕಂಜಕ್ಕೆ ಬಂದಿದ್ದು, ಕಳೆದ 12 ವರ್ಷಗಳಿಂದ ಸುಲು ಜಾರ್ಜ್ ಎಂಬವರು ಇಲ್ಲಿ ಖರೀದಿಸಿದ ರಬ್ಬರ್ ಎಸ್ಟೇಟ್‌ನ ಉಸ್ತುವಾರಿ ನೋಡಿಕೊಳ್ಳುತ್ತಾ ಪತ್ನಿಯೊಂದಿಗೆ ವಾಸ್ತವ್ಯ ಹೂಡಿದ್ದಾರೆ.

ಈ ದಂಪತಿಗೆ ಇಬ್ಬರು ಮಕ್ಕಳು. ಹಿರಿಯಾಕೆ ಟಿಂಟು ಮೋಳ್, ಈಕೆಯ ತಮ್ಮ ಟಿಬಿನ್ ಸದ್ಯ ಮಸ್ಕತ್‌ನಲ್ಲಿದ್ದಾರೆ. ಟಿಂಟು ಮೋಳ್‌ಗೆ 9 ವರ್ಷವಿದ್ದಾಗ ಅವರು ತಂದೆಯೊಂದಿಗೆ ಸುಳ್ಯಕ್ಕೆ ಬಂದರು. ಬಳಿಕ ಕಡಬದ ಕ್ನಾನಾಯ ಜ್ಯೋತಿ ವಿದ್ಯಾಸಂಸ್ಥೆಯಲ್ಲಿ ಶಿಕ್ಷಣ ಪಡೆದರು. ಮೊಡಂಕಾಪು ಇನ್ಫೆಂಟ್ ಜೀಸಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್‌ನಲ್ಲಿ ಪ್ರೌಢ ಶಿಕ್ಷಣ ಪಡೆದರು. ಬಳಿಕ ಮಂಗಳೂರಿನ ಸೈಂಟ್ ಅಗ್ನೇಸ್ ವಿದ್ಯಾಸಂಸ್ಥೆಯಲ್ಲಿ ಪಿ.ಯು.ಸಿ. ಹಾಗೂ ಪದವಿ ಶಿಕ್ಷಣ ಪೂರೈಸಿ, ಐ.ಎ.ಎಸ್ ಪರೀಕ್ಷೆ ಬರೆಯುವ ಗುರಿಯೊಂದಿಗೆ ದೆಹಲಿಯತ್ತ ತೆರಳಿದರು. ದೆಹಲಿಯ ಜವಾಹರ ಲಾಲ್‌ನೆಹರು ವಿಶ್ವವಿದ್ಯಾನಿಲಯದಲ್ಲಿ ಅಂತರಾಷ್ಟ್ರೀಯ ಸಂಬಂಧ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದರು. ಪ್ರಸ್ತುತ ಪೂರ್ಣ ಪ್ರಮಾಣದಲ್ಲಿ ವಾಯ್ಸ್ ಆರ್ಟಿಸ್ಟ್ ಆಗಿ ಬ್ಯುಸಿ ಆಗಿದ್ದಾರೆ.

ದೆಹಲಿಯ ಜೆ.ಎನ್.ಯು. ಸೇರಿದ ಬಳಿಕ ಟಿಂಟು ಮೋಳ್ ಅವರಲ್ಲಿದ್ದ ಮಾತು, ಧ್ವನಿಯ ಪ್ರತಿಭೆ ಬೆಳಕಿಗೆ ಬಂತು. ಇದರೊಂದಿಗೆ ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಮುಂಚೂಣಿಯಲ್ಲಿದ್ದರು. ಜೆಎನ್‌ಯುನಲ್ಲಿದ್ದ ಬೇರೆ ಬೇರೆ ರಾಜ್ಯಗಳ ವಿದ್ಯಾರ್ಥಿಗಳ ಜಾನಪದ, ಸಾಂಸ್ಕೃತಿಕ ವೈವಿಧ್ಯತೆಗಳನ್ನು ಉತ್ತೇಜಿಸುವ ಸಾಂಸ್ಕೃತಿಕ ಘಟಕದ ಸದಸ್ಯೆಯಾಗಿ ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದರು.

