ದ.ಕ.: ಲಾಕ್‌ಡೌನ್ ಮಧ್ಯೆ ಅತಂತ್ರರಾದ ಬಸ್ ಚಾಲಕ-ನಿರ್ವಾಹಕರು
ನೆರವಿನ ನಿರೀಕ್ಷೆಯಲ್ಲಿ ಸಿಬ್ಬಂದಿ
ಮಂಗಳೂರು: ಕೊರೋನ-ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಳೆದ 57 ದಿನಗಳಿಂದ ಬಸ್‌ಗಳ ಸಂಚಾರ ಸ್ಥಗಿತಗೊಂಡಿದೆ. ಇದರಿಂದ ಬಸ್ ಮಾಲಕರು ಆರ್ಥಿಕವಾಗಿ ತುಂಬಾ ನಷ್ಟ ಹೊಂದಿದ್ದರೆ, ಅದನ್ನೇ ನಂಬಿ ದಿನಗೂಲಿ ಕಾರ್ಮಿಕರಂತೆ ಕೆಲಸ ಮಾಡುತ್ತಿದ್ದ ಚಾಲಕರು ಮತ್ತು ನಿರ್ವಾಹಕರು ಕೂಡ ಅತಂತ್ರ ಸ್ಥಿತಿಗೆ ತಲುಪಿದ್ದಾರೆ. ಇಂದು ಅಥವಾ ನಾಳೆ ಲಾಕ್‌ಡೌನ್ ಸಡಿಲಿಕೆಯಾಗಬಹುದು ಎಂದು ಕಾದು ಕುಳಿತಿರುವ ಬಸ್ ನೌಕರರು ಅತ್ತ ಬೇರೆ ವಾಹನಗಳಲ್ಲಿ ದುಡಿಯಲು ಹೋಗಲಾಗದೆ ಇತರ ಕೆಲಸವನ್ನೂ ಮಾಡಲಾಗದೆ ಬದುಕಲು ಹೆಣಗಾಡುತ್ತಿದ್ದಾರೆ.
ದ.ಕ.ಜಿಲ್ಲೆಯಲ್ಲಿ ಸುಮಾರು 350 ಖಾಸಗಿ ಸಿಟಿ ಮತ್ತು 750 ಸರ್ವಿಸ್ ಬಸ್‌ಗಳು ಹಾಗೂ 75 ಕಾಂಟ್ರಾಕ್ಟ್ ಕ್ಯಾರೇಜ್ ಬಸ್‌ಗಳಿವೆ. ಈ ಬಸ್‌ಗಳಲ್ಲಿ ತಲಾ ಒಬ್ಬ ಚಾಲಕ ಮತ್ತು ನಿರ್ವಾಹಕ ಅಂತ ಪರಿಗಣಿಸಿದರೂ ಕೂಡ ಅಂದಾಜು 2,350 ಸಿಬ್ಬಂದಿ ಇದ್ದಾರೆ ಮತ್ತು ಅವರ ದುಡಿಮೆಯನ್ನು ನಂಬಿಯೇ ಸಾವಿರಾರು ಮಂದಿ ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಕಳೆದ 57 ದಿನಗಳಿಂದ ಬಸ್ ಸಂಚಾರವಿಲ್ಲದ ಕಾರಣ ಈ ಸಿಬ್ಬಂದಿಯ ಬದುಕು ಆಯೋಮಯವಾಗಿದೆ. ಖಾಯಂ ಆಗಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗೆ ಕೆಲವು ಬಸ್‌ಗಳ ಮಾಲಕರು ಸಾಧ್ಯವಾದಷ್ಟು ನೆರವು ನೀಡಿದ್ದು, ಬಿಟ್ಟರೆ ಉಳಿದಂತೆ ಈ ಚಾಲಕ -ನಿರ್ವಾಹಕರ ಗೋಳನ್ನು ಯಾರೂ ಕೇಳುವವರಿಲ್ಲವಾಗಿದೆ. ರಾಜ್ಯ ಸರಕಾರವು ರಿಕ್ಷಾ, ಟೆಂಪೊ ಮತ್ತಿತರ ವಾಹನಿಗರ ನೆರವಿಗಾಗಿ ವಿಶೇಷ ಪ್ಯಾಕೇಜ್ ಘೋಷಿಸಿದ್ದರೂ ಕೂಡ ಬಸ್ ಸಿಬ್ಬಂದಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ತಮ್ಮನ್ನು ಗಣನೆಗೆ ತೆಗೆದುಕೊಳ್ಳದ ಸರಕಾರ, ಜನಪ್ರತಿನಿಧಿಗಳು, ಅಧಿಕಾರಿಗಳ ನಿಲುವಿನ ಬಗ್ಗೆ ಬಸ್ ಸಿಬ್ಬಂದಿ ವರ್ಗವು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಕೆಲವು ಚಾಲಕ-ನಿರ್ವಾಹಕರು ಸಂಘ ಸಂಸ್ಥೆಗಳು ಕೊಡುವ ದಿನಸಿ ಸಾಮಗಿ ್ರಗಳ ಕಿಟ್‌ಗಳನ್ನು ಪಡೆದು ದಿನ ದೂಡಿದರೂ ಅಡುಗೆ ಅನಿಲ, ವಿದ್ಯುತ್ ಬಿಲ್, ಮೊಬೈಲ್ ರಿಜಾರ್ಜ್, ಔಷಧ, ಹಾಲು, ತರಕಾರಿ, ಹಣ್ಣು ಹಂಪಲು ಇತ್ಯಾದಿ ಖರೀದಿಗೆ ಹಣ ಹೊಂದಿಸಲಾಗದೆ ಪರದಾಡುತ್ತಿದ್ದಾರೆ. ಈ ಚಾಲಕ-ನಿರ್ವಾಹಕರ ದುಡಿಮೆಯನ್ನೇ ನಂಬಿದ ಕುಟುಂಬದ ಇತರ ಸದಸ್ಯರು ಲಾಕ್‌ಡೌನ್ ಹೀಗೆ ಮುಂದುವರಿದರೆ ದಿನದೂಡುವುದು ಹೇಗೆ ಎಂದು ತಮ್ಮಲ್ಲೇ ಪ್ರಶ್ನಿಸಿ ಹತಾಶರಾಗುತ್ತಿದ್ದಾರೆ.
ಮಾಲಕರ ಸ್ಥಿತಿಯೂ ಶೋಚನೀಯ
5,10,15 ಬಸ್‌ಗಳ ಮಾಲಕರು ಈ ಲಾಕ್‌ಡೌನ್‌ನಿಂದ ಸಮಸ್ಯೆಗೆ ಸಿಲುಕಿದರೂ ಕೂಡ ಹೇಗೋ ಆರ್ಥಿಕತೆಯನ್ನು ಹೊಂದಿಸಿಕೊಂಡು ಹೋಗುತ್ತಿದ್ದಾರೆ.
ಆದರೆ ಸಾಲ-ಸೋಲ ಮಾಡಿ 1 ಅಥವಾ 2 ಬಸ್‌ಗಳನ್ನು ಹೊಂದಿರುವ ಮಾಲಕರು ಅತ್ಯಂತ ಕಷ್ಟದಲ್ಲಿ ದಿನ ದೂಡುತ್ತಿದ್ದಾರೆ. ಐದಾರು ಬಸ್‌ಗಳನ್ನು ಹೊಂದಿರುವ ಮಾಲಕರು ಖಾಯಂ ಚಾಲಕ-ನಿರ್ವಾಹಕರಿಗೆ ಒಂದಷ್ಟು ಆರ್ಥಿಕ ಸಹಾಯ ನೀಡಿದರೆ, ಕಷ್ಟದ ದಿನಗಳನ್ನು ದೂಡುವ ಬಡ ಮಾಲಕರು ಅತ್ತ ಚಾಲಕ- ನಿರ್ವಾಹಕರಿಗೆ ಕೊಡುವುದು ಬಿಡಿ ಸ್ವತಃ ತಮ್ಮ ಬದುಕನ್ನು ರೂಪಿಸಲು ಹೆಣಗಾಡುತ್ತಿದ್ದಾರೆ. ಇತರರ ಮುಂದೆ ಸಾಲ ಕೇಳಲು ಸ್ವಾಭಿಮಾನ ಅಡ್ಡಬರುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ.
