ಚಿಕ್ಕಮಗಳೂರು: ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ನಾಡಕಚೇರಿ ಜನಸೇವಾ ಕೇಂದ್ರಗಳ ನೌಕರರು
ಜಿಲ್ಲಾದ್ಯಂತ 34 ಹೊರಗುತ್ತಿಗೆ ನೌಕರರ ಬದುಕು ಅತಂತ್ರ
ಚಿಕ್ಕಮಗಳೂರು, ಮೇ 12: ರಾಜ್ಯ ಹಾಗೂ ಕೇಂದ್ರ ಸರಕಾರಗಳು ಖಾಸಗಿ ಕಂಪೆನಿ, ಕಾರ್ಖಾನೆ, ವಿವಿಧ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರು, ನೌಕರರನ್ನು ಲಾಕ್‍ಡೌನ್ ಹಿನ್ನೆಲೆಯಲ್ಲಿ ಕೆಲಸದಿಂದ ತೆಗೆಯಬಾರದು, ಕಾರ್ಮಿಕರು, ನೌಕರರಿಗೆ ವೇತನ ಸಹಿತ ರಜೆ ನೀಡಬೇಕೆಂದು ಈಗಾಗಲೇ ಆದೇಶ ಮಾಡಿದೆ. ವಿಪರ್ಯಾಸ ಎಂದರೆ ಸರಕಾರಗಳೇ ಈ ಹಿಂದೆ ನೀಡಿದ ಆದೇಶವನ್ನು ಉಲ್ಲಂಘಿಸುತ್ತಿರುವ ಪ್ರಕರಣವೊಂದು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದ್ದು, ಜಿಲ್ಲೆಯಾದ್ಯಂತ ಎಲ್ಲ ತಾಲೂಕುಗಳ ನಾಡಕಚೇರಿಗಳಲ್ಲಿ ಹೊರ ಗುತ್ತಿಗೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೆಚ್ಚುವರಿ ಡೇಟಾ ಎಂಟ್ರಿ ಆಪರೇಟರ್ ಗಳನ್ನು ಕೆಲಸದಿಂದ ತೆಗೆದು ಹಾಕಲು ಮುಂದಾಗಿದೆ ಎನ್ನಲಾಗಿದೆ.
ಚಿಕ್ಕಮಗಳೂರು ಸೇರಿದಂತೆ ಜಿಲ್ಲೆಯಲ್ಲಿನ ಶೃಂಗೇರಿ, ಮೂಡಿಗೆರೆ, ಕೊಪ್ಪ, ನರಸಿಂಹರಾಜಪುರ, ಕಡೂರು, ತರೀಕೆರೆ, ಅಜ್ಜಂಪುರ ತಾಲೂಕು ವ್ಯಾಪ್ತಿಯಲ್ಲಿರುವ ಎಲ್ಲ ನಾಡಕಚೇರಿಗಳಲ್ಲಿರುವ ಸ್ಪಂದನಾ ಜನಸೇವಾ ಕೇಂದ್ರ, ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿ ಹೊರಗುತ್ತಿಗೆಯಡಿಯಲ್ಲಿ ಡೇಟಾ ಎಂಟ್ರಿ ಆಪರೇಟರ್ ಗಳು ಕಳೆದ ಕೆಲ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪೈಕಿ ಹೆಚ್ಚುವರಿಯಾಗಿ 34ಕ್ಕೂ ಹೆಚ್ಚು ಹೊರಗುತ್ತಿಗೆ ನೌಕರರು ಕೆಲಸ ಮಾಡುತ್ತಿದ್ದು, ಸದ್ಯ ರಾಜ್ಯ ಸರಕಾರದ ಅಟಲ್‍ಜೀ ಜನಸ್ನೇಹಿ ನಿರ್ದೇಶನಾಲಯ ಜಿಲ್ಲೆಯ ವಿವಿಧ ನಾಡಕಚೇರಿಗಳಲ್ಲಿ ಕೆಲಸ ಮಾಡುತ್ತಿದ್ದ 34 ಹೆಚ್ಚುವರಿ ಹೊರಗುತ್ತಿಗೆ ನೌಕರರನ್ನು ಕೆಲಸದಿಂದ ವಜಾ ಮಾಡಲು ಮುಂದಾಗಿದ್ದು, ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಿಂದ ಈ ನೌಕರರಿಗೆ ದೂರವಾಣಿ ಕರೆ ಮಾಡಿರುವ ಅಧಿಕಾರಿಯೊಬ್ಬರು ಜೂನ್ ತಿಂಗಳಿನಿಂದ ಕೆಲಸಕ್ಕೆ ಬಾರದಂತೆ ಸೂಚನೆ ನೀಡಿದ್ದಾರೆಂದು ಹೆಚ್ಚುವರಿ ಡೇಟಾ ಎಂಟ್ರಿ ಆಪರೇಟರ್ ಗಳು ಆರೋಪಿಸಿದ್ದಾರೆ.
