ಬೆಂಗಳೂರು: ಮೇ 31ರ ವರೆಗೆ ಮೆಟ್ರೊ ರೈಲು ಸಂಚಾರ ಸ್ಥಗಿತ
ಸಾಂದರ್ಭಿಕ ಚಿತ್ರ
ಬೆಂಗಳೂರು, ಮೇ 18: ಕೇಂದ್ರ ಸರಕಾರ ಲಾಕ್ಡೌನ್ ಅವಧಿಯನ್ನು ಮೇ 31ರವರೆಗೆ ವಿಸ್ತರಿಸಿರುವ ಹಿನ್ನೆಲೆಯಲ್ಲಿ, ಅಲ್ಲಿಯವರೆಗೂ ಮೆಟ್ರೊ ರೈಲು ಸಂಚಾರ ನಿಷೇಧ ಮುಂದುವರಿಯಲಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ(ಬಿಎಂಆರ್ಸಿಎಲ್) ಹೇಳಿದೆ. ಆದರೆ, ಸಾರ್ವಜನಿಕ ಬಸ್ ಸಂಚಾರ ಪ್ರಾರಂಭಿಸುವ ನಿರ್ಧಾರವನ್ನು ಆಯಾ ರಾಜ್ಯ ಸರಕಾರಗಳಿಗೆ ಬಿಟ್ಟಿರುವುದರಿಂದ, ಮುಂದಿನ ಆದೇಶಕ್ಕಾಗಿ ಬಿಎಂಟಿಸಿ ಕಾಯುತ್ತಿದೆ.
ಕೇಂದ್ರ ಗೃಹ ಸಚಿವಾಲಯದ ಆದೇಶದಂತೆ ಮೇ 31ರವರೆಗೆ ಮೆಟ್ರೊ ರೈಲು ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದು ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ಹೇಳಿದ್ದಾರೆ. ರೈಲುಗಳನ್ನು ಸುಸ್ಥಿತಿಯಲ್ಲಿ ಮತ್ತು ಪವರ್ ಮೋಡ್ನಲ್ಲಿ ಇರಿಸುವ ಉದ್ದೇಶದಿಂದ ಒಂದು ಪರೀಕ್ಷಾರ್ಥ ರೈಲು ನೇರಳೆ ಹಾಗೂ ಹಸಿರು ಮಾರ್ಗಗಳಲ್ಲಿ ಬೆಳಗ್ಗೆ ಮತ್ತು ಸಂಜೆ ಸಂಚರಿಸಲಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ಮೆಟ್ರೊ ನಿಲ್ದಾಣಗಳ ಬಳಿಯ ವಾಹನ ನಿಲುಗಡೆ ಸ್ಥಳಗಳು ಮತ್ತು ನಿಲ್ದಾಣದೊಳಗಿನ ವಾಣಿಜ್ಯ ಮಳಿಗೆಗಳನ್ನು ಸಂಪೂರ್ಣವಾಗಿ ಮುಚ್ಚಲಾಗುತ್ತದೆ ಎಂದೂ ಅದು ತಿಳಿಸಿದೆ.