ಕೋಟ್ಯಂತರ ರೂ. ನಷ್ಟ
ದ.ಕ.ಜಿಲ್ಲೆಯಲ್ಲಿ ಸದ್ಯ ಸುಮಾರು 350 ಸಿಟಿ, 750 ಸರ್ವಿಸ್, 75ರಷ್ಟು ಕಾಂಟ್ರಾಕ್ಟ್ ಕ್ಯಾರೇಜ್ ಬಸ್‌ಗಳು ಚಲಿಸುತ್ತಿತ್ತು. ಪ್ರತಿಯೊಂದು ಬಸ್‌ಗಳಲ್ಲಿ ಪ್ರತಿನಿತ್ಯ 10 ಸಾವಿರ ರೂ. ಲಾಭದ ಅಂದಾಜು ಹಾಕಿದರೂ ಕೂಡ ದಿನನಿತ್ಯ ಕನಿಷ್ಠ 12 ಕೋ.ರೂ. ನಷ್ಟವಾಗಲಿದೆ. ಅಂದರೆ ಈವರೆಗೆ 684 ಕೋ.ರೂ. ನಷ್ಟವಾಗಿದೆ. ಈ ನಷ್ಟವನ್ನು ಭರಿಸಲು ಸಾಧ್ಯವಿಲ್ಲವಾದರೂ ಸರಿದೂಗಿಸಲು ಬಸ್ ಮಾಲಕರ ಸಂಘವು ಕೆಲವು ಬೇಡಿಕೆಗಳನ್ನು ಸರಕಾರದ ಮುಂದಿಡಲು ಸಿದ್ಧತೆ ನಡೆಸಿವೆ.
ಬಸ್‌ಗಳ ಸರೆಂಡರ್
ಮಾ.20ರಿಂದಲೇ ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳು ಸಮಯಕ್ಕೆ ಸರಿಯಾಗಿ ಸಂಚರಿಸುತ್ತಿರಲಿಲ್ಲ. ಕೊರೋನ ಹಿನ್ನೆಲೆಯಲ್ಲಿ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆಯೂ ಕಡಿಮೆಯಿತ್ತು. ಹಾಗಾಗಿ ಬಹುತೇಕ ಬಸ್‌ಗಳು ಸಂಚಾರ ಸ್ಥಗಿತಗೊಳಿಸಿತ್ತು. ಇನ್ನು ಕೆಲವು ಬಸ್‌ನವರು ಟ್ರಿಪ್ ಕಡಿತಗೊಳಿಸುತ್ತಿದ್ದರು. ಮಾ.22ರಂದು ಜನತಾ ಕರ್ಫ್ಯೂಗೆ ಬೆಂಬಲ ಸೂಚಿಸಿ ಬಸ್‌ಗಳನ್ನು ರಸ್ತೆಗೆ ಇಳಿಸಲಿಲ್ಲ. ಬಳಿಕ ಲಾಕ್‌ಡೌನ್ ಹೇರಲು ಸಿದ್ಧತೆ ನಡೆದವು. ಅದಕ್ಕೆ ಪೂರಕವಾಗಿ ಮಾ.22ರಿಂದ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡವು. ಆ ಬಳಿಕ ಈವರೆಗೆ ಬಸ್‌ಗಳ ಸಂಚಾರವೇ ಇಲ್ಲ. ಬಸ್ ಸಂಚಾರ ಸ್ಥಗಿತಗೊಂಡ ತಕ್ಷಣ ಮಾಲಕರು ಆರ್‌ಟಿಒಗೆ ತಮ್ಮ ಬಸ್‌ಗಳನ್ನು ಸರೆಂಡರ್ ಮಾಡಿದರೆ, ಬಸ್‌ಗಳಲ್ಲಿ ಭಾಗಶಃ ದಿನಗೂಲಿ ಕಾರ್ಮಿಕರಂತೆ ದುಡಿಯುತ್ತಿದ್ದ ಚಾಲಕ-ನಿರ್ವಾಹಕರು ಕೆಲಸವಿಲ್ಲದೆ ಮನೆಯಲ್ಲೇ ಬಂಧಿಯಾದರು. ಬಸ್‌ಗಳನ್ನು ಸರೆಂಡರ್ ಮಾಡುವ ಮೂಲಕ ಕಳೆದ 57 ದಿನಗಳ ರೋಡ್ ಟ್ಯಾಕ್ಸ್ ಪಾವತಿಯಿಂದ ಮಾಲಕರು ಮುಕ್ತಗೊಂಡರೂ ಕೂಡ ದೈನಂದಿನ ಆದಾಯವಿಲ್ಲದೆ ಕಂಗಾಲಾಗಿದ್ದಾರೆ.