ಜಿಲ್ಲಾದ್ಯಂತ ಎಲ್ಲ ನಾಡಕಚೇರಿಗಳ ವ್ಯಾಪ್ತಿಯಲ್ಲಿರುವ ಅಟಲ್ ಜೀ ಜನಸ್ನೇಹಿ ಕೇಂದ್ರ ಹಾಗೂ ಸ್ಪಂದನಾ ಜನಸೇವಾ ಕೇಂದ್ರಗಳಲ್ಲಿ ಹೊರಗುತ್ತಿಗೆಯಡಿಯಲ್ಲಿ ಹೆಚ್ಚುವರಿ ನೌಕರರಾಗಿ ಕೆಲಸ ಮಾಡುತ್ತಿದ್ದ ಹಾಲಿ ನೌಕರರರನ್ನು ಕೈಬಿಟ್ಟು ಹೊಸದಾಗಿ ನೌಕರರನ್ನು ನೇಮಿಸಿಕೊಳ್ಳಬೇಕೆಂದು ಸರಕಾರದ ಅಟಲ್ ಜೀ ಜನಸ್ನೇಹಿ ನಿರ್ದೇಶಕರು ಜಿಲ್ಲಾಧಿಕಾರಿಗೆ ಆದೇಶಿಸಿದ್ದು, ಈ ಬೆಳವಣಿಗೆಯಿಂದಾಗಿ ನಾಡಕಚೇರಿಗಳಲ್ಲಿ ಇದುವರೆಗೂ ಕೆಲಸ ಮಾಡುತ್ತಿದ್ದ ಹೆಚ್ಚುವರಿ ಡೇಟಾ ಎಂಟ್ರಿ ನೌಕರರು ಕೆಲಸ ಕಳೆದುಕೊಳ್ಳುವ ಆತಂಕ ವ್ಯಕ್ತಪಡಿಸಿದ್ದು, ಯಾವುದೇ ನೋಟಿಸ್ ನೀಡದೇ ಏಕಾಏಕಿ ಕೆಲಸದಿಂದ ತೆಗೆದುಹಾಕುತ್ತಿರುವ ಸರಕಾರದ ಕ್ರಮದ ವಿರುದ್ಧ ಈ ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಟಲ್ ಜೀ ಜನಸ್ನೇಹಿ ಕೇಂದ್ರ ಹಾಗೂ ಸ್ಪಂದನಾ ಜನಸೇವಾ ಕೇಂದ್ರಗಳ ಮೂಲಕ ಈ ನೌಕರರು ಪಹಣಿ, ಜಾತಿ, ಆದಾಯ ಪ್ರಮಾಣ ಪತ್ರ, ಜಮೀನು ದಾಖಲೆ ಪತ್ರಗಳು, ಪಿಎಂ ಕಿಸಾನ್ ಯೋಜನೆ, ಪಿಂಚಣಿ ಯೋಜನೆಯ ದಾಖಲೆ ಪತ್ರಗಳನ್ನು ನೀಡುವುದು, ಅಪ್‍ಲೋಡ್ ಮಾಡುವಂತಹ ಕೆಲಸ ಮಾಡುತ್ತಿದ್ದು, ಈ ನೌಕರರು ಜೆಮಿನಿ ಸೆಕ್ಯೂರಿಟಿ ಅಂಡ್ ಅಲೈಡ್ ಸರ್ವೀಸ್ ಎಂಬ ಏಜೆನ್ಸಿ ಮೂಲಕ ಹೊರ ಗುತ್ತಿಗೆಯಡಿ ನಾಡಕಚೇರಿಗಳಲ್ಲಿ ಕಳೆದ ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ.
