ಹಾವುಮೀನು ಪುರಾಣ
ಸಿಹಿನೀರಿನ ಹಾವುಮೀನುಗಳು ಬಯಲು ಸೀಮೆಯಲ್ಲಿ ಮರೆತು ಹೋಗಿವೆ. ಕಳೆದ ಎರಡು ದಶಕಗಳಲ್ಲಿ ಮಿತಿಮೀರಿದ ನಗರೀಕರಣ ಮತ್ತು ರಾಸಾಯನಿಕ, ಪ್ಲಾಸ್ಟಿಕ್ ಬಳಕೆಯು ಅವುಗಳ ಸಂತತಿಯನ್ನೇ ನುಂಗಿ ಹಾಕುತ್ತಾ ಇದೆ. ಬಯಲುಸೀಮೆಯ ಮಕ್ಕಳ ಬಾಲ್ಯವು ಮಳೆಗಾಲ ಮತ್ತು ಬೇಸಿಗೆಯಲ್ಲಿ ಇಂತಹ ಮೀನು, ಏಡಿಗಳನ್ನು ಹಿಡಿಯುವ ನೆನಪುಗಳಲ್ಲಿ ತುಂಬಿವೆ. ಬಿಡಿ, ಈಚೆಗಿನ ಎರಡು ದಶಕಗಳಲ್ಲಿ ಇಂತಹ ಅನುಭವ ಹಳ್ಳಿಯ ಮಕ್ಕಳಿಗೇ ಲಭ್ಯವಾಗದಷ್ಟು ಜೀವನ ಪದ್ಧತಿಯಲ್ಲಿ ಬದಲಾವಣೆಗಳು ಉಂಟಾಗಿವೆ. ಅವುಗಳನ್ನು ದಾಟಿಕೊಂಡು ಇನ್ನು ಇರುವವರು ಪುಣ್ಯವಂತರೆ ಸರಿ. ಮಳೆಗಾಲದಲ್ಲಿ ತುಂಬಿ ಹರಿಯುವ ನದಿ, ಹೊಳೆ, ಹಳ್ಳಗಳಿಗೆ ಕಟ್ಟಿರುವ ಅಡ್ಡೆಗಳಲ್ಲಿ ಕೂತು ಮೀನು ಹಿಡಿಯುವುದೇ ಒಂದು ಸಾಹಸವಾಗಿತ್ತು. ನಾಟಿ ಬಿದ್ದ ಗದ್ದೆಗಳಲ್ಲಿ, ಕಾಲುವೆಯ ಸಂದುಗೊಂದುಗಳಲ್ಲಿ ಏಡಿ ಹಿಡಿಯುವುದು ಕೂಡ.
ಎಷ್ಟೋ ಸರ್ತಿ ಹಾವು ಮೀನು ಎಂದು ‘ಒಳ್ಳೆ ಹಾವು’ ( ನೀರು ಹಾವು ) ಹಿಡಿದು ಚೀರಾಡಿದ ಪ್ರಸಂಗಗಳೂ ಉಂಟು. ನಮ್ಮಲ್ಲಿ ಸಿಗುತ್ತಿದ್ದ ಗೆಂಡೆ, ರೋಹು, ಆನೆ ಮೀನು, ಜಿಲೇಬಿ ಸೇರಿದಂತೆ ಎಲ್ಲದಕ್ಕಿಂತ ಹಾವುಮೀನೇ ಮಕ್ಕಳಿಗೆ ಇಷ್ಟವಾಗ್ತಾ ಇತ್ತು. ದೊಡ್ಡವರಿಗೂ ಕೂಡ ಅನ್ನಿ. ಮಕ್ಕಳಿಗೆ ಅದು ವಿಶೇಷವಾದ ಹಾವಿನ ಆಕಾರದ್ದು ಅನ್ನುವ ಜೊತೆಗೆ ಬೇರೆಯ ಮೀನುಗಳ ಹಾಗೆ ಮುಳ್ಳಿನ ಕಾಟ ಇಲ್ಲದೆ ಕೇವಲ ಮಧ್ಯೆದ ಬೆನ್ನು ಮೂಲೆಯ ಮುಳ್ಳು ಮಾತ್ರ ಇರುತ್ತಿತ್ತು. ಸಾರು ಮಾಡಲಿ ಅಥವಾ ಎಣ್ಣೆಯಲ್ಲಿ ಹುರಿದು ಕೊಡಲಿ ತಿನ್ನಲು ಎರಡು ಕೈ ಸಾಲದು ಎನಿಸುತ್ತಿತ್ತು. ಆದರೆ ನಮ್ಮ ಬಳಕೆಗೆ ಅಥವಾ ಅಗತ್ಯಕ್ಕೆ ತಕ್ಕಷ್ಟು ಹಾವು ಮೀನು ಅಷ್ಟು ಸುಲಭಕ್ಕೆ ಸಿಗುತ್ತಿರಲಿಲ್ಲ. ಇವನ್ನು ಬಹಳ ಪರಿಣತರೆ ಹಿಡಿಯಬೇಕಿತ್ತು. ಹೇಗೆ ಹಿಡಿದುಕೊಂಡರು ನುಣುಚಿಕೊಂಡು ತಪ್ಪಿಸಿಕೊಳ್ಳುತ್ತಿದ್ದವು. ಈ ಮೀನನ್ನು ಸ್ವಚ್ಛಗೊಳಿಸುವುದು ಕೂಡ ಸರಳ ಸುಲಭ. ಉಳಿದ ಮೀನುಗಳ ಹಾಗೆ ಹುರುಪೆ ಹೆರೆಯಬೇಕಿಲ್ಲ. ನಿಧಾನಕ್ಕೆ ಚಾಕುವಿನಿಂದ ಚರ್ಮ ಬಿಡಿಸಿಕೊಂಡು ಎಬ್ಬಿದರೆ ಕಾಗದದ ಹಾಗೆ ಪರ್ರನೆ ಎಳೆದುಕೊಂಡು ಬರುತ್ತಿತ್ತು. ಇನ್ನು ಹೊಟ್ಟೆಯ ಭಾಗವನ್ನು ಕತ್ತರಿಸಿ ಅದರ ಕಸ , ಕಿವಿರು ಮತ್ತಿತರ ಭಾಗಗಳನ್ನ ತೆಗೆದು ಆಚೆಗೆ ಎಸೆದು ಬೆನ್ನುಮೂಳೆ ಸಮೇತ ಉದ್ದಕ್ಕೆ ಇರುವ ಮೀನನ್ನು ಯಾವ ಆಕಾರ ಬೇಕೋ ಆ ಆಕಾರಕ್ಕೆ ಕತ್ತರಿಸಿ ಅಡುಗೆಗೆ ಬಳಸಿಕೊಳ್ಳಬಹುದಿತ್ತು. ಹಾಗಾಗಿ ಮನೆಯ ಹೆಂಗಸರಿಗೂ ಹಾವುಮೀನಿನ ಮೇಲೆಯೇ ಪ್ರೀತಿ ಹೆಚ್ಚು.