ಹೆಚ್ಚಿನ ಮಾಲಕರು ಬಸ್ ಸರೆಂಡರ್ ಮಾಡಿಲ್ಲ
ಲಾಕ್‌ಡೌನ್ ಸುದೀರ್ಘ ದಿನದವರೆಗೆ ಇರಬಹುದು ಎಂಬ ಕಲ್ಪನೆಯೇ ಹೆಚ್ಚಿನ ಬಸ್ ಮಾಲಕರಿಗೆ ಇರಲಿಲ್ಲ. ಕೆಲವು ದಿನದಲ್ಲಿ ಸರಿ ಹೋಗಬಹುದು ಎಂದು ಭಾವಿಸಿ ಅನೇಕ ಮಾಲಕರು ತಮ್ಮ ಬಸ್‌ಗಳನ್ನು ಆರ್‌ಟಿಒಗೆ ಸರೆಂಡರ್ ಮಾಡಿಲ್ಲ. ಹಾಗಾಗಿ ಅವರು ಅನಿವಾರ್ಯವಾಗಿ ಲಾಕ್‌ಡೌನ್ ದಿನಗಳ ರೋಡ್ ಟ್ಯಾಕ್ಸ್ ಕಟ್ಟಬೇಕಿದೆ. ಇನ್ನು ತರಾತುರಿಯಲ್ಲಿ ಕೆಲವು ಬಸ್ ಮಾಲಕರು ಎಲ್ಲೆಲ್ಲೋ ತಮ್ಮ ಬಸ್‌ಗಳನ್ನು ನಿಲ್ಲಿಸಿದ್ದರು. ಪ್ರತೀ ದೀನ ಅದನ್ನು ಸ್ಟಾರ್ಟ್ ಮಾಡದ ಕಾರಣ ಬ್ಯಾಟರಿ ಹಾಳಾಗಿರಬಹುದು. ವ್ಹೀಲ್ ಗ್ರೀಸ್ ಕೂಡ ಮೆಲ್ಟ್ ಆಗಿರಬಹುದು. ಮೆಕ್ಯಾನಿಕ್‌ಗೆ ತೋರಿಸದೆ ಏಕಾಏಕಿ ಬಸ್ ಸಂಚಾರ ಆರಂಭಿಸಿದರೆ ಅಪಘಾತಕ್ಕೆ ಕಾರಣವೂ ಆಗಬಹುದು. ಮೂರ್ನಾಲ್ಕು ಬಸ್‌ಗಳ ಮಾಲಕರು ಖಾಯಂ ಚಾಲಕರು, ನಿರ್ವಾಹಕರಿಗೆ ಆರ್ಥಿಕ ಸಹಾಯಧನ ನೀಡಿರಬಹುದು. ಆದರೆ ಒಂದೆರೆಡು ಬಸ್ ಹೊಂದಿದ ಮಾಲಕರು ಸಾಲಕ್ಕೆ ಮೊರೆ ಹೋದರೂ ಕೊಡುವವರು ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಸರಕಾರ ಬಸ್ ಕಾರ್ಮಿಕರು ಮಾತ್ರವಲ್ಲ ಬಡ ಮಾಲಕರಿಗೂ ವಿಶೇಷ ಪ್ಯಾಕೇಜ್ ಘೋಷಿಸಬೇಕಿದೆ.
ಅಝೀಝ್ ಪರ್ತಿಪ್ಪಾಡಿ,
ಅಧ್ಯಕ್ಷ, ಪೂರ್ವ ವಲಯ ಬಸ್ ಮಾಲಕರ ಒಕ್ಕೂಟ, ತೊಕ್ಕೊಟ್ಟು
ಸದ್ಯದ ಪರಿಸ್ಥಿತಿಯಲ್ಲಿ ಬಸ್ ಸಂಚಾರ ಕಷ್ಟ
ನಾವು ಮುಂಗಡವಾಗಿ ಅಂದರೆ 3 ತಿಂಗಳಿಗೊಮ್ಮೆ ಸಾವಿರಾರು ರೂ. ರೋಡ್ ಟ್ಯಾಕ್ಸ್ ಪಾವತಿಸುವವರು. ಸದ್ಯ ನಾವು ಬಸ್‌ಗಳನ್ನು ಸರೆಂಡರ್ ಮಾಡಿದ್ದರೂ ಕೂಡ ಮುಂದಿನ ಮೂರು ತಿಂಗಳ ರೋಡ್ ಟ್ಯಾಕ್ಸ್ ಪಾವತಿಸಿಯೇ ಬಸ್ ಸಂಚಾರ ಆರಂಭಿಸಬೇಕು. ಲಾಕ್‌ಡೌನ್‌ನಿಂದಾಗಿ ನಾವು ತುಂಬಾ ನಷ್ಟ ಅನುಭವಿಸಿದ್ದೇವೆ. ಒಂದೆರಡು ಬಸ್‌ಗಳನ್ನು ಹೊಂದಿರುವ ಮಾಲಕರ ಸ್ಥಿತಿಯಂತೂ ಶೋಚನೀಯವಾಗಿದೆ. ಸದ್ಯದ ಸ್ಥಿತಿಯಲ್ಲಿ ರೋಡ್ ಟ್ಯಾಕ್ಸ್ ಪಾವತಿಸಲು