ಕೊರೋನ ಹಾವಳಿಯಿಂದ ಗ್ರಾ.ಪಂ. ಚುನಾವಣೆ ಮುಂದೂಡಿಕೆ, ಆಡಳಿತ ಸಮಿತಿ ನೇಮಕಕ್ಕೆ ಸರಕಾರದ ಒಲವು
ಗ್ರಾ.ಪಂ.ಗಳ ಇತಿಹಾಸದಲ್ಲೆ ಇದೇ ಮೊದಲ ಬಾರಿಗೆ ನಾಮ ನಿರ್ದೇಶಿತ ಸದಸ್ಯರು
ಬೆಂಗಳೂರು, ಮೇ 17: ಕೊರೋನ ಹಾವಳಿಯಿಂದಾಗಿ ಘೊಷಿಸಲಾಗಿರುವ ಲಾಕ್ಡೌನ್ನಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಇದೇ ಸಂದರ್ಭದಲ್ಲಿ ಅವಧಿ ಮುಗಿದಿರುವ ಪಂಚಾಯತ್ಗಳಿಗೆ 6 ತಿಂಗಳವರೆಗೆ ಚುನಾವಣೆಯನ್ನು ಮುಂದೂಡಿರುವ ಸರಕಾರವು, ಚುನಾಯಿತ ಸದಸ್ಯರ ಜಾಗದಲ್ಲಿ ಆಡಳಿತ ಸಮಿತಿಗಳನ್ನು ರಚನೆ ಮಾಡಲು ಒಲವು ವ್ಯಕ್ತಪಡಿಸಿದೆ.
ಗ್ರಾಮ ಪಂಚಾಯತ್ಗಳ ಇತಿಹಾಸ ದಲ್ಲೆ ಇದೇ ಮೊದಲ ಬಾರಿಗೆ ನಾಮ ನಿರ್ದೇಶಿತ ಸದಸ್ಯರು ಬರಲಿದ್ದಾರೆ. ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಆಡಳಿತ ಸಮಿತಿಗಳಿಗೆ ಸದಸ್ಯರನ್ನು ನೇಮಕ ಮಾಡುವ ಅಧಿಕಾರ ನೀಡಲಾಗಿದೆ.
ರಾಜ್ಯದಲ್ಲಿ 6,021 ಗ್ರಾಪಂಗಳಿದ್ದು, ಅವುಗಳಲ್ಲಿ ಜೂ.4ರ ವೇಳೆಗೆ ಸುಮಾರು 2,300ಕ್ಕೂ ಹೆಚ್ಚಿನ ಪಂಚಾಯತ್ಗಳ ಅವಧಿ ಮುಕ್ತಾಯವಾಗಲಿದೆ. ಈ ಅವಧಿಯೊಳಗೆ ಎಲ್ಲ ಪಂಚಾಯತ್ಗಳಿಗೂ ಆಡಳಿತ ಸಮಿತಿಗಳನ್ನು ರಚನೆ ಮಾಡುವ ಪ್ರಕ್ರಿಯೆಗೆ ಚಾಲನೆ ಸಿಗಲಿದೆ ಎಂದು ಹೇಳಲಾಗುತ್ತಿದೆ.