ಕಾಲೇಜಿನಲ್ಲಿ ನಡೆದ ಅನೇಕ ಕಾರ್ಯಕ್ರಮಗಳಲ್ಲಿ ಕಾರ್ಯಕ್ರಮ ನಿರೂಪಣೆಯ ಮೂಲಕ ಮಿಂಚಿದ್ದರು. ಸಾಂಸ್ಕೃತಿಕ ವಿಭಾಗದ ಉಪನ್ಯಾಸಕ ಕೋ ಆರ್ಡಿನೇಟರ್ ಆಗಿದ್ದ ಈ ವಿಶ್ವವಿದ್ಯಾನಿಲಯದ ಕನ್ನಡ ಪೀಠದ ಮುಖ್ಯಸ್ಥರಾಗಿದ್ದ ಸುಳ್ಯದವರೇ ಆದ ಡಾ. ಪುರುಷೋತ್ತಮ ಬಿಳಿಮಲೆಯ ಪರಿಚಯವಾಗಿತ್ತು. ಟಿಂಟು ಅವರಲ್ಲಿದ್ದ ಪ್ರತಿಭೆಯನ್ನು ಗುರುತಿಸಿದ್ದ ಬಿಳಿಮಲೆಯವರು ಮಾರ್ಗದರ್ಶನ ಹಾಗೂ ನೆರವು ನೀಡಿದ್ದರು.

ದೆಹಲಿಯ ಖರ್ಚು ನಿಭಾಯಿಸಲು ಪಾರ್ಟ್ ಟೈಮ್ ಕೆಲಸವೊಂದರ ಅಗತ್ಯತತೆಯೂ ಟಿಂಟು ಮೋಳ್ ಅವರಿಗಿತ್ತು. ಈ ವೇಳೆ ಅವರ ಕನ್ನಡ ಧ್ವನಿಯ ಶಕ್ತಿಯನ್ನು ಅರಿತಿದ್ದ ಡಾ. ಬಿಳಿಮಲೆಯವರು ಕನ್ನಡ ವಾಯ್ಸ್ ಓವರ್ ನೀಡುವಂತೆ ಸಲಹೆ ನೀಡಿ ಅವರನ್ನು ದೆಹಲಿಯಲ್ಲಿ ಖ್ಯಾತ ಕನ್ನಡ ವಾಯ್ಸ್ ಆರ್ಟಿಸ್ಟ್ ಆಗಿರುವ ಸರವು ಕೃಷ್ಣ ಭಟ್‌ರವರಿಗೆ ಪರಿಚಯಿಸಿದರು.

ಹಾಗೆ ಟಿಂಟು ಅವರು ಕನ್ನಡ ಧ್ವನಿ ಪರೀಕ್ಷೆಗೆ ವಾಯ್ಸ್ ಇಂಡಸ್ಟ್ರಿಗೆ ತೆರಳಿದರು. ಅಲ್ಲಿ ತೇರ್ಗಡೆಗೊಂಡು ಒಂದೆರಡು ಬಾರಿ ಕನ್ನಡದ ಪ್ರಕಟನೆಗಳಿಗೆ ಧ್ವನಿ ನೀಡಿದರು. ಆದರೆ ಮಲಯಾಳಂ ಕೂಡ ಕರಗತವಾಗಿರುವ ಟಿಂಟು ಮೋಳ್‌ರವರಿಗೆ ಆ ಭಾಷೆಯ ಅವಕಾಶವೂ ಲಭಿಸಿತು. ಹಾಗೆ ಎರಡು ವರ್ಷಗಳಿಂದ ವಾಯ್ಸ್ ಇಂಡಸ್ಟ್ರಿಯಲ್ಲಿ ಕ್ರಿಯಾಶೀಲವಾಗಿರುವ ಟಿಂಟು ಮೋಳ್ ಅವರಿಗೆ ಅಭಿಮಾನಿಗಳ ಸಂಖ್ಯೆಯೂ ಜಾಸ್ತಿಯಾಯಿತು. ತಕ್ಕ ಮಟ್ಟಿಗೆ ಆದಾಯವೂ ಬಂತು.

