ಮೇ 1ರಿಂದ ಶ್ರಮಿಕ್ ರೈಲಿನ ಮೂಲಕ 17 ಲಕ್ಷಕ್ಕೂ ಅಧಿಕ ವಲಸೆ ಕಾರ್ಮಿಕರ ಪ್ರಯಾಣ
ಹೊಸದಿಲ್ಲಿ, ಮೇ 18: ಮೇ 1ರಿಂದ 1,300 ಶ್ರಮಿಕ್ ವಿಶೇಷ ರೈಲುಗಳನ್ನು ಓಡಿಸಿದ್ದು 17 ಲಕ್ಷಕ್ಕೂ ಹೆಚ್ಚು ವಲಸೆ ಕಾರ್ಮಿಕರನ್ನು ಅವರ ಊರಿಗೆ ಕರೆದೊಯ್ದಿದೆ. ಕಳೆದ ಮೂರು ದಿನಗಳಲ್ಲೇ, ಪ್ರತೀ ದಿನ 2 ಲಕ್ಷಕ್ಕೂ ಅಧಿಕ ಕಾರ್ಮಿಕರು ಪ್ರಯಾಣಿಸಿದ್ದಾರೆ ಎಂದು ರೈಲ್ವೇ ಮಂಡಳಿ ಹೇಳಿದೆ.
ಮುಂದಿನ ದಿನಗಳಲ್ಲಿ ಪ್ರತೀ ದಿನ 3 ಲಕ್ಷ ಪ್ರಯಾಣಿಕರು ಶ್ರಮಿಕ್ ವಿಶೇಷ ರೈಲಿನಲ್ಲಿ ಪ್ರಯಾಣಿಸುವ ನಿರೀಕ್ಷೆಯಿದೆ. ಇದುವರೆಗೆ ಉತ್ತರಪ್ರದೇಶದಿಂದ 500ಕ್ಕೂ ಅಧಿಕ ಶ್ರಮಿಕ್ ರೈಲುಗಳು ಕಾರ್ಯಾಚರಿಸಿದ್ದರೆ, ಬಿಹಾರದಿಂದ ಸುಮಾರು 300 ರೈಲುಗಳು ಸಂಚರಿಸಿವೆ ಎಂದು ರೈಲ್ವೇಯ ವಕ್ತಾರರು ಹೇಳಿದ್ದಾರೆ. ಪ್ರತೀ ದಿನ 300ಕ್ಕೂ ಹೆಚ್ಚು ಶ್ರಮಿಕ್ ರೈಲುಗಳನ್ನು ಓಡಿಸುವ ಸಾಮರ್ಥ್ಯ ರೈಲ್ವೇ ಇಲಾಖೆಗಿದೆ. ಆದರೆ ಪಶ್ಚಿಮ ಬಂಗಾಳ, ಛತ್ತೀಸ್‌ಗಢ, ಜಾರ್ಖಂಡ್‌ನಂತಹ ರಾಜ್ಯಗಳು ಹೆಚ್ಚು ರೈಲು ಓಡಿಸಲು ಅಂಗೀಕಾರ ನೀಡಬೇಕು ಎಂದು ರೈಲ್ವೇ ಸಚಿವ ಪಿಯೂಷ್ ಗೋಯಲ್ ಮನವಿ ಮಾಡಿದ್ದಾರೆ.
ಆರಂಭದಲ್ಲಿ ವಿಶೇಷ ಶ್ರಮಿಕ್ ರೈಲಿನಲ್ಲಿ 1,200 ಪ್ರಯಾಣಿಕರಿಗೆ ಮಾತ್ರ ಅವಕಾಶವಿದ್ದರೆ ಬಳಿಕ ಈ ಪ್ರಮಾಣವನ್ನು 1,700ಕ್ಕೆ ಹೆಚ್ಚಿಸಲಾಗಿದೆ. ವಿಶೇಷ ರೈಲು ಪ್ರಯಾಣಕ್ಕೆ ತಗುಲುವ ವೆಚ್ಚದ ಬಗ್ಗೆ ರೈಲ್ವೇ ಇಲಾಖೆ ಅಧಿಕೃತವಾಗಿ ಮಾಹಿತಿ ನೀಡಿಲ್ಲವಾದರೂ, ಪ್ರತೀ ಪ್ರಯಾಣಕ್ಕೆ ಸುಮಾರು 80 ಲಕ್ಷ ರೂ. ವೆಚ್ಚವಾಗಲಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಆರಂಭದಲ್ಲಿ ಗಮ್ಯತಾಣ(ಅಂತಿಮ ನಿಲ್ದಾಣ) ಹೊರತುಪಡಿಸಿ ಮಧ್ಯದಲ್ಲಿ ನಿಲುಗಡೆ ಇಲ್ಲ ಎಂದು ತಿಳಿಸಿದ್ದರೂ, ಬಳಿಕ ಒಂದು ಪ್ರಯಾಣದಲ್ಲಿ 3 ನಿಲುಗಡೆಗೆ ಅವಕಾಶ ನೀಡಲಾಗಿದೆ. ಶ್ರಮಿಕ್ ರೈಲು ಪ್ರಯಾಣಿಕರಿಗೆ ಟಿಕೆಟ್ ದರ ವಿಧಿಸುವ ವಿಚಾರದಲ್ಲಿ ಕೇಂದ್ರ ಸರಕಾರ ಹಾಗೂ ವಿಪಕ್ಷಗಳ ಮಧ್ಯೆ ರಾಜಕೀಯ ಕೆಸರೆರಚಾಟ ಮುಂದುವರಿದಿದೆ. ಟಿಕೆಟ್ ದರದ ವೆಚ್ಚವನ್ನು ಕೇಂದ್ರ ಹಾಗೂ ರಾಜ್ಯ ಸರಕಾರ 85:15ರ ಅನುಪಾತದಲ್ಲಿ ಭರಿಸಬೇಕು ಎಂದು ಕೇಂದ್ರ ಸರಕಾರ ಸೂಚಿಸಿದೆ. ಆದರೆ ಇದಕ್ಕೆ ಕೆಲವು ರಾಜ್ಯಗಳ ವಿರೋಧವಿದೆ.