ನನ್ನ ಹೈಸ್ಕೂಲಿನ ದಿನಗಳಲ್ಲಿ ಮಂಡ್ಯ ಸುತ್ತಮುತ್ತಲ ಹಳ್ಳ, ಹೊಳೆ, ನದಿ, ಕೆರೆಗಳಲ್ಲಿ ಹಾವುಮೀನುಗಳು ಯಥೇಚ್ಛವಾಗಿ ಸಿಗುತ್ತಿದ್ದವು. ಕಾರಣ ನೀರು ಇವತ್ತಿಗಿಂತಲೂ ನೂರು ಪಟ್ಟು ಹೆಚ್ಚು ಸ್ವಚ್ಛವಾಗಿತ್ತು ಮತ್ತು ಈ ಮೀನುಗಳನ್ನು ಹಲವು ಜನ ಹಿಡಿದು ಮಾರುವುದು ಒಂದು ಉದ್ಯೋಗವೂ ಆಗಿತ್ತು. ಆವಾಗ ಈಗಿನಂತೆ ಕೆರೆಗಳನ್ನು ಟೆಂಡರ್ ಕೊಟ್ಟು ಮೀನು ಸಾಕುವ ರೂಢಿ ಇರಲಿಲ್ಲ. ಸರಕಾರವು ಹಣದ ಆಸೆಗೆ ಬಿದ್ದು ಹಣವುಳ್ಳವರ ಪಾಲಿಗೆ ಕೆರೆ, ಹೊಳೆ, ಕಟ್ಟೆಗಳನ್ನೂ ಕೊಟ್ಟು ಅದನ್ನೇ ನಂಬಿ ಶತಮಾನಗಳಿಂದ ಬದುಕುತ್ತಿದ್ದ ಅಲೆಮಾರಿಗಳು ಮತ್ತು ಬೆಸ್ತರಿಗೆ ಮೋಸ ಮಾಡಿತು. ಅವರ ನೈಸರ್ಗಿಕವಾದ ಹಕ್ಕನ್ನು ರಾಜಕಾರಣದ ಮೂಲಕ ನಿರ್ನಾಮ ಮಾಡಿತು. ಆ ಸಮಯದಲ್ಲಿ ನಮಗೊಬ್ಬ ಅಲೆಮಾರಿ ಬೆಸ್ತ ಪರಿಚಯವಾಗಿದ್ದ. ಸದಾ ಒಂದು ಮೋಟು ಬೀಡಿ ಸೇದುತ್ತಾ ಕೈಯಲ್ಲಿ ನಾಲ್ಕೈದು ಸರ ಮೀನು ಹಿಡಿದಿರುತ್ತಿದ್ದ. ಸರ ಎಂದರೆ ನೀರಲ್ಲಿ ಬೆಳೆವ ವಾಡಿಕೆ ಕಡ್ಡಿಯನ್ನು ತೆಗೆದುಕೊಂಡು ಹಿಡಿದ ಮೀನುಗಳನ್ನು ಅದಕ್ಕೆ ಪೋಣಿಸಿದ ಒಂದು ಹಾರ.
ಅಂತಹ ಐದಾರು ಸರಗಳನ್ನು ಒಂದು ಚೀಲಕ್ಕೆ ಹಾಕಿಕೊಂಡು ಬಂದು ಪಟ್ಟಣದಲ್ಲಿ ಅಥವಾ ಹತ್ತಿರದ ಹಳ್ಳಿಯಲ್ಲಿ ಒಂದು ಸರಕ್ಕೆ ನೂರು, ನೂರೈವತ್ತು ರೂಪಾಯಿಗಳಿಗೆ ಮಾರುತ್ತಿದ್ದ. ವಾರದಲ್ಲಿ ಒಂದೆರಡು ದಿನ ಬರುತ್ತಿದ್ದವನ ಬಳಿ ಖಾಯಂ ಆಗಿ ಒಂದು ಸರ ತೆಗೆದುಕೊಳ್ಳುವುದು ರೂಢಿಯಾಗಿತ್ತು. ನೋಡಿದರೆ ಬರುಬರುತ್ತಾ ಒಂದು ಸೈಕಲ್ಲಿನಲ್ಲಿ ಬಂದು ಮೈಸೂರು-ಬೆಂಗಳೂರು ಹೆದ್ದಾರಿಯ ನಮ್ಮ ಅಂಗಡಿ ಬಳಿಯೇ ಮಾರಾಟ ಶುರು