ಡಿಡಿ ಮಲಯಾಳಂನಲ್ಲಿ ಪ್ರಸಾರವಾದ ಹಲವು ಕಾರ್ಯಕ್ರಮಗಳಿಗೆ ಟಿಂಟು ಮೋಳ್ ಧ್ವನಿ ನೀಡಿದ್ದಾರೆ. ಲೈವ್ ನಿರೂಪಕರಾಗಿಯೂ ಕಾಣಿಸಿಕೊಂಡಿದ್ದಾರೆ. ಕೇಂದ್ರ ಸರಕಾರದ ಅನೇಕ ಪ್ರಕಟನೆಗಳಿಗೆ ತನ್ನ ಶಬ್ಧ ದಾಖಲಿಸಿದ್ದಾರೆ. ಸ್ವಚ್ಛ ಭಾರತ್ ಅಭಿಯಾನ್, ಭೀಮ್ ಯೋಜನೆ, ಭೇಟಿ ಬಚಾವೋ - ಭೇಟಿ ಪಡಾವೋ, ಪ್ರಧಾನಮಂತ್ರಿ ಗ್ರಾಮೀಣ ಆವಾಝ್ ಯೋಜನೆ, ಜನಧನ್ ಯೋಜನೆ, ಅಂಚೆ ಇನ್ಸೂರೆನ್ಸ್, ಪಲ್ಸ್ ಪೋಲಿಯೊ ಸೇರಿದಂತೆ ಶಿಕ್ಷಣ, ಆರೋಗ್ಯ ಜಾಗೃತಿ ಕಾರ್ಯಕ್ರಮಗಳ ಧ್ವನಿಯಾಗಿದ್ದಾರೆ. ಇದಲ್ಲದೆ ಡೆಟ್ಟಾಯಿಲ್, ಉಷಾ, ಪತಂಜಲಿ, ಮಂಚ್, ಮಿಲ್ಕಿ ಬಾರ್ ಮೊದಲಾದ ಕಂಪೆನಿಗಳ ಪ್ರಕಟಣೆಗಳಿಗೆ ಧ್ವನಿ ನೀಡಿದ್ದಾರೆ.

ಹೀಗಿರುತ್ತಾ ಮಾ.10 ರಂದು ಇನ್ನೋರ್ವ ಖ್ಯಾತ ವಾಯ್ಸ್ ಆರ್ಟಿಸ್ಟ್ ಕಲಾಭವನ್ ಪ್ರಜಿತ್ ಅವರ ಸೂಚನೆಯಂತೆ ಕೊರೋನ ಕುರಿತ ಜಾಗೃತಿಯ ಪ್ರಕಟಣೆಗೆ ಧ್ವನಿ ನೀಡಲು ಸ್ಟುಡಿಯೋಕ್ಕೆ ತೆರಳುತ್ತಾರೆ. ಹಿಂದಿಯಲ್ಲಿದ್ದ ಪ್ರಕಟನೆಯನ್ನು ಟಿಂಟು ಮೋಳ್ ಮಲಯಾಳಂ ಭಾಷೆಗೆ ತಾನೇ ಅನುವಾದಿಸಿ ಧ್ವನಿ ನೀಡುತ್ತಾರೆ.