ಆನಂತರ, ಜುಲೈನಲ್ಲಿ 3,400ಕ್ಕೂ ಹೆಚ್ಚು ಪಂಚಾಯತ್ಗಳು ಅಧಿಕಾರವಧಿ ಪೂರ್ಣಗೊಳಿಸಲಿವೆ. ಇನ್ನುಳಿದ ಪಂಚಾಯತ್ಗಳು ಸೆಪ್ಟಂಬರ್ ವೇಳೆಗೆ ಅಧಿಕಾರ ಪೂರೈಲಿಸವೆ. ಈ ಗ್ರಾಪಂಗಳಿಗೂ ಆಡಳಿತ ಸಮಿತಿಗಳನ್ನು ನೇಮಕ ಮಾಡಲು ಸರಕಾರ ಮುಂದಾಗಿದೆ. ರಾಜ್ಯದಲ್ಲಿ ಕೊರೋನ ಹಾವಳಿ ಇಲ್ಲದೆ ಇದ್ದಿದ್ದರೆ ಈವರೆಗೆ ಜೂನ್ನಲ್ಲಿ ಅಧಿಕಾರ ಪೂರೈಸಲಿರುವ ಪಂಚಾಯತ್ಗಳಿಗೆ ಚುನಾವಣೆ ನಡೆದು ಚುನಾಯಿತ ಸದಸ್ಯರು ಅಧಿಕಾರದಲ್ಲಿರುತ್ತಿದ್ದರು.
ಪಂಚಾಯತ್ರಾಜ್ ಕಾಯ್ದೆ 1994ರ ಪ್ರಕಾರ ಪಂಚಾಯತ್ ಅವಧಿ ಮುಗಿಯುವ ಒಳಗಾಗಿ ಚುನಾವಣೆ ನಡೆದು ಹೊಸ ಆಡಳಿತ ಅಧಿಕಾರಕ್ಕೆ ಬರಬೇಕು. ಒಂದು ವೇಳೆ ಚುನಾವಣೆ ನಡೆಸಲು ಸಾಧ್ಯವಾಗದೆ ಇದ್ದರೆ, ರಾಜ್ಯ ಸರಕಾರವು ಅಂತಹ ಪಂಚಾಯತ್ಗಳಿಗೆ ಆಡಳಿತ ಅಧಿಕಾರಿಗಳನ್ನು ನೇಮಕ ಮಾಡಬೇಕಾಗುತ್ತದೆ.
ಆದರೆ, ಇದೇ ಮೊದಲ ಬಾರಿಗೆ ಗ್ರಾಮ ಪಂಚಾಯತ್ಗಳಿಗೆ ಆಡಳಿತ ಅಧಿಕಾರಿಯ ಬದಲು ಆಡಳಿತ ಸಮಿತಿಗಳನ್ನು ರಚಿಸಿ, ಜಿಲ್ಲಾಧಿಕಾರಿ ಮೂಲಕ ಆಯಾ ಗ್ರಾಪಂನ ಚುನಾಯಿತ ಸದಸ್ಯರ ಸಂಖ್ಯೆಯಷ್ಟೆ ಸದಸ್ಯರನ್ನು ನಾಮ ನಿರ್ದೇಶನ ಮಾಡಲು ನಿರ್ಧರಿಸಲಾಗಿದೆ.
ಬೇಸಿಗೆ ಅವಧಿಯಾಗಿರುವುದರಿಂದ, ಗ್ರಾಮೀಣ ಪ್ರದೇಶಗಳಲ್ಲಿ ಬರ ಹಾಗೂ ಕುಡಿಯುವ ನೀರು ಸೇರಿದಂತೆ ಇನ್ನಿತರ ಸಮಸ್ಯೆಗಳು ತಲೆದೋರಿವೆ. ಇಂತಹ ಸಂದರ್ಭದಲ್ಲಿ ಜನಸಾಮಾನ್ಯರಿಗೆ ಪರಿಣಾಮಕಾರಿಯಾಗಿ ಸ್ಥಳೀಯ ಆಡಳಿತದ ಸದುಪಯೋಗ ಕಲ್ಪಿಸಲು ಆಡಳಿತ ಸಮಿತಿಗಳನ್ನು ರಚನೆ ಮಾಡಲು ಸರಕಾರ ಮುಂದಾಗಿದೆ.
