ಕೊರೋನ ಸೋಂಕಿನ ಮಾಹಿತಿಯನ್ನೇ ಬಿಟ್ಟು ಕೊಡುತ್ತಿಲ್ಲ ಸರಕಾರಿ ಸಂಸ್ಥೆ: ಸಾಂಕ್ರಾಮಿಕ ತಜ್ಞರ ಆರೋಪ
ಮಾಹಿತಿ ಸಿಗದೇ ಸೋಂಕಿನ ವಿರುದ್ಧದ ಹೋರಾಟಕ್ಕೆ ಹಿನ್ನಡೆ, ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ
ಹೊಸದಿಲ್ಲಿ, ಮೇ 12: ಕೇಂದ್ರ ಆರೋಗ್ಯ ಸಚಿವಾಲಯದ ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಧೀನದಲ್ಲಿರುವ ಇಂಟೆಗ್ರೇಟೆಡ್ ಡಿಸೀಸ್ ಸರ್ವೇಲೆನ್ಸ್ ಪ್ರೋಗ್ರಾಮ್ ( ಐಡಿಎಸ್ಪಿ) ಈ ವರ್ಷದ ಫೆಬ್ರವರಿ ಮೊದಲ ವಾರದ ತನ್ನ ವಾರದ ವರದಿಯಲ್ಲಿ ದೇಶದಲ್ಲಿ ಮೊದಲ ಮೂರು ಕೋವಿಡ್ 19 ಪ್ರಕರಣಗಳು ಪತ್ತೆಯಾಗಿರುವ ಬಗ್ಗೆ ವರದಿ ಮಾಡಿತ್ತು. ಭಾರತದಲ್ಲಿ ಕಾಯಿಲೆಗಳು ಹರಡುವ ಕುರಿತು ವಿವರ ಸಂಗ್ರಹಿಸುವ ಐಡಿಎಸ್ಪಿ ಕಳೆದೊಂದು ದಶಕದಿಂದ ಪ್ರತಿವಾರ ಈ ಬಗ್ಗೆ ವರದಿ ಪ್ರಕಟಿಸುತ್ತಾ ಬಂದಿದೆ. ಆದರೆ ಫೆಬ್ರವರಿ 2ರಂದು ದೇಶದಲ್ಲಿ ಮೊದಲ ಕೊರೊನ ಪ್ರಕರಣ ಕುರಿತು ವರದಿ ಮಾಡಿದ ಬಳಿಕ ಐಡಿಎಸ್ಪಿ ಈವರೆಗೆ ಒಂದೇ ಒಂದು ವರದಿ ಪ್ರಕಟಿಸಿಲ್ಲ. ಈ ಬಗ್ಗೆ caravanmagazine.in ನಲ್ಲಿ ವಿದ್ಯಾ ಕೃಷ್ಣನ್ ವರದಿ ಮಾಡಿದ್ದಾರೆ.
ಇಡೀ ದೇಶ ಕೊರೋನ ಸಾಂಕ್ರಾಮಿಕದ ವಿರುದ್ಧ ಹೋರಾಡುತ್ತಿರುವಾಗ ಇಂತಹ ಸಾಂಕ್ರಾಮಿಕಗಳ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರಬೇಕಾಗಿದ್ದ ಐಡಿಎಸ್ಪಿ ಎಲ್ಲೂ ಕಾಣದೇ ಇರುವ ಬಗ್ಗೆ ಹಲವು ಅರೋಗ್ಯ ತಜ್ಞರು, ಸಾಂಕ್ರಾಮಿಕ ಸಂಶೋಧಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಐಡಿಎಸ್ಪಿ ಇಂತಹ ಸಾಂಕ್ರಾಮಿಕ ಬರುವಾಗ ಅದರ ವಿರುದ್ಧ ಸೆಣಸಲು ಜೀವನವಿಡೀ ಸಿದ್ಧತೆ ನಡೆಸಿರುತ್ತದೆ. ಆದರೆ ಈಗ ಸಾಂಕ್ರಾಮಿಕ ಬಂದಿರುವಾಗ ಅದಕ್ಕೆ ಸಂಬಂಧಪಟ್ಟ ಸಭೆಗಳಲ್ಲೂ ಅದರ ಪ್ರತಿನಿಧಿ ಇರುವುದಿಲ್ಲ. ವಿಶ್ವದೆಲ್ಲೆಡೆ ಸಿಡಿಸಿಗಳು ( ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ) ಸಾಂಕ್ರಾಮಿಕದ ವಿರುದ್ಧದ ಹೋರಾಟದ ನೇತೃತ್ವದಲ್ಲಿದ್ದರೆ ಇಲ್ಲಿ ಮಾತ್ರ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಆ ಪಾತ್ರ ನಿರ್ವಹಿಸುತ್ತಿದೆ. ಸಾಂಕ್ರಾಮಿಕ ತಡೆಗಟ್ಟುವ ಸಿಡಿಸಿಗಳು ಮಾಡುವ ಕೆಲಸವನ್ನು ಸಂಶೋಧನೆ ಮಾಡುವ ಐಸಿಎಂಆರ್ ಹೇಗೆ ಮಾಡಬಲ್ಲದು ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಹಿರಿಯ ಅರೋಗ್ಯ ತಜ್ಞರೊಬ್ಬರು ಕಾರವಾನ್ ಜೊತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಕಾರವಾನ್ ಕೇಳಿರುವ ಪ್ರಶ್ನೆಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ, ಏನ್ ಸಿ ಡಿ ಸಿ, ಐಸಿಎಂಆರ್ ಹಾಗು ಐಡಿಎಸ್ಪಿ ಮುಖ್ಯಸ್ಥರು ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿದುಬಂದಿದೆ.
