ಆಡು ಕದ್ದ ಆರೋಪದಲ್ಲಿ ಯುವಕನ ಥಳಿಸಿ ಹತ್ಯೆ
ಮೃತನ ವಿರುದ್ಧವೂ ಪ್ರಕರಣ ದಾಖಲು!
ಡುಮ್ಕಾ,ಮೇ 12: ಆಡು ಕದ್ದ ಆರೋಪದಲ್ಲಿ ಗ್ರಾಮಸ್ಥರ ಗುಂಪು ಇಬ್ಬರು ಯುವಕರನ್ನು ಕಂಬಕ್ಕೆ ಕಟ್ಟಿ ಹಾಕಿ ಬರ್ಬರವಾಗಿ ಥಳಿಸಿದ ಪರಿಣಾಮ ಓರ್ವ ಮೃತಪಟ್ಟು,ಇನ್ನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಲ್ಲಿಯ ಕಾಠಿಕುಂಡ ಗ್ರಾಮದಲ್ಲಿ ನಡೆದಿದೆ.
ಮೃತನನ್ನು ಸುಭಾನ್ ಅನ್ಸಾರಿ (26) ಎಂದು ಗುರುತಿಸಲಾಗಿದೆ. ಆತನ ಸ್ನೇಹಿತ ದುಲಾಲ್ ಮಿರ್ಧಾ(22) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇವರಿಬ್ಬರೂ ಕಾಠಿಕುಂಡದಿಂದ ಒಂದು ಕಿ.ಮೀ.ದೂರದಲ್ಲಿರುವ ಗ್ರಾಮದ ನಿವಾಸಿಗಳಾಗಿದ್ದಾರೆ.
ಅನ್ಸಾರಿ ಮತ್ತು ಮಿರ್ಧಾ ಕಾಠಿಕುಂಡ್ ಗ್ರಾಮದ ಹೊರವಲಯದ್ದಾಗ, ಗ್ರಾಮಸ್ಥರ ಗುಂಪು ಅವರನ್ನು ಕಳ್ಳರೆಂದು ಆರೋಪಿಸಿ ಎಳೆತಂದು ಕಂಬಕ್ಕೆ ಕಟ್ಟಿ ಥಳಿಸಿತ್ತು. ಪೊಲೀಸರು ಸ್ಥಳಕ್ಕೆ ತಲುಪಿದಾಗ ಇಬ್ಬರೂ ತೀವ್ರವಾಗಿ ಗಾಯಗೊಂಡಿದ್ದರು. ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಅನ್ಸಾರಿ ಮೃತಪಟ್ಟಿದ್ದಾರೆ.
ಘಟನೆಯ ಬಲಿಪಶುಗಳು ಮತ್ತು ದಾಳಿಕೋರರ ವಿರುದ್ಧ ಎರಡು ಪ್ರತ್ಯೇಕ ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.
Next Story