ಮಾಡಿಬಿಟ್ಟ. ಬಂದ ಅರ್ಧ ಗಂಟೆಯಲ್ಲೇ ಒಂದು ಸಾವಿರ ಸಂಪಾದನೆ ಮಾಡಿಕೊಂಡು ಮಾಯವಾಗಿ ಬಿಡುತ್ತ್ತಿದ್ದ. ನಮಗಂತೂ ವಾರವಾರವೂ ಒಳ್ಳೆಯ ಮೀನುಗಳ ಹಬ್ಬ ಆಗುತ್ತಿತ್ತು. ಆದರೆ ಕಾಲಕ್ರಮೇಣ ಆತ ಅಪರೂಪವಾಗಿ ಬಿಟ್ಟ. ಹೆಚ್ಚು ಮೀನು ಸಿಗುತ್ತಿಲ್ಲ ಅಂತಲೂ ಕೆರೆಗಳ ಬಳಿ ಹೋದರೆ ಗುತ್ತಿಗೆದಾರರು ಬಿಡುವುದಿಲ್ಲವೆಂದು ಹೇಳುತ್ತಾ ಸಣ್ಣ ಸಣ್ಣ ಸರಗಳನ್ನು ಹಿಡಿದುಕೊಂಡು ಬರುತ್ತಿದ್ದವ ಶಾಶ್ವತವಾಗಿ ಕಾಣೆಯಾಗಿಬಿಟ್ಟ. ಯಾವಾಗ ನಗರದ ಚರಂಡಿ ನೀರನ್ನು ಕಾಲುವೆಗಳಿಗೆ, ಕೆರೆಗಳಿಗೆ ಜೋಡಿಸಿದರೋ ಜಲಜೀವಗಳೆಲ್ಲಾ ಕಣ್ಮರೆಯಾದುವು. ಕನಿಷ್ಠ ತಾವರೆ ಹೂವು ಕೂಡ ಬೆಳೆಯಲಾರದಷ್ಟು ಬಂಜರಾಗಿಬಿಟ್ಟವು. ಹೊಳೆ, ಹಳ್ಳಗಳು ದೊಡ್ಡ ಚರಂಡಿಗಳಾದುವು. ಇದೆಲ್ಲಾ ನಡೆಯುತ್ತಾ ಒಂದೂವರೆ ದಶಕವೇ ಕಳೆಯಿತು, ಆ ವ್ಯಕ್ತಿ ತಂದು ಕೊಟ್ಟಿದ್ದ ಹಾವುಮೀನೇ ಕಡೆ ಮತ್ತೆ ನಾನು ತಿಂದೇ ಇಲ್ಲ. ಸಿಕ್ಕಲೂ ಇಲ್ಲ. ಹಾವು ಮೀನುಗಳಲ್ಲಿ ಎರಡು ವಿಧ; ಒಂದು ಸಿಹಿನೀರಿನ ಹಾವುಮೀನುಗಳು ಮತ್ತೊಂದು ಸಮುದ್ರದ ಹಾವುಮೀನುಗಳು. ಇವುಗಳಲ್ಲಿ ಮತ್ತೆ ಬೇರೆ ಬೇರೆ ತೆರನಾದ ಮೀನುಗಳು ಇವೆ. ಆಕಾರ, ಪ್ರದೇಶ, ಬಣ್ಣ ಇತ್ಯಾದಿಗಳ ಮೇಲೆ ಹಲವು ರೀತಿಯ ಜೀವವೈವಿಧ್ಯಗಳಿವೆ. ಹಾವುಮೀನುಗಳ ರಕ್ತ ವಿಷಕಾರಿ ಎಂಬುದು ನಂಬುಗೆ. ಹಾಗಾಗಿ ಹಾವುಮೀನುಗಳನ್ನು ಹಿಡಿದಾಗ ಅದರ ರಕ್ತವನ್ನು ಸಂಪೂರ್ಣ ತೆಗೆದು ಹಾಕಿ ಬರಿಯ ಮಾಂಸದ ಭಾಗವನ್ನು ಮಾತ್ರ ಅಡುಗೆಗೆ ಬಳಸಲಾಗುವುದು. ಇದರ ತಲೆಯನ್ನು ಕೂಡ ಬಹಳ ಮಂದಿ ತಿನ್ನುವುದಿಲ್ಲ. ಆದರೆ ದೇಹದ ಮಾಂಸ ಮಾತ್ರ ಒಳ್ಳೆಯ ರುಚಿಯಾಗಿರುತ್ತದೆ.