ಆರೋಗ್ಯ ಸಚಿವ ಹರ್ಷವರ್ಧನ್ ಅವರು ಕೊರೋನ ನಿಗ್ರಹಕ್ಕಾಗಿ ನೇಮಿಸಿದ್ದ ಉನ್ನತ ಮಟ್ಟದ ಸಮಿತಿಯ ಪ್ರಥಮ ಸಭೆಯಲ್ಲೇ ಐಡಿಎಸ್ಪಿ ವರದಿ ಬಹಿರಂಗಪಡಿಸದೇ ಇರುವ ಬಗ್ಗೆ ಕೇಳಲಾಗಿತ್ತು. ಆದರೆ ಸಚಿವ ಹರ್ಷವರ್ಧನ ಅವರು ವರದಿ ಬಹಿರಂಗಪಡಿಸಲು ನಿರಾಕರಿಸಿದರು ಹಾಗು ನಮ್ಮಲ್ಲಿ ಇಲಾಖೆಯೊಳಗೇ ತಜ್ಞರಿದ್ದಾರೆ ಎಂದು ಹೇಳಿದ್ದಾರೆ. ಆದರೆ ಈ ತಜ್ಞರು ಐಡಿಎಸ್ಪಿ ವರದಿ ಬಹಿರಂಗಕ್ಕೆ ಅವಕಾಶ ಏಕೆ ನೀಡುತ್ತಿಲ್ಲ ಎಂಬ ಬಗ್ಗೆ ಅವರು ಮಾಹಿತಿ ನೀಡಿಲ್ಲ ಎಂದು ಕೊರೋನ ವಿರುದ್ಧದ ಕೇಂದ್ರದ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿರುವ ಕನಿಷ್ಠ ಮೂವರು ಸಾಂಕ್ರಾಮಿಕ ತಜ್ಞರು ಹಾಗು ವಿಜ್ಞಾನಿಗಳು ಕಾರವಾನ್ ಗೆ ತಿಳಿಸಿದ್ದಾರೆ.
ಐಸಿಎಂಆರ್ ರಚಿಸಿರುವ ಟಾಸ್ಕ್ ಫೋರ್ಸ್ ನಲ್ಲಿ ಒಬ್ಬ ಮಕ್ಕಳ ತಜ್ಞ, ಒಬ್ಬ ಹೃದಯ ತಜ್ಞ ಹಾಗು ಇನ್ನೊಬ್ಬ ಶ್ವಾಸಕೋಶಶಾಸ್ತ್ರಜ್ಞ ಇದ್ದಾರೆ. ಅವರು ಯಾರೂ ಸಾಂಕ್ರಾಮಿಕ ರೋಗಗಳ ತಜ್ಞರು ಅಥವಾ ಅವುಗಳನ್ನು ನಿಭಾಯಿಸಿದ ಹಿನ್ನೆಲೆ ಉಳ್ಳವರಲ್ಲ. ಹಾಗಾದರೆ ಅರೋಗ್ಯ ಸಚಿವರು ಹೇಳುತ್ತಿರುವ ಈ ಇಲಾಖೆಯೊಳಗಿನ ತಜ್ಞರು ಯಾರು ಎಂದು ನನಗೆ ಗೊತ್ತಿಲ್ಲ ಎಂದು ಒಬ್ಬ ಸಾಂಕ್ರಾಮಿಕ ತಜ್ಞ ಹೇಳಿದ್ದಾರೆ. ಹೆಸರು ಬಹಿರಂಗಪಡಿಸಲಿಚ್ಛಿಸದ ಇನ್ನೊಬ್ಬ ತಜ್ಞರ ಪ್ರಕಾರ ಮಾಹಿತಿ ಹಾಗು ಅಂಕಿ ಅಂಶಗಳ ವಿಷಯದಲ್ಲಿ ಯಾವುದೇ ಪಾರದರ್ಶಕತೆ ಇಲ್ಲ. ಹಾಗಾಗಿ ಈಗ ಬರುತ್ತಿರುವ ಮಾಹಿತಿ ಅನುಮಾನಾಸ್ಪದವಾಗಿದ್ದು ಅದನ್ನು ಆಧರಿಸಿ ತೆಗೆದುಕೊಳ್ಳುವ ತೀರ್ಮಾನ ತಪ್ಪಾಗಲಿದೆ. ಸರಿಯಾದ ಮಾಹಿತಿಯನ್ನು ಸಾರ್ವಜನಿಕರಿಗೆ ಅಥವಾ ಕನಿಷ್ಠ ಸಂಶೋಧಕರಿಗೆ ತಿಳಿಸಿದರೆ ಅದರಿಂದ ಸಾಂಕ್ರಾಮಿಕ ಹೇಗೆ ಹರಡುತ್ತಿದೆ ಮತ್ತು ಅದನ್ನು ಹೇಗೆ ಎದುರಿಸಬೇಕು