ಕೊರೋನ ವಿರುದ್ಧ ಹೋರಾಟಕ್ಕೆ ಪಾಪ್ಯುಲರ್ ಫ್ರಂಟ್‌ನಿಂದ ಪಿಪಿಇ ಕಿಟ್‌ಗಳ ನೆರವು
ಬೆಂಗಳೂರು : ಕೊರೋನ ವೈರಸ್ ವಿರುದ್ಧ ಹೋರಾಡಲು ವೈದ್ಯರಿಗೆ ಮತ್ತು ನರ್ಸ್ ಗಳಿಗೆ ನೆರವಾಗುವ ನಿಟ್ಟಿನಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ವತಿಯಿಂದ ಪಿಪಿಇ ಕಿಟ್‌ಗಳನ್ನು ಕಲ್ಪಿಸಲಾಯಿತು.
ಪಾಪ್ಯುಲರ್ ಫ್ರಂಟ್ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಸಿರ್ ಪಾಷ ನೇತೃತ್ವದ ನಿಯೋಗವು ರಾಜ್ಯ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕರಾದ ಡಾ.ಪಾಟೀಲ್ ಓಂ ಪ್ರಕಾಶ್ ಆರ್. ಅವರಿಗೆ ಪಿಪಿಇ ಕಿಟ್‌ಗಳನ್ನು ಹಸ್ತಾಂತರಿಸಿತು. ಈ ವೇಳೆ ಬೆಂಗಳೂರು ಝೋನಲ್ ಅಧ್ಯಕ್ಷ ಮುಹಮ್ಮದ್ ಇಲ್ಯಾಸ್, ಜಿಲ್ಲಾಧ್ಯಕ್ಷ ವಾಜಿದ್ ಖಾನ್ ಉಪಸ್ಥಿತರಿದ್ದರು.
ಕೊರೋನ ಬಿಕ್ಕಟ್ಟಿನ ಸನ್ನಿವೇಶದ ಪ್ರಾರಂಭದಿಂದಲೇ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವು ಕೋವಿಡ್-19 ತುರ್ತು ಸೇವೆ ಮತ್ತು ಪರಿಹಾರ ಯೋಜನೆಗಳನ್ನು ರೂಪಿಸಿಕೊಂಡು ಅದನ್ನು ವ್ಯವಸ್ಥಿತವಾಗಿ ಕಾರ್ಯಗತಗೊಳಿಸುತ್ತಾ ಬಂದಿದೆ. ಪಾಪ್ಯುಲರ್ ಫ್ರಂಟ್‌ನ ವೈದ್ಯಕೀಯ ವಿಭಾಗದ ಮೂಲಕ ರಕ್ತದ ಕೊರತೆಯನ್ನು ನೀಗಿಸಲು ರಕ್ತದಾನ, ಮೆಡಿಚೈನ್ ಮೂಲಕ ಅಂತರ್ ಜಿಲ್ಲಾ ಮತ್ತು ಅಂತರ್ ರಾಜ್ಯ ಮಟ್ಟದಲ್ಲಿ ಅಗತ್ಯ ಔಷಧಗಳ ಪೂರೈಕೆ, ಮಾಸ್ಕ್ ಹಾಗೂ ಸ್ಯಾನಿಟೈಸರ್‌ಗಳ ವಿತರಣೆ, ರೋಗಿಗಳು ಹಾಗೂ ಗರ್ಭಿಣಿಯರಿಗೆ ಉಚಿತ ಸಾಗಾಟದ ಸೇವೆಯನ್ನು ಕಲ್ಪಿಸಲಾಗಿತ್ತು ಎಂದು ಈ ಸಂದರ್ಭದಲ್ಲಿ ತಿಳಿಸಿದರು.