ಸಾಧ್ಯವಿಲ್ಲ. ಕನಿಷ್ಠ 6 ತಿಂಗಳು ನಮಗೆ ರೋಡ್ ಟ್ಯಾಕ್ಸ್ ಪಾವತಿಸಲು ವಿನಾಯಿತಿ ನೀಡಬೇಕು. ಅಲ್ಲದೆ 2013ರಿಂದ ಈವರೆಗೆ ಬಸ್ ಪ್ರಯಾಣ ದರ ಪರಿಷ್ಕರಣೆ ಆಗಿಲ್ಲ. ಕೆಎಸ್ಸಾರ್ಟಿಸಿಯವರು ಈ 7 ವರ್ಷದಲ್ಲಿ 2 ಬಾರಿ ಬಸ್ ಪ್ರಯಾಣ ದರ ಏರಿಸಿದ್ದಾರೆ. ಮಂಗಳೂರಿನಲ್ಲಿ ರಿಕ್ಷಾ ಪ್ರಯಾಣ ದರವನ್ನು ಇತ್ತೀಚೆಗೆ ಏರಿಸಲಾಗಿದೆ. ಹಾಗಾಗಿ ಸಾರಿಗೆ ಪ್ರಾಧಿಕಾರವು ಖಾಸಗಿ ಬಸ್ ಪ್ರಯಾಣ ದರವನ್ನೂ ಏರಿಸಬೇಕು. ಈ ಮಧ್ಯೆ ನಾವು ದ.ಕ.ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಚರ್ಚಿಸಿದ್ದೇವೆ. ಮೇ 17ಕ್ಕೆ ಮೂರನೇ ಹಂತದ ಲಾಕ್‌ಡೌನ್ ಮುಗಿಯಲಿದೆ. ಮೇ 18ರಂದು ಡಿಸಿ ಸಭೆ ಕರೆದಿದ್ದಾರೆ. ನಾವು ಕೆಲವು ಬೇಡಿಕೆಗಳನ್ನು ಸರಕಾರದ ಮುಂದಿಡಲಿದ್ದೇವೆ. ‘ಸುರಕ್ಷಿತ ಅಂತರ’ ಕಾಪಾಡಲು ಶೇ.50ರಷ್ಟು ಪ್ರಯಾಣಿಕರನ್ನು ಮಾತ್ರ ಹೇರಿಕೊಂಡು ಬಸ್‌ಗಳ ಸಂಚಾರ ಆರಂಭಿಸಬೇಕು ಎಂಬ ಸೂಚನೆ ಇದೆ. ಹಾಗಾಗಿ ನಾವು ಪಾವತಿಸುವ ರೋಡ್ ಟ್ಯಾಕ್ಸ್‌ನಲ್ಲೂ ಶೇ.50ರಷ್ಟು ಕಡಿತಗೊಳಿಸಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ.
ದಿಲ್‌ರಾಜ್ ಆಳ್ವ,
ಅಧ್ಯಕ್ಷ, ದ.ಕ.ಜಿಲ್ಲಾ ಬಸ್ ಮಾಲಕರ ಸಂಘ, ಮಂಗಳೂರು
ತೆರಿಗೆ ಪಾವತಿಗೆ ವಿನಾಯಿತಿ ಕೊಡಿ
ಮೂರ್ನಾಲ್ಕು ಬಸ್‌ನ ಮಾಲಕರು ಆರ್ಥಿಕ ಸ್ಥಿತಿಯನ್ನು ಹೇಗಾದರು ಹೊಂದಿಸಿಕೊಳ್ಳಬಹುದು. ಆದರೆ, ಒಂದೊಂದು ಬಸ್ ಹೊಂದಿದವರ ಬದುಕು ಶೋಚನೀಯವಾಗಿದೆ. ಈ ಉದ್ಯಮದ ಹೊಡೆತ ನಿಭಾಯಿಸಲಾಗದೆ ಕೆಲವರು ಬಸ್‌ಗಳನ್ನು ಮಾರಾಟ ಮಾಡಿ ಬೇರೆ ಕ್ಷೇತ್ರದತ್ತ ಕಾಲಿಡುತ್ತಿದ್ದಾರೆ. ಕೊರೋನ ತಡೆಗಟ್ಟುವ ಸಲುವಾಗಿ ಸುರಕ್ಷಿತ ಅಂತರ ಕಾಪಾಡುವ ಸಲುವಾಗಿ ಕಡಿಮೆ ಸಂಖ್ಯೆಯ ಪ್ರಯಾಣಿಕರನ್ನು ಮಾತ್ರ ಹೇರಿಕೊಂಡು ಹೋಗಬೇಕು ಎಂದು ಸೂಚಿಸುವುದಾದರೆ, ನ್ಯಾಯಯುತವಾಗಿ ತೆರಿಗೆ ಪಾವತಿಯಲ್ಲೂ ವಿನಾಯಿತಿ ನೀಡಬೇಕು.
ರಾಜವರ್ಮ ಬಲ್ಲಾಳ್,
ಅಧ್ಯಕ್ಷ, ಕೆನರಾ ಬಸ್ ಮಾಲಕರ ಸಂಘ, ಮಂಗಳೂರು
ಬಸ್ ನೌಕರರ ಹಿತ ಕಾಪಾಡಬೇಕು
ಜಿಲ್ಲೆಯ ಸಾವಿರಾರು ಬಸ್ ನೌಕರರ ಪಾಡು ಹೇಳತೀರದು. ಕೆಲವು ಬಸ್‌ಗಳ ಮಾಲಕರು ನೌಕರರಿಗೆ ಆರ್ಥಿಕ ಧನಸಹಾಯ ನೀಡಿದ್ದಾರೆ ಎಂಬ ಮಾಹಿತಿ ಇದೆ. ಆದರೆ ಹೆಚ್ಚಿನ ನೌಕರರು ಇದರಿಂದ ವಂಚಿತರಾಗಿದ್ದಾರೆ. ಸರಕಾರ, ಜನಪ್ರತಿನಿಧಿಗಳು, ಅಧಿಕಾರಿಗಳು ನೌಕರರ ಹಿತ ಕಾಪಾಡಬೇಕು.
ಮುಹಮ್ಮದ್ ರಫಿ,
ಕಾರ್ಯಾಧ್ಯಕ್ಷ ದ.ಕ.ಜಿಲ್ಲಾ ಬಸ್ ನೌಕರರ (ಎಚ್‌ಎಂಎಸ್) ಸಂಘ, ಮಂಗಳೂರು
ಬಸ್ ಪ್ರಯಾಣ ದರ ಪರಿಷ್ಕರಣೆ ಆಗದೆ 7 ವರ್ಷಗಳಾಗಿವೆ. ಇದರಿಂದ ನಷ್ಟದಲ್ಲೇ ಬಸ್‌ಗಳನ್ನು ಓಡಿಸಲಾಗುತ್ತಿತ್ತು. ಕೊರೋನ-ಲಾಕ್‌ಡೌನ್‌ನ ಬಳಿಕವಂತೂ ಬಸ್ ಉದ್ಯಮ ಸಂಪೂರ್ಣ ಅವನತಿಯತ್ತ ಸಾಗಿದೆ. ಹಾಗಂತ ನಾನು ನನ್ನ 10 ಬಸ್‌ಗಳಲ್ಲಿ ದುಡಿಯುವ 26 ಮಂದಿ ಖಾಯಂ ಸಿಬ್ಬಂದಿಗೆ (ಚಾಲಕರು-ನಿರ್ವಾಹಕರು)ಈವರೆಗೆ ಸುಮಾರು 2.50 ಲಕ್ಷ ರೂ. ಸಹಾಯಧನ ನೀಡಿದ್ದೇನೆ. ಬಸ್ ನೌಕರರು ಮಾತ್ರವಲ್ಲ, ಮಾಲಕರು ಕೂಡ ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಬಸ್ ಉದ್ಯಮದ ಪುನಶ್ಚೇತನಕ್ಕೆ ಸರಕಾರ ಸೂಕ್ತ ಪ್ಯಾಕೇಜ್ ಘೋಷಿಸಬೇಕು.
ಸುದೇಶ್ ಮರೋಳಿ,
ಮಾಲಕ, ಮರೋಳಿ ಟ್ರಾವೆಲ್ಸ್, ಮಂಗಳೂರು