ಎಂಬ ಬಗ್ಗೆ ಸ್ಪಷ್ಟತೆ ಮೂಡುತ್ತದೆ. ಆದರೆ ಬಹುಮುಖ್ಯವಾದ ಮಾಹಿತಿಯನ್ನೇ ಇಲ್ಲಿ ಬಿಟ್ಟು ಕೊಡುತ್ತಿಲ್ಲ. ಎನ್ ಸಿ ಡಿ ಸಿ ಹಾಗು ಐಸಿಎಂಆರ್ ನಡುವೆ ಪೈಪೋಟಿ ಏರ್ಪಟ್ಟಿದೆ. ಎರಡೂ ಸಂಸ್ಥೆಗಳು ತಮ್ಮ ತಮ್ಮ ಮಾಹಿತಿಯನ್ನು ಇಟ್ಟುಕೊಂಡು ಕುಳಿತಿವೆ. ಎಡಗೈ ಏನು ಮಾಡುತ್ತಿದೆ ಎಂದು ಬಲಗೈಗೆ ಗೊತ್ತಾಗದ ಪರಿಸ್ಥಿತಿ ಇದೆ ಎಂದು ಇನ್ನೊಬ್ಬ ತಜ್ಞರು ಕಾರವಾನ್ ಗೆ ಹೇಳಿದ್ದಾರೆ.
ಕೊರೋನ ನಿಗ್ರಹಕ್ಕೆ ಸರಕಾರದ ಎಲ್ಲ ಕ್ರಮಗಳ ಹೊರತಾಗಿಯೂ ಸೋಂಕಿತರ ಸಂಖ್ಯೆ ಒಂದೇ ಸಮನೆ ಏರುತ್ತಿರುವುದಕ್ಕೂ ಈ ಮಾಹಿತಿ ಬಹಿರಂಗಪಡಿಸದೇ ಇರುವುದಕ್ಕೂ ಸಂಬಂಧವಿದೆ ಎಂದು ಕಾರವಾನ್ ಜೊತೆ ಮಾತನಾಡಿರುವ ತಜ್ಞರು ಹೇಳಿದ್ದಾರೆ. ಯಾವುದೇ ಸಾಂಕ್ರಾಮಿಕವನ್ನು ತಡೆಗಟ್ಟಲು ಅದರ ಮೂಲವನ್ನು ಕಂಡು ಹಿಡಿಯುವುದು ಅತ್ಯಂತ ಮುಖ್ಯ. ಅದಕ್ಕೆ ಮಾಹಿತಿ ನಿರ್ಣಾಯಕ. ಆದರೆ ಸರಿಯಾದ ಮಾಹಿತಿಯೇ ಸಿಗದೇ ಇರುವುದರಿಂದ ದೇಶದಲ್ಲಿ ಸೋಂಕಿನ ಪ್ರತಿಯೊಂದು ಪ್ರಾಥಮಿಕ ಮೂಲವನ್ನು ಕಂಡು ಹಿಡಿದು ಅವರನ್ನು ಪ್ರತ್ಯೇಕಿಸಲು ಸಾಧ್ಯವಾಗುತ್ತಿಲ್ಲ. ಈ ಟ್ರಾಕಿಂಗ್ ಸರಿಯಾಗಿ ಆಗದೇ ಇರುವುದರಿಂದ ಸಾಂಕ್ರಾಮಿಕ ಸಮುದಾಯ ಮಟ್ಟದಲ್ಲಿ ಹರಡುತ್ತಿದೆ ಎಂದು ತಜ್ಞರು ದೂರಿದ್ದಾರೆ.
ಐಡಿಎಸ್ಪಿ ಮಾಹಿತಿ ಬಹಿರಂಗಪಡಿಸದೇ ಇರುವುದರಿಂದ ಕೊರೊನ ಮಾತ್ರವಲ್ಲ ಚಿಕನ್ ಗುನ್ಯಾ, ಡೆಂಗ್, ಮೆದುಳು ಜ್ವರ ಸಹಿತ ಇತರ ಹಲವು ಸಾಂಕ್ರಾಮಿಕಗಳ ಬಗ್ಗೆಯೂ ವೈದ್ಯಕೀಯ ಸಮುದಾಯಕ್ಕೆ ಸರಿಯಾದ ಮಾಹಿತಿ ಇಲ್ಲದಂತಾಗಿದೆ. ಇದರಿಂದ ಕೊರೊನ ಜೊತೆ ಇತರ ಕಾಯಿಲೆಗಳಿಗೂ ಚಿಕಿತ್ಸೆ ನೀಡುವ ಅವುಗಳನ್ನು ಎದುರಿಸಲು ನಡೆಸುವ ತಯಾರಿಗೆ ದೊಡ್ಡ ಹಿನ್ನಡೆಯಾಗಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.