ಲಾಕ್‍ಡೌನ್‍ನಿಂದಾಗಿ ಕಳೆದೊಂದು ತಿಂಗಳು ರಜೆಯಲ್ಲಿದ್ದ ಈ ನೌಕರರು ಹೋಬಳಿ ಕೇಂದ್ರಗಳಲ್ಲಿ ಡೇಟಾ ಎಂಟ್ರಿ ಆಪರೇಟರ್ ಗಳಾಗಿ ಸೇವೆಯನ್ನು ಮುಂದುವರಿಸಿದ್ದು, ಜೂನ್ ತಿಂಗಳಿನಿಂದ ಕೆಲಸಕ್ಕೆ ಬರಬಾರದೆಂದು ಗುತ್ತಿಗೆ ಏಜೆನ್ಸಿಯ ಪ್ರತಿನಿಧಿ ದೂರವಾಣಿ ಮೂಲಕ 34 ನೌಕರರಿಗೆ ತಿಳಿಸಿದ್ದು, ಜಿಲ್ಲಾಡಳಿತ ಈ ನೌಕರರ ಬದಲಿಗೆ ಹೊಸದಾಗಿ ನೌಕರರನ್ನು ನೇಮಕಾತಿ ಮಾಡಿಕೊಳ್ಳುವಂತೆ ಅಟಲ್‍ಜೀ ಜನಸ್ನೇಹಿ ನಿರ್ದೇಶನಾಲಯ ಆದೇಶ ಹೊರಡಿಸಿದೆ. ಇದರಿಂದಾಗಿ ತಮ್ಮ ಬದುಕು ಅತಂತ್ರವಾಗಿದೆ. ದಿಢೀರ್ ಕೆಲಸದಿಂದ ತೆಗೆದು ಹಾಕುತ್ತಿರುವುದರಿಂದ ಮುಂದಿನ ಭವಿಷ್ಯದ ಬಗ್ಗೆ ಅಭದ್ರತೆ ಕಾಡುತ್ತಿದೆ. ಮಾನಸಿಕವಾಗಿ ಖಿನ್ನತೆಗೊಳಗಾಗುತ್ತಿದ್ದೇವೆ. ಲಾಕ್‍ಡೌನ್ ಸಂದರ್ಭ ಯಾವುದೇ ಸಂಸ್ಥೆಗಳು ಕಾರ್ಮಿಕರು, ನೌಕರರನ್ನು ಕೆಲಸದಿಂದ ತೆಗೆದುಹಾಕಬಾರದೆಂದು ರಾಜ್ಯ ಸರಕಾರವೇ ಆದೇಶಿಸಿದೆ. ಆದರೆ ಸರಕಾರಿ ಇಲಾಖೆಯೊಂದರಲ್ಲಿ ಕೆಲಸ ಮಾಡುತ್ತಿರುವ ಹೆಚ್ಚುವರಿ ನೌಕರನ್ನು ಸರಕಾರವೇ ಏಕಾಏಕಿ ಕೆಲಸದಿಂದ ತೆಗೆದುಹಾಕುತ್ತಿರುವುದು ಅಮಾನವೀಯ ಕ್ರಮವಾಗಿದೆ ಎಂದು ಕೆಲಸ ಕಳೆದು ಕೊಳ್ಳುವ ಭೀತಿಗೊಳಗಾಗಿರುವ ನೌಕರರು ಅಳಲು ತೋಡಿಕೊಂಡಿದ್ದಾರೆ.