ಬಯಲು ಸೀಮೆಯಲ್ಲಿ ಮೀನಿನ ಖಾದ್ಯಗಳು ಅಷ್ಟು ಹೆಚ್ಚೇನು ಇಲ್ಲ. ಮೀನು ಸಾರು ಬಿಟ್ಟರೆ ತವಾದಲ್ಲಿ ಅಥವಾ ಎಣ್ಣೆಯಲ್ಲಿ ಹುರಿಯುವುದು ಮಾತ್ರ. ಕಬಾಬ್ ಮಾಡುವುದು ಹೆಚ್ಚು ಜನಪ್ರಿಯವಾದ ಮೇಲೆ ಹಾವುಮೀನಿನ ಕಬಾಬ್ ಅನ್ನು ನಮ್ಮ ಮನೆಗಳಲ್ಲಿ ಅತಿ ಹೆಚ್ಚು ಮಾಡುತ್ತಿದ್ದರು. ಕಾರಣ ಈ ಮೀನಿನಲ್ಲಿ ಹೆಚ್ಚು ಮುಳ್ಳು ಇಲ್ಲ ಎಂಬುದು ಮತ್ತು ಮಕ್ಕಳಿಗೆ, ವಯಸ್ಸಾದವರಿಗೂ ತಿನ್ನಲು ಅನುಕೂಲಕರ ಎಂಬ ಲೆಕ್ಕಾಚಾರ. ಅಲ್ಲದೆ ಹಾವುಮೀನಿನ ಕಬಾಬ್ ಎಲ್ಲ ವಯಸ್ಕರಿಗೂ ಬಹುಪ್ರಿಯವೇ ಆಗಿತ್ತು. ಈಗಲೂ ನದಿ ಹೊಳೆಗಳು ಹುಟ್ಟುವ ಬೆಟ್ಟ, ಸದಾ ಹರಿಯುವ ಬಯಲುಗಳಲ್ಲಿ ಹಾವುಮೀನುಗಳು ಸಿಗುತ್ತವೆ. ಅಲ್ಲಿನ್ನು ಹೆಚ್ಚು ಮಾಲಿನ್ಯವಾಗದ ಕಾರಣದಿಂದ ಅದೇ ನಮ್ಮ ಪುಣ್ಯ. ನಮ್ಮ ಕೆರೆಗಳಿಗೆ ಚರಂಡಿ ನೀರು ಸೇರಿಸದೆ ಸ್ವಚ್ಛವಾಗಿಟ್ಟುಕೊಂಡು ಬಯಲು ಸೀಮೆಯ ಹಲವು ಜಾತಿಯ ಮೀನುಗಳನ್ನು ಸಾಕಲು ಮತ್ತು ಅವುಗಳ ನೈಸರ್ಗಿಕ ತಳಿ ಅಭಿವೃದ್ಧ್ದಿಗೆ ಕೆಲಸ ಮಾಡಬೇಕಿದೆ. ಆದರೆ ಯಾರು ಮಾಡುತ್ತಾರೆ? ಸರಕಾರ? ಅಥವಾ ನಾಗರಿಕರು? ಇಬ್ಬರಿಗೂ ಸದ್ಯಕ್ಕೆ ಜಾಣಕುರುಡು ಮತ್ತು ಕಿವುಡು! ನಮ್ಮಲ್ಲಿ ಹಾವುಮೀನುಗಳಿಗೆ ಸಂಬಂಧಿಸಿದಂತೆ ಅಂತಹ ವಿಶೇಷವಾದ ಅಡುಗೆ ಇಲ್ಲ. ಅದೊಂದು ಸಾಮಾನ್ಯವಾದ ಮೀನೂಟವಾಗಿದೆ ಅಷ್ಟೇ.