ಪಂಚಾಯತ್ಗಳಲ್ಲಿ ಎಷ್ಟು ಮಂದಿ ಚುನಾಯಿತ ಸದಸ್ಯರು ಇರುತ್ತಾರೋ ಅಷ್ಟೇ ಸಂಖ್ಯೆಯ ಸದಸ್ಯರನ್ನು ಅವರ ಹಿನ್ನೆಲೆಯ ಆಧಾರದಲ್ಲಿ ಜಿಲ್ಲಾಧಿಕಾರಿ ತಮ್ಮ ವಿವೇಚನಾಧಿಕಾರ ಬಳಸಿ, ಮೀಸಲಾತಿಗೆ ಅನುಗುಣವಾಗಿ ಸದಸ್ಯರನ್ನು ನೇಮಕ ಮಾಡಲಿದ್ದಾರೆ. ಚುನಾಯಿತ ಸದಸ್ಯರು ಆ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವಾಸಿಯಾಗಿರಬೇಕು.
ಎ ಶ್ರೇಣಿಯ ಕಿರಿಯ ಅಥವಾ ಬಿ ಶ್ರೇಣಿಯ ತಾಲೂಕು ಮಟ್ಟದ ಅಧಿಕಾರಿಯೊಬ್ಬರನ್ನು ಪಂಚಾಯತ್ನ ಆಡಳಿತ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗುತ್ತದೆ. ಈ ಆಡಳಿತ ಸಮಿತಿಯ ಅಧಿಕಾರವಧಿಯು 6 ತಿಂಗಳು ಇರಲಿದ್ದು, ಅಷ್ಟರೊಳಗಾಗಿ ಪಂಚಾಯತ್ಗಳಿಗೆ ಚುನಾವಣೆ ನಡೆಸಬೇಕಿದೆ.
ಆಡಳಿತ ಸಮಿತಿ ಸದಸ್ಯರಿಗೆ ಚುನಾಯಿತ ಸದಸ್ಯರಿಗೆ ನೀಡಲಾಗುವ ಅಧಿಕಾರವನ್ನೆ ನೀಡಲು ನಿರ್ಧರಿಸಿದ್ದು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿಗಳೊಂದಿಗೆ ಸಭೆಗಳನ್ನು ನಡೆಸಿ, ಅಗತ್ಯ ಸಲಹೆಗಳನ್ನು ನೀಡಬಹುದು. ಆದರೆ, ಹಣಕಾಸಿಗೆ ಸಂಬಂಧಿಸಿದ ಯಾವುದೇ ನಿರ್ಧಾರಗಳನ್ನು ಸದಸ್ಯರು ಕೈಗೊಳ್ಳು ವಂತಿಲ್ಲ. ಆಡಳಿತ ಹಾಗೂ ಹಣಕಾಸಿಗೆ ಸಂಬಂಧಿಸಿದ ನಿರ್ಧಾರಗಳನ್ನು ಆಡಳಿತ ಸಮಿತಿಯ ಅಧ್ಯಕ್ಷರಾಗಿ ನೇಮಕವಾಗುವ ಅಧಿಕಾರಿಯೆ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಪಂಚಾಯತ್ರಾಜ್ ಗ್ರಾಮ ಸ್ವರಾಜ್ ಕಾಯ್ದೆಯಲ್ಲಿ ಅದಕ್ಕೆ ಅವಕಾಶ ಇಲ್ಲ. ಮೊದಲ ಬಾರಿಗೆ ಗ್ರಾಪಂ ಸ್ಥಾಪನೆಯಾದಾಗ ಚುನಾವಣೆ ನಡೆಸಲು ಆಗುವುದಿಲ್ಲ, ಜನ ಚುನಾವಣೆಯಲ್ಲಿ ಭಾಗವಹಿಸುವುದಿಲ್ಲ. ಅಂತಹ ಸಂದರ್ಭದಲ್ಲಿ ಸಮಿತಿಗಳನ್ನು ಮಾಡಲು ಅವಕಾಶವಿದೆ. ಇಲ್ಲದಿದ್ದರೆ, ಗಾಪಂಗಳನ್ನು ವಿಸರ್ಜನೆ ಮಾಡಿದಾಗ ಆಡಳಿತಾಧಿಕಾರಿ ನೇಮಕ ಮಾಡಲು ಅವಕಾಶವಿದೆ. ಸರಕಾರ ಸಾಂವಿಧಾನಿಕ ಅಧಿಕಾರ ಬಳಸಿ ಸಮಿತಿ ರಚನೆ ಮಾಡಬಹುದು. ಆದರೆ, ಅ ಸಮಿತಿಗಳಿಗೆ ಈಗಿರುವ ಸದಸ್ಯರನ್ನೇ ನೇಮಕ ಮಾಡುವುದು ಸೂಕ್ತ.
