ಹಣ್ಣು, ತರಕಾರಿ ನೀಡಿ ಪ್ರಾಣಿಗಳ ಹಸಿವು ತಣಿಸುತ್ತಿರುವ ಮುಹಮ್ಮದ್ ನದೀಂ ಶರೀಫ್
ಬೆಂಗಳೂರು, ಮೇ 12: ಕೊರೋನ ಸೋಂಕು ತಡೆಗಟ್ಟುವ ಹಿನ್ನೆಲೆ ಲಾಕ್‍ಡೌನ್ ಜಾರಿಗೊಳಿಸಿರುವ ಪರಿಣಾಮ ಜನರು ಮಾತ್ರವಲ್ಲದೆ, ಪ್ರಾಣಿಗಳು ಸಹ ಕಷ್ಟಕರ ಪರಿಸ್ಥಿತಿ ಎದುರಿಸುತ್ತಿವೆ.
ಪ್ರಮುಖವಾಗಿ ಪ್ರವಾಸೋದ್ಯಮ ತಾಣಗಳಲ್ಲಿ ಬದುಕು ಕಟ್ಟಿಕೊಂಡಿದ್ದ ಕೋತಿಗಳಿಗೆ ಆಹಾರ ದೊರೆಯುವುದೇ ಸವಾಲಾಗಿದೆ. ಆದರೆ, ಬೆಂಗಳೂರು ಮೂಲಕ ಕೊರೋನ ಸೈನಿಕ ಮುಹಮ್ಮದ್ ನದೀಂ ಶರೀಫ್, ಪ್ರತಿ ನಿತ್ಯ ಹತ್ತಾರು ಕಿಲೋಮೀಟರ್ ಸಂಚರಿಸಿ, ಕೋತಿಗಳಿಗೆ ಆಹಾರ ನೀಡುತ್ತಿದ್ದು, ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಕೋವಿಡ್-19 ಸಂಬಂಧ ಜನರಿಗೆ ಸಹಾಯ ಮಾಡಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕಾರ್ಮಿಕ ಇಲಾಖೆ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ಕೊರೋನ ಸೈನಿಕರ ಪಡೆಯನ್ನು ಬೆಂಗಳೂರು ಸೇರಿದಂತೆ ಎಲ್ಲ ಜಿಲ್ಲೆಗಳಲ್ಲಿ ರಚಿಸಲಾಗಿದೆ. ಅದರಂತೆ ಮುಹಮ್ಮದ್ ನದೀಂ ಶರೀಫ್ ಸಾಮಾಜಿಕ ಜಾಲತಾಣಗಳಲ್ಲಿ ಗುಂಪು ರಚಿಸಿಕೊಂಡು ಸೈನಿಕರಾಗಿ ಕೆಲಸ ಮಾಡುತ್ತಿದ್ದಾರೆ.
ಲಾಕ್‍ಡೌನ್ ಅವಧಿಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಪ್ರಾಣಿಗಳ ನೋವಿಗೆ ಸ್ಪಂದಿಸುತ್ತಿದ್ದಾರೆ. ಸ್ವಂತ ವಾಹನದಲ್ಲಿ, ಸ್ವಂತ ಖರ್ಚಿನಲ್ಲಿ ಹಣ್ಣು, ತರಕಾರಿಗಳನ್ನು ಖರೀದಿಸಿ, ಕೋತಿಗಳು ನೆಲೆಸಿರುವ ಪ್ರದೇಶಗಳಿಗೆ ಭೇಟಿ ನೀಡಿ, ಆಹಾರ ತಿನ್ನಿಸುತ್ತಿದ್ದಾರೆ.
