ಅಂಫಾನ್ ಚಂಡಮಾರುತದ ಭೀತಿ: ಒಡಿಶಾ, ಪ.ಬಂಗಾಳದಲ್ಲಿ ಕಟ್ಟೆಚ್ಚರ
ಹೊಸದಿಲ್ಲಿ, ಮೇ 17: ಬಂಗಾಳ ಕೊಲ್ಲಿಯಲ್ಲಿ ತೀವ್ರ ವಾಯುಭಾರ ಕುಸಿತದಿಂದ ಉಂಟಾಗಿರುವ ಅಂಫಾನ್ ಚಂಡಮಾರುತದಿಂದ ಮುಂದಿನ ಎರಡು ದಿನದಲ್ಲಿ ಒಡಿಶಾ ಮತ್ತು ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಮೇ 18ರ ಬೆಳಿಗ್ಗೆ ಒಡಿಶಾದ ಕರಾವಳಿ ತೀರದಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದ್ದು ಸಂಜೆ ವೇಳೆ ಭಾರೀ ಮಳೆ ಸುರಿಯಬಹುದು . ಪಶ್ಚಿಮ ಬಂಗಾಳದ ಕರಾವಳಿ ಜಿಲ್ಲೆಗಳಲ್ಲಿ ಮೇ 20ರಂದು ಭಾರೀ ಮಳೆಯಾಗಬಹುದು ಎಂದು ಇಲಾಖೆಯ ಬುಲೆಟಿನ್‌ನಲ್ಲಿ ತಿಳಿಸಲಾಗಿದೆ. ಉತ್ತರ ಒಡಿಶಾದ ಕರಾವಳಿ ಪ್ರದೇಶ ಹಾಗೂ ಪಶ್ಚಿಮ ಬಂಗಾಳಕ್ಕೆ ಈಗಾಗಲೇ ಚಂಡಮಾರುತ ಮುನ್ನೆಚ್ಚರಿಕೆ ಸೂಚನೆ ನೀಡಲಾಗಿದ್ದು ಸೋಮವಾರ(ಮೇ 18ರಿಂದ)ದಿಂದ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸಲಹೆ ನೀಡಲಾಗಿದೆ.
ಈ ಮಧ್ಯೆ, ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಚಂಡಮಾರುತದಿಂದ ಯಾವುದೇ ನಾಶನಷ್ಟ ಸಂಭವಿಸದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು. ಅಲ್ಲದೆ ಚಂಡಮಾರುತ ಅಪ್ಪಳಿಸುವ ನಿರೀಕ್ಷೆಯಿರುವ ಪ್ರದೇಶಗಳ ಮೂಲಕ ಹಾದುಹೋಗುವ, ವಲಸೆ ಕಾರ್ಮಿಕರನ್ನು ಸಾಗಿಸುವ ವಿಶೇಷ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಗೊಳಿಸುವಂತೆ ಅವರು ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ. ಜನರ ಪ್ರಾಣ ರಕ್ಷಿಸುವುದು ಸರಕಾರದ ಮೊದಲ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಕರಾವಳಿ ತೀರದ 12 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಕಟ್ಟೆಚ್ಚರ ವಹಿಸಿ ಪರಿಸ್ಥಿತಿಯ ಮೇಲೆ ತೀವ್ರ ನಿಗಾ ವಹಿಸಬೇಕು ಎಂದವರು ಸೂಚಿಸಿದ್ದಾರೆ.