ಅಲ್ಲದೇ ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿಯನ್ನು ಭೇಟಿಯಾಗಿರುವು ಈ ನೌಕರರು ತಮ್ಮನ್ನು ಯಾವುದೇ ಕಾರಣಕ್ಕೂ ಕೆಲಸದಿಂದ ಕೈಬಿಡದೇ ಹಾಲಿ ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳಲ್ಲಿ ಮುಂದುವರಿಸಬೇಕು. ಲಾಕ್‍ಡೌನ್ ಸಂದರ್ಭದಲ್ಲಿ ಹಾಲಿ ನೌಕರರ ಭವಿಷ್ಯ, ಕುಟುಂಬಗಳ ನಿರ್ವಹಣೆ ಹಿತದೃಷ್ಟಿಯಿಂದ ಹೊಸದಾಗಿ ನೌಕರರನ್ನು ನೇಮಿಸಿಕೊಳ್ಳಬಾರದೆಂದು ಮನವಿ ಮಾಡಿದ್ದಾರೆ.
ಹಣಕಾಸಿನ ಕೊರತೆಯಿಂದ ನೌಕರರ ಸಂಖ್ಯೆಗೆ ಕತ್ತರಿ
ಹೊರ ಗುತ್ತಿಗೆಯಡಿ ಅಟಲ್‍ಜೀ ಜನಸ್ನೇಹಿ ಕೇಂದ್ರ ಹಾಗೂ ಸ್ಪಂದನಾ ಜನಸೇವಾ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೆಚ್ಚುವರಿ ಡೇಟಾ ಎಂಟ್ರಿ ಆಪರೇಟರ್ ಗಳ ಕೆಲಸದಿಂದ ತೆಗೆದು ಹಾಕಲು ಆಟಲ್‍ಜೀ ಜನಸ್ನೇಹಿ ನಿರ್ದೇಶನಾಲಯ ಹಣಕಾಸಿನ ಕಾರಣ ಮುಂದಿಟ್ಟಿದ್ದು, ಈ ಕೇಂದ್ರಗಳಲ್ಲಿ ಸಂಗ್ರಹವಾಗುತ್ತಿದ್ದ ಶುಲ್ಕ ಪ್ರಮಾಣದಲ್ಲಿ ಕಡಿಮೆಯಾಗಿರುವುದು ಹಾಗೂ ಸರಕಾರ ಈ ಕೇಂದ್ರಗಳಲ್ಲಿನ ಹೆಚ್ಚುವರಿ ನೌಕರರಿಗೆ ವೇತನ ಪಾವತಿಗೆ ಹಣ ಬಿಡುಗಡೆ ಮಾಡದಿರುವ ಕಾರಣವನ್ನು ಮುಂದಿಟ್ಟಿದ್ದು, ಈ ಜನಸೇವಾ ಕೇಂದ್ರಗಳಲ್ಲಿ ನೌಕರರ ಸಂಖ್ಯೆಯನ್ನು ಕಡಿತ ಮಾಡುವ ಉದ್ದೇಶದಿಂದ ಹಾಲಿ ನೌಕರರ ಬದಲಿಗೆ ಹೊಸ ನೌಕರರನ್ನು ಗುತ್ತಿಗೆ ಮೂಲಕ ನೇಮಿಸಿಕೊಳ್ಳಲು ಜಿಲ್ಲಾಧಿಕಾರಿಗೆ ಆದೇಶ ನೀಡಿದೆ.