► ಎ.ಎಸ್.ಪೊನ್ನಣ್ಣ, ಹೈಕೋರ್ಟ್ ಹಿರಿಯ ನ್ಯಾಯವಾದಿ
ರಾಜ್ಯ ಸರಕಾರ ಗ್ರಾಪಂಗಳಲ್ಲಿ ಈಗಿರುವ ಚುನಾಯಿತ ಪ್ರತಿನಿಧಿಗಳ ಅಧಿಕಾರ ಅವಧಿಯನ್ನೇ ನಿರ್ದಿಷ್ಟ ಅವಧಿಗೆ ಸೀಮಿತವಾಗಿ ಮುಂದುವರಿಸುವುದು ಉತ್ತಮ. ರಾಜ್ಯಮಟ್ಟದಿಂದ ಗ್ರಾಮಮಟ್ಟದ ವರೆಗೆ ಚುನಾವಣೆ ಪ್ರಕ್ರಿಯೆ ವಿಧಾನ ಒಂದೆ. ಸರಕಾರ ಅಧಿಕಾರ ಪೂರೈಸಿದಾಗ ನೂತನ ಸರಕಾರ ಚುನಾಯಿತವಾಗುವವರೆಗೆ ನಿರ್ಗಮಿತ ಮುಖ್ಯಮಂತ್ರಿಯನ್ನೇ ಉಸ್ತುವಾರಿಯನ್ನಾಗಿ ಸೀಮಿತ ಅವಧಿಗೆ ರಾಜ್ಯಪಾಲರು ಮುಂದುವರಿಸುತ್ತಾರೆ. ಅದೇ ರೀತಿ, ಗ್ರಾಪಂ ಮಟ್ಟದಲ್ಲಿಯೂ ಮಾಡಬೇಕು. ಆಡಳಿತ ಸಮಿತಿ ರಚಿಸಿ ಅದಕ್ಕೆ ಸದಸ್ಯರನ್ನು ನೇಮಕ ಮಾಡಲು ಮುಂದಾಗುವುದು ಮೇಲ್ನೋಟಕ್ಕೆ ಕಾನೂನು ಬಾಹಿರದಂತೆ ಕಾಣುತ್ತಿದೆ.
ಸಿ.ಎಸ್.ದ್ವಾರಕಾನಾಥ್, ಹಿರಿಯ ನ್ಯಾಯವಾದಿ
ರಾಜ್ಯ ಸರಕಾರವು ಅಧಿಕಾರ ಅವಧಿ ಪೂರೈಸುತ್ತಿರುವ ಗ್ರಾಪಂಗಳಿಗೆ ಆಡಳಿತ ಸಮಿತಿಗಳನ್ನು ರಚಿಸಿ ಸದಸ್ಯರನ್ನು ನಾಮ ನಿರ್ದೇಶನ ಮಾಡುವ ಮುನ್ನ, ಸರ್ವಪಕ್ಷಗಳ ಸಭೆ ಕರೆದು ಚರ್ಚಿಸಿ ತೀರ್ಮಾನ ಕೈಗೊಳ್ಳುವುದು ಉತ್ತಮ. ಕೋವಿಡ್ನಂತಹ ಸಂಕಷ್ಟದ ಪರಿಸ್ಥಿತಿಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿಯಾಗುತ್ತದೆ. ವಿಕೋಪ ನಿರ್ವಹಣೆ ಕಾಯ್ದೆ ಇಡೀ ದೇಶದಲ್ಲಿ ಜಾರಿಯಲ್ಲಿದೆ. ಇಂತಹ ಸಂದರ್ಭದಲ್ಲಿ ಈ ಪರಿಸ್ಥಿತಿಯನ್ನು ಯಾವ ರೀತಿ ನಿರ್ವಹಿಸಬಹುದು ಎಂಬುದರ ಕುರಿತು ತಜ್ಞರ ಜೊತೆಯೂ ಸಮಾಲೋಚನೆ ಮಾಡಬೇಕು.