ಹೆಚ್ಚೆಂದರೆ ಟಿ.ವಿ. ಅಥವಾ ರೇಡಿಯೋಗಳಲ್ಲಿ ಈ ಪ್ರಕಟನೆ ಬರಬಹುದೆಂಬ ನಿರೀಕ್ಷೆ ಅವರಿಗಿತ್ತು. ಆದರೆ ಆದದ್ದೇ ಬೇರೆ, ಫೋನ್ ಸಂದೇಶಕ್ಕಾಗಿ ಈ ಧ್ವನಿ ಸಂದೇಶ ಬಳಕೆಯಾಯಿತು. ಕೇಂದ್ರ ಸಚಿವಾಲಯದಿಂದ ಅನುಮತಿ ಬಂದ ಬಳಿಕ ಟಿಂಟು ಅವರೇ ಈ ಧ್ವನಿ ಸಂದೇಶವನ್ನು ಬಂಧುಗಳು, ಮಿತ್ರರಿಗೆ ಕಳುಹಿಸಿಕೊಟ್ಟಿದ್ದರು.

ನಂತರ ದಿನಗಳಲ್ಲಿ ಕೇರಳದ ಅಷ್ಟೂ ಫೋನ್‌ಗಳಿಗೆ ಜಗತ್ತಿನ ಎಲ್ಲಿಂದಲೇ ಕರೆ ಮಾಡಿದರೂ ಕೇಳುವುದು ಟಿಂಟು ಮೋಳ್ ಅವರ ನಿರರ್ಗಳ ಮಾತುಗಾರಿಕೆಯ ಮಧುರ ಧ್ವನಿ ಮತ್ತು ಸಂದೇಶ. ಸ್ವತಃ ಅವರೇ ಕೇರಳಕ್ಕೆ ಪೋನ್ ಮಾಡಿದಾಗಲೂ ಅವರದೇ ಸಂದೇಶ ಅವರಿಗೆ ಕೇಳತೊಡಗುತ್ತದೆ! ಇದು ಒಂದು ವಿಶಿಷ್ಟ ಅನುಭವ. ಮಲಯಾಳಂ ಮಾತ್ರವಲ್ಲ ಕನ್ನಡ ಸೇರಿದಂತೆ ಹಲವು ಭಾಷೆಗಳ ಧ್ವನಿ ಸಂದೇಶಗಳು ಕೂಡ ಇದೇ ಸ್ಟುಡಿಯೋದಲ್ಲಿ ದಾಖಲಾಗಿದೆ.

ಆರಂಭದಲ್ಲಿದ್ದ ಧ್ವನಿ ಸಂದೇಶ ಬಳಿಕ ಎರಡು ಹಂತಗಳಲ್ಲಿ ಬದಲಾಗಿದೆ. ಮೊದಲು ಕೊರೋನ ಕುರಿತಾದ ಮುನ್ನೆಚ್ಚರಿಕೆ ಇತ್ತು. ನಂತರ ಇದನ್ನು ಪರಿಷ್ಕರಿಸಲಾಯಿತು. ಮೂರನೇ ಬಾರಿ ರೋಗಿಗಳ ಪರಿಚರಣೆ ಕುರಿತಂತೆ ಜಾಗೃತಿಯ ಮಾತುಗಳಿವೆ. ಅಲ್ಲದೆ ಈಗ ಕೊರೋನ ಕುರಿತ ಗೂಗಲ್ ಪ್ರಶ್ನೋತ್ತರ, ಆರೋಗ್ಯ ಜಾಗೃತಿ ಹಾಗೂ ಹೋಮ್ ಕ್ವಾರೆಂಟೈನ್ ಕುರಿತಾದ ಪ್ರಕಟನೆಗಳಿಗೂ ಟಿಂಟು ಮೋಳ್ ಧ್ವನಿ ನೀಡಿದ್ದಾರೆ.