ಐದು ತಿಂಗಳಿನಿಂದ ವೇತನ ನೀಡಿಲ್ಲ
ಕಳೆದ ಕೆಲ ವರ್ಷಗಳಿಂದ ಜಿಲ್ಲೆಯ ವಿವಿಧ ನಾಡಕಚೇರಿಗಳಲ್ಲಿ 34 ಮಂದಿ ಹೆಚ್ಚುವರಿ ಡೇಟಾ ಎಂಟ್ರಿ ಆಪರೇಟರ್ ಗಳು ಹೊರಗುತ್ತಿಗೆಯಡಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಲಾಕ್‍ಡೌನ್‍ನಿಂದಾಗಿ ಸೇವಾ ಕೇಂದ್ರಗಳಲ್ಲಿ ಸೇವೆ ನೀಡುವುದನ್ನು ಸ್ತಗಿತಗೊಳಿಸಲಾಗಿತ್ತು. ಇದೀಗ ಲಾಕ್‍ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಕೆಲಸಕ್ಕೆ ಹೋಗುತ್ತಿದ್ದೇವೆ. ಆದರೆ ಗುತ್ತಿಗೆ ಏಜೆನ್ಸಿಯ ಪ್ರತಿನಿಧಿ ಜೂನ್ ತಿಂಗಳಿನಿಂದ ಕೆಲಸಕ್ಕೆ ಬಾರದಂತೆ ದೂರವಾಣಿ ಮೂಲಕ ತಿಳಿಸಿದ್ದಾರೆ. ಅಲ್ಲದೇ ಟೆಂಡರ್ ಮೂಲಕ ಹೊಸ ನೌಕರರನ್ನು ನೇಮಿಸಿಕೊಳ್ಳಲು ಅಟಲ್‍ಜೀ ಜನಸ್ನೇಹಿ ನಿರ್ದೇಶಕರ ಕಾರ್ಯಾಲಯ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದೆ. ಇದರಿಂದಾಗಿ ತಮ್ಮ ಬದುಕು ಅತಂತ್ರವಾಗಿದೆ. ಲಾಕ್‍ಡೌನ್ ಸಂದರ್ಭ ನೌಕರರನ್ನು ಕೆಲಸದಿಂದ ತೆಗೆಯಬಾರದೆಂದು ಸರಕಾರವೇ ಆದೇಶ ನೀಡಿದ್ದು, ಇದೀಗ ಸರಕಾರವೇ ತಮ್ಮ ಬದುಕನ್ನು ನಾಶ ಮಾಡಲು ಹೊರಟಿರುವುದರಿಂದ ದಿಕ್ಕು ತೋಚದಂತಾಗಿದೆ. ಕಳೆದ ಐದು ತಿಂಗಳಿನಿಂದ ನಮಗೆ ವೇತನ ಪಾವತಿ ಮಾಡಿಲ್ಲ. ವೇತನವಿಲ್ಲದೇ ಬದುಕುವುದೇ ಕಷ್ಟವಾಗಿದೆ. ಇದೀಗ ಕೆಲವನ್ನೇ ಕಿತ್ತುಕೊಳ್ಳಲು ಸರಕಾರ ಮುಂದಾಗಿದೆ. ಈ ಸಂಬಂಧ ಅಪರ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದೇವೆ. ಸರಕಾರ ತಮ್ಮನ್ನು ಕೆಲಸದಲ್ಲಿ ಮುಂದುವರಿಸಬೇಕೆಂದು ಮನವಿ ಮಾಡಲಾಗಿದೆ. ಇದಕ್ಕೆ ಸರಕಾರ ಒಪ್ಪದಿದ್ದಲ್ಲಿ ಪ್ರತಿಭಟನೆಯೊಂದೇ ನಮಗುಳಿದಿರುವ ದಾರಿಯಾಗಿದೆ.
- ದೇವರಾಜ್, ಕಿಗ್ಗಾ ನಾಡಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರ