ಮಧುಮೇಹವನ್ನು ನಿಯಂತ್ರಿಸುವ ಬಾಳೆಹೂವು
ಮಧುಮೇಹದಿಂದಾಗಿ ರೋಗಿಯ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚುವುದರಿಂದ ಇದನ್ನು ಸಕ್ಕರೆ ಕಾಯಿಲೆಯೆಂದೂ ಕರೆಯುತ್ತಾರೆ. ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗುತ್ತಿದ್ದರೆ ಶರೀರದ ಪ್ರಮುಖ ಅಂಗಾಂಗಗಳಿಗೆ ಹಾನಿಯುಂಟಾಗುತ್ತದೆ. ಮಧುಮೇಹವನ್ನು ನಿಯಂತ್ರಿಸುವಲ್ಲಿ ಆಹಾರ ಕ್ರಮವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ನಿಸರ್ಗದಲ್ಲಿಯ ಹಲವಾರು ಸಸ್ಯಗಳಲ್ಲಿ ಅದ್ಭುತ ಔಷಧೀಯ ಗುಣಗಳಿವೆ. ಬಾಳೆ ಇವುಗಳಲ್ಲಿ ಒಂದಾಗಿದ್ದು,ಬಾಳೆಗಿಡ ಹಣ್ಣುಗಳನ್ನು ನೀಡುವುದು ಮಾತ್ರವಲ್ಲ,ಅದರ ಎಲೆ,ಕಾಂಡ ಮತ್ತು ಹೂವುಗಳೂ ಹಲವಾರು ವಿಧಗಳಲ್ಲಿ ಉಪಯೋಗಿಯಾಗಿವೆ. ಮಧುಮೇಹಿಗಳಿಗೆ ಅತ್ಯಂತ ಲಾಭದಾಯಕವಾಗಬಲ್ಲ ಘಟಕಾಂಶಗಳು ಬಾಳೆಹೂವಿನಲ್ಲಿವೆ ಎನ್ನುವುದನ್ನು ಸಂಶೋಧನೆಗಳು ತೋರಿಸಿವೆ. ಬಾಳೆ ಹೂವನ್ನು ಹಾಗೆಯೇ ತಿನ್ನಬಹುದು ಅಥವಾ ಅದರಿಂದ ವಿವಿಧ ಖಾದ್ಯಗಳನ್ನು ತಯಾರಿಸಿ ಸೇವಿಸಬಹುದು.ಬಾಳೆ ಹೂವು ಮಧುಮೇಹಿಗಳಿಗೆ ಹೇಗೆ ಲಾಭದಾಯಕ ಎನ್ನುವುದರ ಮತ್ತು ಅದನ್ನು ಸೇವಿಸುವ ವಿಧಾನದ ಕುರಿತು ಅಗತ್ಯ ಮಾಹಿತಿಗಳಿಲ್ಲಿವೆ.
ಬಾಳೆ ಹೂವಿನ ಸೇವನೆಯು ರೋಗಿಯ ಶರೀರದಲ್ಲಿ ಸಕ್ಕರೆಯನ್ನು ಉತ್ತೇಜಿಸುವ ನಿರ್ದಿಷ್ಟ ವಿಧದ ಪ್ರೋಟಿನ್ ಉತ್ಪತ್ತಿಯನ್ನು ಕಡಿಮೆ ಮಾಡುತ್ತದೆ ಎನ್ನುವುದು ಸಂಶೋಧನೆಯಲ್ಲಿ ಕಂಡು ಬಂದಿದೆ. ಟೈಪ್ 2 ಮಧುಮೇಹಿಗಳ ಪಾಲಿಗೆ ಬಾಳೆಹೂವು ಒಂದು ವರದಾನವಾಗಿದೆ ಎಂದು ಹೇಳಬಹುದು. ವಿಶ್ವಾದ್ಯಂತ ಮಧುಮೇಹಿಗಳ ಪೈಕಿ ಶೇ.80ಕ್ಕೂ ಹೆಚ್ಚಿನ ಪ್ರಕರಣಗಳು ಟೈಪ್-2 ಆಗಿವೆ. ಟೈಪ್-2 ಮಧುಮೇಹವನ್ನು ಹೊಂದಿರುವ ಜನರು ಸಾಮಾನ್ಯವಾಗಿ ಜಡ ಜೀವನಶೈಲಿಯನ್ನು ಬದುಕುತ್ತಿರುತ್ತಾರೆ. ಬಾಳೆ ಹೂವು ಶರೀರದಲ್ಲಿ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುವುದು ಮಾತ್ರವಲ್ಲ,ಶರೀರದ ತೂಕ,ಕೊಲೆಸ್ಟ್ರಾಲ್ ಮಟ್ಟವನ್ನೂ ತಗ್ಗಿಸುತ್ತದೆ ಮತ್ತು ಹೊಟ್ಟೆಯನ್ನು ಆರೋಗ್ಯಯುತವಾಗಿರಿಸುತ್ತದೆ.
