ಕೋವಿಡ್-19 ಸಾವುಗಳು:ಗುಜರಾತ್ ಸರಕಾರಕ್ಕೆ ಮಂಗಳಾರತಿ ಎತ್ತಿದ ಉಚ್ಚ ನ್ಯಾಯಾಲಯ
ವಲಸೆ ಕಾರ್ಮಿಕರ ಪ್ರಯಾಣ ವೆಚ್ಚ ಭರಿಸಲು ನಿರ್ದೇಶ
ಅಹ್ಮದಾಬಾದ್,ಮೇ 24: ಗುಜರಾತಿನ ಆರೋಗ್ಯ ರಕ್ಷಣೆ ವ್ಯವಸ್ಥೆಯನ್ನು,ವಿಶೇಷವಾಗಿ ಅಹ್ಮದಾಬಾದ್ ಸರಕಾರಿ ಆಸ್ಪತ್ರೆಯಲ್ಲಿನ ಅವ್ಯವಸ್ಥೆಯನ್ನು ಕಟುವಾಗಿ ಟೀಕಿಸಿರುವ ಗುಜರಾತ್ ಉಚ್ಚ ನ್ಯಾಯಾಲಯವು ಆರೋಗ್ಯ ಸಚಿವ ನಿತಿನ್ ಪಟೇಲ್ ಮತ್ತು ಆರೋಗ್ಯ ಕಾರ್ಯದರ್ಶಿಯನ್ನು ತೀವ್ರ ತರಾಟೆಗೆತ್ತಿಕೊಂಡಿದೆ. ಆಸ್ಪತ್ರೆಯಲ್ಲಿ ವೆಂಟಿಲೇಟರ್‌ಗಳ ಕೊರತೆಯಿಂದ ರೋಗಿಗಳು ಸಾಯುತ್ತಿದ್ದಾರೆ ಎನ್ನುವುದು ಅವರಿಗೆ ಗೊತ್ತಿದೆಯೇ ಎಂದು ಪ್ರಶ್ನಿಸಿದೆ.
ಪರಿಸ್ಥಿತಿಯನ್ನು ತಿಳಿದುಕೊಳ್ಳಲು ಆರೋಗ್ಯ ಸಚಿವರು ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿರುವುದು ಅನುಮಾನ. ರೋಗಿಗಳು ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅವರಿಗೆ ಕಿಂಚಿತ್ ಕಲ್ಪನೆಯಾದರೂ ಇದೆಯೇ? ಈ ಮಾತು ಆರೋಗ್ಯ ಕಾರ್ಯದರ್ಶಿಗೂ ಅನ್ವಯಿಸುತ್ತದೆ. ವೆಂಟಲೇಟರ್‌ಗಳ ಕೊರತೆಯಿಂದ ಆಸ್ಪತ್ರೆಯಲ್ಲಿ ಕೋವಿಡ್-19 ರೋಗಿಗಳು ಸಾಯುತ್ತಿದ್ದಾರೆ ಎನ್ನುವುದಾದರೂ ಸರಕಾರಕ್ಕೆ ಗೊತ್ತಿದೆಯೇ? ವೆಂಟಿಲೇಟರ್‌ಗಳ ಸಮಸ್ಯೆಯನ್ನು ನಿಭಾಯಿಸಲು ಸರಕಾರವು ಏನು ಸಿದ್ಧತೆ ಮಾಡಿಕೊಂಡಿದೆ ಎಂದು ಪ್ರಶ್ನಿಸಿದ ನ್ಯಾಯಾಲಯವು,ಆಸ್ಪತ್ರೆಗೆ ದಾಖಲಿಸಲ್ಪಟ್ಟ ಹೆಚ್ಚಿನ ರೋಗಿಗಳು 4-5 ದಿನಗಳಲ್ಲಿಯೇ ಸಾಯುತ್ತಿರುವುದು ಹತಾಶೆಯನ್ನು ಮೂಡಿಸಿದೆ. ಇದು ಆರೋಗ್ಯ ರಕ್ಷಣೆ ವ್ಯವಸ್ಥೆಯಲ್ಲಿ ತೀವ್ರ ಕೊರತೆಯನ್ನು ಸೂಚಿಸುತ್ತಿದೆ ಎಂದು ಹೇಳಿತು. ಶನಿವಾರ ಸ್ವಯಂಪ್ರೇರಿತವಾಗಿ ಈ ವಿಷಯವನ್ನು ಕೈಗೆತ್ತಿಕೊಂಡಿದ್ದ ನ್ಯಾಯಾಲಯವು ಗುಜರಾತಿನ ಒಟ್ಟು ಕೊರೋನ ವೈರಸ್ ಸಾವುಗಳ ಪೈಕಿ ಶೇ.62ರಷ್ಟು ಜನರು ಮೃತಪಟ್ಟಿರುವ ಅಹ್ಮದಾಬಾದ್ ಸರಕಾರಿ ಆಸ್ಪತ್ರೆಯಲ್ಲಿನ ಹಾಲಿ ಸ್ಥಿತಿಯ ಬಗ್ಗೆ ಕ್ರಮವನ್ನು ಕೈಗೊಳ್ಳುವಂತೆ ಸರಕಾರವನ್ನು ಆದೇಶಿಸಿತು.
ವಲಸೆ ಕಾರ್ಮಿಕರ ಪ್ರಯಾಣ ಶುಲ್ಕವನ್ನು ಮನ್ನಾ ಮಾಡುವಂತೆ ರೈಲ್ವೆ ಅಧಿಕಾರಿಗಳಿಗೆ ನಿರ್ದೇಶ ನೀಡಿದ ಉಚ್ಚ ನ್ಯಾಯಾಲಯವು,ಪರ್ಯಾಯವಾಗಿ ರಾಜ್ಯ ಸರಕಾರಗಳು ಈ ವೆಚ್ಚವನ್ನು ಭರಿಸಬಹುದಾಗಿದೆ ಎಂದು ತಿಳಿಸಿತು.