ಈ ಮೊದಲು ಟಿಂಟು ಟಿವಿ ಹಾಗೂ ರೇಡಿಯೋಗಳಲ್ಲಿ ಸಾಕಷ್ಟು ಪ್ರಕಟಣೆಗಳಿಗೆ ಧ್ವನಿ ನೀಡಿದ್ದರೂ ಅವರು ಅಷ್ಟೇನು ಗುರುತಿಸಲ್ಪಟ್ಟಿರಲಿಲ್ಲ. ಆದರೆ ಕೊರೋನ ಕಾರಣದಿಂದ ಯಾರೂ ನಿರೀಕ್ಷಿಸಿರದ ರೀತಿಯಲ್ಲಿ ಟಿಂಟು ಶೈನಿಂಗ್ ಸ್ಟಾರ್ ಆಗಿದ್ದಾರೆ.

ಟಿಂಟು ಮೋಳ್ ಅವರ ಯು.ಪಿ.ಎಸ್.ಸಿ ಪರೀಕ್ಷೆ ಬರೆಯುವ ಕನಸು ನನಸಾಗಲಿಲ್ಲ. ಆದರೆ ಅವರು ತನ್ನ ಬಹು ಮುಖ ಪ್ರತಿಭೆಯಿಂದ ದೆಹಲಿಯಲ್ಲಿ ಮಿಂಚುತ್ತಿದ್ದಾರೆ. ಉತ್ತಮ ನೃತ್ಯ ಹಾಗೂ ನಾಟಕ ಹಾಗೂ ಬೀದಿ ನಾಟಕ ಕಲಾವಿದೆಯೂ ಆಗಿರುವ ಅವರು ಈ ಕುರಿತ ಒಂದು ಸಂಸ್ಥೆಯನ್ನೂ ನಡೆಸುತ್ತಿದ್ದಾರೆ. ಅನೇಕ ಅಂತರಾಷ್ಟ್ರೀಯ ಕಾರ್ಯಕ್ರಮಗಳಲ್ಲೂ ಪ್ರದರ್ಶನ ನೀಡಿದ್ದಾರೆ. ಕೂಚುಪುಡಿ, ಕಳರಿ ಕಲೆ ಕಲಿಯುತ್ತಿದ್ದಾರೆ.

ಕೇರಳ ಸಂಗೀತ ನಾಟಕ ಆಕಾಡೆಮಿ ನಡೆಸಿದ ಅಮೆಚೂರ್ ನಾಟಕ ಸ್ಫರ್ಧೆಯಲ್ಲಿ ಭಾಗವಹಿಸಿ ದೆಹಲಿ ವಲಯ ಮಟ್ಟದಲ್ಲಿ ಅತ್ಯುತ್ತಮ ನಟನೆಗಾಗಿ ಪ್ರಶಸ್ತಿ ಪಡೆದ ಟಿಂಟು ಮೋಳ್ ಅಭಿನಯಿಸಿದ ಈ ನಾಟಕಕ್ಕೂ ಪ್ರಶಸ್ತಿ ಬಂತು. ಬಳಿಕ ರಾಷ್ಟ್ರಮಟ್ಟದಲ್ಲೂ ಪ್ರಶಸ್ತಿ ಲಭಿಸಿತು.

ಈ ಜಾಗೃತಿಯ ಧ್ವನಿಯ ಒಡತಿ ಟಿಂಟು ಮೋಳ್ ಎಂದು ಬಹಿರಂಗಗೊಳ್ಳುತ್ತಿದ್ದಂತೆ ಅವರ ಮೇಲೆ ಅಭಿಮಾನದ ಹೊಳೆಯೇ ಹರಿಯುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಅವರ ಕುರಿತಾದ ಹವಾ ಸೃಷ್ಟಿಯಾಗಿದೆ. ಟಿ.ವಿ ಮಾಧ್ಯಮಗಳಲ್ಲಿ, ಪತ್ರಿಕೆಗಳಲ್ಲಿ ಅವರ ಕುರಿತಾದ ಬರಹ, ಸಂದರ್ಶನ ಪ್ರಕಟವಾಗುತ್ತಿದೆ. ಅವರು 94.3 ಕ್ಲಬ್ ಎಂಬ ಖಾಸಗಿ ಎಫ್.ಎಂ ಚಾನೆಲ್‌ನೊಂದಿಗೆ ಮಾತನಾಡಿದ ಕಾರ್ಯಕ್ರಮವೊಂದು ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಮಂದಿ ಮೆಚ್ಚಿದ್ದಾರೆ.

