ಒಂದೇ ಕುಟುಂಬದ 6 ಮಂದಿ ಸೇರಿ 9 ವಲಸೆ ಕಾರ್ಮಿಕರ ಮೃತದೇಹ ಬಾವಿಯಲ್ಲಿ ಪತ್ತೆ
ತೆಲಂಗಾಣ: ಒಂದೇ ಕುಟುಂಬದ 6 ಮಂದಿ ಸೇರಿದಂತೆ 9 ವಲಸೆ ಕಾರ್ಮಿಕರ ಮೃತದೇಹ ಬಾವಿಯೊಂದರಲ್ಲಿ ಪತ್ತೆಯಾದ ಘಟನೆ ತೆಲಂಗಾಣದ ವಾರಂಗಲ್ ಜಿಲ್ಲೆಯಲ್ಲಿ ನಡೆದಿದೆ.
ಗುರುವಾರ ಸಂಜೆ 4 ಮೃತದೇಹಗಳು ಪತ್ತೆಯಾಗಿದ್ದರೆ, ಇನ್ನುಳಿದ 5 ಮೃತದೇಹಗಳು ಇಂದು ಬೆಳಗ್ಗೆ ಪತ್ತೆಯಾಗಿತ್ತು. ಮೃತದೇಹಗಳಲ್ಲಿ ಯಾವುದೇ ಗಾಯದ ಗುರುತುಗಳಿಲ್ಲ ಎಂದು ವರದಿಯಾಗಿದೆ.
ಮೃತ ಮಕ್ಸೂದ್ ಆಲಂ ಮತ್ತು ಪತ್ನಿ ನಿಶಾ 20 ವರ್ಷಗಳ ಹಿಂದೆ ಪಶ್ಚಿಮ ಬಂಗಾಳದಿಂದ ಆಗಮಿಸಿದ್ದರು ಮತ್ತು ಇಲ್ಲೇ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದರು. ಆಲಂ, ಪತ್ನಿ, ಮಗಳು, 3 ವರ್ಷದ ಮೊಮ್ಮಗ, ಪುತ್ರರಾದ ಸೊಹೈಲ್ ಮತ್ತು ಶಬಾದ್ ಹಾಗು ತ್ರಿಪುರಾದ ಶಕೀಲ್ ಅಹ್ಮದ್ ಮತ್ತು ಬಿಹಾರದ ಶ್ರೀರಾಮ್ ಮತ್ತು ಶ್ಯಾಮ್ ಎಂಬವರ ಮೃತದೇಹಗಳನ್ನು ಬಾವಿಯಿಂದ ಹೊರ ತೆಗೆಯಲಾಗಿದೆ.
ಇದು ಆತ್ಮಹತ್ಯೆಯಲ್ಲ ಎನ್ನುವುದು ಮೇಲ್ನೋಟಕ್ಕೆ ತಿಳಿದುಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆತ್ಮಹತ್ಯೆಯಾಗಿದ್ದರೆ, ಕುಟುಂಬ ಸದಸ್ಯರು ಮಾತ್ರ ಆತ್ಮಹತ್ಯೆಗೆ ಶರಣಾಗಬೇಕಿತ್ತು. ಆದರೆ ಬಾವಿಯಲ್ಲಿ ಇನ್ನೂ 3 ಮೃತದೇಹಗಳಿವೆ ಎಂದು ಅವರು ಹೇಳಿದ್ದಾರೆ.