ಆದರೆ ಜಪಾನ್, ಕೊರಿಯ, ಚೀನಾ ಮತ್ತು ಯುರೋಪ್ ದೇಶಗಳಲ್ಲಿ ಇದರ ಇತಿಹಾಸವೇ ಬೇರೆ ಇದೆ. ಹಾವುಮೀನಿನ ಹಲವು ತರಹದ ಅಡುಗೆಗಳನ್ನು ಮಾಡುತ್ತಾರೆ. ಪ್ರಪಂಚದಲ್ಲಿ ಸೆರೆ ಹಿಡಿಯಲಾಗುವ ಒಟ್ಟು ಹಾವುಮೀನುಗಳ ಪೈಕಿ ಶೇ.70 ರಷ್ಟು ಭಾಗ ಜಪಾನಿಯರ ಅಡುಗೆಗೆ ಬಳಕೆಯಾಗುತ್ತದೆ. ಅವರ ನಂತರ ಚೀನಿಯರು ಮತ್ತು ಕೊರಿಯನ್ನರು ಹೆಚ್ಚು ಬಳಸುತ್ತಾರೆ. ಜಪಾನಿನ ಪ್ರಸಿದ್ಧ ಸುಶಿಯಿಂದ ಹಿಡಿದು ಕಬಾಯಕಿ, ಉನದೊನ್ ಮುಂತಾದ ಖಾದ್ಯಗಳನ್ನು ತಯಾರಿಸುತ್ತಾರೆ. ಬರಿಯ ಹಾವುಮೀನಿನ ಊಟಕ್ಕೆ ಸೀಮಿತವಾದ ರೆಸ್ಟೋರೆಂಟ್‌ಗಳು ಕೊರಿಯದಲ್ಲಿವೆ. ಚರ್ಮ, ತಲೆ ಮುಳ್ಳುಗಳಿಂದ ಬಿಡಿಸಿದ ಮೀನಿನ ಮಾಂಸವನ್ನು ಗಟ್ಟಿಯಾದ ಸೋಯಾ ಸಾಸ್ ನಲ್ಲಿ ಅದ್ದಿ ನೆನೆಸಿ ಬೆಂಕಿಯಲ್ಲಿ ಹದವಾಗಿ ಸುಟ್ಟು ನಂತರ ಅನ್ನದ ಜೊತೆಗೆ ಅಲ್ಪ ಪ್ರಮಾಣದ ಉಪ್ಪು ಖಾರಗಳ ಸಾಸ್‌ಗಳ ಜೊತೆಗೆ ತಿನ್ನಲು ಕೊಡುತ್ತಾರೆ. ಸುಶಿ ಮಾಡುವಾಗಂತೂ ಹಸಿ ಮೀನನ್ನೇ ಸಣ್ಣಗೆ ಹೆರೆದು ಕೊಡಲಾಗುತ್ತದೆ. ಹಾಗೆಯೆ ಬರಿಯ ಹೊಗೆಯಲ್ಲಿ ಬೇಯಿಸಿದ ಮೀನು (Smoked Eel), ಹಬೆಯಲ್ಲಿ ಬೇಯಿಸಿದ ಮೀನು (Steamed Eel), ಸುಟ್ಟ ಮೀನು (Grilled Eel)ಗಳನ್ನು ಮಾಡುತ್ತಾರೆ. ಯುರೋಪ್ ಮತ್ತು ದಕ್ಷಿಣ ಅಮೆರಿಕದ ದೇಶಗಳಲ್ಲಿ ಸಹ ಸುಟ್ಟ ಹಾವುಮೀನು, ಮೀನಿನ ಕರಿ (ಸಾರು ) ಮಾಡುವುದಿದೆ. ಆದರೆ ಯಹೂದಿಗಳ ಕೋಶರ್ ಅಡುಗೆ ಪದ್ಧತಿಯಲ್ಲಿ ಹಾವುಮೀನು ಬಳಸುವುದು ನಿಷಿದ್ಧ. ಅಂದ ಹಾಗೆ ಮುಟ್ಟಿದರೆ ಸಾಕು ವಿದ್ಯುತ್ ಪುಳಕವಾಗುವಂತೆ ಶಾಕ್ ಹೊಡೆಯುವ ಹಾವುಮೀನುಗಳು ಕೂಡ ಭೂಮಿಯಲ್ಲಿವೆ. ನಾವಿನ್ನು ಅವುಗಳ ಸಹವಾಸಕ್ಕೆ ಹೋಗಿಲ್ಲ!