ಪುರುಷೋತ್ತಮ ಬಿಳಿಮಲೆಯವರು ನನ್ನ ಪ್ರತಿಭೆ ಗುರುತಿಸಿ ಸರವು ಕೃಷ್ಣ ಭಟ್ ಅವರಿಗೆ ಪರಿಚಯಿಸುವ ಮೂಲಕ ನನಗೆ ಅವಕಾಶಗಳ ಬಾಗಿಲು ತೆರೆಯಿತು. ಈ ಇಬ್ಬರು ನನ್ನ ಬೆಳವಣಿಗೆಗೆ ಕಾರಣ. ಈಗ ಹೆಚ್ಚಿನ ಅಫರ್‌ಗಳು ಬರುತ್ತಿದೆ. ಕೊರೋನ ಜಾಗೃತಿಯಂತಹ ಮಹಾನ್ ದೌತ್ಯದಲ್ಲಿ ನಾನೂ ಭಾಗವಾಗಿರುದಕ್ಕೆ ಹೆಮ್ಮೆ ಇದೆ. ಜನ ನನ್ನನ್ನು ಗುರುತಿಸಿದಕ್ಕೂ ಇದು ಸಾಧ್ಯವಾಯಿತು" ಎಂದು ಟಿಂಟು ಮೋಳ್ ಹೇಳುತ್ತಾರೆ.

"ನಾನು ಸುಳ್ಯಕ್ಕೆ ಬಂದಾಗಲೇ ನನಗೆ ಮಲಯಾಳಂ ಗೊತ್ತಿತ್ತು. ಆದರೆ ಮಾತೃ ಭಾಷೆ ಮರೆಯದಿರಲೆಂದು ತಂದೆಯವರು ಪತ್ರಿಕೆ, ಪುಸ್ತಕ ತಂದುಕೊಡುತ್ತಿದ್ದರು. ಕನ್ನಡದ ಧ್ವನಿ ಪರೀಕ್ಷೆಗೆಂದು ಹೋದ ನಾನು ಮಲಯಾಳಂನಲ್ಲಿ ಮಿಂಚುತ್ತಿರುವುದು ವಿಸ್ಮಯವೇ ಸರಿ. ಹವ್ಯಾಸಿಯಾಗಿ ಯಾರಿಗೇ ಆದರೂ ಈ ಕ್ಷೇತ್ರದಲ್ಲಿ ಮುಂದುವರಿಯಬಹುದು. ಹಲವರಿಗೆ ಮಾರ್ಗದರ್ಶವನ್ನೂ ಮಾಡುತ್ತಿದ್ದೇನೆ" ಎನ್ನುತ್ತಾರೆ ಅವರು.

"ಆರಂಭದಲ್ಲಿ ಶಬ್ಧ ಕೇಳಿ ಬಂಧುಗಳಷ್ಟೆ ಗುರುತಿಸಿದ್ದರು. ಆದರೆ ಇದೀಗ ಎಲ್ಲರೂ ಗುರುತಿಸುತ್ತಾರೆ" ಎನ್ನುವ ಟಿಂಟು ಅವರಿಗೆ ನಿಮ್ಮ ಧ್ವನಿಯನ್ನು ಕಾಪಾಡಿಕೊಳ್ಳಲು ಏನು ಮಾಡುತ್ತೀರಿ ಎಂದಾಗ "ಜೀರಿಗೆ ನೀರು ಕುಡಿಯುತ್ತೇನೆ" ಎಂದಷ್ಟೆ ಹೇಳಿ ನಕ್ಕು ಬಿಡುತ್ತಾರೆ.