ಕೆ.ಎಸ್.ವಿಮಲಾ, ಮಹಿಳಾ ಹೋರಾಟಗಾರ್ತಿ
ರಾಜ್ಯ ಸರಕಾರ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಅವರ ಪಕ್ಷದ ಕಾರ್ಯಕರ್ತರನ್ನು ಗ್ರಾಪಂಗಳ ಆಡಳಿತ ಸಮಿತಿಗಳಿಗೆ ನೇಮಕ ಮಾಡಲು ಜಿಲ್ಲಾಧಿಕಾರಿಗಳಿಗೆ ಮೌಖಿಕವಾಗಿ ಆದೇಶ ನೀಡಲು ತೀರ್ಮಾನಿಸಿದೆ ಎಂಬ ಮಾಹಿತಿಯಿದೆ. ಪಂಚಾಯತ್ಚುನಾವಣೆಗಳು ಪಕ್ಷಾತೀತವಾಗಿ ನಡೆಯಲಿದ್ದು, ಈಗ ಗ್ರಾಪಂನಲ್ಲಿರುವ ಹಾಲಿ ಸದಸ್ಯರು ಪಕ್ಷದ ಚಿನ್ನೆಯಿಂದ ಆಯ್ಕೆಯಾದವರಲ್ಲ. ಹೀಗಾಗಿ ಅವರನ್ನೆ ಮುಂದಿನ 6 ತಿಂಗಳ ಕಾಲ ಅಧಿಕಾರದಲ್ಲಿ ಮುಂದುವರಿಸಬೇಕು.
ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಆರೆಸೆಸ್ಸ್ ಹಾಗೂ ಬಿಜೆಪಿ ಕಾರ್ಯಕರ್ತರನ್ನು ಪ್ರತಿಯೊಂದು ಗ್ರಾಪಂಗಳಲ್ಲಿಯೂ ನಾಮ ನಿರ್ದೇಶನ ಸದಸ್ಯರನ್ನಾಗಿಸುವ ಪ್ರಕ್ರಿಯೆ ಅವರ ಪಕ್ಷದಲ್ಲಿ ನಡೆಯುತ್ತಿದೆ. ಗ್ರಾಮೀಣ ಭಾಗದಲ್ಲಿ ನೆಲೆಯೆ ಇಲ್ಲದ ಬಿಜೆಪಿ ವಾಮಮಾರ್ಗದ ಮೂಲಕ ಹಣ ಹಾಗೂ ಅಧಿಕಾರವನ್ನು ಕಬಳಿಸುವ ಕೆಟ್ಟ ಚಾಳಿ ಆರಂಭಿಸಿದೆ. ಬಿಜೆಪಿ ತನ್ನ ಅಜೆಂಡಾವನ್ನು ಎಲ್ಲ ಕಡೆ ಪಸರಿಸಲು ಈ ಸಂದಿಗ್ಧ ಪರಿಸ್ಥಿತಿಯನ್ನು ಬಳಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ.
ಜಗದೀಶ್ ವಿ.ಸದಂ, ರಾಜ್ಯ ಮಾಧ್ಯಮ ಸಂಚಾಲಕ, ಆಮ್ ಆದ್ಮಿ ಪಕ್ಷ