ಎಲ್ಲೆಲ್ಲಿ ಭೇಟಿ: ಬೆಂಗಳೂರಿನಿಂದ 70 ಕಿಲೋಮೀಟರ್ ದೂರದಲ್ಲಿರುವ ಕೋಲಾರ ಜಿಲ್ಲೆಯ ಅಂತರಗಂಗೆಯಲ್ಲಿ ಅಪಾರ ಸಂಖ್ಯೆಯಲ್ಲಿರುವ ಕೋತಿಗಳಿಗೆ ಮುಹಮ್ಮದ್ ನದೀಂ ಶರೀಫ್ ಆಹಾರ ಮತ್ತು ನೀರು ಸರಬರಾಜು ಮಾಡಿದ್ದಾರೆ. ಅದೇ ರೀತಿ, ಚಿಕ್ಕಬಳ್ಳಾಪುರ ವ್ಯಾಪ್ತಿಯಲ್ಲಿನ ನಂದಿಬೆಟ್ಟಕ್ಕೂ ಭೇಟಿ ನೀಡಿ ವಾನರ ಸೇನೆಗೆ ಆಹಾರ ಒದಗಿಸಿದ್ದಾರೆ.
2 ಲಕ್ಷ ವೆಚ್ಚ: ಕಲ್ಲಗಂಡಿ, ಸೇಬು, ಬಾಳೆಹಣ್ಣು ಸೇರಿದಂತೆ ಹಲವು ಹಣ್ಣುಗಳನ್ನು ತಮ್ಮ ಸ್ವತಃ ಹಣದಿಂದಲೇ ಖರೀದಿಸಿ ಪ್ರಾಣಿಗಳಿಗೆ ನೀಡುತ್ತಿದ್ದು, ಇದುವರೆಗೂ 2 ಲಕ್ಷ ರೂ, ಖರ್ಚು ಮಾಡಿರುವುದಾಗಿ ಮುಹಮ್ಮದ್ ನದೀಂ ಶರೀಫ್ ನುಡಿದರು.
ಶ್ವಾನಗಳಿಗೂ ಆಹಾರ: ಇಲ್ಲಿನ ವೇಮಗಲ್ ನಿವಾಸಿ ನಾಗೇಶ್ ಅವರ ತಂಡದೊಂದಿಗೆ ಜೊತೆಗೂಡಿ ಅಕ್ಕಿ ಖರೀದಿಸಿ ಅನ್ನವನ್ನು ಬೇಯಿಸಿ, ಪ್ರತಿನಿತ್ಯ ಶ್ವಾನಗಳಿಗೂ ಆಹಾರ ನೀಡಲಾಗುತ್ತಿದೆ. ಮನುಷ್ಯರನ್ನೇ ನಂಬಿಕೊಂಡು ಹಲವು ಪ್ರಾಣಿಗಳು ಜೀವನ ಸಾಗಿಸುತ್ತಿವೆ. ಆದರೆ, ಕೊರೋನ ಪರಿಣಾಮ ಜನರ ಸಂಚಾರ ತಗ್ಗಿರುವ ಹಿನ್ನೆಲೆ ಪ್ರಾಣಿಗಳ ಹಸಿವು ಹೆಚ್ಚಾಗಿದೆ. ಹೀಗಾಗಿಯೇ, ಮೂಕ ಜೀವಿಗಳಿಗೆ ಸಣ್ಣ ಸಹಾಯ ಮಾಡುತ್ತಿದ್ದೇನೆ ಎನ್ನುತ್ತಾರೆ ಮುಹಮ್ಮದ್ ನದೀಂ ಶರೀಫ್.
ರಮಝಾನ್‍ನಲ್ಲೂ ಸಂಚಾರ
ಪವಿತ್ರ ರಮಝಾನ್ ಮಾಸದಲ್ಲಿ ಉಪವಾಸ ಇದ್ದೇನೆ. ಜತೆಗೆ ಬಿಸಿಲಿನಲ್ಲಿಯೇ ಹತ್ತಾರು ಕಿಲೋಮೀಟರ್ ಸಂಚಾರ ಮಾಡಿ, ಪ್ರಾಣಿಗಳಿಗೆ ಆಹಾರ ನೀಡುತ್ತಿದ್ದೇನೆ. ಮನುಷ್ಯರ ಜೊತೆಯಲ್ಲಿ ಪ್ರಾಣಿಗಳನ್ನು ಉಳಿಸುವುದು ನಮ್ಮ ಕರ್ತವ್ಯ.
-ಮುಹಮ್ಮದ್ ನದೀಂ ಶರೀಫ್