ತಂದೆ ಜೋಸೆಫ್ ಅವರಿಗೂ ಮಗಳ ಸಾಧನೆಯ ಬಗ್ಗೆ ಹೆಮ್ಮೆ ಇದೆ. ಪ್ರಸ್ತುತ ಮರ್ಕಂಜದ ಬಲ್ನಾಡು ಪೇಟೆಯಲ್ಲಿರುವ ಅವರನ್ನು ಸಂಪರ್ಕಿಸಿದಾಗ "ಬಾಲ್ಯದಿಂದಲೇ ಆಕೆ ಕಲೆಯಲ್ಲೂ, ಕಲಿಕೆಯಲ್ಲೂ ಮುಂದಿದ್ದಳು" ಎನ್ನುತ್ತಾರೆ.

ಟಿಂಟು ಮೋಳ್ ಅವರಿಗೆ ಅವಕಾಶಗಳ ಬಾಗಿಲು ತೆರೆಯುವಂತೆ ಮಾಡಿದ ಡಾ. ಪುರುಷೋತ್ತಮ ಬಿಳಿಮಲೆಯವರು ಕೂಡಾ ಟಿಂಟು ಕುರಿತು ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ. "ಆಕೆ ಪ್ರತಿಭಾನ್ವಿತ ಹುಡುಗಿ. ಜೆಎನ್‌ಯುನಲ್ಲಿ ಕಲಿಯುತ್ತಿರುವಾಗಲೇ ದೇಶದ ಬೇರೆ ಬೇರೆ ಭಾಗಗಳಿಂದ ಇಲ್ಲಿಗೆ ಬಂದ ವಿದ್ಯಾರ್ಥಿಗಳಲ್ಲಿದ್ದ ಜಾನಪದ ಕುಣಿತದ ಮಾಹಿತಿಗಳನ್ನು ಸಂಗ್ರಹಿಸಿ ಅವುಗಳ ಪ್ರದರ್ಶನ ಏರ್ಪಡಿಸುತ್ತಿದ್ದಳು. ಅದನ್ನು ಒಬ್ಬರಿಂದ ಇನ್ನೊಬ್ಬರಿಗೆ ಕಲಿಯುವಂತೆ ಮಾಡುತ್ತಿದ್ದರು. 20 ಜನರ ತಂಡ ಕಟ್ಟಿ ಅವರಿಗೆ ಕುಣಿತ ಕಲಿಸುತ್ತಿದ್ದರು. ಈಕೆಯ ಪ್ರತಿಭೆ ಗುರುತಿಸಿ ಅವಕಾಶಕ್ಕಾಗಿ ನಾನೂ ಒಂದಷ್ಟು ಸಹಾಯ ಮಾಡಿದೆ. ಈಗ ತುಂಬಾ ಬೆಳೆದಿದ್ದಾಳೆ" ಎನ್ನುತ್ತಾರೆ ಡಾ. ಬಿಳಿಮಲೆ.

ಹೀಗೆ ನಮ್ಮೂರ ಹೆಣ್ಣು ಮಗಳೊಬ್ಬಳು ತನ್ನ ಧ್ವನಿಯ ಕಾರಣದಿಂದ ಜಗತ್ತಿನಾದ್ಯಂತ ಸುದ್ದಿ ಮಾಡುತ್ತಿರುವುದು, ಕೊರೋನ ಜಾಗೃತಿಯ ಮಹಾ ಅಭಿಯಾನದಲ್ಲಿ ತಾನೂ ಭಾಗಿಯಾಗಿ ಮತ್ತು ಭಾಗವಾಗಿರುವುದು ಒಂದು ಅಪೂರ್ವ ಸಾಧನೆ. ಹ್ಯಾಟ್ಸಾಪ್ ಟಿಂಟು ಮೋಳ್!

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)