ಬಾಳೆ ಹೂವಿನ ಇತರ ಲಾಭಗಳು
ಬಾಳೆ ಹೂವಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಬ್ಬಿಣ ಇರುವುದರಿಂದ ಅದರ ಸೇವನೆಯು ಶರೀರದಲ್ಲಿ ರಕ್ತದ ಪ್ರಮಾಣವನ್ನು ಹೆಚ್ಚಿಸುತ್ತದೆ. ಈ ಹೂವನ್ನು ತಿನ್ನುವುದರಿಂದ ಕೆಂಪು ರಕ್ತಕಣಗಳ ಸಂಖ್ಯೆಯು ವೃದ್ಧಿಸುತ್ತದೆ.
ಬಾಳೆ ಹೂವು ಇನ್ಸುಲಿನ್ ಅನ್ನು ನಿಯಂತ್ರಿಸುತ್ತದೆ,ಹೀಗಾಗಿ ಇದರ ಸೇವನೆಯಿಂದ ರಕ್ತದಲ್ಲಿ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿರುತ್ತದೆ.
ಬಾಳೆಹೂವು ಸೂಕ್ತ ಪ್ರಮಾಣದಲ್ಲಿ ಮ್ಯಾಗ್ನೀಷಿಯಂ ಅನ್ನು ಒಳಗೊಂಡಿರುತ್ತದೆ ಮತ್ತು ಇದು ಶರೀರದಲ್ಲಿ ಖಿನ್ನತೆ ನಿರೋಧಕವಾಗಿ ಕೆಲಸ ಮಾಡುತ್ತದೆ. ಹೀಗಾಗಿ ಬಾಳೆ ಹೂವಿನ ಖಾದ್ಯಗಳನ್ನು ಸೇವಿಸುವುದರಿಂದ ಒತ್ತಡ ಮತ್ತು ಆತಂಕಗಳಿಂದ ಮುಕ್ತಿ ಪಡೆಯಬಹುದು. ಇದು ಸುಲಭವಾಗಿ ಜೀರ್ಣಗೊಳ್ಳುವುದರಿಂದ ಹೊಟ್ಟೆಯ ಆರೊಗ್ಯಕ್ಕೂ ಲಾಭಕಾರಿ ಯಾಗಿದೆ.
ಬಾಳೆ ಹೂವು ಶರೀರಕ್ಕೆ ಫ್ರೀ ರ್ಯಾಡಿಕಲ್‌ಗಳಿಂದ ರಕ್ಷಣೆಯನ್ನು ನೀಡುತ್ತದೆ ಮತ್ತು ಕೊಲೆಸ್ಟ್ರಾಲ್ ಪ್ರಮಾಣವನ್ನು ತಗ್ಗಿಸುತ್ತದೆ,ಹೀಗಾಗಿ ಅದು ಹೃದ್ರೋಗಗಳನ್ನು ತಡೆಯುವಲ್ಲಿ ಸಹಾಯಕಾರಿಯಾಗಿದೆ.
ಬಾಳೆ ಹೂವನ್ನು ಸೇವಿಸುವುದು ಹೇಗೆ?
ಬಾಳೆ ಹೂವು ಮೃದುವಾಗಿರುವುದರಿಂದ ಮತ್ತು ಸುಲಭವಾಗಿ ಜೀರ್ಣಗೊಳ್ಳುವ ಗುಣವನ್ನು ಹೊಂದಿರುವುದರಿಂದ ಅದನ್ನು ಹಾಗೆಯೇ ತಿನ್ನುವುದರಲ್ಲಿ ಯಾವುದೇ ಸಮಸ್ಯೆಯಿಲ್ಲ. ಈ ಹೂವಿನಿಂದ ಬನಾನಾ ಫ್ಲವರ್ ವೆಜಿಟೇಬಲ್‌ನಂತಹ ವಿವಿಧ ಖಾದ್ಯಗಳನ್ನೂ ತಯಾರಿಸಬಹುದು. ಬಾಳೆ ಹೂವಿನ ಸಲಾಡ್ ಮಾಡಿಯೂ ತಿನ್ನಬಹುದು. ಹೂವಿನ ಚಟ್ನಿಯನ್ನೂ ಮಾಡಿ ಸೇವಿಸಬಹುದು.